ಬುಧವಾರ, ಆಗಸ್ಟ್ 4, 2021
28 °C
ಕೊನೆಯ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ

20ನೇ ಪ್ರಕರಣದಲ್ಲೂ ಸೈನೈಡ್‌ ಮೋಹನ್‌ ದೋಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮಹಿಳೆಯರ ಸರಣಿ ಹಂತಕ ಮೋಹನ್‌ಕುಮಾರ್‌ ಅಲಿಯಾಸ್‌ ಸೈನೈಡ್‌ ಮೋಹನ್‌ (57) ವಿರುದ್ಧ ದಾಖಲಾಗಿದ್ದ 20ನೇ ಪ್ರಕರಣದಲ್ಲೂ ಆತ ದೋಷಿ ಎಂದು ನ್ಯಾಯಾಲಯ ಸಾರಿದೆ. ಇದರೊಂದಿಗೆ ಆತನ ವಿರುದ್ಧದ ಎಲ್ಲ ಪ್ರಕರಣಗಳ ವಿಚಾರಣೆ ಅಂತ್ಯಗೊಂಡಿದೆ.

ಯುವತಿಯರನ್ನು ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿ, ಸೈನೈಡ್‌ ನೀಡಿ ಕೊಲೆಗೈದು ಅವರ ಚಿನ್ನಾಭರಣಗಳನ್ನು ದೋಚಿದ ಆರೋಪದ ಮೇಲೆ ಮೋಹನ್‌ ವಿರುದ್ಧ 20 ಪ್ರಕರಣಗಳು ದಾಖಲಾಗಿದ್ದವು. 19 ಪ್ರಕರಣಗಳ ವಿಚಾರಣೆ ಮುಗಿದಿತ್ತು. ನಾಲ್ಕು ಪ್ರಕರಣಗಳಲ್ಲಿ ಮರಣ ದಂಡನೆ ಮತ್ತು 15 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಕಾಸರಗೋಡಿನ 25 ವರ್ಷ ವಯಸ್ಸಿನ ಯುವತಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ಬಾಕಿ ಇತ್ತು. ಈ ಪ್ರಕರಣದ ವಿಚಾರಣೆಯನ್ನು ಶನಿವಾರ ಪೂರ್ಣಗೊಳಿಸಿದ ನಗರದ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶೆ ಪಿ.ಸಯೀದುನ್ನೀಸಾ, ‘ಆಪಾದಿತನು ಯುವತಿಯ ಮೇಲೆ ಅತ್ಯಾಚಾರ ನಡೆಸಿ, ಆಕೆಗೆ ಸೈನೈಡ್‌ ತಿನ್ನಿಸಿ ಕೊಲೆ ಮಾಡಿರುವುದು ಸಾಬೀತಾಗಿದೆ’ ಎಂದು ಪ್ರಕಟಿಸಿದರು. ಶಿಕ್ಷೆಯ ಪ್ರಮಾಣದ ಕುರಿತು ಇದೇ 24ರಂದು ವಿಚಾರಣೆ ನಡೆಯಲಿದೆ.

ಕಾಸರಗೋಡಿನ ಮಹಿಳಾ ಹಾಸ್ಟೆಲ್‌ ಒಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ 25 ವರ್ಷ ವಯಸ್ಸಿನ ಯುವತಿಗೆ 2009ರಲ್ಲಿ ಮೋಹನ್‌ ಪರಿಚಯವಾಗಿತ್ತು. ಆಕೆಯನ್ನು ಮದುವೆ ಆಗುವುದಾಗಿ ನಂಬಿಸಿದ್ದ ಅಪರಾಧಿ, ಮೂರು ಬಾರಿ ಯುವತಿಯ ಮನೆಗೆ ಭೇಟಿನೀಡಿದ್ದ.

2009ರ ಜುಲೈ 8ರಂದು ಸುಳ್ಯದ ದೇವಸ್ಥಾನಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಬಂದಿದ್ದಳು. ಸುಳ್ಯದಿಂದ ಮೋಹನ್‌ ಆಕೆಯನ್ನು ಬೆಂಗಳೂರಿಗೆ ಕರೆದೊಯ್ದಿದ್ದ. ಮೂರು ದಿನಗಳ ಬಳಿಕ ಯುವತಿಯ ಮನೆಯುವರು ಆಕೆಯ ಮೊಬೈಲ್‌ಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ್ದ ಅಪರಾಧಿ, ‘ಆಕೆ ಸ್ನಾನಕ್ಕೆ ಹೋಗಿದ್ದಾಳೆ. ನಾವು ಮದುವೆ ಆಗಿದ್ದೇವೆ. ಶೀಘ್ರದಲ್ಲೇ ಬರುತ್ತೇವೆ’ ಎಂದು ನಂಬಿಸಿದ್ದ ಎಂದು ಪೊಲೀಸರು ಆರೋಪಪಟ್ಟಿಯಲ್ಲಿ ತಿಳಿಸಿದ್ದರು.

ಬೆಂಗಳೂರಿನ ಲಾಡ್ಜ್‌ ಒಂದರಲ್ಲಿ ಕೊಠಡಿ ಬಾಡಿಗೆಗೆ ಪಡೆದು ಯುವತಿಯೊಂದಿಗೆ ಇದ್ದ ಮೋಹನ್‌ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ. 2009ರ ಜುಲೈ 15ರಂದು ಸಮೀಪದ ಬಸ್‌ ನಿಲ್ದಾಣಕ್ಕೆ ಕರೆದೊಯ್ದು ಗರ್ಭ ನಿರೋಧಕ ಮಾತ್ರೆ ಎಂದು ನಂಬಿಸಿ ಸೈನೈಡ್‌ ಗುಳಿಗೆ ನೀಡಿದ್ದ. ಶೌಚಾಲಯಕ್ಕೆ ತೆರಳಿ ಅದನ್ನು ಸೇವಿಸಿದ್ದ ಯುವತಿ ಅಲ್ಲಿಯೇ ಕುಸಿದುಬಿದ್ದಿದ್ದಳು. ಉಪ್ಪಾರಪೇಟೆ ಠಾಣೆ ಪೊಲೀಸರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಳು. ಠಾಣೆಯಲ್ಲಿ ಅಪರಿಚಿತ ಯುವತಿಯ ಸಾವಿನ ಪ್ರಕರಣ ದಾಖಲಾಗಿತ್ತು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.

2009ರ ಅಕ್ಟೋಬರ್‌ನಲ್ಲಿ ಮೋಹನ್‌ನನ್ನು ಪೊಲೀಸರು ಬಂಧಿಸಿದ್ದರು. ಆ ಬಳಿಕ ಸರಣಿ ಹತ್ಯೆಗಳ ಮಾಹಿತಿ ಹೊರಬಿದ್ದಿತ್ತು. ನಂತರ ಮೃತಳ ಸಹೋದರಿ ಪೊಲೀಸರಿಗೆ ದೂರು ನೀಡಿದ್ದರು. ಹಿಂದಿನ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಜುಡಿತ್‌ ಒ.ಎಂ. ಕ್ರಾಸ್ತಾ ಮತ್ತು ಈಗಿನ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಜಯರಾಮ ಶೆಟ್ಟಿ ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ ಪರವಾಗಿ ವಾದಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು