ಮಂಗಳೂರು: ‘ಫೇಸ್ ಬುಕ್, ವಾಟ್ಸ್ ಆ್ಯಪ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ ಬಿತ್ತುವವರ ಮೇಲೆ ಕ್ರಮ ಕೈಗೊಳ್ಳುತ್ತಿರುವುದು ಒಳ್ಳೆಯದೇ. ಆದರೆ, ಕೋಮುವಾದ ಮತ್ತು ದ್ವೇಷವನ್ನೇ ಬಿತ್ತುವ ಮತಗ್ರಂಥಗಳ ಮೇಲೆ ಕ್ರಮ ಯಾವಾಗ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಕೋಮುವಾದದ ಮೂಲವು ಮತ ಗ್ರಂಥಗಳಲ್ಲೇ ಇದೆ. ‘ಜಿಹಾದ್’ಗೆ ಕರೆ ನೀಡುವ ಮತಗ್ರಂಥ ಕಾಫೀರರನ್ನು ಹೊಡೆಯಿರಿ ಎಂದೂ ಹೇಳುತ್ತದೆ. ಆ ಮತಗ್ರಂಥದ ಮೇಲೆ ಕ್ರಮ ಕೈಗೊಂಡರೆ ಭಾರತದಲ್ಲಿ ಮಾತ್ರವಲ್ಲ ಜಗತ್ತಿನಲ್ಲೇ ಶಾಂತಿ ನೆಲೆಸುತ್ತದೆ’ ಎಂದರು.
‘ಕಾಂಗ್ರೆಸ್ ಮುಖಂಡರು ಮತಬ್ಯಾಂಕ್ ರಾಜಕಾರಣ ಮಾಡಬಾರದು. ಸಮಾಜದಲ್ಲಿ ಶಾಂತಿ ನೆಲೆಸಬೇಕೆಂಬ ನಿಜವಾದ ಕಳಕಳಿ ಅವರಿಗಿದ್ದರೆ, ಮತೀಯ ದ್ವೇಷ ಬಿತ್ತುವ ಮತಗ್ರಂಥಗಳನ್ನು ನಿಷೇಧಿಸಲಿ. ಅವುಗಳು ಜಾಗತಿಕ ಕ್ಷೋಭೆಗೆ, ಭಯೋತ್ಪಾದನೆಗೆ ಎಷ್ಟು ಕೊಡುಗೆ ನೀಡಿವೆ ಎಂದು ವಿಮರ್ಶೆ ಮಾಡಲಿ. ಆಗ ಕೋಮುವಾದಿಗಳು ಯಾರು ಎಂಬ ಸತ್ಯ ಅರ್ಥವಾಗುತ್ತದೆ. ಆ ಸತ್ಯ ಹೇಳುವುದಕ್ಕೆ ಅವರಿಗೆ ಧೈರ್ಯ ಇದೆಯೇ’ ಎಂದು ಪ್ರಶ್ನಿಸಿದರು.
‘ದಾಳಿಕೋರರು ದೇಶದ ದೇವಸ್ಥಾನಗಳ ವಿಶ್ವವಿದ್ಯಾಲಯಗಳ ನಾಶಕ್ಕೆ ಆಧಾರವಾಗಿ ಬಳಸಿದ್ದು ಮತಗ್ರಂಥವನ್ನೇ. ಭಯೋತ್ಪಾದನೆ ನಡೆಸಲು ಆಧಾರವಾಗಿದ್ದು ಮತಗ್ರಂಥವೇ. ಪಹಲ್ಗಾಮ್‌ನಲ್ಲಿ ಕೊಲ್ಲುವುದಕ್ಕೂ ಮತಗ್ರಂಥವನ್ನೇ ಆಧಾರವಾಗಿ ಬಳಸಿದರು. ಅಂತಹ ಮತಗ್ರಂಥದಲ್ಲಿ ಮತೀಯ ದ್ವೇಷವನ್ನು ಉಂಟುಮಾಡುವ ಅಂಶಗಳು ಏನಿವೆ ಎಂದು ವಿಮರ್ಶೆ ಆಗಬೇಕಲ್ಲವೇ. ಮಾನವತೆಯ ವಿರುದ್ಧವಾದ ಸಂಗತಿ ಇದ್ದರೆ, ಅದನ್ನು ತೆಗೆದು ಹಾಕಬೇಕೊ ಬೇಡವೋ’ ಎಂದರು.
ಈ ಕ್ರಮವನ್ನು ಕೈಗೊಳ್ಳಬೇಕಾದುದು ಕೇಂದ್ರ ಸರ್ಕಾರವಲ್ಲವೇ ಎಂಬ ಪ್ರಶ್ನೆಗೆ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡನ್ನೂ ಈ ಬಗ್ಗೆ ಒತ್ತಾಯಿಸುತ್ತೇನೆ’ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಸಾಮರಸ್ಯ ಕಾಪಾಡುವ ಬಗ್ಗೆ ವರದಿ ನೀಡಲು ರಾಜ್ಯಸಭಾ ಸದಸ್ಯ ಸಯ್ಯದ್ ನಾಸಿರ್ ಹುಸೇನ್ ನೇತೃತ್ವದ ನಿಯೋಗ ಭೇಟಿ ನೀಡಿದ ಕುರಿತು ಪ್ರತಿಕ್ರಿಯಿಸಿದ ಸಿ.ಟಿ. ರವಿ, ‘ನಾಸಿರ್ ಹುಸೇನ್ ರಾಜ್ಯಸಭಾ ಚುನಾವಣೆ ಗೆದ್ದಾಗ, ಅವರ ಸಮರ್ಥಕರು ವಿಧಾನ ಸೌಧದಲ್ಲೇ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದರು. ಈ ಬಗ್ಗೆ ನಾಸಿರ್ ಅವರು ಇದುವರೆಗೂ ಸಿಐಡಿ ಪೊಲೀಸರಿಗೆ ಹೇಳಿಕೆ ನೀಡಿಲ್ಲ. ಬೆಂಬಲಿಗರ ಕೃತ್ಯವನ್ನು ಖಂಡಿಸಿಲ್ಲ. ಅವರು ಕೊಡುವ ವರದಿ ಎಷ್ಟು ಪ್ರಮಾಣಿಕವಾಗಿರುತ್ತದೆ ಎಂಬುದೂ ಸಂಶಯದ ವಿಷಯ. ವರದಿ ತಯಾರಿಸಲು ಅವರನ್ನೇ ಕಾಂಗ್ರೆಸ್ ಕಳುಹಿಸಿದ್ದು ಕೂಡಾ ಸಂಶಯ ಮೂಡಿಸಿದೆ’ ಎಂದರು.
‘ಆರ್‌ಸಿಬಿ ವಿಜಯೋತ್ಸವದ ವೇಳೆ 11 ಜನರ ಸಾವಾಗಿದೆ ಎಂದು ಗೊತ್ತಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ದೋಸೆ ತಿನ್ನು ತೆರಳಿದ್ದಾರೆ’ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ರವಿ, ‘ಈ ಆರೋಪ ನಿಜವಾಗಿದ್ದರೆ, ಅದು ಖಂಡಿತಾ ಅಮಾನವೀಯ. ಮಕ್ಕಳ ತಂದೆ ತಾಯಿಯ ಸಂಕಟದ ಅರಿವು ಇಲ್ಲದವರು ಮಾತ್ರ ಈ ರೀತಿ ವರ್ತಿಸುತ್ತಾರೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಆ ಕೆಲಸ ಮಾಡಿದ್ದರೆ, ಭಗವಂತನೂ ಅವರನ್ನು ಕ್ಷಮಿಸಲ್ಲ. ಮಕ್ಕಳನ್ನು ಕಳೆದುಕೊಂಡ ತಂದೆ ತಾಯಿಯ ಹಾಗೂ ಸಮಾಜದ ಶಾಪ ಅವರಿಗೆ ತಟ್ಟುತ್ತದೆ. ಈ ಆರೋಪ ಸುಳ್ಳಾಗಲೀ ಎಂದು ಪ್ರಾರ್ಥಿಸುತ್ತೇನೆ. ಸತ್ಯ ಆಗಿದ್ದರೆ, ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಯೋಗ್ಯರಲ್ಲ. ನಮ್ಮ ರಾಜ್ಯದ ಮುಖ್ಯಮಂತ್ರಿ ಅಷ್ಟು ಹೃದಯಹೀನ ಎಂದು ಒಪ್ಪಿಕೊಳ್ಳಲು ಆಗುತ್ತಿಲ್ಲ’ ಎಂದರು.
ಆರ್‌ಸಿಬಿ ವಿಜಯೋತ್ಸವಕ್ಕೆ ಸಂಬಂಧಿಸಿ ಬೆಂಗಳೂರಿನ ಪೊಲೀಸ್ ಕಮಿಷನರ್ ದಯಾನಂದ್ ಅವರನ್ನು ಅಮಾನತು ಮಾಡಿದ ಕುರಿತು ಪ್ರತಿಕ್ರಿಯಿಸಿದ ರವಿ, ‘ಈ ವಿಜಯೋತ್ಸವ ಆಯೋಜನೆಯಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪಾತ್ರ ಏನೂ ಇಲ್ಲ. ಅವರಿಬ್ಬರು ಖುಷಿ ಪಡಲಿ ಎಂದು ಪೊಲೀಸ್ ಕಮಿಷನರ್ ಅವರೇ ವಿಜಯೋತ್ಸವ ಆಯೋಜನೆ ಮಾಡಿದ್ದರು. ರಾಜಕೀಯ ಲಾಭ ಪಡೆಯುವ ಉದ್ದೇಶ ಇದ್ದುದೂ ಕಮಿಷನರ್ ಅವರಿಗೆ. ಸಿಎಂ ಮತ್ತು ಡಿಸಿಎಂ ಮಕ್ಕಳು ಮೊಮ್ಮಕ್ಕಳು ಆಟಗಾರರ ಜೊತೆ ಸೆಲ್ಫೀ ತೆಗೆದುಕೊಳ್ಳುವ ವ್ಯವಸ್ಥೆಯನ್ನೂ ಅವರೇ ಮಾಡಿದ್ದರು’ ಎಂದು ವ್ಯಂಗ್ಯವಾಗಿ ಹೇಳಿದರು.
ಕಾಲ್ತುಳಿತದಿಂದ ಗಾಯಗೊಂಡವರನ್ನು ಪೊಲಿಸರು ಕೈಯಲ್ಲಿ, ಹೆಗಲಿನಲ್ಲಿ ಹೊತ್ತೊಯ್ದಿದ್ದರು. ಅದೇ ವೇಳೆ ಉಪ ಮುಖ್ಯಮಂತ್ರಿ ಟ್ರೋಫಿ ಎತ್ತಿಕೊಂಡು ಕುಣಿಯುತ್ತಿದ್ದರು. ಜೀವ ರಕ್ಷಣೆಗೆ ಹೋರಾಡುತ್ತಿದ್ದವರು ಈ ದುರಂತಕ್ಕೆ ಹೊಣೆಯೋ. ಅಥವಾ ಅದರ ಲಾಭ ಪಡೆಯಲು ಯತ್ನಿಸಿದವರೋ ಎಂದು ಅವರು ಪ್ರಶ್ನಿಸಿದರು.
’ಆರ್‌ಸಿಬಿ ತಂಡವು ರಜ್ಯದ ತಂಡ ಅಲ್ಲ. ಅದರ ಮಾಲೀಕರೂ ರಾಜ್ಯದವರಲ್ಲ. ಆದರೂ ವಿಜಯೋತ್ಸವ ಆಚರಿಸಿದ್ದಾರೆ ಎಂದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ರಹಸ್ಯವಾಗಿ ಹೂಡಿಕೆ ಮಾಡಿರುವ ಸಂಶಯ ಮೂಡುತ್ತಿದೆ’ ಎಂದರು. ದ್ದಾರೆಯೇ’ ಎಂದು ಸಂಶಯ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.