ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವ ಹೊರುವುದಕ್ಕೂ ಜಿಎಸ್‌ಟಿ ವಿಧಿಸುವ ದಿನ ದೂರವಿಲ್ಲ: ಯು.ಟಿ.ಖಾದರ್‌ ಟೀಕೆ

Last Updated 19 ಜುಲೈ 2022, 10:55 IST
ಅಕ್ಷರ ಗಾತ್ರ

ಮಂಗಳೂರು: ‘ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸುವ ಮೂಲಕ ಕೇಂದ್ರ ಸರ್ಕಾರ ಪ್ರಜೆಗಳನ್ನೇ ವೈರಿಗಳಂತೆ ನಡೆಸಿಕೊಳ್ಳುತ್ತಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಬಳಸುವ ಎಲ್ಲ ರೀತಿಯ ಸರಕು ಸೇವೆಗಳಿಗೂ ತೆರಿಗೆ ವಿಧಿಸಲಾಗಿದೆ. ಶವ ಹೊರುವುದಕ್ಕೂ ತೆರಿಗೆ ವಿಧಿಸುವ ದಿನ ದೂರವಿಲ್ಲ’ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್‌ ಕಳವಳ ವ್ಯಕ್ತಪಡಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನರನ್ನು ಸರ್ಕಾರ ಪ್ರೀತಿ ವಿಶ್ವಾಸದಿಂದ ನಡೆಸಿಕೊಳ್ಳುತ್ತಿಲ್ಲ. ಆಡಳಿತ ವ್ಯವಸ್ಥೆ ಹಾಗೂ ಜನರ ನಡುವೆ ಅಂತರ ಹೆಚ್ಚುತ್ತಿದೆ. ಸರ್ಕಾರ ಏನು ಮಾಡುತ್ತಿದೆ ಎಂಬುದು ಜನರಿಗೆ ತಿಳಿಯುತ್ತಿಲ್ಲ. ಜನರ ಕಷ್ಟಗಳು ಸರ್ಕಾರಕ್ಕೆ ಮನವರಿಕೆ ಆಗುತ್ತಿಲ್ಲ. ಬಿಜೆಪಿ ಆಡಳಿತಾಧಿಯಲ್ಲಿ ಜಾರಿಗೊಳಿಸಿದ ಜಿಎಸ್‌ಟಿಯನ್ನು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಗಬ್ಬಾರ್‌ ಸಿಂಗ್‌ ಟ್ಯಾಕ್ಸ್‌ ಎಂದು ಟೀಕಿಸಿದ್ದರು. ಆಗ ಜನ ಅವರನ್ನೇ ಲೇವಡಿ ಮಾಡಿದ್ದರು. ಜನರಿಗೂ ಈ ತೆರಿಗೆ ವ್ಯವಸ್ಥೆಯ ಕರಾಳತೆ ಈಗ ಅರ್ಥವಾಗುತ್ತಿದೆ’ ಎಂದರು.

‘ಸಂಸ್ಕೃತಿ ಹಾಗೂ ಮಾನವೀಯತೆ ಆಧಾರದಲ್ಲಿ ಕಾಂಗ್ರೆಸ್‌ ಆಡಳಿತ ನಡೆಸಿತ್ತು. ಬಿಜೆಪಿಯು ಕೇವಲ ತೆರಿಗೆ ಆಧಾರದಲ್ಲಿ ಸರ್ಕಾರವನ್ನು ನಡೆಸುತ್ತಿದೆ. ಮೊಸರು, ಮಜ್ಜಿಗೆ, ವಿದ್ಯಾರ್ಥಿಗಳು ಬಳಸುವ ಪೆನ್ಸಿಲನ್ನೂ ಬಿಡದೆ ತೆರಿಗೆ ಹಾಕಲಾಗಿದೆ. ಅಕ್ಕಿಗೆ ತೆರಿಗೆ ಕಟ್ಟಿ, ಮಂಡಕ್ಕಿಗೆ ಪ್ರತ್ಯೇಕ ತೆರಿಗೆ ನೀಡಬೇಕಿದೆ. ₹ 5 ಸಾವಿರಕ್ಕಿಂತ ಕಡಿಮೆ ಚಿಕಿತ್ಸಾ ವೆಚ್ಚಕ್ಕೂ ತೆರಿಗೆ ಹೇರಿರುವ ಸರ್ಕಾರ ಶ್ರೀಮಂತರಿಗೆ ವಿಧಿಸುವ ಕಾರ್ಪೊರೇಟ್‌ ತೆರಿಗೆಯನ್ನು ಶೇ 30ರಿಂದ ಶೆ 22ಗೆ ಇಳಿಕೆ ಮಾಡಿದೆ. ಸರ್ಕಾರ ಯಾರ ಪರ ಇದೆ ಎನ್ನುವುದಕ್ಕೆ ಇದು ಉದಾಹರಣೆ’ ಎಂದರು.

‘ದೇಶದಲ್ಲೇ ಅತ್ಯಂತ ಹೆಚ್ಚು ಜಿಎಸ್‌ಟಿ ಸಂಗ್ರಹವಾಗುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಶೇ 42ರಷ್ಟು ಜಿಎಸ್‌ಟಿ ಪಾಲು ನೀಡದೇ ವಂಚಿಸಲಾಗುತ್ತಿದೆ. ಆದರೂ, ಆಡಳಿತ ಪಕ್ಷದ 25 ಸಂಸದರು ಚಕಾರ ಎತ್ತುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಮರ್ಥ ಆಡಳಿತ ನೀತಿಯ ಕೊರತೆಯಿಂದ ದೇಶದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಈಗಲೂ ಜನ ಎಚ್ಚೆತ್ತುಕೊಂಡು ಪಾಠ ಕಲಿಸದಿದ್ದರೆ ಉಳಿಗಾಲವಿಲ್ಲ’ ಎಂದರು.

‘ಗುತ್ತಿಗೆದಾರರಿಂದ ಶೇ 40ರಷ್ಟು ಕಮಿಷನ್‌ ವಸೂಲಿ, ಪಿಎಸ್‌ಐ ನೇಮಕಾತಿ ಹಗರಣ, ಅಗತ್ಯ ವಸ್ತುಗಳಿಗೂ ಜಿಎಸ್‌ಟಿ ಹೇರಿರುವುದು ಸೇರಿದಂತೆ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಪಕ್ಷವು ರಾಜ್ಯ ಮಟ್ಟದಲ್ಲಿ ಇದೇ 22ರಂದು ಹಾಗೂ ಜಿಲ್ಲಾ ಮಟ್ಟದಲ್ಲಿ ಇದೇ 25ರಂದು ಪ್ರತಿಭಟನೆ ನಡೆಸಲಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಅಭಯಚಂದ್ರ ಜೈನ್, ಶಕುಂತಲಾ ಶೆಟ್ಟಿ, ಐವನ್ ಡಿಸೋಜ, ಮಿಥುನ್ ರೈ, ಸದಾಶಿವ ಉಳ್ಳಾಲ್, ಟಿ.ಕೆ. ಸುಧೀರ್, ಶಾಹುಲ್ ಹಮೀದ್, ಸುಭಾಷ್ ಶೆಟ್ಟಿ, ಪದ್ಮನಾಭ ನರಿಂಗಾನ, ಮೋನಪ್ಪ, ಶಶಿಧರ ಹೆಗ್ಡೆ ಇದ್ದರು.

‘ಸೋನಿಯಾ, ರಾಹುಲ್‌ಗೆ ಅನಗತ್ಯ ಕಿರುಕುಳ’
‘ಕಾಂಗ್ರೆಸ್‌ ಮುಖಂಡರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರಿಗೆ ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯವನ್ನು ಮುಂದಿಟ್ಟುಕೊಂಡು ಅನಗತ್ಯ ಕಿರುಕುಳ ನೀಡುತ್ತಿದೆ. ಸೊನಿಯಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೂ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಪಿಎಸ್ಐ ನೇಮಕಾತಿ ಹಗರಣದಲ್ಲಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಮ್ರಿತ್‌ ಪೌಲ್‌ ಅವರನ್ನು ಕೇವಲ ಎರಡು ಗಂಟೆ ವಿಚಾರಣೆ ನಡೆಸಲಾಗಿದೆ. ಆದರೆ, 2015ರಲ್ಲೇ ಮುಗಿದುಹೋದ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಅವರನ್ನು ಸತತ 52 ಗಂಟೆ ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ಯು.ಟಿ. ಟೀಕಿಸಿದರು.

‘ಸೋನಿಯಾ ಹಾಗೂ ರಾಹುಲ್‌ ವಿರುದ್ಧ ದೂರು ನೀಡಿದವರು ಯಾರು, ಯಾವ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ ಎಂಬುದನ್ನು ‌‌‌‌‌ಸರ್ಕಾರ ತಿಳಿಸಲಿ. ಎಫ್‌ಐಆರ್‌ ಪ್ರತಿಯನ್ನು ಬಹಿರಂಗಪಡಿಸಲಿ’ ಎಂದು ಅವರು ಸವಾಲು ಹಾಕಿದರು.

*
ಸರ್ಕಾರದ ವರ್ತನೆಗೆ ಜನರ ಮೌನವೂ ಕಾರಣ. ಬಸ್‌ ಚಾಲಕರು, ರಿಕ್ಷಾ ಚಾಲಕರು ತೆರಿಗೆ ವ್ಯವಸ್ಥೆಯನ್ನು ದೂಷಿಸುತ್ತಾರೆ. ಕಾಂಗ್ರೆಸ್‌ ಪ್ರತಿಭಟನೆ ನಡೆಸಿದರೆ ಬೆಂಬಲಿಸಲು ಯಾರೂ ಮುಂದೆಬರುವುದಿಲ್ಲ.
-ಯು.ಟಿ.ಖಾದರ್‌, ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT