ಮಂಗಳೂರು: ಜುಲೈ ಮೂರನೇ ವಾರದಲ್ಲಿ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸಲು ಶಿಕ್ಷಣ ಇಲಾಖೆ ಭರದ ಸಿದ್ಧತೆ ಆರಂಭಿಸಿದ್ದರೆ, ಶಿಕ್ಷಕರು ವಿದ್ಯಾರ್ಥಿಗಳನ್ನು ಹೊಸ ಮಾದರಿಯ ಪರೀಕ್ಷೆಗೆ ಅಣಿಗೊಳಿಸುವ ಸವಾಲನ್ನು ಎದುರಿಸುತ್ತಿದ್ದಾರೆ.

ಕೋವಿಡ್–19 ಎರಡನೇ ಅಲೆ ಹೆಚ್ಚು ತೀವ್ರವಾಗಿರುವ ಕಾರಣಕ್ಕೆ, ಪರೀಕ್ಷೆಯನ್ನು ಸುಲಭಗೊಳಿಸಲು ಶಿಕ್ಷಣ ಇಲಾಖೆಯು, ಪ್ರತಿ ವರ್ಷಕ್ಕಿಂತ ಭಿನ್ನವಾಗಿ ಈ ಬಾರಿ ಪರೀಕ್ಷೆ ನಡೆಸುತ್ತಿದೆ. ದೀರ್ಘ ಉತ್ತರಗಳ ಬದಲಾಗಿ ಬಹು ಆಯ್ಕೆ ಪ್ರಶ್ನೆಗಳ (ಎಂಸಿಕ್ಯು) ಮೂಲಕ ಮಕ್ಕಳಿಗೆ ಪರೀಕ್ಷೆ ನಡೆಯುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ 32,636 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕೋವಿಡ್ ಕಾರಣಕ್ಕೆ ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳನ್ನು ಕೂರಿಸಿ, ಪರೀಕ್ಷೆ ಬರೆಸಲು ಇಲಾಖೆ ನಿರ್ಧರಿಸಿದೆ. ಹೀಗಾಗಿ, ಹಿಂದೆ 94 ಇದ್ದ ಪರೀಕ್ಷಾ ಕೇಂದ್ರಗಳನ್ನು ಈ ವರ್ಷ 179ಕ್ಕೆ ಏರಿಕೆ ಮಾಡಿದೆ. ಸುಮಾರು 1,600 ಕೊಠಡಿಗಳನ್ನು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನಿಗದಿಪಡಿಸಲಾಗಿದೆ.

‘ಈ ಹಿಂದೆ ಬೇರೆ ಬೇರೆ ಉಪ ಪರೀಕ್ಷೆಗಳನ್ನು ಇದೇ ಮಾದರಿಯಲ್ಲಿ ಬರೆದ ಅನುಭವ ಕೆಲವು ಮಕ್ಕಳಿಗೆ ಇದೆ. ಆದರೆ, ಸಾಮೂಹಿಕವಾಗಿ ಈ ಮಾದರಿಯಲ್ಲಿ ಮಕ್ಕಳು ಪರೀಕ್ಷೆ ಬರೆದಿಲ್ಲ. ಹೀಗಾಗಿ, ಮಾದರಿ ಪ್ರಶ್ನೆಪತ್ರಿಕೆಗಳನ್ನು ಶಾಲಾವಾರು ಹಂಚಿಕೆ ಮಾಡಿ, ವಿದ್ಯಾರ್ಥಿಗಳಿಗೆ ಆದಷ್ಟು ಶೀಘ್ರ ತಲುಪಿಸಲಾಗುತ್ತದೆ. ಪ್ರತಿ ಶಿಕ್ಷಕರಿಗೆ, 10–12 ವಿದ್ಯಾರ್ಥಿಗಳನ್ನು ದತ್ತುಪಡೆದು, ಪರೀಕ್ಷೆಗೆ ಅವರನ್ನು ಅಣಿಗೊಳಿಸುವಂತೆ ಸೂಚಿಸಲಾಗಿದೆ. ಕೋವಿಡ್ ನಿಯಮ ಆಧರಿಸಿ, ಅನುಮತಿ ದೊರೆತರೆ, ಆ ಮಕ್ಕಳನ್ನು ಒಂದೆಡೆ ಸೇರಿಸಿ, ಶಿಕ್ಷಕರು ತಿಳಿಸುತ್ತಾರೆ. ಇಲ್ಲವಾದಲ್ಲಿ ಮಗುವಿನ ಮನೆಗೆ ಖುದ್ದು ಭೇಟಿ ನೀಡುತ್ತಾರೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲೇಸ್ವಾಮಿ ತಿಳಿಸಿದರು.

‘ಒಂದು ವಿಷಯಕ್ಕೆ 40 ಅಂಕ ನಿಗದಿಯಾಗಿರುವುದರಿಂದ ಪ್ರತಿ ಪಾಠದ 30–40 ಪ್ರಶ್ನೆಗಳ ಪ್ರಶ್ನೆಪತ್ರಿಕೆ ಬ್ಯಾಂಕ್ ಸಿದ್ಧಪಡಿಸಿ, ಶಾಲೆಯ ಮುಖ್ಯ ಶಿಕ್ಷಕರಿಗೆ ತಲುಪಿಸಲಾಗುತ್ತದೆ. ಅವರು ಅದನ್ನು ಮಕ್ಕಳಿಗೆ ಹಂಚಿಕೆ ಮಾಡುತ್ತಾರೆ. ಶಿಕ್ಷಕರು ಮಕ್ಕಳ ಜತೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ. ಮೊಬೈಲ್ ಸಂಪರ್ಕಕ್ಕೆ ಸಿಗದವರನ್ನು, ಮಧ್ಯಾಹ್ನದ ಊಟದ ಸಾಮಗ್ರಿ ಸಂಗ್ರಹಿಸಲು ಬರುವ ಪಾಲಕರ ಮೂಲಕ ಸಂಪರ್ಕಿಸಲಾಗುತ್ತದೆ. ಎಂಡ್ರಾಯ್ಡ್ ಮೊಬೈಲ್ ಇದ್ದ ಮಕ್ಕಳ ಜತೆ ವಾಟ್ಸ್ಆ್ಯಪ್, ಗೂಗಲ್ ಮೀಟ್ ಮೂಲಕ ಶಿಕ್ಷಕರು ಮಾತನಾಡುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ಮಕ್ಕಳಿಗೆ ಅನುಕೂಲವಾಗುವಂತೆ 5–6 ಕಿ.ಮೀ ವ್ಯಾಪ್ತಿಯಲ್ಲಿ ಪರೀಕ್ಷಾ ಕೇಂದ್ರ ಇರುವಂತೆ ನೋಡಿಕೊಳ್ಳಲಾಗುತ್ತದೆ. ಒಂದೇ ಶಾಲೆಯಲ್ಲಿ 100ಕ್ಕಿಂತ ಹೆಚ್ಚು ಮಕ್ಕಳು ಇದ್ದರೆ, ಕೊಠಡಿಗಳು ಲಭ್ಯವಿದ್ದಲ್ಲಿ ಅಲ್ಲಿಯೇ ಪರೀಕ್ಷೆ ನಡೆಸಲು ಯೋಚಿಸಲಾಗಿದೆ ಎಂದು ತಿಳಿಸಿದರು.

‘ಕಳೆದ ವರ್ಷಕ್ಕಿಂತ ಸುಮಾರು 2000ದಷ್ಟು ಹೆಚ್ಚು ಮಕ್ಕಳು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. ಪ್ರಸ್ತುತ ಮಕ್ಕಳು ಹೊರ ಜಿಲ್ಲೆಯಲ್ಲಿ ನೆಲೆಸಿದ್ದರೆ, ಅಲ್ಲಿಗೆ ಸಮೀಪದ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಇದೆ. ರಾಜ್ಯದ ಗಡಿಭಾಗದ ಮಕ್ಕಳು ಪರೀಕ್ಷೆಗೆ ಬರಲು ಚೆಕ್ಪೋಸ್ಟ್ನಲ್ಲಿ ವಿನಾಯಿತಿ ನೀಡುವಂತೆ ವಿನಂತಿಸಲಾಗಿದೆ. ಕಳೆದ ಬಾರಿ ಖಾಸಗಿ ಪರೀಕ್ಷಾ ಕೇಂದ್ರಗಳು ಮಂಗಳೂರಿನಲ್ಲಿ ಮಾತ್ರ ಇದ್ದವು. ಈ ಬಾರಿ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಇಲ್ಲಿ ಖಾಸಗಿ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ ಮಾಡಲು ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಜಿಲ್ಲಾ ನೋಡಲ್ ಅಧಿಕಾರಿ ಶಮಂತ್ ವಿವರಿಸಿದರು.

‘ವಿದ್ಯಾರ್ಥಿಗಳ ಸಂಪರ್ಕವೇ ಸವಾಲು’
‘ಇಲಾಖೆ ನಿರ್ಧಾರಕ್ಕೆ ಬದ್ಧರಾಗಿ ಶಿಕ್ಷಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪರೀಕ್ಷಾ ಪದ್ಧತಿ ಬದಲಾಯಿಸಿದ್ದರಿಂದ ಶಿಕ್ಷಕರು, ಪೋಷಕರು, ಮಕ್ಕಳಲ್ಲಿ ಗೊಂದಲ ಇದೆ. ಆಫ್ಲೈನ್ ತರಗತಿಗಳು ಇದ್ದರೆ, ಎಷ್ಟೇ ಕಷ್ಟವಾದರೂ ಮಕ್ಕಳನ್ನು ಅಣಿಗೊಳಿಸುವ ವಿಶ್ವಾಸ ಇರುತ್ತಿತ್ತು. ಈ ಬಾರಿ ಆಫ್ಲೈನ್ನಲ್ಲಿ ಕೇವಲ ಎರಡೂವರೆ ತಿಂಗಳುಗಳು ಮಾತ್ರ ತರಗತಿಗಳು ನಡೆದಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ಡೌನ್ ಅವಧಿ ವಿಸ್ತರಣೆಯಾಗಿರುವ ಕಾರಣ ಈಗ ಮಕ್ಕಳನ್ನು ಸೇರಿಸಲು ಸಾಧ್ಯವಾಗದು. ಆದರೂ ಶಿಕ್ಷಕರು ಉತ್ತಮ ಫಲಿತಾಂಶಕ್ಕೆ ಗರಿಷ್ಠ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಕರ್ನಾಟಕ ಪ್ರೌಢಶಾಲಾ ಸಹಶಿಕ್ಷಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸ್ಟ್ಯಾನಿ ತಾವ್ರೊ ತಿಳಿಸಿದರು.

‘ಶೇ 50ರಷ್ಟು ವಿದ್ಯಾರ್ಥಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಮಂಗಳೂರಿನಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಲ್ಲಿ ಹೆಚ್ಚಿನವರು ಹೊರಜಿಲ್ಲೆಯವರಿದ್ದಾರೆ. ಕಳೆದ ವರ್ಷ ಲಾಕ್ಡೌನ್ ವೇಳೆ ಊರಿಗೆ ಹೋದವರು ತಿರುಗಿ ಬಂದಿಲ್ಲ. ಅವರನ್ನು ಸಂಪರ್ಕಿಸುವುದೇ ಶಿಕ್ಷಕರಿಗೆ ಸವಾಲಾಗಿದೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ವರ್ಚುವಲ್ ಪಾಸ್’ ಅನುತ್ತೀರ್ಣಕ್ಕೆ ಸಮಾನ
‘ಶಿಕ್ಷಣ ಸಚಿವರು, ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಯಾವ ವಿದ್ಯಾರ್ಥಿಯನ್ನೂ ಅನುತ್ತೀರ್ಣ ಮಾಡುವುದಿಲ್ಲ ಎಂದಿದ್ದಾರೆ. ಈ ಹೇಳಿಕೆಯಿಂದ ಶಿಕ್ಷಕರು ಕಷ್ಟ ಅನುಭವಿಸುತ್ತಿದ್ದಾರೆ. ಸಿ+ ಮೇಲಿನ ಅಂಕ ಗಳಿಸಿದವನ್ನು ಮಾತ್ರ ಉತ್ತೀರ್ಣ ಎಂದು ಪರಿಗಣಿಸಲಾಗುತ್ತದೆ. ವರ್ಚುವಲ್ ಪಾಸ್ ಅಂದರೆ ಅನುತ್ತೀರ್ಣಕ್ಕೆ ಸಮಾನ. ಮುಂದಿನ ವಿದ್ಯಾಭ್ಯಾಸಕ್ಕೆ ಹೋಗಲು ಮಾತ್ರ ಅನುಕೂಲ. ಆದರೆ, ಮೌಲ್ಯಾಂಕನದಲ್ಲಿ ಅವರನ್ನು ಅನುತ್ತೀರ್ಣ ಎಂದೇ ಪರಿಗಣಿಸಲಾಗುತ್ತದೆ. ಈ ವಿಷಯ ಪಾಲಕರು, ಮಕ್ಕಳಿಗೆ ಅರಿವಿಲ್ಲ. ಮಕ್ಕಳು ತಾವು ಪಾಸಾಗುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಈ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡುವುದೇ ದೊಡ್ಡ ತಲೆನೋವಾಗಿದೆ’ ಎಂದು ಶಿಕ್ಷಕರೊಬ್ಬರು ಹೇಳಿದರು.

‘ವರ್ಚುವಲ್ ಪಾಸ್ ಅನ್ನು ಅನುತ್ತೀರ್ಣ ಎಂದು ಪರಿಗಣಿಸಿದರೆ, ಜಿಲ್ಲಾವಾರು ರ್ಯಾಂಕಿಂಗ್ನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಿಂದೆ ಬೀಳುವ ಸಾಧ್ಯತೆ ಇದೆ. ಹಿಂದೊಮ್ಮೆ ಪ್ರಶ್ನೆಪತ್ರಿಕೆ ಮಾದರಿ ಬದಲಾದಾಗ ಜಿಲ್ಲೆಗೆ ಈ ಬಿಸಿ ತಟ್ಟಿತ್ತು’ ಎಂದು ಅವರು ನೆನಪಿಸಿದರು.

‘ಪುಸ್ತಕ ಕೇಂದ್ರೀಕೃತ ಓದು’
‘ಪ್ರಶ್ನೆಪತ್ರಿಕೆ ಮಾದರಿ ಮೊದಲಿಗಿಂತ ಹೆಚ್ಚು ಸುಲಭ ಅನ್ನಿಸುತ್ತದೆ. ಹೆಚ್ಚು ಒತ್ತಡವಿಲ್ಲದೆ, ಮಕ್ಕಳು ಓದಬಹುದು. ಆದರೆ, ಎಂಸಿಕ್ಯು ಮಾದರಿ ಆಗಿರುವುದರಿಂದ ನೋಟ್ಸ್ ಬದಲಾಗಿ, ಪಠ್ಯಪುಸ್ತಕವನ್ನು ಕೇಂದ್ರೀಕರಿಸಿ ಓದುತ್ತಿದ್ದೇವೆ. ಶಿಕ್ಷಕರು ಆನ್ಲೈನ್ ಪಾಠ ಮಾಡುತ್ತಿದ್ದಾರೆ. ಸಮರ್ಥವಾಗಿ ಪರೀಕ್ಷೆ ಎದುರಿಸುವ ಆತ್ಮವಿಶ್ವಾಸ ಇದೆ’ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿನಿ ಕೃತಿ ಬಲಂತಿಮೊಗರು ಹೇಳಿದರು.

‘ಕಾರ್ಯತಂತ್ರ ರೂಪಿಸಿ’
ಅವೈಜ್ಞಾನಿಕವಾಗಿ ಶಾಲೆಗಳನ್ನು ಮುಚ್ಚಿ, ಆನ್ಲೈನ್ ಶಿಕ್ಷಣಕ್ಕೆ ಪ್ರಾಯೋಗಿಕವಾಗಿ ಸಿದ್ಧಗೊಂಡಿಲ್ಲದ ಬಹುತೇಕ ಮಕ್ಕಳನ್ನು ಕಳೆದ ವರ್ಷ ಪರೀಕ್ಷೆ ನಡೆಸದೆ 10ನೇ ತರಗತಿಯಲ್ಲಿ ಕೂರಿಸಲಾಗಿದೆ. ಈ ವರ್ಷ ಗೊಂದಲದಲ್ಲೇ ದಿನ ಕಳೆದ ಸರ್ಕಾರ, ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಗೊಳಿಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಮುಂದಾಗಿದೆ. ಮಾದರಿ ಪ್ರಶ್ನೆ ಪತ್ರಿಕೆ ಮತ್ತು ಒಎಂಆರ್ ಮಾದರಿಗಳನ್ನು ಇಲಾಖೆಯ ವೆಬ್ಸೈಟ್ನಲ್ಲಿ ಹಾಕಿ, ಮಕ್ಕಳಿಗೆ ತಲುಪಿಸಲು ಸೂಚಿಸಲಾಗಿದೆಯಾದರೂ, ಹಳ್ಳಿಗಳ ವಿದ್ಯಾರ್ಥಿಗಳಿಗೆ ಇವು ತಲುಪುವುದು ಸುಲಭವಲ್ಲ ಎಂದು ಬರಹಗಾರ ಉಮರ್ ಯು.ಎಚ್ ಪ್ರತಿಕ್ರಿಯಿಸಿದರು.

ಮಾದರಿ ಪ್ರಶ್ನೆ ಪತ್ರಿಕೆ ಎಲ್ಲ ಮಕ್ಕಳಿಗೆ ತಲುಪಬೇಕು. ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಕರೆದು (ಕೋವಿಡ್ ನಿಯಮ ಪಾಲಿಸಿ) ಪ್ರಾಯೋಗಿಕ ಅಭ್ಯಾಸ ಮಾಡಿಸಬೇಕು. ವಿಡಿಯೊ ತುಣುಕುಗಳನ್ನು ಸಿದ್ಧಪಡಿಸಿ, ಸಾಮಾಜಿಕ ಜಾಲತಾಣ, ಚಂದನ ವಾಹಿನಿಯಲ್ಲಿ ಪ್ರಕಟಿಸಬೇಕು. ಸೇವಾನಿರತ ಸಂಸ್ಥೆಗಳು ಸಣ್ಣ ಸಣ್ಣ ಗುಂಪು ಮಕ್ಕಳಿಗೆ ಅಭ್ಯಾಸ, ತರಬೇತಿ ನೀಡುವ ಕಾರ್ಯತಂತ್ರಗಳನ್ನು ರೂಪಿಸಬೇಕು ಎಂದು ಸಲಹೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.