ಮಂಗಳೂರು: ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ನಗರದ ಎಮ್ಮೆಕೆರೆಯಲ್ಲಿ ₹29.24 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಅಂತರರಾಷ್ಟ್ರೀಯ ಮಟ್ಟದ ಈಜುಕೊಳವನ್ನು ನ.24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.
ಈಜುಕೊಳ ಉದ್ಘಾಟನೆಗೆ ಮುಖ್ಯಮಂತ್ರಿ ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಬುಧವಾರ ಇಲ್ಲಿ ಪೂರ್ವಭಾವಿ ಸಭೆ ನಡೆಸಿದರು.
ಉದ್ಘಾಟನೆಯ ವೇಳೆ ಇಲ್ಲಿ ಮೂರು ದಿನಗಳ 19ನೇ ಮಾಸ್ಟರ್ಸ್ ಸ್ವಿಮ್ಮಿಂಗ್ ಚಾಂಪಿಯನ್‌ಷಿಪ್ ನಡೆಯಲಿದೆ. ರಾಷ್ಟ್ರೀಯ ಮಾನ್ಯತಾ ಮಂಡಳಿ ಸದಸ್ಯರು ಇನ್ನೆರಡು ದಿನಗಳಲ್ಲಿ ಈಜುಕೊಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಇದಕ್ಕೆ ಅಂತರರಾಷ್ಟ್ರೀಯ ಮಟ್ಟದ ಪ್ರಮಾಣಪತ್ರ ನೀಡಲಿದ್ದಾರೆ ಎಂದು ಎಮ್ಮೆಕೆರೆ ಈಜುಕೊಳ ಅಭಿವೃದ್ಧಿ ಸಮಿತಿಯ ಸಂಚಾಲಕ ತೇಜೋಮಯ ತಿಳಿಸಿದರು.
‘ಈಜುಕೊಳ ನಿರ್ಮಾಣ ಮಾಡುವ ಹಂತದಲ್ಲಿ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು. ಅವರ ಮನವೊಲಿಸಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಅವರ ಕೆಲವು ಬೇಡಿಕೆಗಳು ಇದ್ದು, ಅವನ್ನು ಈಡೇರಿಸಿ ಉದ್ಘಾಟನೆ ಮಾಡಿದರೆ ಉತ್ತಮ’ ಎಂದು ಮಹಾನಗರ ಪಾಲಿಕೆ ಸಚೇತಕ ಪ್ರೇಮಾನಂದ ಶೆಟ್ಟಿ ಸಲಹೆಗೆ, ವಿರೋಧ ಪಕ್ಷದ ನಾಯಕ ಪ್ರವೀಣ್‌ಚಂದ್ರ ಆಳ್ವ, ಸದಸ್ಯರಾದ ಶಶಿಧರ್ ಹೆಗ್ಡೆ, ನವೀನ್ ಡಿಸೋಜ ಸಹಮತ ವ್ಯಕ್ತಪಡಿಸಿದರು.
ನೀರಿನ ಗುಣಮಟ್ಟ ಸೇರಿದಂತೆ ಮೂರು ವರ್ಷಗಳ ನಿರ್ವಹಣೆಯನ್ನು ಈಜುಕೊಳ ನಿರ್ಮಾಣ ಮಾಡಿದ ಗುತ್ತಿಗೆದಾರರೇ ನೋಡಿಕೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.
‘ಸ್ಮಾರ್ಟ್ ಸಿಟಿ ಅಧಿಕಾರಿಗಳು ಸ್ಥಳೀಯರ ಬೇಡಿಕೆಗೂ ಆದ್ಯತೆ ನೀಡಬೇಕು. ಆಗ, ಅವರಲ್ಲಿ ವಿಶ್ವಾಸ ಮೂಡುತ್ತದೆ. ನವೆಂಬರ್ 4ರಂದು ಮಂಗಳೂರಿನಲ್ಲಿ ಬೇರೆ ಬೇರೆ ಕಾರ್ಯಕ್ರಮಗಳು ನಿಗದಿಯಾಗಿದ್ದು, ಆ ವೇಳೆ ಈಜುಕೊಳ ಸ್ಥಳಕ್ಕೆ ಭೇಟಿ ನೀಡಿ, ಮತ್ತೊಮ್ಮೆ ಚರ್ಚಿಸುತ್ತೇನೆ. ಈಜುಕೊಳದ ನಿರ್ವಹಣೆ ಸಂಬಂಧ ಇನ್ನೊಮ್ಮೆ ಸಭೆ ನಡೆಸಲಾಗುವುದು’ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಉದ್ಘಾಟನೆಗೆ ಮುಖ್ಯಮಂತ್ರಿ ಆಗಮಿಸುವ ಕಾರಣ, ಇದೇ ವೇಳೆ ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆ, ಹೊಸ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮಗಳನ್ನು ಜೋಡಿಸಬಹುದು ಎಂದು ಸಚಿವರು ಸಲಹೆ ನೀಡಿದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ವಿಧಾನ ಪರಿಷತ್ ಸದಸ್ಯ ಹರೀಶ್‌ಕುಮಾರ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ., ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಪಾಲಿಕೆ ಆಯುಕ್ತ ಆನಂದ್ ಇದ್ದರು.
ನಾನೂ ಮುಖ್ಯಮಂತ್ರಿಯಾದರೆ ಈಜುವೆ– ದಿನೇಶ್ ಗುಂಡೂರಾವ್
'ನಾನೂ ಮುಖ್ಯಮಂತ್ರಿಯಾದರೆ ಈಜುವ ಮೂಲಕ ಈಜುಕೊಳವನ್ನು ಉದ್ಘಾಟಿಸುತ್ತಿದ್ದೆ, ನಾನು ಈಜು ಪಟು, ಈಜು ಅಂದರೆ ತುಂಬಾ ಇಷ್ಟ' ಎನ್ನುವ ಮೂಲಕ ಸಚಿವ ದಿನೇಶ್ ಗುಂಡೂರಾವ್ ನಗೆಚಟಾಕಿ
'ನಿಮ್ಮ ತಂದೆ ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಜಯನಗರದಲ್ಲಿ ಡೈವ್ ಹೊಡೆಯುವ ಮೂಲಕ ಈಜುಕೊಳ ಉದ್ಘಾಟಿಸಿದ್ದರಂತೆ, ನೀವು ಕೂಡ ಈಜುವ ಮೂಲಕ ಕೊಳವನ್ನು ಉದ್ಘಾಟಿಸುವಿರಾ?' ಎಂದು ಪತ್ರಕರ್ತರು ಕೇಳಿದಾಗ, ಅವರು ನಗುತ್ತಲೇ ಹೀಗೆ ಉತ್ತರಿಸಿದರು. 'ನೀವು ಈಜುವುದಾದರೆ, ನಾನು ನಿಮಗೆ ಜೊತೆಯಾಗುತ್ತೇವೆ' ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದಾಗ, ಸಭಾಂಗಣದಲ್ಲಿ ನಗೆಯ ಅಲೆ ಮೂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.