ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋವಿಡ್‌– 19 ‘ರೂಪಾಂತರಿ’ ಮಣಿಸಲು ಆಸ್ಪತ್ರೆಗಳು ಸನ್ನದ್ಧ

ಸಂಧ್ಯಾ ಹೆಗಡೆ
Published 25 ಡಿಸೆಂಬರ್ 2023, 7:15 IST
Last Updated 25 ಡಿಸೆಂಬರ್ 2023, 7:15 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್‌ನ ಉಪತಳಿ ಜೆಎನ್‌1. ಪತ್ತೆಯಾಗಿರುವ ಬೆನ್ನಲ್ಲೇ ಕೇರಳ ರಾಜ್ಯದ ಗಡಿಗೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲ ಆಸ್ಪತ್ರೆಗಳನ್ನು ಸನ್ನದ್ಧಗೊಳಿಸಲಾಗಿದೆ.

ವೈದ್ಯಕೀಯ ಕ್ಷೇತ್ರದ ಹಬ್ ಆಗಿರುವ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಗರಿಷ್ಠ ಸಂಖ್ಯೆಯಲ್ಲಿವೆ. ಆದರೆ, ಬಡವರು ಹೆಚ್ಚು ನಂಬಿಕೊಂಡಿದ್ದು ಸರ್ಕಾರಿ ಆಸ್ಪತ್ರೆಗಳನ್ನೇ. ನಗರದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಂದಲೂ ರೋಗಿಗಳು ಬರುತ್ತಾರೆ.

ಒಂದೊಮ್ಮೆ ಸಾಂಕ್ರಾಮಿಕ ಉಲ್ಬಣಿಸಿದರೆ, ಎಲ್ಲ ಸೌಲಭ್ಯಗಳು ಸ್ಥಳೀಯವಾಗಿ ಲಭ್ಯವಾಗಬೇಕು ಎಂಬ ಕಾರಣಕ್ಕೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಆಮ್ಲಜನಕ ಘಟಕಗಳು, ದ್ರವ ಆಮ್ಲಜನಕ ಘಟಕಗಳು, ಇತರ ಸೌಲಭ್ಯಗಳ ಬಗ್ಗೆ ವಿಶೇಷ ನಿಗಾವಹಿಸಲಾಗಿದೆ ಎಂದು ಜಿಲ್ಲಾ ಆಡಳಿತ ಹೇಳಿದೆ.

ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ವಿವಿಧ ಸಂಘ–ಸಂಸ್ಥೆಗಳ ನೆರವಿನಲ್ಲಿ ಜಿಲ್ಲೆಯಲ್ಲಿ 16 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದ್ದು, ಅವುಗಳ ಒಟ್ಟು ಸಾಮರ್ಥ್ಯ 5,844 ಎಲ್‌ಪಿಎಂ ಆಗಿದೆ. ಇವುಗಳಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ 1,000 ಎಲ್‌ಪಿಎಂ, 930 ಎಲ್‌ಪಿಎಂ ಮತ್ತು 500 ಎಲ್‌ಪಿಎಂನ ಮೂರು ಘಟಕಗಳಿದ್ದರೆ, ಲೇಡಿಗೋಶನ್ ಆಸ್ಪತ್ರೆಯಲ್ಲಿ 500 ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ಘಟಕವಿದೆ. ಇದಲ್ಲದೆ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಮೂಡುಬಿದಿರೆ ತಾಲ್ಲೂಕು ಆಸ್ಪತ್ರೆಗಳಲ್ಲಿ, ಉಳ್ಳಾಲ, ಕಡಬ, ವಿಟ್ಲ, ವಾಮಪದವು ಸಮುದಾಯ ಆಸ್ಪತ್ರೆಗಳಲ್ಲಿ ಬೇರೆ ಬೇರೆ ಸಂಸ್ಥೆಗಳ ಕಾರ್ಪೊರೇಟ್  ಸಾಮಾಜಿಕ ಹೊಣೆಗಾರಿಕೆ ನಿಧಿಯ ನೆರವಿನಲ್ಲಿ ನಿರ್ಮಾಣವಾಗಿರುವ ಆಮ್ಲಜನಕ ಘಟಕಗಳು ಕಾರ್ಯನಿರ್ವಹಿಸುತ್ತಿವೆ.

ಸಿಬ್ಬಂದಿ ಕೊರತೆ: ಆಸ್ಪತ್ರೆಗಳಲ್ಲಿ ಹಾಸಿಗೆ, ಐಸಿಯು ಸಹಿತ ಹಾಸಿಗೆ, ಆಮ್ಲಜನಕ ಘಟಕಗಳು, ಜಂಬೂ ಸಿಲಿಂಡರ್‌ಗಳು ಹೀಗೆ ಎಲ್ಲ ವ್ಯವಸ್ಥೆಗಳಿದ್ದರೂ, ಇವುಗಳ ನಿರ್ವಹಣೆ ಮತ್ತು ರೋಗಿಗಳಿಗೆ ಸೇವೆ ನೀಡಲು ಸಿಬ್ಬಂದಿ ಕೊರತೆ, ಆರೋಗ್ಯ ಇಲಾಖೆಯನ್ನು ಬಹುವಾಗಿ ಕಾಡುತ್ತಿದೆ. ಜಿಲ್ಲೆಯಲ್ಲಿ ಮಂಜೂರು ಇರುವ 992 ಹುದ್ದೆಗಳಲ್ಲಿ 518 ಹುದ್ದೆಗಳು ಖಾಲಿ ಇವೆ. ಸೀಮಿತ ಸಂಖ್ಯೆಯ ಹುದ್ದೆಗಳಿಗೆ ಮಾತ್ರ ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳಲಾಗಿದೆ. ಹಾಲಿ ಇರುವ ಸಿಬ್ಬಂದಿ ಹೆಚ್ಚುವರಿ ಹೊಣೆ ನಿಭಾಯಿಸುತ್ತಿದ್ದಾರೆ.

‘ಒಂದೊಮ್ಮೆ ಕೋವಿಡ್‌ ಪ್ರಕರಣಗಳು ದಿಢೀರ್ ಹೆಚ್ಚಳವಾದರೆ, ರೋಗಿಗಳಿಗೆ ತ್ವರಿತ ಸೇವೆ ನೀಡಲು ಎಲ್ಲ ಸರ್ಕಾರಿ ಆಸ್ಪತ್ರೆಗಳನ್ನು ಸಜ್ಜುಗೊಳಿಸಲಾಗಿದೆ. ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ಗುಣಮಟ್ಟದ ಸೌಲಭ್ಯ ಹೊಂದಿವೆ. ಅವುಗಳ ಜೊತೆಗೂ ಸಮನ್ವಯ ಸಾಧಿಸಲಾಗಿದೆ. ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಒಂದು ಕೋವಿಡ್ ಪರೀಕ್ಷಾ ಪ್ರಯೋಗಾಲಯ ಇದ್ದು, ಖಾಸಗಿ ವ್ಯವಸ್ಥೆಯಲ್ಲಿ 10 ಪ್ರಯೋಗಾಲಯಗಳು ಇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸದ್ಯ 1,960 ಆರ್‌ಟಿ–ಪಿಸಿಆರ್ ಪರೀಕ್ಷಾ ಕಿಟ್‌ಗಳು ಲಭ್ಯ, ಖಾಸಗಿ ಆಸ್ಪತ್ರೆಗಳಲ್ಲಿ 409 ಆರ್‌ಎಟಿ ಕಿಟ್‌ಗಳು ಲಭ್ಯ ಇವೆ. ಅಗತ್ಯಕ್ಕೆ ತಕ್ಕಂತೆ ಸರ್ಕಾರದಿಂದ ಇನ್ನಷ್ಟು ಪೂರೈಕೆಯಾಗುತ್ತದೆ’ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್‌.ಆರ್. ತಿಮ್ಮಯ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT