ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಧಾನ ಪರಿಷತ್ತಿನ 6 ಸ್ಥಾನಗಳಲ್ಲೂ ಗೆಲುವು: ಸಲೀಂ ಅಹಮದ್‌

Published 27 ಮೇ 2024, 6:09 IST
Last Updated 27 ಮೇ 2024, 6:09 IST
ಅಕ್ಷರ ಗಾತ್ರ

ಮಂಗಳೂರು: ‘ಪದವೀಧರ ಯುವಕರು ಹಾಗೂ ಶಿಕ್ಷಕರು ಬಿಜೆಪಿಯ ನಡೆಗಳಿಂದ ಬೇಸತ್ತುಹೋಗಿದ್ದು, ಬದಲಾವಣೆ ಬಯಸಿದ್ದಾರೆ. ವಿಧಾನ ಪರಿಷತ್ತಿನ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಆರು ಸ್ಥಾನಗಳಲ್ಲೂ ಕಾಂಗ್ರೆಸ್‌ ಜಯ ಗಳಿಸಲಿದೆ’ ಎಂದು ವಿಧಾನ ಪರಿಷತ್ತಿನ ಮುಖ್ಯ ಸಚೇತಕ  ಸಲೀಂ ಅಹಮದ್‌ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಕೆ.ಮಂಜುನಾಥ್‌ ಹಿಂದಿನ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋತಿದ್ದರು. ನೈರುತ್ಯ ಪದವೀಧರ ಕ್ಷೇತ್ರದಿಂದ ಕಳೆದ ಸಲ ಆಯ್ಕೆಯಾಗಿದ್ದ ಆಯನೂರು ಮಂಜುನಾಥ್‌ ಈಚೆಗೆ ನಮ್ಮ ಪಕ್ಷವನ್ನು ಸೇರಿದ್ದಾರೆ. ಅವರಿಬ್ಬರೂ ಈ ಸಲ ಜಯ ಗಳಿಸಲಿದ್ದಾರೆ. ವಿಧಾನ ಪರಿಷತ್ತಿನಲ್ಲೂ ಪಕ್ಷಕ್ಕೆ ಬಹುಮತ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ವಿಧಾನ ಸಭಾ ಚುನಾವಣೆಯಲ್ಲಿ ಭರವಸೆ ನೀಡಿದಂತೆ ಐದು ಗ್ಯಾರಂಟಿಗಳನ್ನು ಸರ್ಕಾರ ಜಾರಿಗೆ ತಂದಿದೆ. ಗ್ಯಾರಂಟಿಗಳ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸರ್ವರಿಗೂ ಸಮಬಾಳು ಸಮಪಾಲು ಸಿದ್ಧಾಂತದಲ್ಲಿ ಸರ್ಕಾರ ನಂಬಿಕೆ ಇಟ್ಟಿದ್ದು, ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ರೂಪಿಸುತ್ತಿದೆ’ ಎಂದರು.

ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ಭರವಸೆ ಈಡೇರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಇಲಾಖೆ ಜೊತೆ ಚರ್ಚಿಸಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಈ ಭರವಸೆಯೂ ಈಡೇರಲಿದೆ’ ಎಂದರು.

’ಹತ್ತು ವರ್ಷಗಳಿಂದ ಸುಳ್ಳುಗಳನ್ನೇ ಹೇಳುತ್ತಾ ಬಂದ ಬಿಜೆಪಿ ಅಭಿವೃದ್ಧಿಗೆ ಕೊಡುಗೆ ನೀಡಿಲ್ಲ. ಸೋಲು ಖಚಿತ ಎಂಬುದು ಗೊತ್ತಾಗುತ್ತಿದ್ದಂತೆಯೇ ಬಿಜೆಪಿ ಮುಖಂಡರು ತಮ್ಮ ಚುನಾವಣಾ ಭಾಷಣಗಳಲ್ಲಿ ಸಮಾಜವನ್ನು ಒಡೆಯುವಂತಹ ಹೇಳಿಕೆಗಳನ್ನೇ ನೀಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 20 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ. ಕೇಂದ್ರದಲ್ಲಿ ‘ಇಂಡಿಯಾ’ ಒಕ್ಕೂಟ ಬಹುಮತ ಪಡೆಯಲಿದ್ದು, ರಾಹುಲ್‌ ಗಾಂಧಿ ಪ‍್ರಧಾನಿ ಆಗಲಿದ್ದಾರೆ’ ಎಂದರು.

ಪ್ರಧಾನಿ ಹುದ್ದೆಗೆ ರಾಜ್ಯದವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಸರನ್ನೇಕೆ ಪ್ರಸ್ತಾಪಿಸುತ್ತಿಲ್ಲ ಎಂಬ ಪ್ರಶ್ನೆಗೆ, ‘ರಾಹುಲ್‌ ಅವರು ‍ಪ್ರಧಾನಿ ಆಗಬೇಕು ಎಂಬುದು ಯುವಜನರ ಅಪೇಕ್ಷೆ. ಖರ್ಗೆಯವರು ಪ್ರಧಾನಿ ಆದರೂ ಸ್ವಾಗತಿಸುತ್ತೇವೆ’ ಎಂದರು. 

‘ಕೊಲೆ, ಗ್ಯಾಂಗ್‌ವಾರ್‌ ಹೆಚ್ಚಳದಿಂದ ರಾಜ್ಯದಲ್ಲಿ  ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ’ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ಪ್ರಕರಣಗಳಲ್ಲಿ ಆರೋಪಿಗಳನ್ನು ತಕ್ಷಣವೇ ಬಂಧಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಕ್ರಮವಹಿಸಿದ್ದಾರೆ’ ಎಂದರು. 

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ್‌, ಪಾಲಿಕೆ ಸದಸ್ಯ ಶಶಿಧರ್ ಹೆಗ್ಡೆ, ಪಕ್ಷದ ಮುಖಂಡರಾದ ಎಂ.ಎ.ಗಪೂರ್‌,  ಶಕುಂತಲಾ ಶೆಟ್ಟಿ, ಅಶ್ರಫ್ ಕೆ., ಶಾಲೆಟ್ ಪಿಂಟೊ, ಸದಾಶಿವ ಉಳ್ಳಾಲ್, ಆರಿಫ್ ಭಾವ, ತೇಜಸ್ವಿ ರಾಜ್, ದಿನೇಶ್ ಆಳ್ವ, ನಜೀರ್ ಬಜಾಲ್, ಗಣೇಶ್ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT