ಶುಕ್ರವಾರ, ಮಾರ್ಚ್ 24, 2023
30 °C
ಅಡಿಕೆ ಬೆಳೆಗಾರರ ಕಡೆಗಣನೆ ಆರೋಪ: ಕಾಂಗ್ರೆಸ್‌ ಪ್ರತಿಭಟನೆ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅಡಿಕೆ ಆಮದು ಸ್ಥಗಿತ: ಜೆ.ಆರ್‌.ಲೋಬೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಡಿಕೆ ಆಮದನ್ನು ಸಂಪೂರ್ಣ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಲಿದೆ. ಇದರಿಂದ ಅಡಿಕೆಯ ದರವು ಹೆಚ್ಚಳವಾಗಿ, ಬೆಳೆಗಾರರಿಗೆ ಅನುಕೂಲವಾಗಲಿದೆ’ ಎಂದು ಕಾಂಗ್ರೆಸ್‌ ಮುಖಂಡ ಜೆ.ಆರ್‌.ಲೋಬೊ ಹೇಳಿದರು. 

‘ಅಡಿಕೆ ಬೆಳೆಗೆ ಉತ್ತೇಜನ ನೀಡಬಾರದು’ ಎಂದು ವಿಧಾನಮಂಡಲ ಅಧಿವೇಶನದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ನೀಡಿದ ಹೇಳಿಕೆ ಖಂಡಿಸಿ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೀತಿಯಿಂದ ಅಡಿಕೆ ಬೆಳೆಗಾರರಿಗೆ ಹಾನಿ ಆಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಪಕ್ಷವು ಇಲ್ಲಿ ಶನಿವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರ ಬೆಂಬಲದಿಂದ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಆದರೆ ಅವರ ಸಮಸ್ಯೆಗಳ ಬಗ್ಗೆ ಆಡಳಿತವ ಪಕ್ಷದ ಶಾಸಕರು ಕುರುಡರಾಗಿದ್ದಾರೆ. ಅಡಿಕೆಗೆ ಬೆಂಬಲ ಬೆಲೆ ನೀಡುವುದು ಹಾಗೂ ಕೊಳೆ ರೋಗ, ಎಲೆಚುಕ್ಕಿ ರೋಗದಿಂದ ಸಮಸ್ಯೆ ಎದುರಿಸುತ್ತಿರುವ ರೈತರಿಗೆ ಪರಿಹಾರ ನೀಡುವ ವಿಚಾರದಲ್ಲಿ ಮೌನವಹಿಸಿದ್ದಾರೆ’ ಎಂದು ಆರೋಪಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್, ‘ಅಡಿಕೆ ಬೆಳೆಗೆ ಭವಿಷ್ಯ ಇಲ್ಲ ಎಂಬ ಗೃಹಸಚಿವರ ಹೇಳಿಕೆ ಮೂರ್ಖತನದ ಪರಮಾವಧಿ. ಈ ಹೇಳಿಕೆಯನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ, ‘ಲಾಭಗಳಿಕೆಗೆ ಆದ್ಯತೆ ನೀಡುತ್ತಿರುವ ಕ್ಯಾಂಪ್ಕೊ ಅಡಿಕೆ ದರ ಕುಸಿತದಿಂದ ಕಂಗಾಲಾಗಿರುವ ಬೆಳೆಗಾರರ ನೆರವಿಗೆ ಧಾವಿಸಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರ ಗಳು ಅಡಿಕೆ ಬೆಳೆಗಾರರ ಹಿತವನ್ನು ಕಡೆಗಣಿಸಿದ್ದರೂ ಬಿಜೆಪಿ ಮುಖಂಡರಾದ ಸದಾನಂದ ಗೌಡ ಶೋಭಾ ಕರಂದ್ಲಾಜೆಯಂತಹ ನಾಯಕರು ಸೊಲ್ಲೆತ್ತಿಲ್ಲ’ ಎಂದು ಟೀಕಿಸಿದರು.

ಪಾಲಿಕೆ ಸದಸ್ಯರಾದ ನವೀನ್ ಡಿಸೋಜ, ಶಶಿಧರ್ ಹೆಗ್ಡೆ, ಅಬ್ದುಲ್ ರವೂಫ್, ಅಬ್ದುಲ್ ಲತೀಫ್, ಶಂಸುದ್ದಿನ್, ಅಶ್ರಫ್ ಬಜಾಲ್ ಪಕ್ಷದ ಮುಖಂಡರಾದ ಪ್ರಕಾಶ್ ಸಾಲ್ಯಾನ್, ಶಾಲೆಟ್ ಪಿಂಟೊ, ಟಿ.ಕೆ.ಸುಧೀರ್, ನಜೀರ್ ಬಜಾಲ್, ನೀರಜ್ ಪಾಲ್, ಚೇತನ್, ರೀತೇಶ್, ಹೊನ್ನಯ್ಯ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು