ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ತಂಗಡಿ ಭಾರತ್ ಬೀಡಿ ಕಂಪನಿ ಮುಂಭಾಗ ಸಿಐಟಿಯು ಪ್ರತಿಭಟನೆ

Published 17 ಮೇ 2024, 5:02 IST
Last Updated 17 ಮೇ 2024, 5:02 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಅಧಿಕೃತ, ಅನಧಿಕೃತ ಸೇರಿ 5 ಸಾವಿರ ಕಾರ್ಮಿಕರನ್ನು ಹೊಂದಿರುವ ಬೆಳ್ತಂಗಡಿಯ ಭಾರತ್ ಬೀಡಿ ಕಂಪನಿಯನ್ನು ಮುಚ್ಚಲು ಸರ್ಕಾರ ಅನುಮತಿ ನೀಡಲು ಬಿಡುವುದಿಲ್ಲ’ ಎಂದು ಕೆಪಿಸಿಸಿ ರಾಜ್ಯ ಘಟಕದ ಪ್ರಧಾನ‌‌ ಕಾರ್ಯದರ್ಶಿ ರಕ್ಷಿತ್‌ ಶಿವರಾಂ ಭರವಸೆ ನೀಡಿದರು.

ಭಾರತ್ ಬೀಡಿ ಕಂಪನಿ ಉಳಿಸಿ ಎಂದು ಬೆಳ್ತಂಗಡಿಯ ಭಾರತ್ ಬೀಡಿ ಕಂಪನಿ ಮುಂಭಾಗ ಸಿಐಟಿಯು ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಸರ್ಕಾರದ ಅನುಮತಿ ಇಲ್ಲದೆ ಮುಚ್ಚಲು ಅಥವಾ ಸ್ಥಳಾಂತರಿಸಲು ಹೊರಟಿರುವುದು ಬೀಡಿ ಮಾಲೀಕರ ಕಾನೂನು ಬಾಹಿರ ನಡೆ. ಇದನ್ನು ಸರ್ಕಾರ ಸಹಿಸುವುದಿಲ್ಲ. ಕಾರ್ಮಿಕ ಸಚಿವರ ಗಮನಕ್ಕೆ ತಂದು ಕಂಪನಿ ಉಳಿಸಲಾಗುವುದು. ಹೋರಾಟವನ್ನು ಬೆಂಬಲಿಸುತ್ತೇನೆ’ ಎಂದು ಅವರು ಹೇಳಿದರು.

ಬೀಡಿ ಫೆಡರೇಷನ್‌ನ ರಾಜ್ಯ ಘಟಕದ ಅಧ್ಯಕ್ಷ ಜೆ.ಭಾಲಕೃಷ್ಣ ಶೆಟ್ಟಿ ಮಾತನಾಡಿ, ‘ಸರ್ಕಾರದ ಅನುಮತಿ ಇಲ್ಲದೆ ಭಾರತ್ ಬೀಡಿ ಕಂಪನಿ ಮುಚ್ಚುವ ಅಥವಾ ವರ್ಗಾವಣೆ ಮಾಡುವ ಮೂಲಕ ಶಾಖೆ ಮುಚ್ಚುವ ಭಾರತ್ ಬೀಡಿ ಕಂಪನಿಯ ಮಾಲೀಕರ ಧೋರಣೆ ಕಾನೂನಿನ ಉಲ್ಲಂಘನೆ. ಇದು ಹಾಗೂ ಸರ್ಕಾರಕ್ಕೆ ಮಾಡುವ ಅವಮಾನ. ಈ ವರ್ಷದ ದೈನಂದಿನ ಭತ್ಯೆಯನ್ನೂ ನೀಡದ ಮಾಲೀಕರು ಕಾರ್ಮಿಕರನ್ನು ಶೋಷಿಸುತ್ತಿದ್ದು, ಸರ್ಕಾರ ಮಧ್ಯ ಪ್ರವೇಶ ಮಾಡಬೇಕು’ ಎಂದರು.

ಸಂಘದ ಅಧ್ಯಕ್ಷ ಬಿ.ಎಂ.ಭಟ್ ಮಾತನಾಡಿ, ‘ನ್ಯಾಯ ಸಿಗದಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು. ಸರ್ಕಾರಕ್ಕಿಂತ ತಾನು ಮೇಲೆ ಎಂದು ಮೆರೆಯುವ ಬೀಡಿ ಮಾಲೀಕರಿಗೆ ಕಂಪನಿ ಬಂದ್ ಮಾಡದಂತೆ ಸರ್ಕಾರ ಸೂಚಿಸಬೇಕು’ ಎಂದರು.

ರಾಜ್ಯ ಬೀಡಿ ಫೆಡರೇಷನ್ ಕಾರ್ಯದರ್ಶಿ ಸಯ್ಯದ್ ಮುಜೀಬ್, ಬೀಡಿ ಗುತ್ತಿಗೆದಾರ ಸಂಘದ ಮುಖಂಡರಾದ ಸಿ.ಮಹಮ್ಮದ್, ಕಕ್ಕನಾಜೆ ಶಿವಾನಂದ ರಾವ್ ಮಾತಾಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಈಶ್ವರಿ ಶಂಕರ್ ಪದ್ಮುಂಜ, ನೆಬಿಸಾ, ಜಯಶ್ರೀ, ಪುಷ್ಪಾ, ವಿಶ್ವಾನಾಥ ಶಿಬಾಜೆ, ಜಯರಾಮ ಮಯ್ಯ, ಅಶ್ವಿತ, ಉಷಾ, ರಾಮಚಂದ್ರ, ಶ್ರೀಧರ ಮುದ್ದಿಗೆ, ಅಭಿಷೆಕ್ ಪದ್ಮುಂಜ, ರಮೇಶ್ ಕೊಕ್ಕಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT