ಶನಿವಾರ, ಏಪ್ರಿಲ್ 4, 2020
19 °C
ದುಬೈನಿಂದ ಬಂದ ವ್ಯಕ್ತಿಯಲ್ಲೂ ಕೋವಿಡ್‌–19 ಇಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

ಆತಂಕ ಬೇಡ, ಸ್ವಚ್ಛತೆಗೆ ಆದ್ಯತೆ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಭಾನುವಾರ ದುಬೈನಿಂದ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಜ್ವರಪೀಡಿತ ಪ್ರಯಾಣಿಕನ ಗಂಟಲಿನ ದ್ರವದ ಮಾದರಿಯ ವರದಿ ಬಂದಿದ್ದು, ಅವರಿಗೆ ಕೊವಿಡ್-19 ಸೋಂಕು ಇಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ದುಬೈನಿಂದ ಬಂದಿದ್ದ ಪ್ರಯಾಣಿಕನಿಗೆ ಜ್ವರವಿತ್ತು. ಅವರು ಆರಂಭದಲ್ಲಿ ವೈದ್ಯರ ಸಲಹೆ ನಿರಾಕರಿಸಿದ್ದರು. ಅವರಿಗೆ ಮತ್ತು ಕುಟುಂಬದವರಿಗೆ ತಿಳಿವಳಿಕೆ ನೀಡಿ, ಅವರ ಗಂಟಲಿನ ದ್ರವದ ಮಾದರಿ ಸಂಗ್ರಹಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ 14 ದಿನಗಳ ಕಾಲ ಅವರು ಮನೆಯಲ್ಲಿಯೇ ಇದ್ದು ಆರೋಗ್ಯವನ್ನು ಸುಧಾರಿಸಿಕೊಳ್ಳುವಂತೆ ತಿಳಿಸಲಾಗಿದೆ. ಅವರಿಂದ ಸಂಗ್ರಹಿಸಲಾದ ಗಂಟಲಿನ ದ್ರವದ ಪರೀಕ್ಷೆಯ ವರದಿ ಬುಧವಾರ ಬಂದಿದೆ ಎಂದರು.

ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಹಡಗು ಹಾಗೂ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬರುವ ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗುತ್ತಿದೆ. ಎನ್‌ಎಂಪಿಟಿಯಲ್ಲಿ ವಿದೇಶದಿಂದ ನಗರಕ್ಕೆ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆಯನ್ನೂ ನಡೆಸಲಾಗುತ್ತಿದೆ. ಆದರೆ ಅವರು ಹಡಗಿನಿಂದ ಇಳಿದು ಹೊರ ಹೋಗುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ವಿಮಾ ನಿಲ್ದಾಣದಲ್ಲಿ ಬಂದಿಳಿಯುವ ವಿದೇಶಿ ಪ್ರಯಾಣಿಕರಲ್ಲಿ ಜ್ವರ, ಶೀತ, ಕೆಮ್ಮು ಇತ್ಯಾದಿಗಳು ಕಂಡುಬಂದಲ್ಲಿ ಅವರ ಮನೆಯಲ್ಲಿಯೇ 14 ದಿನಗಳ ಕಾಲ ವೈದ್ಯಕೀಯ ನಿಗಾ ವಹಿಸಲು ಸೂಚಿಸಲಾಗುತ್ತದೆ. ಅಗತ್ಯವಿದ್ದಲ್ಲಿ ಮಾತ್ರವೇ ಗಂಟಲಿನ ದ್ರವವನ್ನು ಪರೀಕ್ಷೆಗೆ ಸಂಗ್ರಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

14 ದಿನಗಳಲ್ಲಿ ಜ್ವರ, ಶೀತ, ಕೆಮ್ಮು ಸುಧಾರಣೆ ಆಗದೇ ಇದ್ದಲ್ಲಿ, ಆಸ್ಪತ್ರೆಯಲ್ಲಿ 28 ದಿನಗಳ ನಿಗಾದಲ್ಲಿ ಇರಿಸಬೇಕಾಗುತ್ತದೆ. ಈವರೆಗೂ 49 ಪ್ರಯಾಣಿಕರನ್ನು ಈ ರೀತಿ ನಿಗಾದಲ್ಲಿ ಇರಿಸಲು ಸೂಚಿಸಲಾಗಿದ್ದು, 5 ಮಂದಿ 28 ದಿನಗಳ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಇವರಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿಲ್ಲ ಎಂದರು.

ಜಿಲ್ಲೆಯಲ್ಲಿ ಕಟ್ಟೆಚ್ಚರ

ಬೆಂಗಳೂರು ನಗರದಲ್ಲಿ ಕೋವಿಡ್- 19 ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಈಗಾಗಲೇ ಎರಡು ಸಭೆಗಳನ್ನು ನಡೆಸಲಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡಿರುವ ನಿರ್ದೇಶನಗಳಂತೆ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ, ವೈದ್ಯಕೀಯ ಕಾಲೇಜುಗಳು ಹಾಗೂ ಬಂದರು, ವಿಮಾನ ನಿಲ್ದಾಣಗಳ ಅಧಿಕಾರಿಗಳಿಗೆ ಅಗತ್ಯ ತರಬೇತಿ ಹಾಗೂ ಮಾಹಿತಿಯನ್ನು ನೀಡಲಾಗಿದೆ. ಮಂಗಳೂರಿನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಂಬುಲೆನ್ಸ್‌ ನಿಲುಗಡೆ ಮಾಡಲಾಗಿದೆ ಎಂದು ಹೇಳಿದರು.

ಕೊರೊನಾ ಸೋಂಕಿನ ಬಗ್ಗೆ ಸಾರ್ವಜನಿಕರು ಆತಂಕ ಪಡಬೇಕಾಗಿಲ್ಲ. ಬದಲಾಗಿ ಸ್ವಯಂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅಗತ್ಯ. ಕೊರೊನಾ ಭೀತಿಯಿಂದಾಗಿ ನಿತ್ಯ ವಿದೇಶದಿಂದ ಬರುವವರ ಸಂಖ್ಯೆಯಲ್ಲಿ ಬದಲಾವಣೆ ಆದಂತೆ ಕಂಡು ಬರುತ್ತಿಲ್ಲ. ಆದರೆ ದೃಢೀಕೃತ ವೈದ್ಯಕೀಯ ಪ್ರಮಾಣಪತ್ರವನ್ನು ಕೇಳುತ್ತಿರುವುದರಿಂದ ವಿದೇಶಕ್ಕೆ ತೆರಳುತ್ತಿರುವವರ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿದೆ ಎಂದು ತಿಳಿಸಿದರು.

‘ಆಸ್ಪತ್ರೆಗಳಲ್ಲಿ ವಿಶೇಷ ವಾರ್ಡ್‌’

ನಗರದ ಶ್ರೀನಿವಾಸ ವೈದ್ಯಕೀಯ ವಿಜ್ಞಾನ ಕಾಲೇಜು, ಕೆಎಂಸಿ, ಕೆ.ಎಸ್. ಹೆಗ್ಡೆ ಆಸ್ಪತ್ರೆ, ಎಜೆ ಆಸ್ಪತ್ರೆ, ಯೇನೆಪೋಯ ಆಸ್ಪತ್ರೆ, ಫಾದರ್ ಮುಲ್ಲರ್ ಆಸ್ಪತ್ರೆ, ಇಎಸ್‌ಐ ಆಸ್ಪತ್ರೆ ಹಾಗೂ ಕಣಚೂರು ಆಸ್ಪತ್ರೆಗಳಲ್ಲೂ ಕೊರೊನಾಗೆ ಸಂಬಂಧಿಸಿದಂತೆ ಪ್ರತ್ಯೇಕ ವಾರ್ಡ್‌ಗಳನ್ನು ಮೀಸಲಿರಿಸಲಾಗಿದೆ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದರು.

ವೆನ್ಲಾಕ್‌ ಆಸ್ಪತ್ರೆಯಲ್ಲಿ ಪ್ರತ್ಯೇಕ ಬ್ಲಾಕ್ ಮೀಸಲಾಗಿದ್ದು, ಮೂರು ಪುರುಷ ಹಾಗೂ ಮೂವರು ಮಹಿಳಾ ರೋಗಿಗಳಿಗೆ ಪ್ರತ್ಯೇಕ ಆರು ಹಾಸಿಗೆಗಳನ್ನು ಕಾದಿರಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಅಗತ್ಯ ಮಾಹಿತಿಯನ್ನು ಪಡೆಯಬಹುದು ಎಂದರು.

ಜಿಲ್ಲಾಧಿಕಾರಿ ಕಚೇರಿ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್, ವೆನ್ಲಾಕ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನವೀನ್‌ಚಂದ್ರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು