ಮಂಗಳೂರು: ಪೆರ್ಮುದೆ ಗ್ರಾಮದಲ್ಲಿ ನಡೆದ ಹಲ್ಲೆ, ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 16 ವರ್ಷ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಜ್ಪೆ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.
ಮೂಲ್ಕಿ ನಿವಾಸಿಯಾಗಿದ್ದು, ಸದ್ಯ ಮುಂಬೈನ ಸಕಿ ನಾಕಾದಲ್ಲಿ ವಾಸವಿರುವ ಚಂದ್ರಕಾಂತ ಪೂಜಾರಿ ಯಾನೆ ಅಣ್ಣು ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ಬಜ್ಪೆ ವ್ಯಾಪ್ತಿಯ ಪೆರ್ಮುದೆ ಗ್ರಾಮದಲ್ಲಿ 2005ರ ಜನವರಿ 10 ರಂದು ರಾತ್ರಿ ವಿಶ್ವನಾಥ ಅಮೀನ್ ಎಂಬುವರ ಮನೆಗೆ ಆರೋಪಿಗಳು ಅಕ್ರಮವಾಗಿ ಪ್ರವೇಶಿಸಿದ್ದರು. ಈ ವೇಳೆ ಮನೆಯವರಿಗೆ ಅವಾಚ್ಯವಾಗಿ ನಿಂದಿಸಿ, ಬಾಟಲಿಯಿಂದ ತಲೆಗೆ ಹೊಡೆದು ಹಲ್ಲೆ ನಡೆಸಿದ್ದರು. ಜೊತೆಗೆ ಜೀವ ಬೆದರಿಕೆಯನ್ನೂ ಹಾಕಿದ್ದರು. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಅಂದಿನ ಸಬ್ ಇನ್‌ಸ್ಪೆಕ್ಟರ್ ಧರ್ಮೇಂದ್ರ ಅವರು ಆರೋಪಿ ಯೋಗೀಶ್ ಎಂಬಾತನನ್ನು ಬಂಧಿಸಿದ್ದರು. ಈ ವೇಳೆ ಚಂದ್ರಕಾಂತ ತಪ್ಪಿಸಿಕೊಂಡಿದ್ದ. ಈತನ ಪತ್ತೆಗೆ ಹಲವು ರೀತಿಯಲ್ಲಿ ಬಂಧಿಸಲು ಯತ್ನಿಸಿದರೂ ಈವರೆಗೆ ಸಿಕ್ಕಿರಲಿಲ್ಲ.
ಆರೋಪಿ ಚಂದ್ರಕಾಂತ್ ಮುಂಬೈನಲ್ಲಿ ಇರುವುದಾಗಿ ಸಣ್ಣ ಸುಳಿವು ಸಿಕ್ಕಿದ್ದು, ಮಾಹಿತಿಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಆರೋಪಿ ಮುಂಬೈನ ಅಂಧೇರಿಯಲ್ಲಿ ತನ್ನ ಸ್ವರೂಪ ಮರೆಮಾಚಿ ತರಕಾರಿ ವ್ಯಾಪಾರ ಮಾಡುತ್ತಿರುವುದು ಪತ್ತೆಯಾಗಿದೆ.
ಛೋಟಾ ರಾಜನ್ ಸಹಚರನ ಸಹೋದರ: ಆರೋಪಿ ಚಂದ್ರಕಾಂತ್ ವಿರುದ್ಧ ಮುಂಬೈನಲ್ಲಿಯೂ ಹೊಡೆದಾಟ ಪ್ರಕರಣ ದಾಖಲಾಗಿದೆ. ಅಲ್ಲದೆ, ಈತನ ಸಹೋದರ ವಾಸುದೇವ ಯಾನೆ ವಾಮನ ಎಂಬಾತನು ಛೋಟಾ ರಾಜನ್‌ನ ಸಹಚರನಾಗಿದ್ದ. ಈತನನ್ನು 2004ರಲ್ಲಿ ಮುಂಬೈ ಪೊಲೀಸರು ಎನ್‌ಕೌಂಟರ್ ಮಾಡಿದ್ದರು ಎನ್ನುವುದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ನಗರದ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ನಿರ್ದೇಶನದಲ್ಲಿ ಡಿಸಿಪಿಗಳಾದ ಹರಿರಾಮ್ ಶಂಕರ್, ದಿನೇಶ್ ಕುಮಾರ್ ಬಾರಿಕೆ, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮಹೇಶ್ ಕುಮಾರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಜ್ಪೆ ಠಾಣಾ ಪೊಲೀಸ್ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ., ಪಿಎಸ್‌ಐ ಪೂವಪ್ಪ, ಎಎಸ್ಐ ರಾಮ ಪೂಜಾರಿ, ಸಿಬ್ಬಂದಿ ರಶೀದ್ ಶೇಕ್, ಲಕ್ಷ್ಮಣ ಕಾಂಬ್ಳೆ, ಸಂತೋಷ ಡಿ.ಕೆ., ವಕೀಲ ಎನ್. ಲಮಾಣಿ ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.