ಶುಕ್ರವಾರ, ಜನವರಿ 24, 2020
21 °C
ಎಡಿಬಿ ನೆರವಿನ ₹792 ಕೋಟಿ ವೆಚ್ಚದಲ್ಲಿ ಕಾಮಗಾರಿ: ಶಾಸಕ ಕಾಮತ್‌

ಪಾಲಿಕೆ ವ್ಯಾಪ್ತಿಯಲ್ಲಿ ನಿರಂತರ ನೀರು ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಂದಿನ 30 ವರ್ಷಗಳ ಅಗತ್ಯತೆಯನ್ನು ಪರಿಗಣಿಸಿ ಎಬಿಡಿ ನೆರವಿನ 2ನೇ ಹಂತದ ‘ಜಲಸಿರಿ’ ಯೋಜನೆಯಡಿ ₹792.42 ಕೋಟಿ ವೆಚ್ಚದಲ್ಲಿ 24X7 ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಉನ್ನತೀಕರಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಶಾಸಕ ಡಿ.ವೇದವ್ಯಾಸ ಕಾಮತ್‌ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೆಯುಡಿಐಡಿಎಫ್‌ಸಿ ವತಿಯಿಂದ ಎಬಿಡಿ ನೆರವಿನ ಕ್ವಿಮಿಪ್ ಯೋಜನೆಯಡಿ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ಕುಟುಂಬಕ್ಕೂ ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ ಎಂದರು.

ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ ಪ್ರತಿ ಮನೆಗೂ ನಿರಂತರ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಇದಕ್ಕಾಗಿ ನಗರದ ವಿವಿಧ ಬಡಾವಣೆಗಳಲ್ಲಿ ಮೇಲ್ಮಟ್ಟದ ಜಲ ಸಂಗ್ರಹಾಗಾರಗಳ ನಿರ್ಮಾಣ ಮಾಡಲಾಗುವುದು. ವಿವಿಧ ಬಡಾವಣೆಗಳಲ್ಲಿ ಹಾಲಿಯಿರುವ ನೆಲ ಮಟ್ಟದ ಜಲ ಸಂಗ್ರಹಾಗಾರದ ಜತೆಗೆ 20 ಹೆಚ್ಚುವರಿ ವಿವಿಧ ಸಾಮರ್ಥ್ಯದ ನೆಲ ಮಟ್ಟದ ಜಲ ಸಂಗ್ರಹಾಗಾರಗಳ ನಿರ್ಮಾಣ, 8 ಹೆಚ್ಚುವರಿ ಬೂ಼ಷ್ಟಿಂಗ್ ಪಂಪ್‌ಹೌಸ್‌ಗಳ ನಿರ್ಮಾಣ, ಪಣಂಬೂರು ಹಾಗೂ ಬೆಂದೂರಿನಲ್ಲಿರುವ ಇರುವ ನೀರು ಶುದ್ಧೀಕರಣ ಘಟಕಗಳ ಬದಲು, ರಾಮಲಕಟ್ಟೆಯಲ್ಲಿನ ಜಲ ಶುದ್ಧೀಕರಣ ಘಟಕದ ಬಳಿ ಹೊಸದಾಗಿ ಘಟಕಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

ಕುಡ್ಸೆಂಪ್ ಯೋಜನೆಯಡಿ ಅಳವಡಿಸಿರುವ ವಿತರಣಾ ಜಾಲದ ಜತೆ ಹೆಚ್ಚುವರಿಯಾಗಿ 13 ಎಂಜಿಡಿ ಉದ್ದದ ವಿತರಣಾ ಜಾಲವನ್ನು ಅಳವಡಿಸಲಾಗುವುದು. ಡಾಂಬರ್‌, ಕಾಂಕ್ರೀಟ್‌ ಸೇರಿದಂತೆ ಅಗೆದ ರಸ್ತೆಗಳನ್ನು ದುರಸ್ತಿ ಮಾಡಿ ಯಥಾಸ್ಥಿತಿಯಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಬರುವಂತೆ ಮಾಡಲಾಗುವುದು. ತುಂಬೆಯ ನೀರು ಶುದ್ಧೀಕರಣ ಘಟಕದಿಂದ ಎಲ್ಲ ಜಲ ಸಂಗ್ರಹಾಗಾರದವರೆಗೆ ಗಣಕೀಕರಣಗೊಳಿಸುವ ಮೂಲಕ ನೀರು ವಿತರಣೆಯಲ್ಲಿ ತಂತ್ರಜ್ಞಾನ ಅಳವಡಿಸಲಾಗುವುದು ಎಂದು ಹೇಳಿದರು.

‘ಕೆರೆಗಳ ಅಭಿವೃದ್ಧಿಗೆ ₹3.65 ಕೋಟಿ’

ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆರೆಗಳನ್ನು ಅಭಿವೃದ್ಧಿಪಡಿಸಲು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅನುದಾನದಡಿ ₹3.65 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್‌ ಹೇಳಿದರು.

ಅಂತರ್ಜಲ ಕುಸಿತದ ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಕೆರೆಗಳ ಅಭಿವೃದ್ಧಿ ಸದ್ಯದ ಅವಶ್ಯಕತೆಯಾಗಿದೆ. ಆ ನಿಟ್ಟಿನಲ್ಲಿ ಸದ್ಯ 8 ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ಯೋಜನೆ ರೂಪಿಸಿದ್ದು, ಕಾಮಗಾರಿ ಪ್ರಾರಂಭವಾಗಲಿದೆ. ಸಾರ್ವಜನಿಕರು ನಿತ್ಯ ವಾಯುವಿಹಾರಕ್ಕೆ ಅನುಕೂಲವಾಗುವಂತೆ ಹಲವು ಕೆರೆಗಳನ್ನು ಪುನಶ್ಚೇತನಗೊಳಿಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ಕದ್ರಿ ಕೈಬಟ್ಟಲು ಕೆರೆಗೆ ₹90 ಲಕ್ಷ, ಜೋಗಿಮಠ ಕೆರೆಗೆ ₹80 ಲಕ್ಷ, ಕುಲಶೇಖರ ಕೆರೆಗೆ ₹70 ಲಕ್ಷ, ಜಪ್ಪಿನಮೊಗರು ಕಂರ್ಬಿಸ್ಥಾನ ಶ್ರೀ ವೈದ್ಯನಾಥ ದೇವಸ್ಥಾನದ ಕೆರೆ ಅಭಿವೃದ್ಧಿಗೆ ₹25 ಲಕ್ಷ, ಜಲ್ಲಿಗುಡ್ಡೆ ಕೆರೆ ಅಭಿವೃದ್ಧಿ ₹65 ಲಕ್ಷ, ಕುದ್ರೋಳಿ ನಡುಪಳ್ಳಿ ಜುಮ್ಮಾ ಮಸೀದಿ ವಠಾರದ ಕೆರೆಗೆ ₹25 ಲಕ್ಷ, ಬಜಾಲ್‌ ಗ್ರಾಮದ ಕುಂದೋಡಿ ಕೆರೆಗೆ ₹10 ಲಕ್ಷ ಅಂದಾಜಿಸಲಾಗಿದೆ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು