ಶನಿವಾರ, ಮಾರ್ಚ್ 6, 2021
20 °C
ಬಿಜೆಪಿ ಕಾರ್ಯಕಾರಿಣಿಯಲ್ಲಿ ಸಂಜೀವ್‌ ಮಠಂದೂರು ಲೇವಡಿ

ನಿಂತ ನೀರಿನಂತಾಗಿರುವ ರಾಜ್ಯ ಸರ್ಕಾರ: ಸಂಜೀವ್‌ ಮಠಂದೂರು ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮಂಗಳೂರು: ಇಬ್ಬರು ಸ್ವಾರ್ಥಿಗಳು ಜತೆಗೂಡಿದರೆ ರಾಜ್ಯವೇ ಭ್ರಷ್ಟವಾಗುತ್ತದೆ ಎಂಬುದಕ್ಕೆ ರಾಜ್ಯ ಸರ್ಕಾರದ ಉದಾಹರಣೆಯನ್ನು ನೀಡಬಹುದು. ಯಾವುದೇ ಜನಪರ ಕೆಲಸ ಮಾಡದೇ ಸರ್ಕಾರ ನಿಂತ ನೀರಿನಂತಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ, ಶಾಸಕ ಸಂಜೀವ್‌ ಮಠಂದೂರು ಟೀಕಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಸಮಿತಿಗಳಿಗೆ ನೇಮಕ ಮಾಡುವ ಸಾಮರ್ಥ್ಯ ಈ ಸರ್ಕಾರಕ್ಕಿಲ್ಲ. ನೀಡಿದ ಭರವಸೆಗಳನ್ನು ಈಡೇರಿಸುವ ಬದಲು ವೈಯಕ್ತಿಕ ಹಿತಾಸಕ್ತಿ, ಹಣ ಮಾಡುವುದರಲ್ಲೇ ಕಾಲ ಕಳೆಯುತ್ತಿದೆ. ಸಂಪುಟ ವಿಸ್ತರಣೆಯಂತಹ ಕಾರ್ಯವೂ ಇವರಿಂದ ಮಾಡಲಾಗುತ್ತಿಲ್ಲ ಎಂದರೆ ಸರ್ಕಾರ ಯಾವ ಹಾದಿ ಹಿಡಿದಿದೆ ಎಂಬುದನ್ನು ರಾಜ್ಯದ ಜನತೆ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ದೇಶದ ಹಿತ ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯಿಂದ ತಿಳಿದುಕೊಳ್ಳಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸು ವೃದ್ಧಿಸಿರುವುದನ್ನು ವಿಶ್ವವೇ ಗಮನಿಸುತ್ತಿದೆ. ದೇಶದ ಜನರ ವಿಶ್ವಾಸವೂ ಮೋದಿಯವರ ಮೇಲಿದೆ. ಅವರ ಆಡಳಿತವನ್ನು ಜನರು ಸ್ವಾಗತಿಸುತ್ತಿದ್ದಾರೆ ಎಂದು ತಿಳಿಸಿದರು.

ಆದರೆ ರಾಜ್ಯದಲ್ಲಿ ಭ್ರಷ್ಟರ ಒಕ್ಕೂಟವು ಆಡಳಿತದ ವಿಚಾರದಲ್ಲಿ ಸಂಪೂರ್ಣ ನಿರ್ಜೀವವಾಗಿದೆ. ಭ್ರಷ್ಟಾಚಾರಕ್ಕೆ ತಡೆ ಇಲ್ಲದಂತಾಗಿದೆ. ರಾಜ್ಯದ ಹಿತಕಾಪಾಡುವಲ್ಲಿ ವಿಫಲವಾಗಿರುವ ಈ ಒಕ್ಕೂಟ, ದೇಶದ ಹಿತ ಕಾಪಾಡುವ ಕೆಲಸವನ್ನು ಎಷ್ಟರ ಮಟ್ಟಿಗೆ ಮಾಡಲು ಸಾಧ್ಯ ಎಂಬುದನ್ನು ಜನರು ನೋಡುತ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸುವಲ್ಲಿ ಬಿಜೆಪಿ ಮುಂದಡಿ ಇಡಲಿದೆ ಎಂದು ಹೇಳಿದರು.

ವಿಭಾಗ ಸಹಪ್ರಭಾರಿ ಪ್ರತಾಪಸಿಂಹ ನಾಯಕ್‌ ಮಾತನಾಡಿ, ಮುಂದಿನ ಆರು ತಿಂಗಳುಗಳಲ್ಲಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಎಲ್ಲ ಕೆಲಸಗಳನ್ನು ಬದಿಗಿಟ್ಟು ದೇಶದ ಉಳಿವಿಗಾಗಿ ಪ್ರಚಾರ ಅಭಿಯಾನದ ಕಾರ್ಯದಲ್ಲಿ ತೊಡಗಬೇಕು ಎಂದು ಸಲಹೆ ಮಾಡಿದರು.

ರವಿಶಂಕರ ಮಿಜಾರ್ ಸ್ವಾಗತಿಸಿದರು. ದೇವದಾಸ್ ಶೆಟ್ಟಿ ವಂದೇ ಮಾತರಂ ಹಾಡಿದರು. ವಿಕಾಸ್ ಪುತ್ತೂರು ವಂದಿಸಿದರು. ಸತೀಶ್ ಕುಂಪಲ ನಿರೂಪಿಸಿದರು. ಚುನಾವಣಾ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಿಶೋರ್ ರೈ, ಸುದರ್ಶನ ಎಂ. ವೇದಿಕೆಯಲ್ಲಿದ್ದರು.

‘ಫ್ಲೈಓವರ್‌ ವಿಳಂಬಕ್ಕೆ ಕಾಂಗ್ರೆಸ್‌ ಕಾರಣ’
ಪಂಪ್‌ವೆಲ್ ಫ್ಲೈಓವರ್‌ನ ಕಾಮಗಾರಿಯ ವಿಳಂಬಕ್ಕೆ ಜಿಲ್ಲಾ ಕಾಂಗ್ರೆಸ್‌ ನಾಯಕರ ಹೇಯ ರಾಜಕಾರಣವೇ ನೇರ ಹೊಣೆ ಎಂದು ಸಂಸದ ನಳಿನ್‌ಕುಮಾರ್ ಕಟೀಟ್‌ ಆರೋಪಿಸಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ₹15ಸಾವಿರ ಕೋಟಿಗೂ ಅಧಿಕ ಅನುದಾನ ಜಿಲ್ಲೆಗೆ ಹರಿದು ಬಂದಿದೆ. ಜಿಲ್ಲೆಯ ಇತಿಹಾಸದಲ್ಲಿಯೇ ಅನೇಕ ಪ್ರಥಮಗಳನ್ನು ಜಿಲ್ಲೆ ಕಂಡಿದೆ. ಈ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಕಾಲ ಎದುರಾಗಿದೆ ಎಂದು ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆಯು, ಸುಳ್ಳಿನ ಸರಮಾಲೆಗೂ ಹಾಗೂ ಅಭೂತಪೂರ್ವ ಅಭಿವೃದ್ಧಿಯ ಸಾಧನೆಗೂ ನಡೆಯುವಂತಹ ಚುನಾವಣೆ, ಇದಕ್ಕೆ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ ಯೋಧನಂತೆ ಕಾರ್ಯ ಪ್ರವೃತ್ತನಾಗಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು