ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಯೂರು ಸಂಸ್ಥಾನದಿಂದ ಆಯೋಜನೆ:ಗದ್ದೆಯಲ್ಲಿ ವಿದ್ಯಾರ್ಥಿಗಳಿಗೆ ಕೃಷಿ ಪಾಠ

Last Updated 3 ಜುಲೈ 2018, 14:22 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳಿಗೆ ಒಡಿಯೂರು ಗುರುದೇವದತ್ತ ಸಂಸ್ಥಾನದ ವತಿಯಿಂದ ಕೃಷಿ ಬೇಸಾಯ ಮಹತ್ವದ ಬಗ್ಗೆ ತಿಳಿಸುವ ಪ್ರಯತ್ನ ಇತ್ತೀಚೆಗೆ ನಡೆಯಿತು.ವಿದ್ಯಾರ್ಥಿಗಳು ಶಾಲೆ ಬಿಟ್ಟು ಬಂದೊಡನೆ ಮೈದಾನಕ್ಕೆ ಆಟ ಆಡಲು ಹೋಗುತ್ತಾರೆ. ಬಳಿಕ ಬಂದು ಮನೆಯಲ್ಲಿ ಟಿ.ವಿ ನೋಡುವುದರಲ್ಲಿ ಹಾಗೂ ಮೊಬೈಲ್‍ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಲ್ಲೀನರಾಗುತ್ತಿದ್ದಾರೆ ಎಂಬ ಆರೋಪವಿದೆ. ಅವರಿಗೆ ಕೃಷಿಯ ಸೊಗಸನ್ನು ಪರಿಚಯಿಸುವುದು ಆಶ್ರಮದ ಉದ್ದೇಶ.ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಸಾಧ್ವೀ ಮಾತಾನಂದ ಮಯೀ ಅವರ ಮಾರ್ಗದರ್ಶನದಲ್ಲಿ ಸಂಸ್ಥಾನದ ಬನಾರಿ ಕೃಷಿ ಭೂಮಿಯಲ್ಲಿ ನೇಜಿ ನಡುವ ಕೆಲಸವನ್ನು ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಿರ್ವಹಿಸಿದರು.

ಒಡಿಯೂರು ಶ್ರೀ ಗುರುದೇವ ವಿದ್ಯಾ ಪೀಠದ 10ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ದಿನದ ನೇಜಿ ನೇಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಾಗ ಎಲ್ಲರಿಗೂ ಖುಷಿ.ಆರು ವರ್ಷದಿಂದ ಈ ರೀತಿಯಾಗಿ ವಿದ್ಯಾರ್ಥಿಗಳಿಗೆ ಕೃಷಿ ಪಾಠವನ್ನು ಹೇಳಿಕೊಡಲಾಗುತ್ತಿದೆ. ಈ ಭೂಮಿಯಲ್ಲಿ ವರ್ಷಕ್ಕೆ ಎಣೇಲು ಹಾಗೂ ಸುಗ್ಗಿ ಎರಡು ಬೆಳೆಯನ್ನು ಬೆಳೆಸಲಾಗುತ್ತಿದೆ. ಇದರಿಂದ ಬರುವ ಸುಮಾರು 8 ಕ್ವಿಂಟಲ್ ಅಕ್ಕಿಯನ್ನು ಮಕ್ಕಳ ಬಿಸಿಯೂಟ ಹಾಗೂ ಸಂಸ್ಥಾನದ ಉಪಯೋಗಕ್ಕೆ ಬಳಸಲಾಗುತ್ತಿದೆ. ಗದ್ದೆಯಲ್ಲಿ ಚಾಪೆ ನೇಜಿಯನ್ನು ನೆಡಲಾಗುತ್ತಿದೆ. ಅದು ಆಧುನಿಕ ಕೃಷಿ ಪದ್ಧತಿಗೆ ಪೂರಕವಾಗಿರುತ್ತದೆ . 12 ದಿನದಲ್ಲಿ ಈ ನೇಜಿ ಬೆಳೆಯುತ್ತದೆ. ಯಾವುದೇ ಯಂತ್ರದ ಮೂಲಕ ನೀರು ಸರಬರಾಜು ಮಾಡದೇ ಹರಿಯುವ ನೀರನ್ನು ತಡೆದು ಗದ್ದೆ ಬಿಡಲಾಗುತ್ತಿದೆ. ಯಾವುದೇ ರಾಸಯನಿಕ ಗೊಬ್ಬರ ಉಪಯೋಗಿಸದೇ ಜೈವಿಕ ಗೊಬ್ಬರದಲ್ಲಿ ನೇಜಿಯನ್ನು ಬೆಳೆಸಲಾಗುತ್ತಿದೆ. ಇದರಿಂದ ಬೆಳೆಯೂ ಸಮೃದ್ಧವಾಗಿರುತ್ತದೆ.

ಒಡಿಯೂರು ಗುರುದೇವಾನಂದ ಸ್ವಾಮೀಜಿಗಳ ಜನ್ಮದಿನೋತ್ಸವ-ಗ್ರಾಮೋತ್ಸವ ಪ್ರಯುಕ್ತ ಇದೇ ಕೃಷಿ ಭೂಮಿಯಲ್ಲಿ ಕೆಸರ್‌ಡೊಂಜಿ ದಿನ ಕಾರ್ಯಕ್ರಮದ ಮೂಲಕ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆನಿಂದ ಸಂಜೆ ವರೆಗೆ ಕೆಸರು ಗದ್ದೆಯಲ್ಲಿ ಆಡಿ ಕುಪ್ಪಳಿಸಿದ್ದರು. ಇದೀಗ ಅದೇ ಗದ್ದೆಯಲ್ಲಿ ವಿದ್ಯಾರ್ಥಿಗಳು ನೇಜಿ ನೆಟ್ಟಿದ್ದಾರೆ. ವಿದ್ಯಾರ್ಥಿಗಳ ಜತೆಯಲ್ಲಿ ಸಂಸ್ಥಾನದ ಸಾಧ್ವೀ ಮಾತಾನಂದಮಯೀ, ಶಾಲಾ ಸಂಚಾಲಕ ಗಣಪತಿ ಭಟ್ ಸೇರಾಜೆ, ಶಾಲಾ ಮುಖ್ಯ ಶಿಕ್ಷಕ ಜಯಪ್ರಕಾಶ್, ಗದ್ದೆಯ ಉಸ್ತುವಾರಿ ನೋಡಿಕೊಳ್ಳುವ ಸುರೇಶ್ ಹಾಗೂ ಶಿಕ್ಷಕರು ಸ್ಥಳೀಯರು ಮಹಿಳೆಯರು ಸಾಥ್ ನೀಡಿದ್ದಾರೆ.

ಒಡಿಯೂರು ಶ್ರೀಗಳ ಪರಿಕಲ್ಪನೆಯಂತೆ ಮಕ್ಕಳಿಗೂ ಕೃಷಿ ಸಂಸ್ಕೃತಿಯ ಪರಿಚಯ ಮಾಡಲಾಗುತ್ತಿದೆ. ದೇಶ ಅಭಿವೃದ್ಧಿ ಹೊಂದಬೇಕಾದರೆ ಹಳ್ಳಿಗಳು ಅಭಿವೃದ್ಧಿ ಹೊಂದಬೇಕು. ಕೃಷಿ ಸಂಸ್ಕೃತಿ ಉಳಿದಾಗ ಹಳ್ಳಿಗಳು ಅಭಿವೃದ್ಧಿ ಹೊಂದುತ್ತವೆ. ಪ್ರಕೃತಿಯ ಬಗ್ಗೆ ಅರಿವಿಲ್ಲದಾಗ ಎತ್ತಿನ ಹೊಳೆ ಯೋಜನೆಯಂತಹ ಯೋಜನೆಗಳು ರೂಪುಗೊಳ್ಳುತ್ತವೆ. ಆದ್ದರಿಂದಬದುಕುವ ವಿಧಾನವನ್ನು ಪ್ರಕೃತಿಯ ಮೂಲಕವೇ ನಾವು ಕಲಿಯಬೇಕು.
- ಸಾಧ್ವೀ ಮಾತಾನಂದ ಮಯೀ, ಒಡಿಯೂರು ಗುರುದೇವದತ್ತ ಸಂಸ್ಥಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT