ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಲ್ಡರ್‌ಗೆ ₹ 86 ಲಕ್ಷ ವಂಚನೆ ಆರೋಪ

ಬ್ಯಾಂಕ್‌ ವ್ಯವಸ್ಥಾಪಕ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ
Published 28 ಮೇ 2024, 5:36 IST
Last Updated 28 ಮೇ 2024, 5:36 IST
ಅಕ್ಷರ ಗಾತ್ರ

ಉಳ್ಳಾಲ: ಬಿಲ್ಡರ್‌ ಒಬ್ಬರಿಂದ ₹ 86 ಲಕ್ಷ  ಪಡೆದು ವಂಚಿಸಿ, ಅವರ ಬಡಾವಣೆ ನಿರ್ಮಾಣ ಕಾಮಗಾರಿಗೆ ಅಡ್ಡಿಪಡಿಸಿ, ಜೀವ ಬೆದರಿಕೆ ಒಡ್ಡಿರುವ ಆರೋಪದ ಮೇರೆಗೆ ಬ್ಯಾಂಕಿನ ವ್ಯವಸ್ಥಾಪಕ, ದಲ್ಲಾಳಿ, ಗುತ್ತಿಗೆದಾರ ಹಾಗೂ ಅವರ ಸಹಚರನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

’ರಾಷ್ಟ್ರೀಕೃತ ಬ್ಯಾಂಕ್‌ ಒಂದರ ವ್ಯವಸ್ಥಾಪ‍ಕರಾಗಿರುವ ಜೆಪ್ಪಿನಮೊಗರು ಬಾಕಿಮಾರು ನಿವಾಸಿ ಪವನ್‌ ಕುಮಾರ್‌, ದಲ್ಲಾಳಿಯಾಗಿರುವ ಅತ್ತಾವರದ ಗುರುರಾಜ್‌, ಗುತ್ತಿಗೆದಾರ ಜಗದೀಶ್‌ ಹಾಗೂ ಅವರ ಸಹಚರ ಜಯಪ್ರಕಾಶ್‌ ಜೆ.ಪಿ ಎಂಬವರ  ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 341 (ಅಕ್ರಮ ಬಂಧನ), 447 (ಅಕ್ರಮ ಪ್ರವೇಶ), 323 (ಸ್ವಯಂಪ್ರೇರಿತ ಹಲ್ಲೆ), 504 (ಹಿಯಾಳಿಸಿ ಸಾರ್ವಜನಿಕ ಶಾಂತಿಭಂಗಕ್ಕೆ ಕುಮ್ಮಕ್ಕು),506 (ಕ್ರಿಮಿನಲ್‌ ಬೆದರಿಕೆ), 420 (ವಂಚನೆ), 34ರ (ಸಮಾನ ಉದ್ದೇಶದಿಂದ ಅನೇಕರು ಸೇರಿ ನಡೆಸಿದ ದುಷ್ಕೃತ್ಯ) ಅಡಿ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ರಾಷ್ಟ್ರೀಕೃತ ಬ್ಯಾಂಕೊಂದರ ವ್ಯವಸ್ಥಾಪಕ ಪವನ್‌ಕುಮಾರ್ ಬಾಕಿಮಾರ್ 2022ರಲ್ಲಿ ಕೇಂದ್ರ ಸರ್ಕಾರದ ಕೆಲಸದ ಜೊತೆಗೆ ಬ್ರೋಕರ್ ಮತ್ತು ಸಿವಿಲ್ ಗುತ್ತಿಗೆದಾರನಾಗಿದ್ದೇನೆ ಎಂದು ಹೇಳಿಕೊಂಡು ಬೆಂಗಳೂರಿನ ವೆಂಕಟೇಶ್ ಅವರಿಗೆ ಮಂಗಳೂರಿನ ಉಳ್ಳಾಲದ ‘ಸೂರ್ಯಕಾಂಡ ವಿಲೇಜ್‌’ನಲ್ಲಿ ಬಡಾವಣೆ ನಿರ್ಮಾಣಕ್ಕೆ 4 ಎಕರೆ ಜಮೀನನ್ನು ಕ್ರಯಕ್ಕೆ ಕೊಡಿಸಿದ್ದರು. ಈ ಜಮೀನಿನಲ್ಲಿ ಬಡಾವಣೆಯ ಒಳಚರಂಡಿ ಕೆಲಸ ಮಾಡಿಕೊಡಲು ಮತ್ತು ದಾಖಲಾತಿಗಳನ್ನು ಒದಗಿಸಲು ಮಾಲೀಕರಿಂದ ಖುದ್ದು ಒಪ್ಪಿಗೆ ಪಡೆದಿದ್ದರು. ನಂತರ ಒಳಚರಂಡಿ ನಿರ್ಮಾಣಕ್ಕೆ ಉಪಗುತ್ತಿಗೆಯನ್ನು ಜಗದೀಶ್ ಎಂಬಾತನಿಗೆ ಕೊಟ್ಟಿದ್ದರು. ಉಪಗುತ್ತಿಗೆದಾರನ ಹೆಸರಿನಲ್ಲಿ ಆರ್‌ಟಿಜಿಎಸ್ ಮತ್ತು ನಗದು ಮೂಲಕ ಮಾಲಿಕರಿಂದ ₹ 86 ಲಕ್ಷ ಹಣ ಪಡೆದುಕೊಂಡಿದ್ದರು. ಒಳಚರಂಡಿ ಕಾಮಗಾರಿಯನ್ನು ಸರಿಯಾಗಿ ನಿರ್ವಹಿಸದೇ ನಂಬಿಕೆದ್ರೋಹವೆಸಗಿ ವಂಚಿಸಿದ್ದಾರೆ ಎಂದು ಆರೋಪಿಸಿ ವೆಂಕಟೇಶ್‌ ದೂರು ನೀಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಲೇಔಟ್‌ನಲ್ಲಿ ವಿಂಗಡಿಸಿದ ನಿವೇಶನಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭಮಾಡಿಕೊಳ್ಳಲು ಅವಕಾಶ ನೀಡದ ಕಾರಣಕ್ಕೆ ಮತ್ತು ಮಾಲಿಕರಿಂದ ತೆಗೆದುಕೊಂಡ ಹಣವನ್ನು ಮರಳಿಸುವಂತೆ ಕೇಳಿದ್ದಕ್ಕೆ ತಮ್ಮ ಮೇಲೆ ಪವನ್ ಕುಮಾರ್‌ ಜಿದ್ದು ಮತ್ತು ದ್ವೇಷ ಸಾಧಿಸಿದ್ದಾನೆ. ತನ್ನ ಸಹಚರ ದಲ್ಲಾಳಿ ಗುರುರಾಜ್ ಮತ್ತು ಜಯಪ್ರಕಾಶ್, ಉಪಗುತ್ತಿಗೆದಾರ ಜಗದೀಶ್ ಎಂಬುವರ ಜೊತೆಗೆ ಜ. 11 ರಂದು ಮಧ್ಯಾಹ್ನ ಬಡಾವಣೆಗೆ ಅಕ್ರಮ ಪ್ರವೇಶ ಮಾಡಿದ್ದು, ಕೆಲಸದಲ್ಲಿ ನಿರತರಾಗಿದ್ದ ಪುಷ್ಪರಾಜ್, ದಕ್ಷರಾಜ್, ರಾಧಾಕೃಷ್ಣರವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾರೆ. ಕಾಮಗಾರಿಗೆ ತಡೆವೊಡ್ಡಿ ಹಲ್ಲೆ ನಡೆಸಿ  ಪಿಕ್ಕಾಸು, ರಾಡು, ಹಾರೆಯನ್ನು ತೋರಿಸಿ ಹೆದರಿಸಿದ್ದಾರೆ. ಜೆಸಿಬಿ ಮತ್ತು ಟ್ರಕ್‌ ಹತ್ತಿಸಿ ಕೊಲೆಮಾಡುವುದಾಗಿ ಜೀವ ಬೆದರಿಕೆಯನ್ನು ಒಡ್ಡಿದ್ದಾರೆ’ ಎಂದೂ ಅವರು ಆರೋಪಿಸಿದ್ದಾರೆ.

ಈ ಪ್ರಕರಣವು ಬೆಳಕಿಗೆ ಬರುತ್ತಿದ್ದಂತೆಯೇ ಬ್ಯಾಂಕಿನವರು ಪವನ್ ಕುಮಾರ್‌ನನ್ನು ಕಾರವಾರದ ಶಾಖೆಗೆ ವರ್ಗಾವಣೆ ಮಾಡಿದ್ದಾರೆ ಎಂದು ಗೊತ್ತಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT