ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ಪಾದಾಯಾತ್ರೆಗೆ ಸರ್ಕಾರ ಬೀಳಿಸುವ ಶಕ್ತಿ ಇಲ್ಲ: ಅಭಯಚಂದ್ರ ಜೈನ್‌

Published : 6 ಆಗಸ್ಟ್ 2024, 7:25 IST
Last Updated : 6 ಆಗಸ್ಟ್ 2024, 7:25 IST
ಫಾಲೋ ಮಾಡಿ
Comments

ಮಂಗಳೂರು: ಬಿಜೆಪಿ–ಜೆಡಿಎಸ್‌ ಸೇರಿ ನಡೆಸುತ್ತಿರುವ ಪಾದಯಾತ್ರೆಗೆ, ಅವರ ಡೊಳ್ಳು ಕುಣಿತಕ್ಕೆ ಕಾಂಗ್ರೆಸ್‌ ಸರ್ಕಾರವನ್ನು ಬೀಳಿಸುವ ತಾಕತ್ತಿಲ್ಲ. ಅವರ ಪಾದಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆದರುವ ಪ್ರಶ್ನೆಯೇ ಇಲ್ಲ’ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್‌ ಹೇಳಿದರು.

 ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಹಗರಣವೇ ನಡೆದಿಲ್ಲ. ನಡೆಯದ ಹಗರಣವನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಅವರ ಹೆಸರು ಕೆಡಿಸುವ ಪ್ರಯತ್ನವನ್ನು ನಡೆಸಲಾಗುತ್ತಿದೆ. ಬದಲಿ ನಿವೇಶನ ಹಂಚಿಕೆಯನ್ನು ಹಗರಣ ಎಂದು ಪರಿಭಾವಿಸಿದರೂ, ಅದಕ್ಕೆ ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರೇ ಹೊಣೆಯಾಗುತ್ತಾರೆ. ಬದಲಿ ನಿವೇಶನ ಹಂಚಿಕೆಯಾದಾಗ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದರು’ ಎಂದರು.

‘ಪಾದಯಾತ್ರೆ ಹೊರಟ ಬಿಜೆಪಿಯವರು ತಾರಾ ಹೋಟೆಲ್‌ಗಳಲ್ಲಿ ಉಳಿದುಕೊಂಡು ಮಜಾ ಮಾಡುತ್ತಿದ್ದಾರೆ. ಸ್ವಲ್ಪ ದೂರ ನಡೆದು ಮತ್ತೆ ಕಾರಿನಲ್ಲಿ ತೆರಳುತ್ತಿದ್ದಾರೆ. ಸಿದ್ಧರಾಮಯ್ಯ ನೇತೃತ್ವದಲ್ಲಿ 2012ರಲ್ಲಿ ನಡೆದ ಬಳ್ಳಾರಿ ಚಲೋ ಪಾದಯಾತ್ರೆ ವೇಳೆ ನಾವು ಸರ್ಕಾರಿ ಶಾಲೆಗಳ ಜಗಲಿಯಲ್ಲಿ ಮಲಗುತ್ತಿದ್ದೆವು’ ಎಂದು ನೆನಪಿಸಿದರು.

‘ಸಿದ್ದರಾಮಯ್ಯ  ಸಂಪುಟದ ಸಹೋದ್ಯೋಗಿಯಾಗಿದ್ದ ನಾನು ಅವರನ್ನು ಹತ್ತಿರದಿಂದ ಬಲ್ಲೆ. ಬಡವರ ನೋವಿಗೆ ಮಿಡಿಯುವ ಹೃದಯ ಅವರದ್ದು. ಮುಖ್ಯಮಂತ್ರಿಯಾದ ತಕ್ಷಣವೇ ಅನ್ನಭಾಗ್ಯ ಯೋಜನೆ ಘೋಷಿಸಿದ ಸಿದ್ದರಾಮಯ್ಯ ಅವರ ವ್ಯಕ್ತಿತ್ವವನ್ನು ರಾಜ್ಯದ ಜನರು ಚೆನ್ನಾಗಿ ಬಲ್ಲರು’ ಎಂದರು. 

‘ಬಿ.ಎಸ್‌.ಯಡಿಯೂರಪ್ಪ ಚೆಕ್‌ನಲ್ಲೇ ಹಣ ಪಡೆದ ಆರೋಪ ಎದುರಿಸಿದ್ದರು. ಎಚ್‌.ಡಿ.ಕುಮಾರಸ್ವಾಮಿ ಅಧಿಕಾರ ಬಿಟ್ಟುಕೊಡಲು ಒಪ್ಪದಿದ್ದಾಗ ದೇವೇಗೌಡರ ಕುಟುಂಬವನ್ನೇ ಸರ್ವ ನಾಶ ಮಾಡುತ್ತೇವೆ ಎಂದು ಶಪಥ ಹಾಕಿದ್ದರು. ಈಗ ಅವರ ಜೊತೆಯೇ ಪಾದಯಾತ್ರೆ ನಡೆಸುತ್ತಿದ್ದಾರೆ’ ಎಂದರು.

‘ರೈತನ ಮಗ ಎಂದು ಹೇಳಿಕೊಳ್ಳುವ ಎಚ್‌.ಡಿ.ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿದ್ದು ಉಳಿದುಕೊಂಡು ಆಡಳಿತ ನಡೆಸಿದ್ದರು. ಅವರಿಗೂ ಸಿದ್ದರಾಮಯ್ಯಗೂ ಅಜಗಜಾಂತರವಿದೆ. ಸಿದ್ದರಾಮಯ್ಯ ದೇಶ ಕಂಡ ಸರ್ವಶ್ರೇಷ್ಠ ಮುಖ್ಯಮಂತ್ರಿಗಳಲ್ಲಿ ಒಬ್ಬರು. ಡಿ.ಕೆ.ಶಿವಕುಮಾರ್‌ ಸ್ವಂತ ಪರಿಶ್ರಮದಿಂದ ರಾಜಕೀಯ ಜೀವನದಲ್ಲಿ ಮೇಲೆ ಬಂದವರು. ಕುಮಾರಸ್ವಾಮಿ ಅವರಂತೆ ತಂದೆಯ ಕೃಪಾಕಟಾಕ್ಷದಿಂದ ಬೆಳೆದವರಲ್ಲ’ ಎಂದರು. 

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್‌.ಪೂಜಾರಿ, ‘ಕಾಂಗ್ರೆಸ್‌ ಬಡವರ ಪಕ್ಷ . ಅಧಿಕಾರ ಹಿಡಿಯುವ ದುರುದ್ದೇಶದಿಂದ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಶಾಸಕರ‌ ಖರೀದಿ ಮೂಲಕ ವಿರೋಧ ಪಕ್ಷಗಳೇ ಇಲ್ಲದಂತೆ ಮಾಡುವ ಹುನ್ನಾರ ಅವರದು. ಪ್ರಜಾಪ್ರಭುತ್ವ ಕಗ್ಗೊಲೆ ಮಾಡುವುದಕ್ಕೆ ನಾವು ಬಿಡುವುದಿಲ್ಲ. ಇಲ್ಲ‌ಸಲ್ಲದ ಆರೋಪ ಮಾಡಿ‌ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ದುಸ್ಸಾಹಸಕ್ಕೆ ಇಳಿದಿದ್ದಾರೆ. ಬಿಜೆಪಿ ಆಡಳಿತಾವಧಿಯ ಹಗರಣ ತನಿಖೆಯಾಗದಂತೆ ತಡೆಯಲು ಈ ರೀತಿ ಮಾಡುತ್ತಿದ್ದಾರೆ’ಎಂದು ಆರೋಪಿಸಿದರು.

‘ಜನರಿಗೆ ವಾಸ್ತವಾಂಶ ತಿಳಿಸಲು ಕಾಂಗ್ರೆಸ್‌ ಪಕ್ಷದ ವತಿಯಿಂದಲೂ ಜನಾಂದೋಲನ ಸಮಾವೇಶವವನ್ನು ಇದೇ 9ರಂದು ಮೈಸೂರಿನಲ್ಲಿ ಹಮ್ಮಿಕೊಂಡಿದ್ದೇವೆ. ಜಿಲ್ಲೆಯಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಜನ ಇದರಲ್ಲಿ ಭಾಗವಹಿಸಿ, ಸಿದ್ದರಾಮಯ್ಯ ಅವರಿಗೆ ಬೆಂಬಲ ಸೂಚಿಸಲಿದ್ದಾರೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ನೀರಜ್ ಪಾಲ್, ಟಿ.ಕೆ.ಸುಧೀರ್, ಪ್ರಕಾಶ್ ಸಾಲ್ಯಾನ್, ನವೀನ್ ಡಿಸೋಜ, ಎಂ.ಎಸ್.ಮಹಮ್ಮದ್, ಶುಭೋದಯ ಆಳ್ವ, ಎ.ಸಿ.ವಿನಯರಾಜ್‌ ಹಾಗೂ ವಿಕಾಸ್‌ ಶೆಟ್ಟಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT