ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿ ಮಾಂಸ: ದರ ದಿಢೀರ್‌ ಹೆಚ್ಚಳ

ಕರಾವಳಿ: ಉಷ್ಣಾಂಶ ಹೆಚ್ಚಳದಿಂದ ಸಾಯುತ್ತಿವೆ ಕೋಳಿಗಳು
Published 8 ಏಪ್ರಿಲ್ 2024, 4:28 IST
Last Updated 8 ಏಪ್ರಿಲ್ 2024, 4:28 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿಯಲ್ಲಿ ಉಷ್ಣಾಂಶದ ಹೆಚ್ಚಳದ ಬಿಸಿ ಕೋಳಿ ಮಾಂಸ ಸೇವಿಸುವವರಿಗೂ ತಟ್ಟಿದೆ. ಉಷ್ಣಾಂಶ ಹೆಚ್ಚಳದಿಂದ ಫಾರಂಗಳಲ್ಲಿ ಕೋಳಿಗಳು  ದಿಢೀರ್‌ ಸಾವಿಗೀಡಾಗುತ್ತಿದ್ದು, ಕೋಳಿ ಮಾಂಸದ ಧಾರಣೆ ಮೂರು ನಾಲ್ಕು ದಿನಗಳಲ್ಲಿ ಪ್ರತಿ ಕೆ.ಜಿ.ಗೆ ₹ 40ರಿಂದ ₹50ರವರೆಗೆ ಜಾಸ್ತಿ ಆಗಿದೆ.

‘ನಾಲ್ಕು ದಿನಗಳ ಹಿಂದೆ ಪ್ರತಿ ಕೆ.ಜಿ.ಗೆ ₹ 220 ಇದ್ದ ಕೋಳಿಮಾಂಸದ (ಸ್ಕಿನ್‌ ಔಟ್‌) ದರ ಈಗ ₹ 270ಕ್ಕೆ ಹೆಚ್ಚಳವಾಗಿದೆ. ಚರ್ಮಸಹಿತ (ವಿತ್‌ ಸ್ಕಿನ್) ಕೋಳಿ ಮಾಂಸದ ಧಾರಣೆ ಕೆ.ಜಿ.ಗೆ 190 ಇದ್ದುದು ಈಗ ₹ 240ಕ್ಕೆ ಏರಿಕೆಯಾಗಿದೆ. ಜೀವಂತ ಬ್ರಾಯ್ಲರ್‌ ಕೋಳಿಯ ದರವು ಪ್ರತಿ ಕೆ.ಜಿ.ಗೆ ₹ 130 ಇದ್ದುದು ₹ 170ರಿಂದ ₹ 180ಕ್ಕೆ ಹೆಚ್ಚಳವಾಗಿದೆ’ ಎಂದು ನಗರದ ಐಡಿಯಲ್‌ ಚಿಕನ್‌ನ ನಜೀರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೇಡಿಕೆ ಇರುವಷ್ಟು ಕೋಳಿಗಳು ಪೂರೈಕೆ ಆಗುತ್ತಿಲ್ಲ. ವಾರದಿಂದ ಈಚೆಗೆ ದಿನದಿಂದ ದಿನಕ್ಕೆ  ದರ ಹೆಚ್ಚಳವಾಗುತ್ತಲೇ ಸಾಗುತ್ತಿದೆ. ಈ ನಡುವೆಯೂ ಗ್ರಾಹಕರಿಗೆ ಆದಷ್ಟು ಕಡಿಮೆ ದರದಲ್ಲಿ ಕೋಳಿ ಮಾಂಸ ಪೂರೈಸಲು ನಾವು ಪ್ರಯತ್ನಿಸುತ್ತಿದ್ದೇವೆ’ ಎಂದು ಅವರು ತಿಳಿಸಿದರು.

ಕರಾವಳಿ ಜಿಲ್ಲೆಗಳಲ್ಲಿ ಕೆಲವು ಕಡೆ ವಾತಾವರಣದ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಉಷ್ಣಾಂಶ ಹೆಚ್ಚಳದಿಂದ ಸಾಯುತ್ತಿರುವ ಕೋಳಿಗಳನ್ನು ಉಳಿಸಿಕೊಳ್ಳಲು ಕೋಳಿ ಫಾರ್ಮ್‌ ಮಾಲೀಕರು ಹರಸಾಹಸಪಡುತ್ತಿದ್ದಾರೆ. ಕೆಲವರು ಕೋಳಿ ಸಾಕುವುದನ್ನೇ ನಿಲ್ಲಿಸುವ ಹಂತವನ್ನು ತಲುಪಿದ್ದಾರೆ.

‘ನನ್ನ ಫಾರ್ಮ್‌ನಲ್ಲಿ ಈ ಬ್ಯಾಚ್‌ನಲ್ಲಿ ಸುಮಾರು 200 ಕೋಳಿಗಳು ಸತ್ತಿವೆ. ಸತ್ತ ಕೋಳಿಗಳನ್ನು ಮಣ್ಣು ಮಾಡಬೇಕಾಗುತ್ತದೆ. ಅವಷ್ಟೂ ನಮಗೆ ನಷ್ಟ’ ಎಂದು ಬೆಳ್ತಂಗಡಿ ತಾಲ್ಲೂಕಿನ ನೆರಿಯ ಗ್ರಾಮದ ಶ್ರೀನಿವಾಸ ಕುಡುಮಡ್ಕ ತಿಳಿಸಿದರು. 

‘ನೀರು ಪ್ರೋಕ್ಷಣೆ ಮಾಡುವುದು, ಫ್ಯಾನ್‌ ಅಳವಡಿಕೆ, ಫಾರ್ಮ್‌ನ ಚಾವಣಿಗೆ ಹುಲ್ಲು ಹಾಸುವ ಮೂಲಕ ಉಷ್ಣಾಂಶ ನಿಯಂತ್ರಣಕ್ಕೆ ಪ್ರಯತ್ನ ಪಡುತ್ತಿದ್ದೇವೆ. ಆದರೂ ಕೋಳಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವುಗಳಿಗೆ ಬಳಸುವ ಆಹಾರವು ಬಿಸಿಯೇರುವಷ್ಟರ ಮಟ್ಟಿಗೆ ಉಷ್ಣಾಂಶ ಹೆಚ್ಚಳವಾಗಿದೆ ಕಳೆದ ಎರಡು ಮೂರು ವರ್ಷಗಳಲ್ಲಿ ಯಾವತ್ತೂ ಉಷ್ಣಾಂಶ ಈ ಪರಿ ಹೆಚ್ಚಳ ಕಂಡಿರಲಿಲ್ಲ’ ಎಂದು ಅವರು ವಿವರಿಸಿದರು.

‘ಕೋಳಿಗಳಗೆ  ಸಾಧ್ಯವಾದಷ್ಟು ಕಡಿಮೆ ಆಹಾರ ನೀಡುವ ಮೂಲಕ ಹಾಗೂ ಬಿಸಿಲಿರುವ ಹೊತ್ತಿನಲ್ಲಿ ಆಹಾರ ನೀಡುವ ಬದಲು ರಾತ್ರಿ 8ರ ಬಳಿಕ ಮಾತ್ರ ಆಹಾರ ನೀಡುವ ಮೂಲಕ ಕೋಳಿಗಳ ಸಾವನ್ನು ತುಸು ಕಡಿಮೆ ಮಾಡಬಹುದು’ ಎಂದು ಅವರು ಸಲಹೆ ನೀಡಿದರು.

ಡಾ.ಅರುಣ್ ಕುಮಾರ್ ಶೆಟ್ಟಿ
ಡಾ.ಅರುಣ್ ಕುಮಾರ್ ಶೆಟ್ಟಿ
ಶ್ರೀನಿವಾಸ ಕುಡುಮಡ್ಕ
ಶ್ರೀನಿವಾಸ ಕುಡುಮಡ್ಕ
ಬೇಸಿಗೆಯಲ್ಲಿ ಕೋಳಿ ಫಾರ್ಮ್‌ಗಳಲ್ಲಿ ಉಷ್ಣಾಂಶ ನಿಯಂತ್ರಣದ ಬಗ್ಗೆ ಗಮನವಹಿಸಬೇಕು. ಉಷ್ಣಾಂಶ ಹೆಚ್ಚಳವನ್ನು ಸಹಿಸುವ ಶಕ್ತಿ ಕೋಳಿ ಮರಿಗಳಿಗೆ ಇರದು
- ಡಾ.ಅರುಣ್ ಕುಮಾರ್‌ ಶೆಟ್ಟಿ ಎನ್‌. ಉಪನಿರ್ದೇಶಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
ವಾತಾವರಣದ ಉಷ್ಣಾಂಶ ದಿನ ದಿನವೂ ಹೆಚ್ಚುತ್ತಿದೆ. ಈ ನಡುವೆ ಇರುವ ಕೋಳಿಗಳನ್ನು ಉಳಿಸಿಕೊಳ್ಳುವುದೇ ಸವಾಲಾಗಿದೆ
-ಶ್ರೀನಿವಾಸ ಕುಡುಮಡ್ಕ ಕೋಳಿ ಫಾರಂ ಮಾಲೀಕ

‘ಉಷ್ಣಾಂಶ ನಿಯಂತ್ರಣವೊಂದೇ ಪರಿಹಾರ’

‘ವಾತಾವರಣದ ಉಷ್ಣಾಂಶವು 35 ಡಿಗ್ರಿ ಸೆಂಟಿಗ್ರೇಡ್‌ ದಾಟಿದರೆ ಅದನ್ನು ಸಹಿಸಿಕೊಳ್ಳುವ ಶಕ್ತಿ ಕೋಳಿ ಮರಿಗಳಿಗೆ ಇರುವುದಿಲ್ಲ. ಬ್ರಾಯ್ಲರ್‌ ಕೋಳಿಗಳು ಬೇಸಿಗೆಯಲ್ಲಿ ಬಿಸಿಲನ ಆಘಾತದಿಂದ (ಹೀಟ್‌ ಸ್ಟ್ರೋಕ್‌) ಸಾಯುತ್ತವೆ. ಒಂದು ತಿಂಗಳಿನಿಂದ ಕರಾವಳಿಯಲ್ಲೂ ಬಿಸಿಲ ಝಳ ಹೆಚ್ಚುತ್ತಲೇ ಇದೆ. ಹಾಗಾಗಿ ಫಾರ್ಮ್‌ ಕೋಳಿಗಳನ್ನು ಉಳಿಸಿಕೊಳ್ಳುವುದು ಸವಾಲಾಗಿದೆ’ ಎನ್ನುತ್ತಾರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಅರುಣ್ ಕುಮಾರ್‌ ಶೆಟ್ಟಿ ಎನ್‌. ತಿಳಿಸಿದರು. ‘ಫಾರ್ಮ್‌ಗಳಲ್ಲಿ ಉಷ್ಣಾಂಶ ನಿಯಂತ್ರಣಕ್ಕೆ ಕ್ರಮ ವಹಿಸುವುದರಿಂದ ಕೋಳಿಗಳು ಹೀಟ್‌ ಸ್ಟ್ರೋಕ್‌ನಿಂದ ಸಾಯುವುದನ್ನು ತಪ್ಪಿಸಬಹುದು. ಏರ್‌ಕೂಲರ್‌ಗಳನ್ನು ಬಳಸುವುದು ಸಾಕಷ್ಟು ಗಾಳಿಯಾಡುವಂತೆ ಫಾರ್ಮ್‌ಗಳನ್ನು ನಿರ್ಮಿಸುವುದು ಫ್ಯಾನ್‌ಗಳನ್ನು ಅಳವಡಿಸುವುದರಿಂದ ಉಷ್ಣಾಂಶ ಕಡಿಮೆ ಮಾಡಬಹುದು. ಕೋಳಿಗಳಿಗೆ ನೀರು ಚಿಮುಕಿಸುವ ವ್ಯವಸ್ಥೆ ಕಲ್ಪಿಸಬಹುದು. ಫಾರಂನ ಚಾವಣಿಗೆ ಬಿಳಿ ಬಣ್ಣ ಬಳಿಯಬಹುದು. ಹುಲ್ಲಿನ ಹಾಸು ಹಾಸಬಹುದು. ಕೋಳಿಗಳು ಒತ್ತಡಕ್ಕೆ ಒಳಗಾಗಿದ್ದರೆ ಅವುಗಳಿಗೆ ವಿಟಮಿನ್–ಬಿ ಕಾಂಪ್ಲೆಕ್ಸ್‌ ನೀಡಬಹುದು’ ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT