ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡ ಭಾಷೆ ಸಶಕ್ತ, ಶುದ್ಧವಾಗಲಿ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಭುವನೇಶ್ವರಿ ಹೆಗಡೆ ಪ್ರತಿಪಾದನೆ
Published 24 ಮಾರ್ಚ್ 2024, 7:28 IST
Last Updated 24 ಮಾರ್ಚ್ 2024, 7:28 IST
ಅಕ್ಷರ ಗಾತ್ರ

ಮಂಗಳೂರು: ‘ಕೃತಕ ಬುದ್ಧಿಮತ್ತೆಯತ್ತ ಹೆಜ್ಜೆ ಹಾಕುವ ಕಾಲಘಟ್ಟದಲ್ಲಿ ಕನ್ನಡ ಭಾಷೆಗೆ ಎಂತಹ ಸ್ಥಿತಿ ಬಂದೊದಗಿದೆ, ಹೊಸ ಹೊಸ ಮಾಧ್ಯಮಗಳಲ್ಲಿ ಬಳಸುವ ಕನ್ನಡದ ಸ್ವರೂಪ ಹೇಗಿದೆ ಎಂದು ಆತ್ಮಾವಲೊಕನ ಮಾಡಿಕೊಳ್ಳಬೇಕು. ಸಶಕ್ತವಾದ ಶುದ್ಧವಾದ ಕನ್ನಡವನ್ನು ಕಟ್ಟಬೇಕು’ ಎಂದು ಲೇಖಕಿ ಭುವನೇಶ್ವರಿ ಹೆಗಡೆ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ‌ ಆಶ್ರಯದಲ್ಲಿ ಇಲ್ಲಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶನಿವಾರ ಆರಂಭವಾದ ಜಿಲ್ಲೆಯ 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಮ್ಮ ನವಿರು ಹಾಸ್ಯದ ಶೈಲಿಯಲ್ಲಿ ಮಾತನಾಡಿದ ಅವರು ತುಳುನಾಡಿನ ಸಿಟಿಬಸ್‌ಗಳಲ್ಲಿ ಕಂಡ ಕರಾವಳಿಯ ಜನಜೀವನದ ವಿವಿಧ ಆಯಾಮಗಳನ್ನು ವರ್ಣಿಸುತ್ತ ಇಲ್ಲಿನ ಸಾಂಸ್ಕೃತಿಕ ಹಾಗೂ ಬಹು ಭಾಷಾ ಸೌಹಾರ್ದವನ್ನು ಕಟ್ಟಿಕೊಟ್ಟರು. ಇಲ್ಲಿನ ಸಾಂಸ್ಕೃತಿಕ ಬದುಕಿಗೆ ಹಾಗೂ ಅಪ್ಪಟ ಕನ್ನಡ ಭಾಷೆಗೆ ಬುನಾದಿ ಹಾಕಿಕೊಟ್ಟ ಪಂಜೆ ಮಂಗೇಶರಾಯರು, ಕವಿ ಮುದ್ದಣನವರಂತಹ ಮೇಧಾವಿಗಳನ್ನು ಸ್ಮರಿಸಿದರು.

‘ಜಿಲ್ಲೆಯ ಹಿರಿಯರು ಆಧುನಿಕತೆಯನ್ನು ಎಚ್ಚರಿಕೆಯಿಂದ ಸ್ವೀಕರಿಸುತ್ತಲೇ ಪರಂಪರೆಯನ್ನೂ ಜತನವಾಗಿ ಉಳಿಸಿಕೊಂಡಿದ್ದರು. ಹೊರಗಿನಿಂದ ಬಂದವರಿಗೆ ತಮ್ಮ ಬದಿಯಲ್ಲೇ ಸ್ಥಾನ ನೀಡಿದರು. ದಕ್ಷಿಣ ಕನ್ನಡದ ಸಮಾಜ ಎಂದೂ ಮಾನವತೆಯ ವಿರುದ್ಧ ನಿಲ್ಲಲಿಲ್ಲ. ಕವಿ ಕಯ್ಯಾರ ಕಿಂಞಣ್ಣ ರೈ ಅವರ ಐಕ್ಯಗಾನವನ್ನು ಇದಿನಬ್ಬ ಹಾಡಲು ಶುರು ಹಚ್ಚಿಕೊಂಡಾಗ ಅವರಿಗೆ ಕನ್ನಡ ಮೈಮೇಲೆ ಬಂದ ಹಾಗಾಗುತ್ತಿತ್ತು. ಆದರೆ, ಇಂದು ಸಮಸ್ಯೆಯೇ ಇಲ್ಲದ ಕಡೆ‌ ಸಮಸ್ಯೆಗಳನ್ನು ಹುಟ್ಟು ಹಾಕಲಾಗುತ್ತಿದೆ. ಭಿನ್ನಾಭಿಪ್ರಾಯಗಳ ನಡುವೆಯೂ ಸೌಹಾರ್ದವಾಗಿ ಬದುಕುವುದನ್ನು ರೂಢಿಸಿಕೊಳ್ಳುವ ಮೂಲಕ ಈ ಜಿಲ್ಲೆಯ ಪರಂಪರೆಯನ್ನು ಉಳಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಭಾಷೆಯನ್ನು ಲಂಗುಲಗಾಮಿಲ್ಲದೇ ಬಳಸುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ‘‘ಅ’ ಕಾರಕ್ಕೂ ‘ಹ’ ಕಾರಕ್ಕೂ ವ್ಯತ್ಯಾಸವನ್ನೇ ಗೊತ್ತಾಗದ ಸ್ಥಿತಿಯಲ್ಲಿದ್ದೇವೆ. ಎಫ್‌.ಎಂ.ನ ಆರ್‌ಜೆಗಳು ಉಲಿಯುವ ‘ಬಿಂದಾಸ್‌’ ಕನ್ನಡ, ಸೆಲೆಬ್ರಿಟಿಗಳ ‘ಕಂಗ್ಲಿಷ್‌’ ಹಾಗೂ ಮಾಧ್ಯಮಗಳ ಪ್ರಭಾವದಿಂದ ಬಂದ ‘ಪಂಚಿಂಗ್’ ಕನ್ನಡವೇ ಜನರ ಕನ್ನಡ ಆಗಿ ಬಿಟ್ಟಿದೆ. ಗೂಗಲ್‌ ಆಡಳಿತದಲ್ಲಿ ಭಾಷಾ ಅಪಭ್ರಂಶ ಎಗ್ಗಿಲ್ಲದೇ ಮೆರೆಯುತ್ತಿದೆ. ಇವೆಲ್ಲವೂ ಅಪಾಯಕಾರಿ ಬೆಳವಣಿಗೆಗಳು. ಇದ್ದುದರಲ್ಲಿ ಕನ್ನಡವನ್ನು ಕನ್ನಡದಂತೆಯೇ ಬಳಸುತ್ತಿರುವುದು ಪತ್ರಿಕೆಗಳು ಮಾತ್ರ’ ಎಂದರು.

ಸಮ್ಮೇಳನವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್‌ ಜೋಶಿ, ‘ಕನ್ನಡ‌ವನ್ನು ಮಾತೃಭಾಷೆ‌ಯನ್ನಾಗಿ ಹೊಂದಿದವರು ಪುಣ್ಯವಂತರು. ಕನ್ನಡ ಬಾರದವರಿಗೆ ಈ ಭಾಷೆಯನ್ನು ಕಲಿಸಿದರೆ ಇನ್ನಷ್ಟು‌ ಪುಣ್ಯ ಸಂಪಾದನೆ ಆಗುತ್ತದೆ’ ಎಂದರು.

ಕೃತಿಗಳನ್ನು ಬಿಡುಗಡೆ ಮಾಡಿದ ಧರ್ಮದರ್ಶಿ ಹರಿಕೃಷ್ಣ ಪುನರೂರು, ‘ಇಂಗ್ಲಿಷ್ ಮಾಧ್ಯಮ ಶಾಲೆಗಳು ವ್ಯಾಪಾರದ ಸರಕಾಗಿವೆ. ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಮಾಡಲು ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಕಟ್ಟಡ ಹಾಗೂ ಇತರ ಸವಲತ್ತುಗಳನ್ನು ಊರಿನವರೇ ಕಟ್ಟಿಕೊಟ್ಟ ಕನ್ನಡ ಶಾಲೆಗಳಿಗೆ ಶಿಕ್ಷಕರನ್ನು ಒದಗಿಸು ಸ್ಥಿತಿಯಲ್ಲೂ ಸರ್ಕಾರ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಶ್ರಿನಾಥ್‌, ಕೇರಳ ಗಡಿನಾಡ ಘಟಕದ ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಪ್ರದೀಪ ಕುಮಾರ ಕಲ್ಕೂರ, ಕಿನ್ನಿಗೋಳಿ ‘ಯುಗಪುರುಷ’ದ ಭುವನಾಭಿರಾಮ ಉಡುಪ, ಪ್ರದೀಪ ಕುಮಾರ ಕಲ್ಕೂರ ಮತ್ತಿತರರು ಭಾಗವಹಿಸಿದ್ದರು. ಪರಿಷತ್ತಿನ ಕೇಂದ್ರೀಯ ಕಾರ್ಯಕಾರಿ ಸಮಿತಿಯ ಮಾಧವ ಎಂ., ಮಮತಾ ನವೀನ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿನಯ ಆಚಾರ್ಯ ಧನ್ಯವಾದ ಸಮರ್ಪಿಸಿದರು.

ಸಮ್ಮೇಳನದ ಅಂಗವಾಗಿ ಪುಸ್ತಕ ಮಳಿಗೆಗಳನ್ನು ಹಾಗೂ ವಸ್ತುಪ್ರದರ್ಶನ ಮಳಿಗೆಗಳು ವಿಶೇಷ ಆಕರ್ಷಣೆಯಾಗಿದ್ದವು. ನೀತಿ ಸಂಹಿತೆಯ ಕಾರಣಕ್ಕೆ ಕನ್ನಡ ಭುವನೇಶ್ವರಿ ಮೆರವಣಿಗೆ ರದ್ದುಪಡಿಸಲಾಯಿತು.   

ಸಾಹಿತ್ಯ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆ ‘ಸಾಹಿತ್ಯ ಸಿರಿ’ಯನ್ನು ಭುವನೇಶ್ವರಿ ಹೆಗಡೆ ಬಿಡುಗಡೆ ಮಾಡಿದರು. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಎಂ.ಪಿ.ಶ್ರೀನಾಥ್‌ ವೇಣುಗೋಪಾಲ ಶೆಟ್ಟಿ ಹರಿಕೃಷ್ಣ ಪುನರೂರು ಮತ್ತಿತರರು ಭಾಗವಹಿಸಿದ್ದರು  - ಪ್ರಜಾವಾಣಿ ಚಿತ್ರ 
ಸಾಹಿತ್ಯ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆ ‘ಸಾಹಿತ್ಯ ಸಿರಿ’ಯನ್ನು ಭುವನೇಶ್ವರಿ ಹೆಗಡೆ ಬಿಡುಗಡೆ ಮಾಡಿದರು. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಎಂ.ಪಿ.ಶ್ರೀನಾಥ್‌ ವೇಣುಗೋಪಾಲ ಶೆಟ್ಟಿ ಹರಿಕೃಷ್ಣ ಪುನರೂರು ಮತ್ತಿತರರು ಭಾಗವಹಿಸಿದ್ದರು  - ಪ್ರಜಾವಾಣಿ ಚಿತ್ರ 

ಕೃತಿಗಳ ಬಿಡುಗಡೆ

ಉದಯ್‌ ಕುಮಾರ್‌ ಅವರ ‘ಹೊಸ ಓದು ಹೊಸ ನೋಟ’ ಜಯಪ್ರಕಾಶ್ ಪುತ್ತೂರು ಅವರ ‘ದಶಕಗಳ ಸಾಹಿತ್ಯದ ಮೊಗಸಾಲೆಯಲ್ಲಿ’ ರೇಣುಕಾ ಸುಧೀರ್ ಅವರ ‘ಮರುಗದಿರು ಮನವೇ’ ಶಾರದಾ ತುಳುನಾಡು ಅವರ ‘ಕವನಗಳು ಮಾತನಾಡುತ್ತವೆ’ ವಿಜಯಲಕ್ಷ್ಮೀ ಕಟೀಲು ಅವರ ಗಝಲ್ ಸಂಕಲನ ‘ಮನಸಿಜೆಯ ಮಾತು‘ ಜಯಾನಂದ ಕಾಸರಗೋಡು ಅವರ ಕವನ ಸಂಕಲನ ‘ಹಕ್ಕಿಯೊಂದು ಹಾರಿಬಂದು’ ಕುತ್ಯಾಳ ನಾಗಪ್ಪ ಗೌಡ ಅವರ ‘ವ್ಯಾಸಂಗ’ ಕೃತಿಗಳನ್ನು ಮೂಡುಬಿದಿರೆ ವೇಣುಗೋಪಾಲಶೆಟ್ಟಿ ಸಂಪಾದಕತ್ವದಲ್ಲಿ ಸಿದ್ಧವಾದ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ತಿನ ‘ಸಾಹಿತ್ಯ ಸಿರಿ’ ಸ್ಮರಣ ಸಂಚಿಕೆಯನ್ನು ಹಾಗೂಮೂಲ್ಕಿ ತಾಲ್ಲೂಕು ಘಟಕದ ಸಂಚಿಕೆಯನ್ನು ಹರಿಕೃಷ್ಣ ಪುನರೂರು ಬಿಡುಗಡೆ ಮಾಡಿದರು.

‘ಕನ್ನಡ  ಶಾಲೆ ಕಾಯಕಲ್ಪಕ್ಕೆ ಬೇಕಿದೆ ಗ್ಯಾರಂಟಿ’

‘ಕನ್ನಡ ಮಾಧ್ಯಮ ಶಾಲೆಗಳ ಮೂಲಸೌಕರ್ಯ ಉತ್ತಮಪಡಿಸಿ ಗುಣಮಟ್ಟದ ಶಿಕ್ಷಣ ಒದಗಿಸುವ ಮೂಲಕ ಸರ್ಕಾರವು ಕನ್ನಡ ಶಾಲೆಗಳನ್ನು ಬಲಪಡಿಸಬೇಕು. ಕನ್ನಡ ಮಾಧ್ಯಮದ ಶಾಲೆಗಳಿಗೆ ಕಾಯಕಲ್ಪ ನೀಡುತ್ತೇವೆ ಎಂಬ ಗ್ಯಾರಂಟಿಯನ್ನು ಕನ್ನಡಿಗರು ಸರ್ಕಾರದಿಂದ ನಿರೀಕ್ಷಿಸುತ್ತಿದ್ದಾರೆ’ ಎಂದು ಭುವನೇಶ್ವರಿ ಹೆಗಡೆ ಹೇಳಿದರು.  ದಕ್ಷಿಣ ಕನ್ನಡ ಜಿಲ್ಲೆಯ 55 ಕನ್ನಡ ಶಾಲೆಗಳಲ್ಲಿ ಶೂನ್ಯ ದಾಖಲಾತಿ ಆಗಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT