ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ.ಕ ಲೋಕಸಭಾ ಕ್ಷೇತ್ರ | ಮುನ್ನಡೆ ಪ್ರಮಾಣ: 4 ಕಡೆ ಗಳಿಕೆ; 2 ಕಡೆ ಇಳಿಕೆ

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದ 6 ಕ್ಷೇತ್ರಗಳು
Published 6 ಜೂನ್ 2024, 5:28 IST
Last Updated 6 ಜೂನ್ 2024, 5:28 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯಲ್ಲಿ 1.49 ಲಕ್ಷ ಮತಗಳ ಅಂತರದಿಂದ ಗೆದ್ದಿರುವ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್‌ ಚೌಟ ಅವರಿಗೆ ಬಿಜೆಪಿ ಶಾಸಕರಿರುವ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಸಿಕ್ಕಿದ್ದಕ್ಕಿಂತಲೂ ಕಡಿಮೆ ಮುನ್ನಡೆ ಸಿಕ್ಕಿದೆ. ನಾಲ್ಕು ಕ್ಷೇತ್ರಗಳಲ್ಲಿ ವಿಧಾನಸಭಾ ಚುನಾವಣೆಗಿಂತಲೂ ಹೆಚ್ಚು ಮುನ್ನಡೆ ಸಿಕ್ಕಿದೆ.

ಬಿಲ್ಲವ ಮತದಾರರ ಪ್ರಾಬಲ್ಯ ಹೆಚ್ಚು ಇರುವ ಬೆಳ್ತಂಗಡಿ, ಮೂಡುಬಿದಿರೆ ಕ್ಷೇತ್ರಗಳು ಹಾಗೂ ಪಕ್ಷದ ಸಾಂಪ್ರದಾಯಕ ಮತ ಬ್ಯಾಂಕ್‌ ಹೆಚ್ಚು ಇರುವ ಸುಳ್ಯ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ  ಕ್ಯಾ.ಚೌಟ ಅವರ ಮುನ್ನಡೆ ವಿಧಾನಸಭಾ ಚುನಾವಣೆಗಿಂತಲೂ ‌ಜಾಸ್ತಿಯಾಗಿದೆ. ಮಂಗಳೂರು ಉತ್ತರ ಮತ್ತು ಬಂಟ್ವಾಳ ಕ್ಷೇತ್ರಗಳಲ್ಲಿ ಕಡಿಮೆಯಾಗಿದೆ.

ಬೆಳ್ತಂಗಡಿ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಡೆಯುವ ಮತಗಳು ಕಡಿಮೆ ಆಗಬಹುದು ಎಂದು ವಿಶ್ಲೇಷಿಸಲಾಗುತ್ತಿತ್ತು. ಇಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹರೀಶ್‌ ಪೂಂಜ ಕಾಂಗ್ರೆಸ್‌ನ ರಕ್ಷಿತ್‌ ಶಿವರಾಂ ಅವರಿಗಿಂತ 18,216 ಮತಗಳ ಅಂತರದಿಂದ ಗೆದ್ದಿದ್ದರು. ಅಚ್ಚರಿ ಎಂದರೆ  ಚೌಟ ಅವರಿಗೆ ಇಲ್ಲಿ 23,305 ಮತಗಳ ಮುನ್ನಡೆ ಸಿಕ್ಕಿದೆ. ಪೂಂಜ ಅವರಿಗಿಂತಲೂ ಮುನ್ನಡೆಯ ಪ್ರಮಾಣ 5,089 ಮತಗಳಷ್ಟು ಜಾಸ್ತಿ ಆಗಿದೆ. ಇಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಚಲಾವಣೆಯಾಗಿದ್ದಕ್ಕಿಂತ 8,410 ಮತಗಳು ಕಡಿಮೆ ಚಲಾವಣೆ ಆಗಿದ್ದವು. ಆದರೂ ಚೌಟ ಅವರು ಪೂಂಜ ಅವರಿಗಿಂತ 402 ಮತಗಳನ್ನು ಹೆಚ್ಚು ಪಡೆದಿದ್ದಾರೆ.

ಮೂಡುಬಿದಿರೆ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಉಮಾನಾಥ ಕೋಟ್ಯಾನ್‌ ಕಾಂಗ್ರೆಸ್‌ನ ಮಿಥುನ್ ಎಂ.ರೈ ವಿರುದ್ಧ 22,468 ಮತಗಳಿಂದ ಗೆದ್ದಿದ್ದರು. ಇಲ್ಲಿ ಚೌಟ ಅವರಿಗೆ 28,188 ಮುನ್ನಡೆ ಸಿಕ್ಕಿದೆ. ಕೋಟ್ಯಾನ್‌ ಅವರಿಗಿಂತಲೂ 5,720 ಮತಗಳಷ್ಟು ಮುನ್ನಡೆ ಜಾಸ್ತಿ ಆಗಿದೆ. ಇಲ್ಲಿ ಚಲಾವಣೆಯಾದ ಮತಗಳ ಸಂಖ್ಯೆ  ವಿಧಾನಸಭಾ ಚುನಾವಣೆಗಿಂತಲೂ 122 ಮತಗಳಷ್ಟು ಕಡಿಮೆಯಾಗಿದ್ದರೂ ಚೌಟ ಅವರು ಕೋಟ್ಯಾನ್‌ ಅವರಿಗಿಂಗ 5,571 ಹೆಚ್ಚು ಮತಗಳನ್ನು ಪಡೆದಿದ್ದಾರೆ. 

ಸುಳ್ಯ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭಾಗಿರಥಿ ಮುರುಳ್ಯ ಕಾಂಗ್ರೆಸ್‌ನ ಕೃಷ್ಣಪ್ಪ ಜಿ. ವಿರುದ್ಧ 30,874 ಮತಗಳ ಅಂತರದಿಂದ ಗೆದ್ದಿದ್ದರು. ಇಲ್ಲಿ ಚೌಟ ಅವರಿಗೆ 39,147 ಮತಗಳ ಮುನ್ನಡೆ ಸಿಕ್ಕಿದೆ. ಇಲ್ಲಿ ಚೌಟ ಅವರು ಭಾಗಿರಥಿ ಅವರಿಗಿಂತಲೂ 8,273 ಮತಗಳಷ್ಟು ಜಾಸ್ತಿ ಮುನ್ನಡೆ ಪಡೆದಿದ್ದಾರೆ. ವಿಧಾನಸಭಾ ಚುನಾವಣೆಗಿಂತ ಲೋಕಸಭಾ ಚುನಾವಣೆಯಲ್ಲಿ 4,102 ಮತಗಳು ಹೆಚ್ಚುವರಿಯಾಗಿ ಚಲಾವಣೆಯಾಗಿದ್ದು, ಚೌಟ ಅವರು ಮುರುಳ್ಯ ಅವರಿಗಿಂತ 9851 ಹೆಚ್ಚು ಮತ ಪಡೆದಿದ್ದಾರೆ.

ಮಂಗಳೂರು ದಕ್ಷಿಣ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಡಿ.ವೇದವ್ಯಾಸ ಕಾಮತ್‌, ಕಾಂಗ್ರೆಸ್‌ನ ಜೆ.ಆರ್‌.ಲೊಬೊ ಅವರನ್ನು 23,962 ಮತಗಳಿಂದ ಸೋಲಿಸಿದ್ದರು. ಇಲ್ಲಿ ಚೌಟ ಅವರಿಗೆ 24,344 ಮತಗಳ ಮುನ್ನಡೆ ಸಿಕ್ಕಿದೆ. ಮುನ್ನಡೆಯು 382 ಮತಗಳಷ್ಟು ಜಾಸ್ತಿ ಆಗಿದೆ. ಇಲ್ಲಿ ಲೋಕಸಭಾ ಚುನಾವಣೆಯುಲ್ಲಿ ವಿಧಾನಸಭಾ ಚುನಾವಣೆಗಿಂತ 6700 ಹೆಚ್ಚು ಮತಗಳು ಚಲಾವಣೆಯಾಗಿದ್ದವು. ಇಲ್ಲಿ ಚೌಟ ಅವರು ವೇದವ್ಯಾಸ ಕಾಮತ್‌ ಅವರಿಗಿಂತ 4,094 ಹೆಚ್ಚು ಮತ ಪಡೆದಿದ್ದಾರೆ.

ಮಂಗಳೂರು ಉತ್ತರ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಡಾ.ವೈ.ಭರತ್ ಶೆಟ್ಟಿ ಅವರು ಕಾಂಗ್ರೆಸ್‌ನ ಇನಾಯತ್‌ ಅಲಿ ವಿರುದ್ಧ 32,922 ಮತಗಳಿಂದ ಗೆದ್ದಿದ್ದರು. ಈ ಕ್ಷೇತ್ರದಲ್ಲಿ  ಚೌಟ ಅವರು  31,421 ಮುನ್ನಡೆ ಗಳಿಸಿದ್ದಾರೆ. ಮುನ್ನಡೆಯ ಪ್ರಮಾಣ 1,501 ಮತಗಳಷ್ಟು ಕಡಿಮೆ ಆಗಿದೆ. ಇಲ್ಲಿ ಚಲಾವಣೆಯಾದ ಮತಗಳ ಸಂಖ್ಯೆ ವಿಧಾನ ಸಭಾ ಚುನಾವಣೆಗಿಂತ 3,966 ಅಷ್ಟು ಗೆಚ್ಚಾಗಿದ್ದು, ಚೌಟ ಅವರು ಭರತ್‌ ಶೆಟ್ಟಿ ಅವರಿಗಿಂತ 4,606 ಹೆಚ್ಚು ಮತ ಗಳಿಸಿದ್ದಾರೆ.

ಬಂಟ್ವಾಳ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಕಾಂಗ್ರೆಸ್‌ನ ಬಿ.ರಮಾನಾಥ ರೈ ಅವರನ್ನು 8,282 ಮತಗಳಿಂದ ಸೋಲಿಸಿದ್ದರು. ಅದರೆ, ಇಲ್ಲಿ ಚೌಟ ಅವರಿಗೆ 5,993 ಮತಗಳ ಮುನ್ನಡೆಯಷ್ಟೇ ಸಿಕ್ಕಿದೆ. ಈ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಗಿಂತ 568 ಮತಗಳು ಕಡಿಮೆ ಚಲಾವಣೆಯಾಗಿದ್ದವು. ಇಲ್ಲಿ ಚೌಟ ಅವರು ರಾಜೇಶ್‌ ನಾಯ್ಕ್ ಅವರಿಗಿಂತ  1,355 ಹೆಚ್ಚು ಮತ ಪಡೆದಿದ್ದಾರೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT