ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯಲ್ಲಿ ‘ಮೊಂತಿ ಫೆಸ್ಟ್‌ ಸಂಭ್ರಮ

Last Updated 5 ಸೆಪ್ಟೆಂಬರ್ 2022, 15:39 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿಯಲ್ಲಿ ಕೆಥೋಲಿಕ್ ಕ್ರೈಸ್ತ ಸಮುದಾಯದ ‘ಮೊಂತಿ ‌ಫೆಸ್ಟ್‌’ ಸಂಭ್ರಮ ಕಳೆಗಟ್ಟುತ್ತಿದೆ. ಸೆ. 8ರಂದು ಕರಾವಳಿಯಾದ್ಯಂತ ಮೇರಿ ಮಾತೆಯ ಜನ್ಮದಿನವನ್ನು ಕ್ರೈಸ್ತರು ಸಂಭ್ರಮದಿಂದ ಆಚರಿಸುತ್ತಾರೆ. ತುಳುನಾಡಿನಲ್ಲಿ ಈ ಹಬ್ಬವನ್ನು ‘ತೆನೆ ಹಬ್ಬ’ವಾಗಿಯೂ ಆಚರಿಸಲಾಗುತ್ತದೆ.

ಆ.30 ರಂದು ನೊವೆನಾದೊಂದಿಗೆ ಮೊಂತಿ ಫೆಸ್ಟ್‌ ಪ್ರಾರಂಭವಾಗುತ್ತದೆ. 9 ದಿನ ಚರ್ಚ್‌ಗಳಲ್ಲಿ ನಿತ್ಯ ಮೇರಿ ಮಾತೆಯ ನೊವೆನಾ ನಡೆಯುತ್ತದೆ. ಮಕ್ಕಳು ವಿವಿಧ ಹೂವುಗಳನ್ನು ತಂದು ಮರಿಯಮ್ಮನವರ ಮೂರ್ತಿಯನ್ನು ಅಲಂಕರಿಸುತ್ತಾರೆ.

ಕೊನೆಯ ದಿನ ಬಾಲ ಮರಿಯಮ್ಮನವರ ಪ್ರತಿಮೆಗೆ ಪುಷ್ಪಾಲಂಕಾರ ಮಾಡಿ, ಪ್ರಕೃತಿಯಲ್ಲಿ ಹೊಸದಾಗಿ ಬೆಳೆದ ತೆನೆ ಹಾಗೂ ಬೆಳೆಯೊಂದಿಗೆ ಮೆರವಣಿಗೆ ಮೂಲಕ ಚರ್ಚ್ ಪ್ರವೇಶಿಸುತ್ತಾರೆ. ನಂತರ ಪೂಜೆ ನಡೆಯುತ್ತದೆ. ಮರಿಯಮ್ಮನವರಿಗೆ ಹೊಸ ತೆನೆ ಹಾಗೂ ಬೆಳೆಯನ್ನು ಅರ್ಪಿಸಿ ಕೃತಜ್ಞತೆ ಸಲ್ಲಿಸುತ್ತಾರೆ. ಪೂಜೆಯ ನಂತರ ಚರ್ಚ್‌ಗಳಲ್ಲಿ ಹೊಸ ತೆನೆ, ಕಬ್ಬು ಮತ್ತು ಸಿಹಿತಿಂಡಿಯನ್ನು ಭಕ್ತರಿಗೆ ಹಂಚಲಾಗುತ್ತದೆ.

‘ಮೊಂತಿ ಮರಿಯಾನೊ’ಎಂಬ ಪೂರ್ಚುಗೀಸ್ ಪದ ‘ಮೊಂತಿ’ ಶಬ್ದದ ಮೂಲ. ಇದಕ್ಕೆ ‘ಬೆಟ್ಟದ ಮೇರಿ’ ಎಂಬ ಅರ್ಥವಿದೆ. 1763ರಲ್ಲಿ ಫರಂಗಿಪೇಟೆಯ ಸಂತ ಫ್ರಾನ್ಸಿಸ್ ಚರ್ಚ್‌ನಲ್ಲಿ ಗೋವಾದಿಂದ ಬಂದ ಫಾ. ಜೋಕಿಂ ಮಿರಾಂದ ಅವರಿಂದ ಮೊಂತಿ ಫೆಸ್ಟ್‌ ಆರಂಭಗೊಂಡಿತು ಎಂಬ ಇತಿಹಾಸವಿದೆ.

‘ಮಂಗಳೂರು ಕೊಂಕಣಿ ಕೆಥೋಲಿಕ್‌ರಿಗೆ ‘ಮೊಂತಿ ಫೆಸ್ಟ್‌‘ ಸಂಭ್ರಮದ ಹಬ್ಬ. ‘ ಈ ಹಬ್ಬವು ಕುಟುಂಬಗಳ ಒಗ್ಗೂಡಿಕೆಗೆ ಅವಕಾಶ ಒದಗಿಸುತ್ತದೆ. ಹೀಗಾಗಿ ಕುಟುಂಬದ ಹಬ್ಬವಾಗಿ ಮೊಂತಿ ಫೆಸ್ಟ್‌ ಆಚರಿಸುತ್ತಾರೆ’ ಎನ್ನುತ್ತಾರೆ ಬಂಟ್ವಾಳದ ಲೊರೆಟ್ಟೊ ಚರ್ಚ್‌ನ ಫಾ. ಜೇಸನ್ ಮೊನಿಸ್‌.

ಸಸ್ಯಾಹಾರ ವಿಶೇಷ:ಈ ಹಬ್ಬದಂದು ಕೊಂಕಣಿ ಕ್ರೈಸ್ತರು ತಮ್ಮ ಮನೆಗಳಲ್ಲಿ ನಾನಾ ಬಗೆಯ ಸಸ್ಯಾಹಾರ ಖಾದ್ಯ ತಯಾರಿಸುತ್ತಾರೆ. ತೆನೆಯ ಅಕ್ಕಿಯ ಪುಡಿಯನ್ನು ಪಾಯಸದಲ್ಲಿ ಅಥವಾ ಹಾಲಿನೊಂದಿಗೆ ಸೇವಿಸುತ್ತಾರೆ. ವಿದೇಶದಲ್ಲಿರುವ ತಮ್ಮ ಕುಟುಂಬ ಸದಸ್ಯರಿಗೆ ಅಂಚೆಯ ಮೂಲಕ ಹೊಸ ತೆನೆಯ ಅಕ್ಕಿಯನ್ನು ಕಳುಹಿಸುವ ಸಂಪ್ರದಾಯವೂ ಚಾಲ್ತಿಯಲ್ಲಿದೆ. ಈ ಹಬ್ಬದಲ್ಲಿ ಸಸ್ಯಾಹಾರಿ ಭೋಜನವು ಪ್ರಧಾನವಾಗಿದ್ದು, ಕೆಸುವಿನ ದಂಟಿನ ಪದಾರ್ಥ, ಹರಿವೆ ದಂಟಿನ ಪದಾರ್ಥ, ಬೆಂಡೆಕಾಯಿ, ಹೀರೆ, ಅಲಸಂದೆ ಪಲ್ಯ, ಮುಳ್ಳುಸೌತೆಯ ಕೊಸಂಬರಿ ಒಳಗೊಂಡಿರುತ್ತದೆ. ಬಾಳೆ ಎಲೆಯಲ್ಲಿ ಹಬ್ಬದೂಟ ಸೇವಿಸುವುದು ಮೊಂತಿ ಫೆಸ್ಟ್‌ನ ವಿಶೇಷ.

ಮಲೆಯಾಳಿ ಸೇಂಟ್ ಥಾಮಸ್ ಕ್ರೈಸ್ತರು ಈ ಹಬ್ಬವನ್ನು ’ಎಟ್ಟುನೊಂಬು’ ಎಂಬ ಹೆಸರಿನಿಂದ ಆಚರಿಸುತ್ತಾರೆ. 8 ದಿನಗಳು ಮರಿಯಮ್ಮನವರ ನೊವೆನಾ ಪ್ರಾರ್ಥನೆಯನ್ನು ಮಾಡುತ್ತಾರೆ. ಈ ಸಮಯದಲ್ಲಿ ಮಾಂಸ ತ್ಯಜಿಸುತ್ತಾರೆ. ಹಬ್ಬದ ದಿನದಂದು ಚರ್ಚ್‌ಗಳಲ್ಲಿ ಅನ್ನ, ಬೆಲ್ಲ ಸೇರಿಸಿ ತಯಾರಿಸಿದ ’ಪಾಚೋರ್‌’ ಎಂಬ ಸಿಹಿಯನ್ನು ಭಕ್ತಾದಿಗಳಿಗೆ ಹಂಚುತ್ತಾರೆ.

*

ಕನ್ಯಾ ಮರಿಯಮ್ಮನವರ ಹಬ್ಬ ಪ್ರತಿಯೊಬ್ಬ ಕೆಥೋಲಿಕರಿಗೂ ಅಚ್ಚುಮೆಚ್ಚು. ಜಪಸರ ಪ್ರಾರ್ಥನೆ ಮುಖಾಂತರ ಮರಿಯಮ್ಮನ ಸಹಾಯ ಬೇಡುವಾಗ, ದೇವರ ಆಶೀರ್ವಾದ ಲಭಿಸುತ್ತದೆ. ಹೀಗಾಗಿ ಕನ್ಯಾ ಮರಿಯಮ್ಮನವರಲ್ಲಿ ಕೆಥೊಲಿಕರ ಭಕ್ತಿ ಎದ್ದು ಕಾಣುತ್ತದೆ.
–ಫಾ.ಜೇಸನ್ ಮೊನಿಸ್, ಲೊರೆಟ್ಟೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ, ಬಂಟ್ವಾಳ ತಾಲ್ಲೂಕು

*

ಹಬ್ಬದ ಸಂದರ್ಭದಲ್ಲಿ ಕುಟುಂಬ ಸದಸ್ಯರು ಒಟ್ಟಾಗಿ ಸೇರುವುದರಿಂದ ಬಾಂಧವ್ಯ ಹೆಚ್ಚಾಗುತ್ತದೆ.
–ವಲೇರಿಯನ್ ಮಾಡ್ತ, ಮಡಂತ್ಯಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT