ಮೂಲ್ಕಿ ತಾಲ್ಲೂಕಿನಲ್ಲಿ ಮೇ ತಿಂಗಳಲ್ಲೇ ಗದ್ದೆ ಉಳುಮೆ ಮಾಡಿ ಬೀಜ ಬಿತ್ತನೆ ಮಾಡಿ ಸಸಿ ತಯಾರಿಸುವುದು ವಾಡಿಕೆ. ಇದೀಗ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಮೂಲ್ಕಿ ತಾಲ್ಲೂಕಿನ ಬಹುತೇಕ ಪ್ರದೇಶದಲ್ಲಿ ನಾಟಿ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಮುಂಗಾರು ಹಂಗಾಮಿಯಲ್ಲಿ ಮೂಲ್ಕಿ ತಾಲ್ಲೂಕಿನ ಪಾವಂಜೆ, ಅರಾಂದ್, ತೋಕೂರು, ಬೆಳ್ಳಾಯರು, ಸಸಿಹಿತ್ಲು, ಶಿಮಂತೂರು, ಮಟ್ಟು, ಕಕ್ವ, ಕಿಲ್ಪಾಡಿ, ಮಾನಂಪಾಡಿ, ಐಕಳ, ಏಳಿಂಜೆ, ಪಂಜ-ಕೊಕುಡೆ, ಕೊಡೆತ್ತೂರು, ಅತ್ತೂರು, ಕಿಲೆಂಜೂರು, ಮೆನ್ನಬೆಟ್ಟು, ತಾಳಿಪಾಡಿ, ಕೊಲ್ಲೂರು, ಬಳ್ಕುಂಜೆ, ಕವತ್ತಾರು ಪ್ರದೇಶದಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ತಡವಾಗಿ ಬಂದ ಮಳೆರಾಯನ ಕೃಪೆಯಿಂದ ಈ ಬಾರಿ ಒಳ್ಳೆಯ ಫಸಲಿನ ನಿರೀಕ್ಷೆಯಲ್ಲಿ ಕೃಷಿಕರು ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.