ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಸ್ಟಲ್‌ವುಡ್‌: 3 ಸಿನಿಮಾ ಬಿಡುಗಡೆಗೆ ಮುಹೂರ್ತ!

ಕೋಸ್ಟಲ್‌ವುಡ್‌: ಸರದಿಯಲ್ಲಿ ತುಳು ಚಿತ್ರಗಳು
Last Updated 25 ಜನವರಿ 2021, 1:13 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್‌ ಕಾಲಘಟ್ಟದಲ್ಲಿ ಸ್ತಬ್ಥವಾಗಿದ್ದ ತುಳು ಚಿತ್ರರಂಗ ಮತ್ತೆ ಸದ್ದು ಮಾಡುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ಮೂರು ಸಿನಿಮಾಗಳು ಬಿಡುಗಡೆಯ ತಯಾರಿಯಲ್ಲಿವೆ. ಈ ಬೆಳವಣಿಗೆ ತುಳು ಚಿತ್ರರಂಗವನ್ನು ಅವಲಂಬಿಸಿರುವ ನೂರಾರು ಕಲಾವಿದರಿಗೆ ಆಶಾಕಿರಣವಾಗಿದೆ.

2020ರ ಫೆಬ್ರುವರಿಯಲ್ಲಿ ಬಿಡುಗಡೆಯಾದ ‘ಎನ್ನ’ ಸಿನಿಮಾವೂ ಚಿತ್ರಮಂದಿರಕ್ಕೆ ಕಾಲಿಟ್ಟ ಕೊನೆಯ ತುಳು ಚಿತ್ರವಾಗಿತ್ತು. 2020ರ ಮಾರ್ಚ್‌ನಲ್ಲಿ ‘ಇಂಗ್ಲಿಷ್‌’ ಚಿತ್ರದ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿತ್ತಾದರೂ ಕೋವಿಡ್‌ ಅಡ್ಡಗಾಲು ಹಾಕಿತ್ತು. ಕಳೆದ ಮೂರ್ನಾಲ್ಕು ತಿಂಗಳಿನಿಂದ ಕೋವಿಡ್‌ ಮಾರ್ಗಸೂಚಿಯೊಂದಿಗೆ ಥಿಯೇಟರ್‌ಗಳನ್ನು ತೆರೆಯಲು ಸರ್ಕಾರ ಅವಕಾಶ ನೀಡಿದೆ. ಆದರೆ, ಯಾರೂ ಮುಂದೆ ಬಂದಿರಲಿಲ್ಲ.

ಶೇ 50ರಷ್ಟು ಮಂದಿಗೆ ಮಾತ್ರ ಪ್ರವೇಶ ಇರುವುದರಿಂದ ಕೈ ಸುಟ್ಟುಕೊಳ್ಳುವ ಭಯದಿಂದ ಚಿತ್ರ ನಿರ್ಮಾಪಕರು ಸಿನಿಮಾ ಬಿಡುಗಡೆಯನ್ನು ಮುಂದಕ್ಕೆ ಹಾಕುತ್ತಿದ್ದರು. ಈ ಮಧ್ಯೆ ಈಚೆಗೆ ಕಾಲಿವುಟ್‌ನ ‘ಮಾಸ್ಟರ್‌’ ಚಿತ್ರ ಭರ್ಜರಿ ಯಶಸ್ಸು ಗಳಿಸುತ್ತಿದ್ದಂತೆ ಕೋಸ್ಟಲ್‌ವುಡ್‌ನಲ್ಲಿಯೂ ಚಟುವಟಿಕೆ ಗರಿಗೆದರಿದೆ.

ಹೀಗಾಗಿ, ಫೆಬ್ರುವರಿಯಲ್ಲಿ ಒಂದು ಮತ್ತು ಮಾರ್ಚ್‌ನಲ್ಲಿ ಎರಡು ಸಿನಿಮಾಗಳು ಚಿತ್ರಮಂದಿರ ಪ್ರವೇಶಕ್ಕೆ ತುದಿಗಾಲಿನಲ್ಲಿ ನಿಂತಿವೆ.

ಸುಮನ್‌ ಸುವರ್ಣ ಮತ್ತು ನವೀನ್‌ ಶೆಟ್ಟಿ ನಿರ್ದೇಶನದ ‘ಗಮ್ಜಾಲ್‌’ ತುಳು ಚಿತ್ರ ಫೆ. 19ರಂದು ಕರಾವಳಿಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದರ ಬೆನ್ನಿಗೆ ಕೆ.ಸೂರಜ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ ‘ಇಂಗ್ಲಿಷ್’ – ‘ಎಂಕ್ಲೆಗ್ ಬರ್ಪುಜಿ ಬ್ರೋ’ ಸಿನಿಮಾ ಮಾರ್ಚ್ 26ರಂದು ಕರಾವಳಿ ಸೇರಿದಂತೆ ಗಲ್ಫ್‌ ರಾಷ್ಟ್ರಗಳಲ್ಲಿ ಬಿಡುಗಡೆಗೊಳ್ಳಲಿದೆ. ಈ ಮಧ್ಯೆ ರಾಮ್ ಶೆಟ್ಟಿ ನಿರ್ದೇಶನದ ‘ಏರೆಗಾವುಯೆ ಕಿರಿಕಿರಿ’ ಸಿನಿಮಾವನ್ನೂ ಮಾರ್ಚ್‌ನಲ್ಲಿಯೇ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿದೆ.

ಕೋಸ್ಟಲ್‌ವುಡ್‌ನಲ್ಲಿ ಪೆಪ್ಪೆರೆ ಪೆರೆರೆರೆ, ಇಲ್ಲೊಕ್ಕೆಲ್‌, ಕಾರ್ನಿಕದ ಕಲ್ಲುರ್ಟಿ, ವಿಕ್ರಾಂತ್‌, ಭೂಮಿಕಾ, ಪಿಂಗಾರ, ರಾಹುಕಾಲ ಗುಳಿಗಕಾಲ, ಅಗೋಳಿ ಮಂಜಣ್ಣ, ಜೀಟಿಗೆ ಸಿನಿಮಾಗಳು ಸೆನ್ಸಾರ್‌ ಮುಗಿಸಿ ಬಿಡುಗಡೆಯನ್ನು ಎದುರು ನೋಡುತ್ತಿವೆ. ಅಲ್ಲದೆ, ಗಂಟ್‌ ಕಲ್ವೆರ್‌, ಲಾಸ್ಟ್‌ ಬೆಂಚ್‌, ಲಕ್ಕಿಬಾಬು, ಮಾಜಿ ಮುಖ್ಯಮಂತ್ರಿ, ಗಬ್ಬರ್‌ ಸಿಂಗ್‌, ರಾಜ್‌ ಸೌಂಟ್ಸ್‌ ಲೈಟ್ಸ್‌, ಮಗನೇ ಮಹಿಷ, ಟ್ಯಾಕ್ಸಿ ಬಾಬಣ್ಣ ಹೀಗೆ ಸಾಲುಸಾಲು ಸಿನಿಮಾಗಳು 2021ರ ಬಿಡುಗಡೆಯ ಸರದಿಯಲ್ಲಿವೆ. ಇನ್ನೂ ಹಲವು ಸಿನಿಮಾಗಳು ಚಿತ್ರೀಕರಣ ಹಂತದಲ್ಲಿವೆ.

8K ಕ್ಯಾಮೆರಾ ಬಳಸಿದ ಮೊದಲ ತುಳು ಸಿನೆಮಾ ‘ಇಂಗ್ಲಿಷ್’ ಕೋಸ್ಟಲ್‌ವುಡ್‌ನಲ್ಲಿ ಹೊಸ ಭರವಸೆ ಮೂಡಿಸಿದೆ. ಪೃಥ್ವಿ ಅಂಬರ್‌ ನಾಯಕನಟನಾಗಿ ಕಾಣಿಸಿಕೊಂಡ ಈ ಚಿತ್ರದ ‘ವರ್ಲ್ಡ್ ಪ್ರೀಮಿಯರ್ ಶೋ’ ಕಳೆದ ವರ್ಷವೇ ಅದ್ಧೂರಿಯಾಗಿ ದುಬೈನಲ್ಲಿ ನಡೆದಿತ್ತು. ಹಾಸ್ಯವೇ ಪ್ರಧಾನವಾಗಿರುವ ಈ ಚಿತ್ರದಲ್ಲಿ ಬರುವ ವಿವಿಧ ಸನ್ನಿವೇಶಗಳು, ಚಿತ್ರಕಥೆ, ಸಂಭಾಷಣೆ, ಒಂದಕ್ಕಿಂತ ಒಂದು ವಿಭಿನ್ನವಾಗಿದೆ ಎಂದು ಹೇಳುತ್ತಿದೆ ಚಿತ್ರತಂಡ.

‘ಏರೆಗಾವುಯೆ ಕಿರಿಕಿರಿ’ ಚಿತ್ರದ ಬಿಡುಗಡೆ ದಿನಾಂಕ ಪ್ರಕಟವಾಗಿಲ್ಲ. ಆದರೆ, ಮಾರ್ಚ್‌ನಲ್ಲಿಯೇ ಚಿತ್ರವನ್ನು ತೆರೆಗೆ ತರಲು ನಿರ್ದೇಶಕರಾದ ರಾಮ್ ಶೆಟ್ಟಿ ಮತ್ತು ನಿರ್ಮಾಪಕರಾದ ರೋಶನ್ ವೇಗಸ್ ನಿರ್ಧರಿಸಿದ್ದಾರೆ. ಇದು ಕೂಡ ಪಕ್ಕಾ ಕಾಮಿಡಿ ಮನರಂಜನೆಯ ಚಿತ್ರವಾಗಿದ್ದು, ತುಳುರಂಗಭೂಮಿಯ ಮೇರು ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT