ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿ ತಪ್ಪಿದ ಆರ್ಥಿಕತೆ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್‌ ಕುಮಾರ್
Last Updated 19 ಜನವರಿ 2021, 2:47 IST
ಅಕ್ಷರ ಗಾತ್ರ

ಮಂಗಳೂರು: ‘ರಾಜ್ಯದ ಆರ್ಥಿಕತೆಯು ಹಳಿ ತಪ್ಪಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್‌ ಕುಮಾರ್ ಆರೋಪಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ (2019–20) ವರ್ಷಕ್ಕೆ ಹೋಲಿಸಿದರೆ ಈ ವರ್ಷ (2020–21)ದಲ್ಲಿ ಸ್ವಂತ ತೆರಿಗೆ ರಾಜಸ್ವ ಹಾಗೂ ವಾಣಿಜ್ಯ ತೆರಿಗೆ (ಶೇ –14.8), ಅಬಕಾರಿ (ಶೇ –1.5), ಮೋಟಾರು ವಾಹನ ತೆರಿಗೆ (ಶೇ –30), ಮುದ್ರಾಂಕ ಮತ್ತು ನೋಂದಣಿ ಶುಲ್ಕ (ಶೇ –22.4), ಇತರೆ (ಶೇ –72.6), ಸ್ವಂತ ತೆರಿಗೆಯೇತರ ರಾಜಸ್ವ (ಶೇ –8.5) ಹಾಗೂ ಕೇಂದ್ರ ಸರ್ಕಾರದ ತೆರಿಗೆಯ ಹಂಚಿಕೆ (ಶೇ –38.8) ಕುಸಿತ ಕಂಡಿದೆ. ಆದರೆ, ರಾಜ್ಯದ ಸಾಲದ ಪ್ರಮಾಣವು ಶೇ 122.6ರಷ್ಟು ಹೆಚ್ಚಾಗಿದೆ. ಅಭಿವೃದ್ಧಿ ಕಾರ್ಯಗಳ ಪ್ರಮಾಣ ಶೇ 17ರಷ್ಟು ಕಡಿಮೆಯಾಗಿದೆ’ ಎಂದು ವಿವರಿಸಿದರು.

‘ಕೇಂದ್ರದಿಂದ ರಾಜ್ಯಕ್ಕೆ ಜಿಎಸ್‌ಟಿ ನಷ್ಟ ಪರಿಹಾರ ₹18,847 ಕೋಟಿ ಬಂದಿಲ್ಲ. ಈ ಬಗ್ಗೆ ಬಿಜೆಪಿ ಮುಖಂಡರು ಚಕಾರವೇ ಎತ್ತುತ್ತಿಲ್ಲ. ರಾಜ್ಯದ ಜನರಿಂದ ₹ 1.10 ಲಕ್ಷ ಕೋಟಿ ಆದಾಯ ಸಂಗ್ರಹಿಸುವ ಕೇಂದ್ರವು, ರಾಜ್ಯಕ್ಕೆ ಕೇವಲ ₹40 ಸಾವಿರ ಕೋಟಿ ನೀಡಿದೆ. ತೆರಿಗೆಯ ಪೈಕಿ ಮೂರನೇ ಎರಡರಷ್ಟು ಪಾಲು ಬಂದಿಲ್ಲ’ ಎಂದರು.

‘ಕೇಂದ್ರವು ದೇಶದ ಒಕ್ಕೂಟ ವ್ಯವಸ್ಥೆಗೂ ಆಗಾಗ್ಗೆ ಧಕ್ಕೆ ಉಂಟು ಮಾಡುತ್ತಿದೆ. ರಾಜ್ಯದ ಜನರ ಮೇಲೆ ತೆರಿಗೆ ಹೆಚ್ಚಿಸುವ ಷರತ್ತನ್ನು ಕೇಂದ್ರ ಸರ್ಕಾರ ವಿಧಿಸಿದ್ದು, ಸ್ಥಳೀಯ ಸಂಸ್ಥೆಗಳು ಆಸ್ತಿ ತೆರಿಗೆ, ನೀರಿನ ಕರ, ವಿದ್ಯುತ್ ಬಿಲ್‌ಗಳನ್ನು ಹೆಚ್ಚಳ ಮಾಡಿವೆ. ಶೇ12 ನೀರಿನ ದರ ಹೆಚ್ಚಳ, ಕಟ್ಟಡ ಯೋಜನಾ ಶುಲ್ಕ ಶೇ500ರಷ್ಟು ಹೆಚ್ಚಳ ಮಾಡಲಾಗಿದೆ’ ಎಂದರು.

‘ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರ್ಕಾರವು 2015–16ರಲ್ಲಿ ₹1,694.52 ಕೋಟಿ ನೀಡಿದ್ದು, ಸತತವಾಗಿ ಏರಿಕೆ ಮಾಡುತ್ತಾ ಬಂದಿತ್ತು. 2019–20ರಲ್ಲಿ ₹2,713.53 ಕೋಟಿ ನೀಡಲಾಗಿದೆ. ಆದರೆ, ಈ ಬಿಜೆಪಿ ಸರ್ಕಾರವು 2020–21ರಲ್ಲಿ ಕೇವಲ ₹412.07 ಕೋಟಿ ಮಾತ್ರ ನೀಡಿದೆ. ಅಲ್ಪಸಂಖ್ಯಾತರು, ಪರಿಶಿಷ್ಟರು, ಹಿಂದುಳಿದವರ ಕಲ್ಯಾಣ ಯೋಜನೆ ಅನುದಾನ ಕಡಿಮೆ ಹಾಗೂ ಈ ವರ್ಗದ ವಿದ್ಯಾರ್ಥಿಗಳ ವೇತನವನ್ನೂ ಕಡಿತ ಮಾಡಿದ್ದಾರೆ. ಬಡವರ ಮಕ್ಕಳಿಗೆ ಶಿಕ್ಷಣ ಸಿಗದಂತೆ ಮಾಡಿ, ಅಂದಾನಿ–ಅದಾನಿ ಉದ್ಯಮದಲ್ಲಿ ಜೀತದಾಳುಗಳಾಗಿ ದುಡಿಸುವ ಹುನ್ನಾರ ನಡೆಯುತ್ತಿದೆ’ ಎಂದರು.

‘ಅನುಗ್ರಹ ಯೋಜನೆ ಅಡಿ ಪಶುಪಾಲಕರಿಗೆ ₹39.18 ಕೋಟಿ, ಬಡವರ ಹಸಿವು ತಣಿಸುತ್ತಿದ್ದ ಇಂದಿರಾ ಕ್ಯಾಂಟೀನ್‌ಗೆ ₹28 ಕೋಟಿ ಬಾಕಿ, ಹೈನುಗಾರಿಕೆಗೆ ಪ್ರೋತ್ಸಾಹಿಸುವ ಕೆಎಂಎಫ್‌ಗೆ ₹369 ಕೋಟಿ ಬಾಕಿ ಇದೆ. ರೈತರಿಗೆ ಬೆಳೆ ಸಾಲವನ್ನೂ ಸಮರ್ಪಕವಾಗಿ ನೀಡಿಲ್ಲ’ ಎಂದು ದೂರಿದರು.

‘ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷವಿದ್ದರೆ ಸ್ವರ್ಗ’ ಎಂದು ಜನರನ್ನು ದಾರಿ ತಪ್ಪಿಸಿ ಅಧಿಕಾರಕ್ಕೆ ಬಂದ ಬಿಜೆಪಿಯು ಈಗ ದೇಶದ ಜೊತೆ ರಾಜ್ಯವನ್ನು ಹದಗೆಡಿಸುತ್ತಿದೆ.ರಾಜ್ಯವು ಆರ್ಥಿಕ ಅಶಿಸ್ತಿಗೆ ಸಿಲುಕಿಕೊಂಡಿದ್ದು,ಭೌತಿಕ ಆಸ್ತಿಗಳು, ಸಾಲತೀರಿಸುವ ಸಾಮರ್ಥ್ಯ, ವಿತ್ತೀಯ ಶಿಸ್ತು ಕಳೆದುಕೊಳ್ಳುತ್ತಿದೆ’ ಎಂದು ದೂರಿದರು.

ವಿಶ್ವದ ಹಲವಾರು ದೇಶಗಳು ಲಾಕ್‌ಡೌನ್ ಘೋಷಣೆ ಮಾಡಿದ ಕೂಡಲೇ ಜನರಿಗೆ ನೆರವು ನೀಡಿದ ಪರಿಣಾಮ ಅಲ್ಲಿನ ಆರ್ಥಿಕತೆ ಕುಸಿದಿಲ್ಲ. ಆದರೆ, ದೇಶದಲ್ಲಿ 2014 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್‍ಗಳಿಂದಲೇ ₹20 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತ ಸಂಗ್ರಹಿಸಲಾಗಿದೆ. ಆದರೂ, ಎಲ್ಐಸಿ, ರೈಲ್ವೆ, ಬಿಎಸ್ಸೆನ್ನೆಲ್, ತೈಲ ಕಂಪೆನಿಗಳನ್ನು ಮಾರಾಟ ಮಾಡಲು ಹೊರಟಿದ್ದಾರೆ ಎಂದರು.

ರಾಜ್ಯ ಸರ್ಕಾರ ಶೇ 17.5ರಷ್ಟು ವಿದ್ಯುತ್‌ ಸರಬರಾಜು ಶುಲ್ಕ ಏರಿಕೆ ಮಾಡಿದ್ದು, ಮೆಸ್ಕಾಂ ವ್ಯಾಪ್ತಿಯಲ್ಲಿ ಶೇ 25 ಹೆಚ್ಚಾಗಿದೆ. ರಾಜ್ಯದಲ್ಲಿ 1ಯುನಿಟ್ ವಿದ್ಯುತ್‌ಗೆ ಗರಿಷ್ಠ ದರ ₹8.05 ಇದ್ದರೆ, ತಮಿಳುನಾಡು –₹6.60, ದೆಹಲಿ– ₹ 4.50, ಕೇರಳ– ₹4.80, ಆಂಧ್ರಪ್ರದೇಶ– ₹6.90 ವಿಧಿಸುತ್ತಿವೆ. ಇನ್ನು ತಮಿಳುನಾಡಿನಲ್ಲಿ ಬಡವರಿಗೆ 100 ಯುನಿಟ್‌ ಉಚಿತ ವಿದ್ಯುತ್ ನೀಡಿದರೆ, ರಾಜ್ಯದಲ್ಲಿ 30 ಯನಿಟ್‍ ನೀಡುತ್ತಿದ್ದು, ಪ್ರತಿ ಯುನಿಟ್‌ಗೂ ₹4 ದರ ವಿಧಿಸಲಾಗುತ್ತಿದೆ ಎಂದು ಹರೀಶ್‌ ಕುಮಾರ್ ತಿಳಿಸಿದರು.

‘ಸ್ಥಿಮಿತ ಕಳೆದುಕೊಂಡ ನಳಿನ್’
ಮಂಗಳೂರು:
ಸಂಸದ ನಳಿನ್‌ ಕುಮಾರ್ ಕಟೀಲ್ ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಿದ್ದಾರೆ ಎಂದು ವಿಧಾನ ಪರಿಷ್‌ ಸದಸ್ಯ ಹರೀಶ್ ಕುಮಾರ್ ಆರೋಪಿಸಿದರು.

ವ್ಯಕ್ತಿ ಬೆಳೆಯುತ್ತಾ ಹೋದಂತೆ ವ್ಯಕ್ತಿತ್ವವೂ ಬೆಳೆಯಬೇಕು. ಆದರೆ, ನಳಿನ್‌ ಕುಮಾರ್ ಹಾಸ್ಯಗಾರರಂತೆ ಮಾಡತನಾಡುತ್ತಿದ್ದಾರೆ. ಪ್ರಾಯಶಃ ಮಾನಸಿಕ ತಳಮಳ ಇರಬೇಕು. ನಾಲಿಗೆ ಮೇಲೆ ಹಿಡಿತ ಇಲ್ಲದಂತೆ ಆಡುತ್ತಿದ್ದಾರೆ. ಇದು ಅಧಿಕಾರ ಮದವೋ, ಇಲ್ಲ ಪಕ್ಷದಲ್ಲಿ ಅಭದ್ರತೆಯೋ ಎಂದು ಅವರೇ ತಿಳಿಸಲಿ ಎಂದರು.

ಕಾಂಗ್ರೆಸಿಗರು ಹಿರಿಯ ನಾಯಕರ ‘ಪುಣ್ಯ ತಿಥಿ’ ಮಾಡುವುದನ್ನು ನಳಿನ್ ಲೇವಡಿ ಮಾಡಿದ್ದಾರೆ. ಹಿರಿಯರ ತಿಥಿ ಮಾಡುವುದು ಭಾರತೀಯ ಸಂಸ್ಕೃತಿ. ನಳಿನ್ ಈಗ ಯಾವ ಸಂಸ್ಕೃತಿ ಅನುಸರಿಸುತ್ತಿದ್ದಾರೆ? ಹಿರಿಯರ ತಿಥಿ ಮಾಡುವುದನ್ನು ಬಿಟ್ಟಿದ್ದಾರಯೇ? ಎಂದು ಪ್ರಶ್ನಿಸಿದರು.

ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮಿಥುನ್‌ ರೈ, ಮುಖಂಡರಾದ ಸುಧೀರ್ ಟಿ.ಕೆ, ಶಾಹುಲ್ ಹಮೀದ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT