ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೋಳಿಯಾರು: ವಿಜಯೋತ್ಸವ ಆಚರಿಸಿ ಮರಳುತ್ತಿದ್ದ BJP ಕಾರ್ಯಕರ್ತರಿಗೆ ಚೂರಿ ಇರಿತ

Published 9 ಜೂನ್ 2024, 20:23 IST
Last Updated 9 ಜೂನ್ 2024, 20:23 IST
ಅಕ್ಷರ ಗಾತ್ರ

ಮುಡಿಪು(ದಕ್ಷಿಣ ಕನ್ನಡ): ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ಸರ್ಕಾರ ಪ್ರಮಾಣವಚನ ಸ್ವೀಕರಿಸಿದ್ದಕ್ಕೆ‌ ವಿಜಯೋತ್ಸವ ಆಚರಿಸಿ ಮರಳುತ್ತಿದ್ದ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಮುಸ್ಲಿಂ ಯುವಕರ ಗುಂಪು ಇಲ್ಲಿಗೆ ಸಮೀಪದ ಬೊಳಿಯಾರಿನಲ್ಲಿ ಭಾನುವಾರ ರಾತ್ರಿ ಚೂರಿಯಿಂದ ಇರಿದಿದೆ. ಇನ್ನೊಬ್ಬ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದೆ.

ಬಿಜೆಪಿ ಕಾರ್ಯಕರ್ತರಾದ ಇನ್ನೊಳಿಯ ಹರೀಶ್ ಅಂಚನ್ (41) ಹಾಗೂ ಇನ್ನೋಳಿ ಪದವು ನಿವಾಸಿ ನಂದಕುಮಾರ (24) ಚೂರಿ ಇರಿತಕ್ಕೆ ಒಳಗಾದವರು. ಅದೇ ಊರಿನ ಕೃಷ್ಞ ಕುಮಾರ್ ಹಲ್ಲೆಗೊಳಗಾದವರು. ಚೂರಿ ಇರಿತಕ್ಕೊಳಗಾದ ಇಬ್ಬರು ಗಾಯಾಳುಗಳಿಗೆ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಿಜೆಪಿ ಮುಖಂಡರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

'ನರೇಂದ್ರ ಮೋದಿ ಅವರು ಮೂರನೇ ಸಲ‌ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಯುಕ್ತ ಬೋಳಿಯಾರ್ ನಲ್ಲಿ ಬಿಜೆಪಿ ವತಿಯಿಂದ ವಿಜಯೋತ್ಸವ ನಡೆದಿತ್ತು. ಬಿಜೆಪಿ ಕಾರ್ಯಕರ್ತರು ಈ ವೇಳೆ ಬೊಳಿಯಾರ್ ಮಸೀದಿ ಬಳಿ ಕೆಲ ಹೊತ್ತು ಘೋಷಣೆ ಕೂಗಿ, ಅಲ್ಲಿಂದ ನಿರ್ಗಮಿಸಿದ್ದರು‌. 20-30 ಮುಸ್ಲಿಂ ಯುವಕರ ಗುಂಪು ಅವರನ್ನು ಬೈಕ್ ಗಳಲ್ಲಿ ಹಿಂಬಾಲಿಸಿತ್ತು. ಬೊಳಿಯಾರ್ ನ ಸಮಾಧಾನ್ ಬಾರ್ ಬಳಿ ಬಿಜೆಪಿ ಕಾರ್ಯಕರ್ತರನ್ನು ಮುಸ್ಲಿಂ ಯುವಕರು ಅಡ್ಡಗಟ್ಟಿದ್ದರು. ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಇಬ್ಬರಿಗೆ ಚೂರಿಯಿಂದ ಇರಿಯಲಾಗಿದೆ. ಗಾಯಾಳುಗಳಲ್ಲಿ ಒಬ್ಬನ ಪರಿಸ್ಥಿತಿ ಗಂಭೀರವಾಗಿದೆ' ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗಾಯಾಳುಗಳು ದಾಖಲಾಗಿರುವ ದೇರಳಕಟ್ಟೆ ಆಸ್ಪತ್ರೆಗೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಸತೀಶ್ ಕುಂಪಲ ಸೇರಿದಂತೆ ಅನೇಕ ಮುಖಂಡರು ಭೇಟಿ ನೀಡಿದ್ದಾರೆ. ಬೋಳಿಯಾರ್ ನಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದಾರೆ. ಬಾರಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

ಕೃತ್ಯ ನಡೆಸಿದವರನ್ನು ಬಂಧಿಸುವಂತೆ ಆಗ್ರಹಿಸಿ ಕೊಣಾಜೆ ಠಾಣೆಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ್ದು ರಾತ್ರಿ ಸುಮಾರು 50ಕ್ಕೂ ಹೆಚ್ಚು ಕಾರ್ಯಕರ್ತರು ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT