ಶನಿವಾರ, ಅಕ್ಟೋಬರ್ 1, 2022
23 °C

ದಕ್ಷಿಣ ಕನ್ನಡ ಸಂಘದಿಂದ ರಕ್ತ ಸಂಗ್ರಹ: ಪ್ರತಿ ಮನೆಗೆ ಧ್ವಜ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ದಕ್ಷಿಣ ಕನ್ನಡ ಸಂಘವು ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಪ್ರತಿ ಮನೆಗೆ ಧ್ವಜ ವಿತರಣೆ ಮಾಡಿ 56 ಯುನಿಟ್ ರಕ್ತದಾನ ಮಾಡಿರುವುದು ರಾಷ್ಟ್ರಪ್ರೇಮ ಮತ್ತು ಸೇವೆಗಾಗಿ ಬಾಳು ಎಂಬುದನ್ನು ಖಾತ್ರಿ ಪಡಿಸಿದೆ ಎಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಯಾನಂದ ಪಾಟೀಲ ಹೇಳಿದರು.

ಕಲಬುರಗಿಯ ದಕ್ಷಿಣ ಕನ್ನಡ ಸಂಘವು ಯಾತ್ರಿ ನಿವಾಸ ಹೋಟೆಲ್ ಸಂಭಾಗಣದಲ್ಲಿ ಏರ್ಪಡಿಸಿದ ‘ಪ್ರತಿ ಮನೆಗೆ ತ್ರಿವರ್ಣ ಧ್ವಜ ಮತ್ತು ರಕ್ತದಾನ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನೀವು ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ’ ಎಂದು ನೇತಾಜಿ ಸುಭಾಷ್‌ಚಂದ್ರ ಬೋಸ್ ಸಾರಿದಂತೆ ಕರಾವಳಿಯ ಜನರು ಪ್ರತಿ ಮನೆಗೆ ಧ್ವಜ ನೀಡುವ ಮತ್ತು ರಕ್ತದಾನ ಮಾಡುವ ಮೂಲಕ ರಾಷ್ಟ್ರಪ್ರೇಮವನ್ನು ಮೆರೆದಿದ್ದಾರೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಆದರ್ಶವನ್ನು ಸ್ಮರಿಸಿ ಧ್ವಜ ಗೌರವ ಕಾಪಾಡಿ ಆಗಸ್ಟ್‌ 13ರಿಂದ 15ರವರೆಗೆ ಮನೆಮನೆಯಲ್ಲೂ ತಿರಂಗಾ ಧ್ವಜ ರಾರಾಜಿಸಲಿ ಎಂದು ಹೇಳಿದರು.

ಹೈದರಾಬಾದ್ ಸಂಸ್ಥಾನ ವಿಮೋಚನಾ ಹೋರಾಟಗಾರ ಮಹಾದೇವಪ್ಪ ಕಡೇಚೂರ ತ್ರಿವರ್ಣ ಧ್ವಜವನ್ನು ಸಂಘದ ಗೌರವಾಧ್ಯಕ್ಷರು ಮತ್ತು ಅಧ್ಯಕ್ಷರಿಗೆ ಹಸ್ತಾಂತರಿಸಿ ವಿಮೋಚನಾ ಹೋರಾಟದಲ್ಲಿ ಬದುಕುಳಿದಿರುವುದೇ ಪವಾಡವಾಗಿದೆ. ಮಾನ ಪ್ರಾಣ ಹರಣಗೈದ ರಜಾಕಾರರ ವಿರುದ್ಧ ಹೋರಾಡಿದ ಈ ಭಾಗದ ಜನರ ತ್ಯಾಗ ಮನೋಭಾವ ಆದರ್ಶವಾದುದು. ದೇಶದ ಪ್ರಗತಿಗೆ ದುಡಿದು ವಿಶ್ವ ಮಟ್ಟದಲ್ಲಿ ರಾಷ್ಟ್ರವನ್ನು ಬೆಳೆಸುವುದೇ ನಿಜವಾದ ರಾಷ್ಟ್ರಪ್ರೇಮ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಜಿಮ್ಸ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ನಾಗರಾಜ ಪಾಟೀಲ, ಆಯುರ್ವೇದ ವೈದ್ಯೆ ಡಾ. ರಕ್ಷಾ ಸತ್ಯನಾಥಶೆಟ್ಟಿ, ಡಾ.ರಾಜೇಶ ಕಡೇಚೂರ, ಡಾ.ಜಗನ್ನಾಥ ಕಟ್ಟೀಮನಿ, ಡಾ.ಮಮತಾ ಪಾಟೀಲ, ಜಿಮ್ಸ್ ರಕ್ತನಿಧಿ ಕೇಂದ್ರದ ಹಫೀಜ್ ಬೇಗ್, ಶಬ್ಬೀರ್ ಅಹ್ಮದ್, ಯಲ್ಲಪ್ಪ ವಾರಿ, ಆನಂದ ಕಾಂಬ್ಳೆ, ಮಲ್ಲಿಕಾರ್ಜುನ ಎ.ಪಾಟೀಲ, ಬಾಬುರಾವ್ ಮತ್ತು ಖಂಡೆಪ್ಪ ಹಾಜರಿದ್ದರು.

ಉದ್ಯಮಿ ದಿವಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಪ್ರಶಾಂತ ಶೆಟ್ಟಿ ಇನ್ನಾ ಹಾಜರಿದ್ದರು. ಅಧ್ಯಕ್ಷ ಡಾ. ಸದಾನಂದ ಪೆರ್ಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮಕೃಷ್ಣ ಕೆದಿಲಾಯ ನಿರೂಪಿಸಿದರು. ಜಹೀರ್ ಅಹ್ಮದ್ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು