ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಕನ್ನಡ | ಭಾರಿ ಮಳೆಗೆ ಮನೆಯ ಗೋಡೆ ಕುಸಿತ: ಒಂದೇ ಕುಟುಂಬದ ನಾಲ್ವರು ಸಾವು

Published 26 ಜೂನ್ 2024, 3:09 IST
Last Updated 26 ಜೂನ್ 2024, 3:09 IST
ಅಕ್ಷರ ಗಾತ್ರ

ಉಳ್ಳಾಲ (ದಕ್ಷಿಣ ಕನ್ನಡ): ಭಾರಿ ಮಳೆಗೆ ತಾಲ್ಲೂಕಿನ ಮುನ್ನೂರು ಗ್ರಾಮದ ಕುತ್ತಾರು ಮದನಿ ನಗರ ಎಂಬಲ್ಲಿ ಪಕ್ಕದ ಮನೆಯ ಗೋಡೆ, ಮನೆಯೊಙದರ ಮೇಲೆ ಕುಸಿದು ನಾಲ್ವರು ಮೃತ ಪಟ್ಟಿದ್ದಾರೆ.

ಅಬೂಬಕ್ಕರ್ ಎಂಬವರಿಗೆ ಸಂಬಂಧಿಸಿದ ಕಟ್ಟಡದ ಆವರಣಗೋಡೆಯು ಪಕ್ಕದ ಮನೆಯಲ್ಲಿ ವಾಸ್ತವ್ಯವಿದ್ದ ಯಾಸಿರ್ ಎಂಬುವರ ಮನೆಗೆ ಬುಧವಾರ ಮುಂಜಾನೆ ಕುಸಿದು ಬಿದ್ದಿತ್ತು. ಮನೆಯೊಳಗೆ ಮಲಗಿದ್ದ ಯಾಸಿರ್ (45),ಅವರ ಪತ್ನಿ ಮರಿಯಮ್ಮ(40) ಮಕ್ಕಳಾದ ರಿಯಾನ (11)ಮತ್ತು ರಿಫಾನ (17)ಮೃತರು ಎಂದು ಗೊತ್ತಾಗಿದೆ.

ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೂವರ ಮೃತದೇಹಗಳನ್ನು ಅವಶೇಷಗಳಡಿಯಿಂದ ಸ್ಥಳೀಯರೇ ಹೊರತೆಗೆದರು, ಅಗ್ನಿಶಾಮಕ ಮತ್ತು ತುರದತು ಸೇವಾ ದಳದ ಸಿಬ್ಬಂದಿ ಸ್ಥಳೀಯರ ಜೊತೆ ಎರಡು ಗಂಟೆ ಕಾರ್ಯಾಚರಣೆ ನಡೆಸಿ ಬಾಲಕಿಯ ಮೃತದೇಹವನ್ನು ಹೊರತೆಗೆದರು.

ಯಾಸೀರ್ ಮಂಗಳೂರಿನ ಬಂದರಿನಲ್ಲಿ ಮಡ್ಡಿ ಆಯಿಲ್ ಕೆಲಸ ನಿರ್ವಹಿಸುತ್ತಿದ್ದರು. ದಂಪತಿಯು ರಾತ್ರಿ ಊಟ ಮುಗಿಸಿ ಮನೆಯ ಕೋಣೆಯಲ್ಲಿ ಇಬ್ಬರು ಪುತ್ರಿಯರ ಜೊತೆ ಮಲಗಿದ್ದರು. ರಾತ್ರಿಯಿಡೀ ಮಳೆ ಸುರಿದ ಪರಿಣಾಮ ಆವರಣ ಗೋಡೆ ಹಾಗೂ ಎರಡು ಅಡಿಕೆ ಮರಗಳು ಯಾಸಿರ್ ಅವರ ಮನೆ ಮೇಲೆ ಉರುಳಿಬಿದ್ದಿದ್ದವು..

ಆರು ವರ್ಷಗಳ ಹಿಂದೆ ಮನೆ ಖರೀದಿಸಿದ್ದ ಯಾಸಿರ್ ಅವರು ಮನೆಯನ್ನು ಭೋಗ್ಯಕ್ಕೆ ನೀಡಿದ್ದರು. ಆರು ತಿಂಗಳ ಹಿಂದಷ್ಟೇ ಮನೆಗೆ ವಾಪಸ್ಸಾಗಿದ್ದರು. ಎರಡು ವರ್ಷಗಳ ಹಿಂದೆಯೂ ಮನೆ ಮೇಲೆ ಇದೇ ರೀತಿ ಆವರಣ ಗೋಡೆ ಕುಸಿದಿತ್ತು.

ದಂಪತಿಯ ದೊಡ್ಡಮಗಳು ರಶೀನಾ ಕೇರಳ ಕಡೆಗೆ ವಿವಾಹ ಮಾಡಿಕೊಡಲಾಗಿದ್ದು, ಅವರು ಬಕ್ರೀದ್ ಸಲುವಾಗಿ ತವರುಮನೆಗೆ ಬಂದಿದ್ದರು. ಮಂಗಳವಾರವಷ್ಟೇ ಗಂಡನಮನೆಗೆ ಹಿಂತಿರುಗಿದ್ದರು.

ಜಿಲ್ಲಾದಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT