ಶುಕ್ರವಾರ, ಆಗಸ್ಟ್ 19, 2022
27 °C

ನೈಜ ವಿಷಯ ಮರೆಮಾಚಲು ಯತ್ನ: ಸಂಸದೆ ಶೋಭಾ ವಿರುದ್ಧ ಡಾ.ಅಂಶುಮಂತ್ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನರಸಿಂಹರಾಜಪುರ: ‘ಬಿಜೆಪಿ ಸರ್ಕಾರ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರ ನಿರ್ಲಕ್ಷ್ಯದಿಂದಾಗಿ ಕಸ್ತೂರಿರಂಗನ್ ವರದಿ ಜಾರಿಯ ಹಂತ ತಲುಪಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್ ಆರೋಪಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸಂಸದರು 7ವರ್ಷಗಳಿಂದ ತಮ್ಮ ಜವಾಬ್ದಾರಿಯನ್ನು ಮರೆತು ನೈಜ ವಿಷಯಗಳನ್ನು ಮರೆಮಾಚುವ ಮೂಲಕ ಕಸ್ತೂರಿರಂಗನ್, ಹುಲಿ ಯೋಜನೆಯ ವಿಚಾರವನ್ನು ಕಾಂಗ್ರೆಸ್ ಮೇಲೆ ಹೊರಿಸುವ ಪ್ರಯತ್ನ ಮಾಡುತ್ತಿದ್ದಾರೆ. 2014ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹುಲಿಯೋಜನೆ, ಕಸ್ತೂರಿರಂಗನ್ ವರದಿ ರದ್ದುಗೊಳಿಸುವುದಾಗಿ, ಅಡಿಕೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದ ಮೇಲೆ ಇದನ್ನು ಮರೆತೇ ಬಿಟ್ಟಿದ್ದಾರೆ’ ಎಂದು ಟೀಕಿಸಿದರು.

‘22 ವರ್ಷಗಳಿಂದ ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಸಂಸದರೇ ಆಯ್ಕೆಯಾಗಿದ್ದರೂ ಜ್ವಲಂತ ಸಮಸ್ಯೆಗಳ ಬಗ್ಗೆ ಸಂಸತ್ನಲ್ಲಿ ಚಕಾರ ಎತ್ತಿಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ ಮಾದವ್ ಗಾಡ್ಗೀಲ್ ವರದಿ ಜಾರಿಗೆ ಜನರಿಂದ ಆಕ್ಷೇಪಣೆಗಳು ಬಂದಿದ್ದರಿಂದ ಜನರ ಹಿತ ಕಾಪಾಡಲು ಕಸ್ತೂರಿರಂಗನ್ ವರದಿ ತಯಾರಾಗಿತ್ತು. ಅದೇ ರೀತಿ ಸಂಸದರಿಗೆ ಜವಾಬ್ದಾರಿ ಇದ್ದಿದ್ದರೆ ಸಂಸತ್‌ನಲ್ಲಿ ಜನರ ಆತಂಕಗಳ ಬಗ್ಗೆ ಚರ್ಚಿಸಿದ್ದರೆ ಈ ವರದಿಯ ಅನುಷ್ಠಾನ ತಡೆದು 147 ಗ್ರಾಮಸ್ಥರ ಆತಂಕವನ್ನು ತಡೆಯಲು ಸಾಧ್ಯವಿತ್ತು’ ಎಂದರು.

‘ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ 2016ರಲ್ಲಿ ಪಶ್ಚಿಮಘಟ್ದ ವ್ಯಾಪ್ತಿಯ ಸಂಸದರ ಸಭೆ ಕರೆದಾಗ ನಮ್ಮ ಸಂಸದರು ಗೈರು ಹಾಜರಾಗುವ ಮೂಲಕ ಈ ಭಾಗದ ಜನರಿಗೆ ದ್ರೋಹ ಎಸಗಿದ್ದಾರೆ’ ಎಂದು ದಾಖಲೆ ಪ್ರದರ್ಶಿಸಿದರು. ಸಭೆಗೆ ಗೈರು ಹಾಜರಾದ ಬಗ್ಗೆ ಎಲ್ಲೂ ಚಕಾರ ಎತ್ತದೆ ಪ್ರಸ್ತುತ ಬೀದಿ, ಬೀದಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಜರಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ಕಸ್ತೂರಿರಂಗನ್ ವರದಿ ತಿರಸ್ಕಾರ ಮಾಡುವ ಬಗ್ಗೆ ಸಚಿವ ಸಂಪುಟ ತೀರ್ಮಾನವನ್ನು ಕೇಂದ್ರಕ್ಕೆ ಕಳುಹಿಸಿದ್ದರು. ಇದನ್ನು ಪರಿಗಣಿಸಿಲ್ಲ ಎಂದರು.

‘ಕಸ್ತೂರಿರಂಗನ್ ವರದಿಗೆ ಸಂಬಂ ಧಿಸಿದ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಸಂಸತ್‌ನಲ್ಲಿ ಪ್ರಸ್ತಾಪಿಸಿದರೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಮಾತನಾಡಿಲ್ಲ ಎಂದು ಸಂಸದರು ಬಹಿರಂಗ ಹೇಳಿಕೆ ನೀಡುತ್ತಾರೆ. ಜನರ ಸಮಸ್ಯೆ ಸಂಸತ್‌ನಲ್ಲಿ ಪ್ರಸ್ತಾಪಿಸದೆ ಮತ್ತೆ ಎಲ್ಲಿ ಪ್ರಸ್ತಾಪಿಸಬೇಕು ಎಂಬುದನ್ನು ತಿಳಿಸಲಿ’ ಎಂದರು.

ಮುಖಂಡರಾದ ಪಿ.ಆರ್.ಸದಾಶಿವ, ಇ.ಸಿ.ಜೋಯಿ, ಅಬೂಬಕ್ಕರ್, ಪ್ರಶಾಂತ್ ಶೆಟ್ಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು