ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ‘ಪದ್ಮರಾಜ್ 3ರಂದು ನಾಮಪತ್ರ ಸಲ್ಲಿಕೆ’

ಜಿಲ್ಲೆಯಾದ್ಯಂತ ಕಾಂಗ್ರೆಸ್‌ನಿಂದ ಸರಣಿ ಸಭೆ, * ಪ್ರಚಾರಕ್ಕೆ ಬರಲಿದ್ದಾರೆ ಸಿ.ಎಂ. ಡಿಸಿಎಂ
Published 27 ಮಾರ್ಚ್ 2024, 7:08 IST
Last Updated 27 ಮಾರ್ಚ್ 2024, 7:08 IST
ಅಕ್ಷರ ಗಾತ್ರ

ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ವಕೀಲ ಪದ್ಮರಾಜ ಆರ್. ಏ.3ರಂದು ನಾಮಪತ್ರ ಸಲ್ಲಿಸಲಿದ್ದಾರೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಕೆ. ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಗ್ಯಾರಂಟಿ ಕಾರ್ಯಕ್ರಮಗಳಿಂದ ಜನರ ಆರ್ಥಿಕ‌ ಸಬಲೀಕರಣ ಸಾಧ್ಯವಾಗಿದೆ.‌ ಈ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಬೂತ್‌ ಮಟ್ಟದ  ಸಮಿತಿ ರಚಿಸಿದ್ದೇವೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ ₹1 ಲಕ್ಷದವರೆಗೂ ಸವಲತ್ತು ನೀಡಲಿದ್ದೇವೆ. ಇವೆಲ್ಲವೂ ಪಕ್ಷದ ಕೈ ಹಿಡಿಯಲಿದ್ದು, ಪಕ್ಷದ ಅಭ್ಯರ್ಥಿ 50ಸಾವಿರದಿಂದ 70 ಸಾವಿರ ಮತಗಳಿಂದ ಗೆಲ್ಲುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.   

‘ಪಕ್ಷದ ಅಭ್ಯರ್ಥಿ ಹಾಗೂ ಮುಖಂಡರು ಇದೇ 27ರಿಂದ 30ರವರೆಗೆ ಪ್ರತಿಯೊಂದು ಬ್ಲಾಕ್‌ನಲ್ಲೂ ಕಾರ್ಯಕರ್ತರನ್ನು ಹಾಗೂ ಪಕ್ಷದ ನಾಯಕರನ್ನು ಭೇಟಿಯಾಗಲಿದ್ದಾರೆ. ಏ 3ರಂದು  ನಾಮಪತ್ರ ಸಲ್ಲಿಕೆಗೆ ಮುನ್ನ ಪುರಭವನದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಏರ್ಪಡಿಸಲಿದ್ದೇವೆ. ಏ. 11ರಂದು ಸುಳ್ಯ, 12ರಂದು ಮೂಡುಬಿದಿರೆ, 13ರಂದು ಪುತ್ತೂರು, 14ರಂದು ಮಂಗಳೂರು ದಕ್ಷಿಣ, 15ರಂದು ಉಳ್ಳಾಲ (ಮಂಗಳೂರು ಕ್ಷೇತ್ರ), 16ರಂದು ಮಂಗಳೂರು ನಗರ ಉತ್ತರ, 17ರಂದು ಬೆಳ್ತಂಗಡಿ ಹಾಗೂ 18ರಂದು ಬಂಟ್ವಾಳ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಿದ್ದೇವೆ. ಅಭ್ಯರ್ಥಿ ಏ. 19ರ ಬಳಿಕ ಎರಡನೇ ಸುತ್ತಿನ ಪ್ರವಾಸ ಕೈಗೊಳ್ಳಲಿದ್ದಾರೆ. ‘ಇಂಡಿಯಾ’ ಒಕ್ಕೂಟದ ಮಿತ್ರಪಕ್ಷಗಳನ್ನೂ ವಿಶ್ವಾಸಕ್ಕೆ ಪಡೆದು ಚುನಾವಣೆ ಎದುರಿಸಲಿದ್ದೇವೆ’ ಎಂದು ತಿಳಿಸಿದರು.

‘ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಪುತ್ತೂರಿನಲ್ಲಿ ಏರ್ಪಡಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದಾರೆ. ಇದರ ದಿನಾಂಕ ಇನ್ನೂ ನಿಗದಿಯಾಗಿಲ್ಲ’ ಎಂದರು.

‘ರಮಾನಾಥ ರೈ ಅವರಿಗೆ ಚುನಾವಣಾ ಉಸ್ತುವಾರಿಯನ್ನು ವಹಿಸಲಾಗಿದೆ. ಬೆಳ್ತಂಗಡಿ ಕ್ಷೇತ್ರಕ್ಕೆ ರಕ್ಷಿತ್‌ ಶಿವರಾಂ, ಮೂಡುಬಿದಿರೆಗೆ ಮಿಥುನ್ ರೈ, ಪುತ್ತೂರಿಗೆ ಅಶೋಕ್‌ ಕುಮಾರ್ ರೈ, ಸುಳ್ಯಕ್ಕೆ ಕೃಷ್ಣಪ್ಪ ಹಾಗೂ ಶಕುಂತಳಾ ಶೆಟ್ಟಿ, ಮಂಗಳೂರು ದಕ್ಷಿಣಕ್ಕೆ ಜೆ.ಆರ್‌.ಲೋಬೊ ಹಾಗೂ ಐವನ್ ಡಿಸೋಜ, ಮಂಗಳೂರು ಉತ್ತರಕ್ಕೆ ಇನಾಯತ್ ಅಲಿ, ಮಂಗಳೂರು ಕ್ಷೇತ್ರಕ್ಕೆ ಜೆ.ಆರ್‌.ಲೋಬೊ ಅವರನ್ನು ಚುನಾವಣಾ ಸಂಯೋಜಕರನ್ನಾಗಿ ನೇಮಿಸಲಾಗಿದೆ. ಬ್ಲಾಕ್‌ ಮಟ್ಟದಲ್ಲೂ ಸಂಯೋಜಕರನ್ನು ನಿಯೋಜಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ, 'ದುರ್ಬಲ ವರ್ಗದವರು ಹಾಗೂ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರವಿದು. ಭೂಮಸೂದೆ, ಜೀತ ರದ್ಧತಿಯ ಅನುಷ್ಠಾನದ ಮೂಲಕ  ಈ ವರ್ಗಗಳಿಗೆ ಆರ್ಥಿಕ ಶಕ್ತಿ ತುಂಬಿದ್ದು ಕಾಂಗ್ರೆಸ್‌. ಈ ಸಲ ಇತಿಹಾಸ ಮರುಕಳಿಸಲಿದೆ’ ಎಂದರು. 

ಮಾಜಿ ಸಚಿವ ಅಭಯಚಂದ್ರ ಜೈನ್, ‘ಪದ್ಮರಾಜ್‌ ಅವರನ್ನು ಗೆಲ್ಲಿಸುವ ಹೊಣೆ ಕಾರ್ಯಕರ್ತರಾದ ನಮ್ಮೆಲ್ಲರದು’ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಅಭ್ಯರ್ಥಿ ಪದ್ಮರಾಜ್ ಆರ್., ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಪಕ್ಷದ ಮುಖಂಡರಾದ ಶಾಹುಲ್ ಹಮೀದ್, ಜೆ.ಆರ್.ಲೋಬೊ, ಶಕುಂತಲಾ ಶೆಟ್ಟಿ, ರಕ್ಷಿತ್ ಶಿವರಾಂ, ಐವನ್ ಡಿಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಸದಸ್ಯ ಕಣಚೂರು ಮೋನು ಮೊದಲಾದವರು ಭಾಗವಹಿಸಿದ್ದರು.

ಪುತ್ತೂರಿನಲ್ಲಿ ಬೃಹತ್‌ ಸಮಾವೇಶ ಪ್ರತಿ ಕ್ಷೇತ್ರಕ್ಕೆ ಚುನಾವಣಾ ಸಂಯೋಜಕರ ನೇಮಕ ಪ್ರತಿ ಕುಟುಂಬಕ್ಕೆ ₹1 ಲಕ್ಷದವರೆಗೆ ಸವಲತ್ತು ನೀಡುವ ಭರವಸೆ

ತಾವೇ ಅಭ್ಯರ್ಥಿ ಎಂದು ಭಾವಿಸಿ: ಭಂಡಾರಿ ‘ತಾವೇ ಅಭ್ಯರ್ಥಿ ಎಂದು ಪರಿಭಾವಿಸಿ ಕಾರ್ಯಕರ್ತರು ಚುನಾವಣೆ ಎದುರಿಸಬೇಕು. ದಕ್ಷಿಣ ಕನ್ನಡದಲ್ಲಿ ಲೋಕಸಭಾ ಚುನಾವಣೆಯಲ್ಲಿ 33 ವರ್ಷಗಳಿಂದ ಕಾಂಗ್ರೆಸ್ ಗೆದ್ದಿಲ್ಲ. ಈ ಕೊರತೆ ನೀಗಿಸಲು ಶಕ್ತಿಮೀರಿ ಪ್ರಯತ್ನಿಸಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದರು. ‘ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆಯು ದೊಡ್ಡ ಹಾಗೂ ಜವಾಬ್ದಾರಿಯುತ ಅವಕಾಶ. ನನ್ನ ವ್ಯಾಪ್ತಿಗೆ ಆರು ಲೋಕಸಭಾ ಕ್ಷೇತ್ರಗಳು ಬರಲಿವೆ’ ಎಂದರು. ‘ರಾಜಕೀಯ  ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಪದ್ಮರಾಜ ಅವರನ್ನು ಒಮ್ಮತದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ ನಾಯಕರಿಗೆ  ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT