ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಫನ ಭೂಮಿ ದಾಖಲೆಗೆ ಆಗ್ರಹ: ಗ್ರಾ.ಪಂ ಮುಂಭಾಗ ದಲಿತ್ ಸೇವಾ ಸಮಿತಿ ಪ್ರತಿಭಟನೆ

Last Updated 27 ಆಗಸ್ಟ್ 2018, 11:36 IST
ಅಕ್ಷರ ಗಾತ್ರ

ವಿಟ್ಲ: ಪೆರುವಾಯಿ ಗ್ರಾಮದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಇರುವ ದಫನ ಭೂಮಿಗೆ ದಾಖಲೆಪತ್ರ ಒದಗಿಸಲು ಪೆರುವಾಯಿ ಗ್ರಾಮ ಪಂಚಾಯಿತಿ ಆಡಳಿತ ಅನುಮತಿ ನೀಡದೇ ಇರುವುದನ್ನು ವಿರೋಧಿಸಿ ಹಾಗೂ ತಕ್ಷಣವೇ ಈ ಜಾಗಕ್ಕೆ ನಿರಾಕ್ಷೇಪಣಾ ಪತ್ರ (ಎನ್ಒಸಿ) ನೀಡುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ವತಿಯಿಂದ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ಮಾತನಾಡಿ, ‘ ದಫನ ಭೂಮಿಗೆ ದಾಖಲೆ ಒದಗಿಸುವಂತೆ ನೀಡಿದ ಅರ್ಜಿಗೆ ಇಲ್ಲಿಯ ಅಭಿವೃದ್ಧಿ ಅಧಿಕಾರಿ ಯಾವುದೇ ಸ್ಪಂದನೆ ನೀಡಿಲ್ಲ. ಶಾಸಕರಿಗೆ, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಅಲ್ಲಿಂದ ಸೂಚನೆ ಬಂದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಭೂ ಮಾಲೀಕರ ಜತೆ ಸೇರಿ ಬಡವರಿಗೆ ಅನ್ಯಾಯ ಮಾಡಲಾಗುತ್ತಿದೆ. ಇಲ್ಲಿ ಪ್ರತಿಭಟನೆ ಸೂಚನೆ ನೀಡಿದ್ದರೂ ಸ್ಪಂದನೆ ಸಿಕ್ಕಿಲ್ಲ. ನಿರಕ್ಷೇಪಣಾ ಪತ್ರ ನೀಡದೆ ನಾವು ಈ ಸ್ಥಳದಿಂದ ಹೋಗುವುದಿಲ್ಲ. ಹಿರಿಯ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬರಬೇಕು’ ಎಂದು ಪಟ್ಟು ಹಿಡಿದರು.

ಅಂಬೇಡ್ಕರ್ ಭವನ: ಪ್ರತಿಭಟನಾಕಾರರ ಜತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಲ್ಫ್ ಡಿ’ಸೋಜ ಹಾಗೂ ಅಭಿವೃದ್ಧಿ ಅಧಿಕಾರಿ ಅಶೋಕ್ ಮಾತುಕತೆ ನಡೆಸಿ ‘ಸೂರ್ಯಗಿರಿ ಎಂಬಲ್ಲಿ ಸ್ಮಶಾನಕ್ಕೆ ಎರಡು ಎಕರೆ ಜಾಗ ಕಾಯ್ದಿರಿಸಲಾಗಿದೆ. ಇಲ್ಲಿಯ ರಸ್ತೆ ಹಾಗೂ ಭೂಮಿಯನ್ನು ಸಮತಟ್ಟು ಮಾಡಲಾಗಿದೆ. ಆದರೆ ನವಗ್ರಾಮದ ಅಶ್ವತ್ಥ ಬಳಿಯಲ್ಲಿರುವ ಜಾಗದ ಸಮೀಪ ಸೊಸೈಟಿ, ಆಸ್ಪತ್ರೆ, ಸಾರ್ವಜನಿಕ ಸ್ಥಳ ಇದೆ. ಇಲ್ಲಿ ಅಂಬೇಡ್ಕರ್ ಭವನ, ಕ್ರೀಡಾಂಗಣ ನಿರ್ಮಿಸಲು ಕಾಯ್ದಿರಿಸಲಾಗಿದೆ. ಇಲ್ಲಿಯ ಭೂಮಿ ಗ್ರಾಮ ಪಂಚಾಯಿತಿಗೆ ಕಂದಾಯ ಇಲಾಖೆಯಿಂದ ಸ್ಮಶಾನಕ್ಕೆಂದು ಹಸ್ತಾಂತರವಾಗಿಲ್ಲ. ಹೀಗಾಗಿ ಎನ್ಒಸಿ ನೀಡಲು ಸಾಧ್ಯವಿಲ್ಲ’ ಎಂದು ಹೇಳಿದರು.

ಪ್ರತಿಭಟನೆಕಾರರು ಅತೃಪ್ತಿ ವ್ಯಕ್ತಪಡಿಸಿದರು. ವಿಟ್ಲ ಎಸ್‌ಐ ಯಲ್ಲಪ್ಪ ಎಸ್ ಅವರ ಸಲಹೆಯಂತೆ ಮಾತನಾಡಿದ ಅಭಿವೃದ್ಧಿ ಅಧಿಕಾರಿ ‘ ಪ್ರತಿಭಟನಾಕಾರರು ಕೇಳುವ ಜಾಗ ಗ್ರಾಮ ಪಂಚಾಯಿತಿ ಅಧೀನದಲ್ಲಿ ಇಲ್ಲ. ಕಂದಾಯ ಇಲಾಖೆ ವಶಕ್ಕೆ ನೀಡಿದ ಬಳಿಕ ಎನ್ಒಸಿ ನೀಡಲಾಗುವುದು. ತಹಶೀಲ್ದಾರರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂಬ ಭರವಸೆಯಂತೆ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.

ದಲಿತ್ ಸೇವಾ ಸಮಿತಿ ಜಿಲ್ಲಾ ಘಟಕ ಅಧ್ಯಕ್ಷೆ ಪ್ರೇಮ ದಡ್ಡಲ್ತಡ್ಕ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೀರ್ತಿ ಕುಮಾರಿ, ಗೌರವಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ, ಜಿಲ್ಲಾ ಸಮಿತಿ‌‌ ಉಪಾಧ್ಯಕ್ಷ ಪ್ರಸಾದ್ ಬೊಳ್ಮಾರ್, ತಾಲ್ಲೂಕು ಅಧ್ಯಕ್ಷ ಸೋಮಪ್ಪ ಸುರುಳಿಮೂಲೆ, ಗೌರವ ಸಲಹೆಗಾರ ಮೋಹನದಾಸ ವಿಟ್ಲ, ಜಿಲ್ಲಾ ಸಹ ಸಂಚಾಲಕ ಸಂಕಪ್ಪ ನೆಲ್ಲಿಗುಡ್ಡೆ, ತಾಲ್ಲೂಕು ಉಪಾಧ್ಯಕ್ಷೆ ಪ್ರೇಮ ಬೆದ್ರಕಾಡು, ಜಿಲ್ಲಾ ಜತೆ ಕಾರ್ಯದರ್ಶಿ ಲಲಿತಾ ಸಾಲೆತ್ತೂರು, ನಾರಾಯಣ ಪೆರುವಾಯಿ, ಕೃಷ್ಣ ನಾಯ್ಕ ಪೆರುವಾಯಿ, ಸುರೇಶ್ ಆಲಂಗಾರು, ಕುಶಾಲಪ್ಪ ಮೂಡಂಬೈಲು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT