ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಟ್‌ಗೆ ಭಾರವಾದ ಭರ್ಜರಿ ಬೇಟೆ

ಬೋಟ್‌ ಮುಳುಗಡೆ: ಮೀನುಗಾರರಲ್ಲಿ ಮಡುಗಟ್ಟಿದ ದುಃಖ
Last Updated 1 ಡಿಸೆಂಬರ್ 2020, 16:30 IST
ಅಕ್ಷರ ಗಾತ್ರ

ಮಂಗಳೂರು: ಬಲೆಗೆ ಬಿದ್ದ ಭರ್ಜರಿ ಮೀನಿನ ಸಂತೋಷ ಬಹುಕಾಲ ಉಳಿಯಲಿಲ್ಲ. ಸೋಮವಾರ ರಾತ್ರಿ ವೇಳೆಗೆ ದಡ ಸೇರಿ ಸಂಭ್ರಮಿಸುವ ಹುಮ್ಮಸ್ಸಿನಲ್ಲಿದ್ದ ಮೀನುಗಾರರಲ್ಲಿ ಈಗ ದುಃಖ ಮಡುಗಟ್ಟಿದೆ. ಬೋಟ್‌ ತುಂಬಿದ್ದ ಅಪಾರ ಪ್ರಮಾಣದ ಮೀನಿನ ಸಂಗ್ರಹವೇ ಬೋಟ್‌ಗೆ ಭಾರವಾಗಿ ಪರಿಣಮಿಸಿದೆ.

ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್‌ ಬೋಟ್ ಮಗುಚಿ ನಾಪತ್ತೆಯಾಗಿದ್ದ ಆರು ಮಂದಿಯ ಪೈಕಿ ಇಬ್ಬರ ಮೃತದೇಹ ಮಂಗಳವಾರ ಪತ್ತೆಯಾಗಿವೆ. ನಗರದ ಮೀನುಗಾರಿಕೆ ಬಂದರಿನಲ್ಲಿ ಈಗ ನೀರವ ಮೌನ ಆವರಿಸಿದೆ.

ಸೋಮವಾರ ನಸುಕಿನ ಜಾವ 5 ರ ವೇಳೆಗೆ ದಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ 22 ಮಂದಿಯಿದ್ದ ಬೋಟ್ ತೆರಳಿತ್ತು. ಬೆಳಿಗ್ಗೆಯಿಂದ ಸಂಜೆಯವರೆಗೆ ಮೀನುಗಾರಿಕೆ ನಡೆಸಿ, ಸೋಮವಾರ ತಡರಾತ್ರಿ ಮೀನುಗಾರಿಕಾ ಬಂದರಿಗೆ ಬರಬೇಕಿತ್ತು. ಆದರೆ ಮಂಗಳವಾರ ಬೆಳಿಗ್ಗೆ ಬೋಟ್ ಹಿಂದಿರುಗದೇ ಇದ್ದಾಗ, ಬೋಟ್ ನೋಡಿಕೊಳ್ಳುವ ರೈಟರ್ ಮೀನುಗಾರರಿಗೆ ಕರೆ ಮಾಡಿದ್ದಾರೆ. ಎಲ್ಲರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ತಕ್ಷಣವೇ ಬೋಟ್‌ನ ವೈಯರ್‌ಲೆಸ್‌ಗೆ ಸಂಪರ್ಕಿಸಲು ಪ್ರಯತ್ನಿಸಿದರೂ, ಸಂಪರ್ಕಕ್ಕೆ ಸಿಕ್ಕಿಲ್ಲ. ಇತರ ಮೀನಗಾರಿಕಾ ಬೋಟ್‌ನವರಿಗೆ ಮಾಹಿತಿ ನೀಡಿದ್ದು, ಸಮುದ್ರದಲ್ಲಿದ್ದ ಪರ್ಸಿನ್‌ ಬೋಟ್‌ಗಳು, ಕರಾವಳಿ ಕಾವಲು ಪಡೆಯ ಸಿಬ್ಬಂದಿ ಬೋಟ್ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದರು.

ಬಲೆ ಪತ್ತೆ: ದುರಂತಕ್ಕೀಡಾದ ಬೋಟ್ ಸೋಮವಾರ ಮೀನುಗಾರಿಕೆ ನಡೆಸಿ ಬಲೆ ಎಳೆಯುತ್ತಿದ್ದನ್ನು ಇತರ ಪರ್ಸಿನ್‌ ಬೋಟ್‌ಗಳ ಮೀನುಗಾರರು ನೋಡಿದ್ದರು. ಮಂಗಳವಾರ ಬೋಟ್ ನಾಪತ್ತೆಯಾಗಿದೆ ಎಂದು ಮಾಹಿತಿ ತಿಳಿದಾಕ್ಷಣ ಮೀನುಗಾರರು ಅದೇ ಪ್ರದೇಶದ ಆಳ ಸಮುದ್ರದಲ್ಲಿ ಹುಡುಕಾಟ ನಡೆಸಿದಾಗ ಬಲೆ ಪತ್ತೆಯಾಗಿದ್ದು, ಅದೇ ಪ್ರದೇಶದಲ್ಲಿ ಬೋಟ್ ಮುಳುಗಡೆಯಾಗಿರುವ ಶಂಕೆ ವ್ಯಕ್ತವಾಗಿತ್ತು. ಇದೀಗ ಅದೇ ಸ್ಥಳದಲ್ಲಿ ಇಬ್ಬರ ಶವ ಪತ್ತೆಯಾಗಿದೆ.

ಆಸರೆಯಾದ ಡಿಂಗಿ

22 ಮೀನುಗಾರರ ಪೈಕಿ ಬೋಟ್‌ನ ಮೇಲಿದ್ದ 16 ಮಂದಿ ಸಮುದ್ರಕ್ಕೆ ಹಾರಿದ್ದು, ಬೋಟ್‌ಗೆ ಆಳವಡಿಸಿದ್ದ ಸಣ್ಣ ದೋಣಿ(ಡಿಂಗಿ) ಹತ್ತಿ ಪ್ರಾಣ ಉಳಿಸಿಕೊಂಡಿದ್ದಾರೆ. ಬೋಟ್‌ನ ಕ್ಯಾಬಿನ್ ಒಳಗಡೆ ಕುಳಿತಿದ್ದ 6 ಮಂದಿ ನಾಪತ್ತೆಯಾಗಿದ್ದರು. ಡಿಂಗಿಯಲ್ಲಿದ್ದ 16 ಮಂದಿಯನ್ನು ನವ ಮಂಗಳೂರು ಬಂದರಿನಿಂದ 15 ನಾಟಿಕಲ್ ಮೈಲಿ ದೂರದಲ್ಲಿ ಆಳ ಸಮುದ್ರದಲ್ಲಿ ಪತ್ತೆ ಹಚ್ಚಿ ರಕ್ಷಣೆ ಮಾಡಲಾಗಿದೆ.

* ಪರಿಹಾರದ ಕುರಿತು ಈಗಾಗಲೇ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಜೊತೆ ಚರ್ಚಿಸಿದ್ದೇನೆ. ತಕ್ಷಣವೇ ಪರಿಹಾರ ಧನ ಘೋಷಿಸುವಂತೆ ಸಿಎಂಗೆ ಮನವಿ ಮಾಡುತ್ತೇವೆ.
-ವೇದವ್ಯಾಸ ಕಾಮತ್, ಶಾಸಕ

* ಬೋಟ್‌ ದುರಂತ ತೀವ್ರ ನೋವುಂಟು ಮಾಡಿದೆ. ಸರ್ಕಾರ ಕೂಡಲೇ ಮೀನುಗಾರರ ಬೇಡಿಕೆಗಳಿಗೆ ಸ್ಪಂದಿಸಬೇಕು. ಮೀನುಗಾರರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು.
-ಮಿಥುನ್‌ ರೈ, ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT