ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಫೋನ್‌ಇನ್| ಡಿಸೆಂಬರ್‌ಗೆ ಕೋವಿಡ್‌ ತಗ್ಗುವ ನಿರೀಕ್ಷೆ: ಕಕ್ಕಿಲ್ಲಾಯ

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಮಂಗಳೂರಿನ ತಜ್ಞ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ
Last Updated 15 ಆಗಸ್ಟ್ 2020, 5:08 IST
ಅಕ್ಷರ ಗಾತ್ರ

ಮಂಗಳೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದಿರುವ ಅಧ್ಯಯನಗಳ ಪ್ರಕಾರ, ಭಾರತದ ಶೇ 40ರಷ್ಟು ಜನರಿಗೆ ಸೋಂಕು ತಗುಲುವ ಸಾಧ್ಯತೆ ಇದೆ. ಅಲ್ಲದೇ, ಕೋವಿಡ್‌ ಸೋಂಕು ಹರಡುವ ಪ್ರಮಾಣ ಡಿಸೆಂಬರ್‌ ವೇಳೆಗೆ ತಗ್ಗಲಿದೆ ಎಂದು ತಜ್ಞ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದರು.

ಕೋವಿಡ್‌ ಸೋಂಕಿನ ಕುರಿತು ‘ಪ್ರಜಾವಾಣಿ’ ಕಚೇರಿಯಲ್ಲಿ ಶುಕ್ರವಾರ ನಡೆದ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಮುಂಬೈ, ದೆಹಲಿ ಸೇರಿದಂತೆ ಕೆಲವು ಬೃಹತ್‌ ನಗರಗಳಲ್ಲಿ ಈಗಾಗಲೇ ಕೋವಿಡ್‌ ಸೋಂಕು ಹರಡುವ ಪ್ರಮಾಣ ತಗ್ಗಿದೆ. ಉಳಿದ ನಗರಗಳಲ್ಲಿ ಮೂರರಿಂದ ನಾಲ್ಕು ತಿಂಗಳಲ್ಲಿ ಸೋಂಕು ಹರಡುವುದು ಕಡಿಮೆಯಾಗಲಿದೆ’ ಎಂದರು.

ಮುನ್ನೆಚ್ಚರಿಕೆ ಮತ್ತು ಜೀವನ ಕ್ರಮದಲ್ಲಿನ ಬದಲಾವಣೆಯ ಮೂಲಕವೇ ಕೊರೊನಾ ವೈರಸ್‌ ಸೋಂಕನ್ನು ಎದುರಿಸುವುದು ಅನಿವಾರ್ಯ. ಸೋಂಕಿತರು ಮತ್ತು ಸೋಂಕಿತರಿಗೆ ಚಿಕಿತ್ಸೆ ನೀಡುವವರು, ಅವರನ್ನು ಸಮೀಪದಿಂದ ಭೇಟಿ ಮಾಡುವವರು ಮಾಸ್ಕ್‌ ಧರಿಸಿದರೆ ಸೋಂಕು ಹರಡುವುದನ್ನು ತಡೆಯಬಹುದು. ಮುಟ್ಟುವ ವಸ್ತುಗಳಿಂದೆಲ್ಲವೂ ಕೋವಿಡ್‌ ಸೋಂಕು ತಗುಲುತ್ತದೆ, ಸೋಂಕಿತರು ಸಮೀಪದಲ್ಲಿ ಹಾದು ಹೋದರೆ ಹಬ್ಬುತ್ತದೆ ಎಂಬುದು ನಿಜವಲ್ಲ ಎಂದು ಸ್ಪಷ್ಟಪಡಿಸಿದರು.

ಲಸಿಕೆಯೇ ಅಂತ್ಯವಲ್ಲ:

ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಜಗತ್ತಿನಲ್ಲಿ ಅತಿ ವೇಗದಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಕೆಲವು ಲಸಿಕೆಗಳು ಈಗಾಗಲೇ ಮಾರುಕಟ್ಟೆ ಪ್ರವೇಶಿಸಿವೆ. ಈವರೆಗೂ ಯಾವುದೇ ನಿಶ್ಚಿತವಾದ ಔಷಧಿ ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಯುತ್ತದೆ ಎಂಬುದು ಸಾಬೀತಾಗಿಲ್ಲ. ಸೋಂಕನ್ನು ಸಂಪೂರ್ಣವಾಗಿ ಗುಣಪಡಿಸುವ ಔಷಧಿಯೂ ದೊರಕಿಲ್ಲ ಎಂದು ಡಾ.ಕಕ್ಕಿಲ್ಲಾಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಿಡುಬು ರೋಗ ತಡೆಯುವ ಲಸಿಕೆಯನ್ನು ಜಗತ್ತಿನ ಎಲ್ಲರಿಗೂ ನೀಡಿ, ನಿಯಂತ್ರಣಕ್ಕೆ ತರಲು 200 ವರ್ಷಗಳು ಬೇಕಾಯಿತು. ಪೊಲಿಯೋ ನಿಯಂತ್ರಣ ಲಸಿಕೆಯನ್ನು ಎಲ್ಲರಿಗೂ ತಲುಪಿಸಲು 75 ವರ್ಷಗಳು ಕಳೆಯಿತು. ಕೊರೊನಾ ವೈರಸ್‌ ಸೋಂಕು ತಡೆಯುವ ಲಸಿಕೆ ಬಂದರೂ ಜಗತ್ತಿನ ಎಲ್ಲರಿಗೂ ತಲುಪಲು ಹಲವು ವರ್ಷಗಳು ಬೇಕಾಗುತ್ತದೆ. ಯಾವ ಲಸಿಕೆಯೂ ಇಲ್ಲದೆ ಸ್ವಯಂ ರೋಗನಿರೋಧಕ ಶಕ್ತಿಯಿಂದಲೇ ಈ ಸೋಂಕನ್ನು ಎದುರಿಸಬೇಕು. ಅದಕ್ಕೆ ಎಲ್ಲರೂ ಸಿದ್ಧರಾಗಬೇಕು ಎಂದು ಸಲಹೆ ನೀಡಿದರು.

ಕೋವಿಡ್‌ ಸೋಂಕಿತರಲ್ಲಿ ಶೇ 99ರಷ್ಟು ಜನರಿಗೆ ಚಿಕಿತ್ಸೆಯ ಅಗತ್ಯವೇ ಇರುವುದಿಲ್ಲ. ಮಧುಮೇಹ, ಮೂತ್ರಪಿಂಡ ಮತ್ತು ಯಕೃತ್ತಿನ ತೊಂದರೆ, ಹೃದ್ರೋಗ, ಬೊಜ್ಜು, ಕ್ಯಾನ್ಸರ್‌ನಂತಹ ಗಂಭೀರ ಸ್ವರೂಪದ ಅನ್ಯ ಕಾಯಿಲೆಗಳಿಂದ ಬಳಲುತ್ತಿರುವವರು ತೊಂದರೆಗೆ ಸಿಲುಕುತ್ತಾರೆ. ತಕ್ಷಣ ಚಿಕಿತ್ಸೆ ದೊರೆತರೆ ಅವರಲ್ಲಿ ಬಹುಪಾಲು ಜನರು ಗುಣಮುಖರಾಗುತ್ತಾರೆ. ಯಾವುದೇ ಕಾಯಿಲೆಗಳಿಲ್ಲದಿದ್ದರೂ ಕೋವಿಡ್‌ ಸೋಂಕಿತರಾಗಿ ಮೃತರಾಗುತ್ತಿರುವವರ ಸಂಖ್ಯೆ 10 ಲಕ್ಷಕ್ಕೆ ನಾಲ್ಕರಿಂದ ಐದು ಮಾತ್ರ ಎಂದರು.

ಕಷಾಯಗಳಿಂದಲೂ ತೊಂದರೆ ಆಗಬಹುದು: ಕಷಾಯ, ಮನೆಮದ್ದು ಸೇರಿದಂತೆ ಯಾವುದೂ ಕೋವಿಡ್‌ ಸೋಂಕಿಗೆ ಪರಿಹಾರವಲ್ಲ. ನಿರಂತರವಾಗಿ ಕಷಾಯ ಸೇವಿಸುವುದರಿಂದ ಜಠರದ ಉರಿಯೂತ ಹೆಚ್ಚಬಹುದು. ಸಸ್ಯಜನ್ಯ ಅಲ್ಕಾಲಾಯ್ಡ್‌ಗಳಿಂದ ದೇಹಕ್ಕೆ ತೊಂದರೆ ಆಗಬಹುದು ಎಂದು ಡಾ.ಕಕ್ಕಿಲ್ಲಾಯ ಎಚ್ಚರಿಸಿದರು.


‘ವೈದ್ಯಕೀಯ ಕ್ಷೇತ್ರಕ್ಕೆ ಧಕ್ಕೆ’

‘ಕೋವಿಡ್‌ ಸೋಂಕಿನ ಕಾರಣದಿಂದ ವೈದ್ಯಕೀಯ ಕಾಲೇಜುಗಳನ್ನು ಮುಚ್ಚಿರುವುದು ತಪ್ಪು ನಿರ್ಧಾರ. ಇದರಿಂದ ವೈದ್ಯಕೀಯ ಕ್ಷೇತ್ರಕ್ಕೆ ಧಕ್ಕೆಯಾಗಿದೆ. ವಿದ್ಯಾರ್ಥಿಗಳು ಪ್ರಾಯೋಗಿಕ ಜ್ಞಾನ, ಸೋಂಕು ತಡೆ ಪರಿಣತಿ ಪಡೆಯುವ ಅವಕಾಶಗಳಿಂದ ವಂಚಿತರಾಗಿದ್ದಾರೆ’ ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅಭಿಪ್ರಾಯಪಟ್ಟರು.

ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳನ್ನು ಮುಚ್ಚಲೇಬಾರದಿತ್ತು. ಸೋಂಕು ನಿಯಂತ್ರಣದ ಕುರಿತು ನೇರವಾದ ಅನುಭವ ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಬೇಕಿತ್ತು. ಒಂದು ವರ್ಷ ಪ್ರಾಯೋಗಿಕ ಅನುಭವದಿಂದ ವಂಚಿತರಾದ, ಪರೀಕ್ಷೆ ಎದುರಿಸದ ವೈದ್ಯರು ಜನರ ಸೇವೆಗೆ ಬಂದರೆ ಅಪಾಯಗಳೇ ಹೆಚ್ಚು ಎಂದು ಕಳವಳ ವ್ಯಕ್ತಪಡಿಸಿದರು.

ಶಾಲೆ, ಕಾಲೇಜು ತೆರೆಯಲು ಆಗ್ರಹಿಸಿ

ಶಾಲೆ, ಕಾಲೇಜುಗಳನ್ನು ಮುಚ್ಚುವುದರಿಂದ ವಿದ್ಯಾರ್ಥಿ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ‘ಪರೀಕ್ಷೆ ಇಲ್ಲದೆ ಉತ್ತೀರ್ಣರಾದವರು’ ಎಂಬ ಹಣೆಪಟ್ಟಿ ಜೀವನಪರ್ಯಂತ ಅಂಟಿಕೊಳ್ಳುತ್ತದೆ. ಇದರಿಂದ ಉನ್ನತ ಶಿಕ್ಷಣ, ಉದ್ಯೋಗಕ್ಕೆ ತೊಂದರೆ ಆಗುತ್ತದೆ. ತಕ್ಷಣವೇ ಶಾಲಾ, ಕಾಲೇಜು ಆರಂಭಿಸುವಂತೆ ವಿದ್ಯಾರ್ಥಿಗಳು, ಪೋಷಕರು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ಸಲಹೆ ನೀಡಿದರು.

ಔಷಧಿ, ಲಸಿಕೆಗಾಗಿ ಕಾಯುವುದು ಸರಿಯಲ್ಲ. ಹತ್ತು ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು, ಯುವಕರಿಗೆ ಸೋಂಕಿನಿಂದ ತೊಂದರೆ ಆಗುವುದಿಲ್ಲ. ವೈಜ್ಞಾನಿಕ ಅಧ್ಯಯನಗಳನ್ನು ಆಧರಿಸಿ ತೀರ್ಮಾನ ಕೈಗೊಳ್ಳಬೇಕು ಎಂದರು.

ಸ್ವೀಡನ್‌ ಮಾದರಿ ಯಶಸ್ಸು

ಸ್ವೀಡನ್‌ ರಾಷ್ಟ್ರ ಲಾಕ್‌ಡೌನ್‌ ಇಲ್ಲದೇ ಕೋವಿಡ್‌ ಸೋಂಕನ್ನು ಎದುರಿಸುತ್ತಿದೆ. ಅಲ್ಲಿ ಅಪಾಯದಲ್ಲಿರುವವರು, ಮಕ್ಕಳು ಮತ್ತು ವೃದ್ಧರನ್ನು ಪ್ರತ್ಯೇಕಿಸಲಾಗಿದೆ. ಉಳಿದ ಎಲ್ಲವೂ ಮಾಮೂಲಿನಂತೆ ಇದೆ. ಆದರೂ, ಸ್ವೀಡನ್‌ನಲ್ಲಿ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ತಗ್ಗಿದೆ ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT