ಶುಕ್ರವಾರ, ಜೂನ್ 18, 2021
21 °C
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಹಾಸಿಗೆಗಳು ಶೇ 27ರಷ್ಟು ಮಾತ್ರ ಭರ್ತಿ

ಕೋವಿಡ್: ಜಿಲ್ಲೆಯಲ್ಲಿ ಹಾಸಿಗೆ ಕೊರತೆಯಿಲ್ಲ

ಪ್ರದೀಶ್‌ ಎಚ್‌. ಮರೋಡಿ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೋವಿಡ್ 2 ನೇ ಅಲೆಯ ಅಬ್ಬರಕ್ಕೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆಮ್ಲಜನಕ, ಹಾಸಿಗೆಗಳಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯಕ್ಕೆ ಆ ಸಮಸ್ಯೆ ಇಲ್ಲ. ಜಿಲ್ಲೆಯಲ್ಲಿ ಕೋವಿಡ್‌ ರೋಗಿಗಳಿಗೆ ಕಾಯ್ದಿರಿಸಿದ ಒಟ್ಟು ಹಾಸಿಗೆಗಳಲ್ಲಿ ಶೇ 27ರಷ್ಟು ಮಾತ್ರ ಭರ್ತಿಯಾಗಿವೆ.

ನಗರದ ವೆನ್ಲಾಕ್‌ ಜಿಲ್ಲಾ ಆಸ್ಪತ್ರೆಯಲ್ಲಿ 282 ಹಾಸಿಗೆಗಳನ್ನು ಕೋವಿಡ್‌ ಸೋಂಕಿತರಿಗೆ ಕಾಯ್ದಿರಿಸಿದ್ದು, ಅದರಲ್ಲಿ 179  ಭರ್ತಿಯಾಗಿವೆ. ಇನ್ನು 103 ಉಳಿಕೆಯಾಗಿವೆ. ವಿವಿಧ ತಾಲ್ಲೂಕು ಮತ್ತು ಸಮುದಾಯ ಆಸ್ಪತ್ರೆಗಳಲ್ಲಿ 156 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಕಾಯ್ದಿರಿಸಿದ್ದು, ಅದರಲ್ಲಿ 98 ಭರ್ತಿಯಾಗಿದ್ದು, 58 ಖಾಲಿ ಇವೆ. ಇಎಸ್‌ಐ ಆಸ್ಪತ್ರೆಯಲ್ಲಿ 50 ಹಾಸಿಗೆಗಳು ಲಭ್ಯವಿದ್ದು, ಅದರಲ್ಲಿ 8 ಮಾತ್ರ ಭರ್ತಿಯಾಗಿವೆ. ಮಂಗಳೂರಿನ ಲೇಡಿಗೋಷನ್‌ ಆಸ್ಪತ್ರೆಯಲ್ಲಿ 26 ಹಾಸಿಗೆಗಳು ಕೋವಿಡ್ ರೋಗಿಗಳಿಗೆ ಕಾಯ್ದಿರಿಸಿದ್ದು, 22 ಹಾಸಿಗೆಗಳು ಭರ್ತಿಯಾಗಿವೆ.

ಪುತ್ತೂರು– 34 ಹಾಸಿಗೆ ಮೀಸಲು: ಪುತ್ತೂರಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ 50 ಆಮ್ಲಜನಕ ಸೌಲಭ್ಯದ ಹಾಸಿಗೆ ಸೇರಿದಂತೆ ಒಟ್ಟು 100 ಹಾಸಿಗೆ ಲಭ್ಯವಾಗಿವೆ. ಅದರಲ್ಲಿ 34 ಅನ್ನು ಕೋವಿಡ್‌ ಸೋಂಕಿತರಿಗೆ ಮೀಸಲಿರಿಸಲಾಗಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ 22 ಕೋವಿಡ್ ಸೋಂಕಿತರು ಹಾಗೂ 20 ಇತರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಪುತ್ತೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್‌ ತೆರೆಯಲಾಗಿದ್ದು, ಅಲ್ಲಿ 70 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಪುತ್ತೂರು ಸರ್ಕಾರಿ ಆಸ್ಪತ್ರೆಯಿಂದ 6 ಕೋವಿಡ್ ಸೋಂಕಿತರನ್ನು ಶನಿವಾರ ಕೇರ್‌ ಸೆಂಟರ್‌ಗೆ ಸ್ಥಳಾಂತರಿಸಲಾಗಿದೆ. ಉಳಿದ 64 ಹಾಸಿಗೆಗಳು ಖಾಲಿಯಾಗಿವೆ. ತಾಲ್ಲೂಕಿನಲ್ಲಿ ಕೋವಿಡ್‌ ಸೋಂಕಿತರಿಗೆ ಹಾಸಿಗೆಯ ಕೊರತೆಯಿಲ್ಲ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ ಮಾಹಿತಿ ನೀಡಿದ್ದಾರೆ.

ಬಂಟ್ವಾಳದಲ್ಲಿ 58 ಹಾಸಿಗೆ ಮೀಸಲು: ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ 25 ಸಾಮಾನ್ಯ ಹಾಸಿಗೆ ಮತ್ತು 6 ಐಸಿಯು ಹಾಸಿಗೆ ಕೋವಿಡ್‌ ರೋಗಿಗಳಿಗೆ ಕಾಯ್ದಿರಿಸಲಾಗಿದೆ. ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿ 12 ಆಮ್ಲಜನಕ ಸೌಲಭ್ಯದ ಬೆಡ್‌ ಸೇರಿದಂತೆ ಒಟ್ಟು 27 ಹಾಸಿಗೆ ಮೀಸಲಿರಿಸಲಾಗಿದೆ.

ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಟ್ಟು 30 ಬೆಡ್‌ಗಳು ಲಭ್ಯವಿದ್ದು, ಅದರಲ್ಲಿ 6 ಆಮ್ಲಜನಕ ಸೌಲಬ್ಯದ ಹಾಸಿಗೆ ಸೇರಿದಂತೆ 12 ಅನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಲಾಗಿದೆ.

‘ಬಂಟ್ವಾಳ ತಾಲ್ಲೂಕಿನಲ್ಲಿ ಕೋವಿಡ್‌ ರೋಗಿಗಳಿಗೆ ಹಾಸಿಗೆಯ ಕೊರತೆ ಇಲ್ಲ. ಆಸ್ಪತ್ರೆಗಳಲ್ಲಿ ಮಾತ್ರವಲ್ಲದೆ, ವಾಮದಪದವು, ವಗ್ಗ, ಕಲ್ಲಡ್ಕ, ಫರಂಗಿಪೇಟೆ ಮತ್ತಿತರ 13 ಕಡೆಗಳಲ್ಲಿ ಒಟ್ಟು 238 ಹಾಸಿಗೆ ಸೌಲಭ್ಯ ಹೊಂದಿರುವ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. 1,300ಕ್ಕೂ ಅಧಿಕ ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಇಲಾಖೆಯ ಸಿಬ್ಬಂದಿ ಅವರ ಮೇಲೆ ನಿಗಾ ಇಟ್ಟಿದ್ದಾರೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ತಿಳಿಸಿದ್ದಾರೆ.

ಬೆಳ್ತಂಗಡಿಯಲ್ಲಿ 20 ಹಾಸಿಗೆ ಮೀಸಲು: ಇಲ್ಲಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಒಟ್ಟು 100 ಹಾಸಿಗೆಗಳು ಲಭ್ಯವಿದ್ದು, ಅದರಲ್ಲಿ 50 ಅನ್ನು ಕೋವಿಡ್‌ ಸೋಂಕಿತರಿಗೆ ಮೀಸಲಿಡಲಾಗಿದ್ದು, ಎಲ್ಲವೂ ಆಮ್ಲಜನಕಯುಕ್ತವಾಗಿವೆ. ಆಸ್ಪತ್ರೆಯಲ್ಲಿ ಪ್ರಸ್ತುತ 24 ಕೋವಿಡ್‌ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಧರ್ಮಸ್ಥಳ ಕ್ಷೇತ್ರದ ಸಹಕಾರದಲ್ಲಿ ಉಜಿರೆಯ ಟಿ.ಬಿ.ಕ್ರಾಸ್ ಬಳಿಯಲ್ಲಿ ಕೋವಿಡ್ ಕೇರ್ ಸೆಂಟರ್‌ ತೆರೆಯಲಾಗಿದ್ದು, ಅಲ್ಲಿ 200 ಹಾಸಿಗೆಗಳು ಲಭ್ಯವಿದ್ದು, ಪ್ರಸ್ತುತ 20 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಬೆಳ್ತಂಗಡಿ ತಾಲ್ಲೂಕಿನಲ್ಲಿ ಹೆಚ್ಚುವರಿ ಹಾಸಿಗೆಗಳ ಅಗತ್ಯತೆ ಕಂಡುಬಂದಿಲ್ಲ. ಇನ್ನೂ ಹೆಚ್ಚು ಹಾಸಿಗೆ ಹಾಕಲು ಆಸ್ಪತ್ರೆಯಲ್ಲಿ ಸ್ಥಳದ ಕೊರತೆಯೂ ಇದೆ. ಆಮ್ಲಜನಕದ ಅಗತ್ಯ ಇರುವವರನ್ನು ಮಾತ್ರ ಇಲ್ಲಿರಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಮುಂದೆ ಅಗತ್ಯ ಬಿದ್ದಲ್ಲಿ ಧರ್ಮಸ್ಥಳದ ರಜತಾದ್ರಿ ವಸತಿ ಗೃಹವನ್ನು ನೀಡುವುದಾಗಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದು, ಅಲ್ಲಿ 600 ಹಾಸಿಗೆ ಜೋಡಿಸಲು ಅವಕಾಶವಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು ಶೆಟ್ಟಿ ಹೇಳಿದ್ದಾರೆ.

ಸುಳ್ಯ ತಾಲ್ಲೂಕು ಸಮುದಾಯ ಆಸ್ಪತ್ರೆಯಲ್ಲಿ ಒಟ್ಟು 100 ಹಾಸಿಗೆಗಳು ಲಭ್ಯವಿದ್ದು, ಆ ಪೈಕಿ 50 ಅನ್ನು ಕೋವಿಡ್‌ ಸೋಂಕಿತರಿಗೆ ಕಾಯ್ದಿರಿಸಲಾಗಿದೆ. ಪ್ರಸ್ತುತ 11 ಕೋವಿಡ್‌ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಉಳಿದ ಹಾಸಿಗೆಗಳು ಖಾಲಿಯಾಗಿವೆ.

ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಟ್ಟು 30 ಹಾಸಿಗೆಗಳಿದ್ದು, ಅವುಗಳಲ್ಲಿ 6 ಅನ್ನು ಕೋವಿಡ್‌ ಸೋಂಕಿತರಿಗೆ ಕಾಯ್ದಿರಿಸಲಾಗಿದೆ. ಪ್ರಸ್ತುತ ಎಲ್ಲ ಹಾಸಿಗೆಗಳು ಖಾಲಿ ಇವೆ. ಆಳ್ವಾಸ್‌ ಹೆಲ್ತ್‌ ಸೆಂಟರ್‌ನ ನೇತೃತ್ವದಲ್ಲಿ ಪುರಸಭೆ ಹಾಗೂ ಶಾಸಕರ ವಾರ್‌ರೂಂನ ಸಹಕಾರದಲ್ಲಿ ಸ್ಕೌಟ್ಸ್ ಆಂಡ್‌ ಗೈಡ್ಸ್ ಕನ್ನಡ ಭವನದಲ್ಲಿ ತೆರೆಯಲಾದ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 50 ಹಾಸಿಗೆಗಳು ಲಭ್ಯವಿದ್ದು, ಪ್ರಸ್ತುತ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಳ್ಳಾಲ ಸಮುದಾಯ ಆಸ್ಪತ್ರೆಯಲ್ಲಿ ಒಟ್ಟು 50 ಹಾಸಿಗೆಗಳಿದ್ದು, ಎಲ್ಲವೂ ಆಮ್ಲಜನಕಯುಕ್ತವಾಗಿವೆ.
ಈ ಪೈಕಿ 40 ಹಾಸಿಗೆಗಳನ್ನು
ಕೋವಿಡ್‌ ರೋಗಿಗಳಿಗೆ ಮೀಸಲಿರಿಸಲಾಗಿದೆ. ಪ್ರಸ್ತುತ ಎಲ್ಲವೂ ಖಾಲಿಯಾಗಿವೆ.

ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 30 ಹಾಸಿಗೆಗಳು ಲಭ್ಯವಿದ್ದು, ಅದರಲ್ಲಿ 14 ಹಾಸಿಗೆಗಳನ್ನು ಕೋವಿಡ್‌ ಸೋಂಕಿತರಿಗೆ ಕಾಯ್ದಿರಿಸಲಾಗಿದೆ. ಪ್ರಸ್ತುತ ಐದು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೂರಕ ಮಾಹಿತಿ: ಶಶಿಧರ ರೈ, ಮೋಹನ್‌ ಶ್ರೀಯಾನ್‌, ಮಹಮ್ಮದ್‌ ಅಲಿ, ಗಣೇಶ್‌ ಶಿರ್ಲಾಲು,
ಲೋಕೇಶ್‌ ಪೆರ್ಲಂಪಾಡಿ, ಪ್ರಸನ್ನ ಹೆಗ್ಡೆ, ಮೋಹನ್‌ ಕುತ್ತಾರ್.

‘15 ವೆಂಟಿಲೇಟರ್‌ ವೆನ್ಲಾಕ್‌ಗೆ ಸ್ಥಳಾಂತರ’

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರಿಗೆ ಆಮ್ಲಜನಕ ಸೌಲಭ್ಯದ ಹಾಸಿಗೆಗಳ ಕೊರತೆಯಿಲ್ಲ. ಸದ್ಯದ ಪರಿಸ್ಥಿತಿಗೆ ಬೇಕಾದಷ್ಟು ಐಸಿಯು ಮತ್ತು ವೆಂಟಿಲೇಟರ್‌ ಹಾಸಿಗೆಗಳು ಲಭ್ಯ ಇವೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್‌ ಕುಮಾರ್‌ ಹೇಳಿದ್ದಾರೆ.

‘ಭವಿಷ್ಯದಲ್ಲಿ ಪ್ರಕರಣಗಳು ಹೆಚ್ಚಾದರೆ ಐಸಿಯು ಹಾಗೂ ವೆಂಟಿಲೇಟರ್‌ ಹಾಸಿಗೆಗಳ ಕೊರತೆಯಾಗುವ ಸಾಧ್ಯತೆ ಇದೆ. ಈಗಾಗಲೇ ತಾಲ್ಲೂಕು ಆಸ್ಪತ್ರೆಗಳಲ್ಲಿದ್ದ 15 ವೆಂಟಿಲೇಟರ್‌ ವೆನ್ಲಾಕ್‌ಗೆ ಸ್ಥಳಾಂತರ ಮಾಡಿದ್ದೇವೆ’ ಎಂದು ತಿಳಿಸಿದ್ದಾರೆ.

‘ಮಂಗಳೂರು ನಗರ ವ್ಯಾಪ್ತಿಯಲ್ಲಿ ನಾಲ್ಕು ಕಡೆ ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲಾಗಿದೆ. ಉಜಿರೆಯಲ್ಲಿ ಧರ್ಮಸ್ಥಳ ಕ್ಷೇತ್ರದ ಸಹಕಾರದಲ್ಲಿ ಕೇರ್‌ ಸೆಂಟರ್‌ ಆರಂಭಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಕೋವಿಡ್‌ ಕೇರ್‌ ಸೆಂಟರ್ ಆಗಿ ಪರಿವರ್ತಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.

 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ ರೋಗಿಗಳಿಗೆ ಹಾಸಿಗೆಯ ಕೊರತೆಯಿಲ್ಲ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಸಾಕಷ್ಟು ಹಾಸಿಗೆಗಳು ಲಭ್ಯವಿದೆ.

ಡಾ.ರಾಜೇಂದ್ರ ಕೆ.ವಿ

ಜಿಲ್ಲಾಧಿಕಾರಿ

ಉಸಿರಾಟ ಸಮಸ್ಯೆ ಹೆಚ್ಚಾದರೆ ಆಸ್ಪತ್ರೆಗೆ ದಾಖಲಾಗಬೇಕು. ರೋಗ ಲಕ್ಷಣ ಇಲ್ಲದಿದ್ದರೂ ಆಸ್ಪತ್ರೆಗೆ ದಾಖಲಾಗುವುದರಿಂದ ನೈಜವಾಗಿ ಹಾಸಿಗೆ ಬೇಕಾಗುವವರಿಗೆ ಸಿಗುವುದಿಲ್ಲ.

ಪದ್ಮರಾಜ್‌ ಆರ್‌.

ನೋಟರಿ ವಕೀಲ, ಮಂಗಳೂರು

ಬಹುತೇಕ ಸೋಂಕಿತರು ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದು, ಅಲ್ಲಿ ಹೆಚ್ಚು ಹಣ ವಸೂಲಿ ಮಾಡುತ್ತಿ ರುವುದು ಗಮನಕ್ಕೆ ಬಂದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಹೆಚ್ಚಿಸಬೇಕು.

ಮುನೀರ್ ಕಾಟಿಪಳ್ಳ
ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು