ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಫಲಿತಾಂಶ| ದಕ್ಷಿಣ ಕನ್ನಡದಲ್ಲಿ ಐವರಿಗೆ ಎರಡನೇ ರ‍್ಯಾಂಕ್‌

Last Updated 18 ಜೂನ್ 2022, 9:12 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಐವರು ವಿದ್ಯಾರ್ಥಿಗಳು ವಿದ್ಯಾರ್ಥಿಗಳು 2021–22ನೇ ಸಾಲಿನ ದ್ವಿತೀಯ ಪಿ.ಯು. ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನಗಳನ್ನು ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳು ಹಾಗೂ ವಾಣಿಜ್ಯ ವಿಭಾಗದಲ್ಲಿ ಮೂವರು ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ.

ಜಿಲ್ಲೆಯು ಈ ಬಾರಿಯ ಫಲಿತಾಂಶದಲ್ಲಿ ರಾಜ್ಯಕ್ಕೇ ಅಗ್ರಸ್ಥಾನದಲ್ಲಿದೆ.

ವಿಜ್ಞಾನ ವಿಭಾಗದಲ್ಲಿ ಸೇಂಟ್‌ ಅಲೋಷಿಯಸ್‌ ಪಿ.ಯು ಕಾಲೇಜಿನ ಇಲ್‌ಹಮ್‌ ಮತ್ತು ಮೂಡುಬಿದಿರೆ ಆಳ್ವಾಸ್‌ ಪಿ.ಯು. ಕಾಲೇಜಿನ ಶ್ರೀಕೃಷ್ಣ ಪೆಜತ್ತಾಯ ಪಿ.ಎಸ್‌. ಅವರು 600ರಲ್ಲಿ 597 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಮೂಡುಬಿದಿರೆಯ ಆಳ್ವಾಸ್‌ ಪಿ.ಯು. ಕಾಲೇಜಿನ ಸಮರ್ಥ್‌ ಜೋಷಿ, ಮಂಗಳೂರು ಕೊಡಿಯಾಲ್‌ಬೈಲಿನ ಸೇಂಟ್ ಅಲೋಷಿಯಸ್‌ ಪಿ.ಯು. ಕಾಲೇಜಿನ ಅನಿಶಾ ಮಲ್ಯ ಹಾಗೂ ಕೊಡಿಯಾಲ್‌ಬೈಲಿನ ಕೆನರಾ ಪಿ.ಯು. ಕಾಲೇಜಿನ ಆಚಲ್‌ ಉಳ್ಳಾಲ್‌ ಅವರು ವಾಣಿಜ್ಯ ವಿಭಾಗದಲ್ಲಿ 600ರಲ್ಲಿ 595 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

‘ಬಿ.ಎಸ್ಸಿ ಕ್ಲಿನಿಕಲ್‌ ಸೈಕಾಲಜಿ ಕಲಿಯುವೆ’

‘ನಾನು ಯಾವುದೇ ರ‍್ಯಾಂಕ್‌ ನಿರೀಕ್ಷೆ ಮಾಡಿರಲಿಲ್ಲ. ದ್ವಿತೀಯ ರ‍್ಯಾಂಕ್‌ ಬಂದಿದ್ದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಬಿ.ಎಸ್ಸಿ ಕ್ಲಿನಿಕಲ್‌ ಸೈಕಾಲಜಿ ವ್ಯಾಸಂಗ ಮಾಡಬೇಕು ಎಂಬುದು ನನ್ನ ಗುರಿ. ನಾನು ಹತ್ತನೇ ತರಗತಿಯಲ್ಲಿರುವಾಗಲೇ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದೇನೆ’ ಎಂದು ಇಲ್‌ಹಮ್‌ ‘ಪ್ರಜಾವಾಣಿ‘ಗೆ ತಿಳಿಸಿದರು.

ಇಲ್‌ಹಮ್‌ ಅವರು ಮಹಮ್ಮದ್‌ ರಫಿಕ್‌ ದಾವೂದ್‌ ಸಾಹೇಬ್ ಮತ್ತು ಮೊಯಿಜತುಲ್‌ ಕುಬ್ರಾ ದಂಪತಿಯ ಪುತ್ರಿ. ಮಹಮ್ಮದ್ ಅವರು ಚೈನ್‌ ಸ್ಟೋರ್‌ನಲ್ಲಿ ವ್ಯವಸ್ಥಾಪಕರು.

ಸೇಂಟ್‌ ಅಲೋಷಿಯಸ್‌ ಪಿ.ಯು ಕಾಲೇಜಿನ ವತಿಯಿಂದ ಇಲ್‌ಹಮ್‌ ಹಾಗೂ ಅವರ ಪೋಷಕರನ್ನು ಅಭಿನಂದಿಸಲಾಯಿತು.

‘ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಕಠಿಣ ಪರಿಶ್ರಮದಿಂದ ಕಾಲೇಜಿನ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದು ಸೇಂಟ್‌ ಅಲೋಷಿಯಸ್‌ ಪಿ.ಯು. ಕಾಲೇಜಿನ ಫಾ.ಕ್ಲಿಫರ್ಡ್‌ ಸಿಕ್ವೇರಾ ತಿಳಿಸಿದರು.

‘ವೈದ್ಯನಾಗಬೇಕು ಎಂಬುದು ನನ್ನಾಸೆ’

‘ರ‍್ಯಾಂಕ್‌ ಬರುವ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. 590ಕ್ಕಿಂತ ಹೆಚ್ಚು ಅಂಕ ಬರಬಹುದು ಎಂದು ಊಹಿಸಿದ್ದೆ. ವೈದ್ಯನಾಗಬೇಕು ಎಂಬುದು ನನ್ನಾಸೆ. ನೀಟ್‌ಗೆ ತಯಾರಿ ನಡೆಸುತ್ತಿದ್ದೇನೆ. ಆಳ್ವಾಸ್‌ ಕಾಲೇಜಿನಲ್ಲಿ ಕಲಿಕಾ ವಾತಾವರಣ ಚೆನ್ನಾಗಿದೆ. ಪಠ್ಯ ವಿಷಯಗಳಿಗೆ ಸಂಬಂಧಿಸಿದ ಸಂದೇಹ ನೀಗಿಸಲು ಗುರುಗಳು ನೆರವಾಗುತ್ತಿದ್ದರು. ಪರೀಕ್ಷೆಗಳನ್ನು ನಡೆಸಿ ನಾವು ಏನು ತಪ್ಪು ಮಾಡುತ್ತಿದ್ದೇವೆ ಎಂಬುದನ್ನು ಮನವರಿಕೆ ಮಾಡಿಸಿ ತಿದ್ದುತ್ತಿದ್ದರು’ ಎಂದು ಶ್ರಿಕೃಷ್ಣ ಪೆಜತ್ತಾಯ ತಿಳಿಸಿದರು.

ಶ್ರೀಕೃಷ್ಣ ಪೆಜತ್ತಾಯ ಅವರು ಸತೀಶ್‌ ಕುಮಾರ್‌ ‍ಪಿ.ಆರ್‌. ಮತ್ತು ಶ್ರೀವಿದ್ಯಾ ಪಿ.ಎಸ್‌ ದಂಪತಿಯ ಪುತ್ರ. ಅವರ ತಂದೆ ಬೆಂಗೂರಿನಲ್ಲಿ ಕೇಟರಿಂಗ್‌ ಉದ್ಯಮಿ.

‘ಯಾವುದೇ ಟ್ಯೂಷನ್‌ ಪಡೆದಿಲ್ಲ’

‘ನಾನು ಯಾವುದೇ ಟ್ಯೂಷನ್‌ಗೆ ಹೋಗಿಲ್ಲ. ಕೆನರಾ ಪಿ.ಯು. ಕಾಲೇಜಿನ ಶಿಕ್ಷಕ ವರ್ಗ ತುಂಬಾ ಉತ್ತಮ ಬೆಂಬಲ ನೀಡಿದ್ದರಿಂದ ಇಷ್ಟು ಅಂಕ ಗಳಿಸಲು ಸಾಧ್ಯವಾಗಿದೆ. ಉತ್ತಮ ಅಂಕ ಬರುವ ನಿರೀಕ್ಷೆ ಇತ್ತು. ನನಗೆ ಕಾರ್ಪೊರೇಟ್‌ ಲಾ ಕಲಿಯುವಾಸೆ. ಬಿ.ಕಾಂ ಎಲ್ಎಲ್‌ಬಿ ವ್ಯಾಸಂಗ ಮಂದುವರಿಸುತ್ತೇನೆ’ ಎಂದು ಸುರತ್ಕಲ್‌ನ ಆಚಲ್‌ ಉಳ್ಳಾಲ್‌ ತಿಳಿಸಿದರು.

ಆಚಲ್‌ ಅವರು ಪ್ರವೀಣ್‌ ಉಳ್ಳಾಲ್‌ ಮತ್ತು ಅರ್ಚನಾ ದಂಪತಿಯ ಪುತ್ರ. ಆಚಲ್‌ ಅವರ ತಾಯಿ ಮೂಲ್ಕಿ ನಾರಾಯಣಗುರು ಪದವಿ ಕಾಲೇಜಿನಲ್ಲಿ ಭೌತವಿಜ್ಞಾನ ಉಪನ್ಯಾಸಕಿ. ತಂದೆ ಪ್ರವಿಣ್‌ ಅವರು ಕಂಪನಿಯೊಂದರಲ್ಲಿ ಸೇಲ್ಸ್‌ ಮತ್ತು ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕರಾಗಿದ್ದಾರೆ.

‘ಆಚಲ್‌ ರ‍್ಯಾಂಕ್‌ ಪಡೆಯುವ ನಿರೀಕ್ಷೆ ಇತ್ತು. ಆತ ತುಂಭಾ ಕಠಿಣ ಪರಿಶ್ರಮ ಹಾಕುತ್ತಿದ್ದ’ ಎಂದು ಕೆನರಾ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಕೆ.ಬಿ.ಲತಾ ಮಹೇಶ್ವರಿ ತಿಳಿಸಿದರು.

‘ಭವಿಷ್ಯದ ಬಗ್ಗೆ ನಿರ್ಧರಿಸಿಲ್ಲ’

‘ರ‍್ಯಾಂಕ್‌ ಬರುತ್ತದೆ ಎಂದು ಭಾವಿಸಿಯೇ ಇರಲಿಲ್ಲ. ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್‌ ಬಂದಿದ್ದು ತುಂಭಾ ಖುಷಿ ಕೊಟ್ಟಿದೆ. ಅಲೋಷಿಯಸ್‌ ಕಾಲೇಜಿನಲ್ಲಿ ಓದಿಗೆ ಉತ್ತಮ ಸಹಕಾರ ಸಿಕ್ಕಿದ್ದರಿಂದ ಇಷ್ಟು ಉತ್ತಮ ಅಂಕ ಗಳಿಸಲು ಸಾಧ್ಯವಾಗಿದೆ. ನಾನು ಭವಿಷ್ಯದ ಬಗ್ಗೆ ನಿರ್ಧರಿಸಿಲ್ಲ. ಬಿ.ಕಾಂ ವ್ಯಾಸಂಗ ಮಾಡುತ್ತೇನೆ. ಮುಂದೇನಾಗಬೇಕೆಂದು ನಂತರ ಯೋಚಿಸುತ್ತೇನೆ‘ ಎಂದು ಅಶೋಕನಗರದ ಅನಿಶಾ ಮಲ್ಯ ‘ಪ್ರಜಾವಾಣಿ‘ಗೆ ತಿಳಿಸಿದರು.

ಅನಿಶಾ ಮಲ್ಯ ಅವರು ಎಂ.ಪಾಂಡುರಂಗ ಮಲ್ಯ ಮತ್ತು ಶಾಂತಲಾ ಮಲ್ಯ ದಂಪತಿಯ ಪುತ್ರಿ. ಅವರ ತಂದೆ ಸಾಫ್ಟ್‌ವೇರ್‌ ಉದ್ಯಮಿಯಾಗಿದ್ದಾರೆ.

‘ಲೆಕ್ಕಪರಿಶೋಧಕನಾಗುವ ಕನಸು’

‘ಲೆಕ್ಕಪರಿಶೋಧಕ (ಸಿ.ಎ) ಆಗಬೇಕು ಎಂಬುದು ನನ್ನ ಕನಸು. ನಿತ್ಯ ಐದು ಗಂಟೆ ಓದುತ್ತಿದ್ದೆ. ಆಳ್ವಾಸ್‌ ಪಿ.ಯು. ಕಾಲೇಜಿನ ಗುರುಗಳು ಹಾಗೂ ಇಲ್ಲಿನ ವಿದ್ಯಾರ್ಥಿನಿಲಯದ ವಾರ್ಡನ್‌ ಕಲಿಕೆಗೆ ತುಂಬಾ ನೆರವಾಗಿದ್ದಾರೆ. 8ನೇ ತರಗತಿಯಿಂದ ಆಳ್ವಾಸ್‌ ವಿದ್ಯಾಸಂಸ್ಥೆಯಲ್ಲಿ ದತ್ತು ವಿದ್ಯಾರ್ಥಿಯಾಗಿ ಕನ್ನಡ ಮಾಧ್ಯಮದಲ್ಲಿ ಕಲಿ‌ಯುತ್ತಿದ್ದೇನೆ. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದಿದ್ದರಿಂದ ಪಿ.ಯು.ಸಿಗೂ ಆಳ್ವಾಸ್‌ ವಿದ್ಯಾಸಂಸ್ಥೆ ನನ್ನನ್ನು ದತ್ತು ಪಡೆದು ವಿದ್ಯಾಭ್ಯಾಸಕ್ಕೆ ನೆರವಾಗಿದೆ’ ಎಂದು ಸಮರ್ಥ್ ತಿಳಿಸಿದರು.

ಸಮರ್ಥ್‌ ಅವರು ವಿಶ್ವನಾಥ ಜೋಷಿ ಮತ್ತು ಜಯಾ ಜೋಷಿ ದಂಪತಿಯ ಪುತ್ರ. ತಂದೆವಿಶ್ವನಾಥ ಜೋಷಿ ಶಿರ್ಸಿ ತಾಲ್ಲೂಕಿನಲ್ಲಿ ಕೃಷಿಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT