ಶನಿವಾರ, ಜನವರಿ 18, 2020
26 °C
ಸರಕು ತುಂಬಿಕೊಂಡು ಹೊರಟಿದ್ದ ಏಳು ಕಾರ್ಮಿಕರ ರಕ್ಷಣೆ

ಮಂಗಳೂರು: ಭಾಗಶಃ ಮುಳುಗಿದ ಸರಕು ದೋಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ನಗರದ ಹಳೆ ಬಂದರಿನಿಂದ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ತುಂಬಿಕೊಂಡು ಲಕ್ಷದ್ವೀಪಕ್ಕೆ ಹೊರಟಿದ್ದ ಬೃಹತ್‌ ಸರಕು ಸಾಗಣೆ ದೋಣಿಯೊಂದು ಅಲ್ಲಿನ ಕಿಲ್ತಾನ್‌ ದ್ವೀಪದ ಬಳಿ ಭಾಗಶಃ ಮುಳುಗಿದೆ. ದೋಣಿಯಲ್ಲಿದ್ದ ಏಳು ಕಾರ್ಮಿಕರನ್ನು ರಕ್ಷಿಸಲಾಗಿದೆ.

‘ಫೈಸಲ್‌ ಹುಸೈನ್‌’ ಹೆಸರಿನ ಈ ದೋಣಿ ಲಕ್ಷದ್ವೀಪದ ಜಾಬಿರ್‌ ಎಂಬುವವರಿಗೆ ಸೇರಿದ್ದು ಎಂಬ ಮಾಹಿತಿ ಲಭ್ಯವಾಗಿದೆ. 700 ಚೀಲ ಸಿಮೆಂಟ್‌, 400 ಸಿಮೆಂಟ್‌ ಹಾಲೋಬ್ಲಾಕ್‌ ಇಟ್ಟಿಗೆ, 1,000 ಚೀಲ ಜಲ್ಲಿ, ಎಂ– ಸ್ಯಾಂಡ್‌ ಮತ್ತು ಕಬ್ಬಿಣ ತುಂಬಿಸಿಕೊಂಡು ದೋಣಿ ಸೋಮವಾರ ಬೆಳಿಗ್ಗೆ 11 ಗಂಟೆಗೆ ಮಂಗಳೂರಿನ ಹಳೆ ಬಂದರಿನಿಂದ ಹೊರಟಿತ್ತು.

ಮಂಗಳವಾರ ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ದೋಣಿಯ ತಳದಿಂದ ನೀರು ಉಕ್ಕಲಾರಂಭಿಸಿತ್ತು. ಕಾರ್ಮಿಕರು ನೀರನ್ನು ಹೊರಹಾಕಲು ನಡೆಸಿದ ಪ್ರಯತ್ನ ಫಲಿಸಲಿಲ್ಲ. ತಕ್ಷಣವೇ ಲಕ್ಷದ್ವೀಪ ಸಮೀಪದ ಕಿಲ್ತಾನ್‌ ದ್ವೀಪದ ಬಳಿಕ ಲಂಗರು ಹಾಕಲಾಯಿತು. ದೋಣಿ ಭಾಗಶಃ ಸಮುದ್ರದಲ್ಲಿ ಮುಳುಗಿದ್ದು, ಸಂಪೂರ್ಣವಾಗಿ ಮುಳುಗುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭಿಸಿದೆ.

‘ದೋಣಿ ಮುಳುಗುತ್ತಿದ್ದು, ಕಾರ್ಮಿಕರು ತೊಂದರೆಗೆ ಸಿಲುಕಿರುವ ಕುರಿತು ಲಕ್ಷದ್ವೀಪದ ಜನರಿಗೆ ಮಾಹಿತಿ ನೀಡಲಾಗಿತ್ತು. ಕಾರ್ಮಿಕರನ್ನು ರಕ್ಷಿಸಲಾಗಿದೆ ಎಂದು ಮಂಗಳೂರು ಹಳೆ ಬಂದರು ಬಳಕೆದಾರರ ಅಸೋಸಿಯೇಷನ್‌ ಕಾರ್ಯದರ್ಶಿ ಅಬ್ದುಲ್‌ ಲತೀಫ್‌ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು