ಸೋಮವಾರ, ಡಿಸೆಂಬರ್ 5, 2022
19 °C
ಕಾಶ್ಮೀರದಲ್ಲಿ ತುಳುನಾಡ ಧ್ವಜ ಹಾರಿಸಿದ ಸಾಹಸಿಗಳಿಗೆ ಸಿಐಎಲ್‌ನಿಂದ ಸನ್ಮಾನ

ಸೈಕಲ್‌ನಲ್ಲಿ 3500 ಕಿ.ಮೀ ಯಾತ್ರೆ ಪೂರೈಸಿದ ತರುಣರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ತರುಣರು ಬೆಳ್ತಂಗಡಿಯಿಂದ ಕಾಶ್ಮೀರದ ಗುಲ್‌ಮಾರ್ಗ್‌ ವರೆಗೆ 3,500 ಕಿ.ಮೀ ದೂರದ ಸೈಕ್ಲಿಂಗ್‌ ಯಾತ್ರೆ ‘ಸಾರ್ಥಕಂ 2022’ ಅನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಈ ಸಾಹಸ ಯಾತ್ರೆಯನ್ನು ಕೈಗೊಂಡ ಬೆಳ್ತಂಗಡಿಯ ಸೈಕ್ಲಿಸ್ಟ್‌ ಜಗದೀಶ್‌ ಕುಲಾಲ್ (24) ಹಾಗೂ ಪಕ್ಷಿಕೆರೆಯ ಶ್ರೀನಿಧಿ ಶೆಟ್ಟಿ 926) ಅವರನ್ನು ಇಲ್ಲಿ ಬುಧವಾರ ಸನ್ಮಾನಿಸಲಾಯಿತು. 

ಸೆಂಟರ್‌ ಫಾರ್‌ ಇಂಟೆಗ್ರೇಟೆಡ್‌ ಲರ್ನಿಂಗ್‌ (ಸಿಐಎಲ್‌) ಸಂಸ್ಥೆಯ ನಂದಗೋಪಾಲ್‌, ‘ಈ ತರುಣರು ಬೆಳ್ತಂಗಡಿಯಿಂದ ಅ.1ರಂದು ಸೈಕಲ್‌ ಯಾತ್ರೆ ಆರಂಭಿಸಿ ಅ.26ರಂದು ಗುಲ್‌ಮಾರ್ಗ್ ತಲುಪಿದ್ದರು. 26 ದಿನಗಳಲ್ಲಿ ಒಟ್ಟು 10 ರಾಜ್ಯಗಳನ್ನು ಕ್ರಮಿಸಿದ್ದಾರೆ. ಪ‍ರಿಸರ ಸಂರಕ್ಷಣೆ ಮತ್ತು ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಯಾತ್ರೆ ಕೈಗೊಂಡಿದ್ದಾರೆ’ ಎಂದು ತಿಳಿಸಿದರು.

ಯಾತ್ರೆಯ ಅನುಭವ ಹಂಚಿಕೊಂಡ ಶ್ರೀನಿಧಿ ಶೆಟ್ಟಿ, ‘ಪ್ರತೀಕೂಲ ಹವಾಮಾನ ನಮಗೆ ಸವಾಲಾಗಿತ್ತು. ಪುಣೆ ತಲುಪಿದಾಗ ಭಾರಿ ಮಳೆಯಾಗುತ್ತಿತ್ತು. ದಾರಿಯೂ ಗೋಚರಿಸುತ್ತಿರಲಿಲ್ಲ. ಗುಜರಾತ್‌ ಮತ್ತು ರಾಜಸ್ಥಾನದಲ್ಲಿ ವಾಯುಮಾಲಿನ್ಯವು ಗರಿಷ್ಠ ಮಟ್ಟದಲ್ಲಿದೆ. ಆದರೆ ಅಲ್ಲಿನ ದೃಶ್ಯಗಳು ನಯನ ಮನೋಹರವಾಗಿವೆ. ಹರಿಯಾಣದಲ್ಲಿ ಶೀತಗಾಳಿಯನ್ನು ಎದುರಿಸಬೇಕಾಯಿತು’ ಎಂದರು. 

‘ಗುಲ್‌ಮಾರ್ಗ್‌ನಲ್ಲಿ ತುಳುನಾಡಿನ ಧ್ವಜವನ್ನು ಹಾಗೂ ರಾಷ್ಟ್ರಧ್ವಜವನ್ನು ಹಾರಿಸಿದೆವು. ಸಮತಟ್ಟಾದ ಪ್ರದೇಶದಲ್ಲಿ ದಿನದಲ್ಲಿ 150ರಿಂದ 180 ಕಿ.ಮೀ ದೂರವನ್ನು ಸೈಕಲ್‌ನಲ್ಲಿ ಕ್ರಮಿಸಿದ್ದೇವೆ. ಕೆಲವೊಂದು ದಿನ 200 ಕಿ.ಮೀ ಪ್ರಯಾಣಿಸಿದ್ದೂ ಇದೆ. ಜಮ್ಮು ಮತ್ತು ಕಾಶ್ಮೀರದ ಕಡಿದಾದ ಪ್ರದೇಶಗಳಲ್ಲಿ ದಿನದಲ್ಲಿ 70 ಕಿ.ಮೀ ಸಾಗುವುದಕ್ಕೂ ಸಾಧ್ಯವಾಗಲಿಲ್ಲ’ ಎಂದು ತಿಳಿಸಿದರು.

ಜಗದೀಶ್ ಕುಲಾಲ್‌, ‘ಯಾತ್ರೆಯ ಉದ್ದಕ್ಕೂ ಸ್ಥಳೀಯ ಆಹಾರವನ್ನೇ ಸೇವಿಸಿದ್ದೇವೆ. ಈ ಯಾತ್ರೆಗೆ ಮೂರು ವರ್ಷಗಳಿಂದ ಸಿದ್ಧತೆ ಮಾಡಿಕೊಂಡಿದ್ದೇವೆ. ಮನಾಲಿ ಲಡಾಖ್‌– ಖಾರ್ದುಂಗ್ ಲಾ ಮೊದಲಾದ  ಎತ್ತರದ ಪ್ರದೇಶಗಳಲ್ಲಿ 500 ಕಿ.ಮೀ ದೂರವನ್ನು 14 ದಿನಗಳಲ್ಲಿ ಕ್ರಮಿಸಿದ್ದೇವೆ’ ಎಂದರು.   

‘ಭವಿಷ್ಯದಲ್ಲಿ ಇನ್ನಷ್ಟು ಸೈಕಲ್ ಯಾತ್ರೆ ಕೈಗೊಳ್ಳುವ ಉದ್ದೇಶ ಹೊಂದಿದ್ದೇವೆ’ ಎಂದರು. 

ಈ ತರುಣರು ಮೈಸೂರಿನ ಏಷ್ಯನ್‌ ಪೇಂಟ್ಸ್‌ ಲಿಮಿಟೆಡ್‌ ಕಂಪನಿಯಲ್ಲಿ ಉತ್ಪಾದನಾ ಅಧಿಕಾರಿಗಳಾಗಿದ್ದಾರೆ.

ಲಯನ್ಸ್ ಜಿಲ್ಲೆ 317ರ ತರುಣ್‌ ಶೆಟ್ಟಿ, ಮಂಗಳೂರು ಬೈಸಿಕಲ್‌ ಕ್ಲಬ್‌ ಅಧ್ಯಕ್ಷ ದಿಜರಾಜ್‌ ನಾಯರ್‌, ಕಾರ್ಡೊಲೈಟ್‌ ಇಂಡಿಯಾ ಕಂಪನಿಯ ದಿವಾಕರ್‌, ಸಿಐಎಲ್‌ನ ಕಾರ್ಯಕಾರಿ ನಿರ್ದೇಶಕಿ ಸಚಿತಾ ನಂದಗೋಪಾಲ್‌ ಮತ್ತಿತರರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.