ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡದೋಣಿ ತಂಗಲು ಪರ್ಯಾಯ ಜಾಗ

ಮೀನುಗಾರರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ
Last Updated 15 ಆಗಸ್ಟ್ 2021, 1:25 IST
ಅಕ್ಷರ ಗಾತ್ರ

ಮಂಗಳೂರು: ಸಾಗರ ಮಾಲಾ ಯೋಜನೆಯಡಿ ಬೆಂಗ್ರೆ ಭಾಗದಲ್ಲಿ ನಡೆಯುತ್ತಿರುವ ಕೋಸ್ಟಲ್ ಬರ್ತ್ ಕಾಮಗಾರಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಶನಿವಾರ ಭೇಟಿ ನೀಡಿ, ಮೀನುಗಾರರ ಸಮಸ್ಯೆ ಆಲಿಸಿದರು.

ಕೋಸ್ಟಲ್ ಬರ್ತ್‌ ಕಾಮಗಾರಿಯು ನಾಡದೋಣಿಗಳ ತಂಗುದಾಣಗಳನ್ನು ಆಕ್ರಮಿಸುತ್ತದೆ. ಮೀನುಗಾರರ ಕೆಲವು ಮನೆಗಳನ್ನು ಪರಿಹಾರ ಇಲ್ಲದೆ ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಆರೋಪಿಸಿ, ಗ್ರಾಮದ ಸಾಂಪ್ರದಾಯಿಕ ಮೀನುಗಾರರು ತಮ್ಮ ದೋಣಿಗಳನ್ನು ಯೋಜನಾ ಪ್ರದೇಶದಲ್ಲಿ ಲಂಗರು ಹಾಕಿ ಫಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘದ ನೇತೃತ್ವದಲ್ಲಿ ಮೂರು ತಿಂಗಳುಗಳಿಂದ ಕಾಮಗಾರಿ ತಡೆ ಹಿಡಿದು, ಮೀನುಗಾರರು ಪ್ರತಿಭಟಿಸುತ್ತಿದ್ದರು.

ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಬೇಡಿಕೆಯಂತೆ ನಾಡದೋಣಿ ತಂಗಲು ನದಿ ದಂಡೆಯಲ್ಲಿ ಪರ್ಯಾಯ ಜಾಗ ಗುರುತಿಸುವಂತೆ ಹಾಗೂ ಅಲ್ಲಿಗೆ ಮೂಲ ಸೌಲಭ್ಯಗಳ ಜೊತೆಗೆ ಬಂದರು ಇಲಾಖೆಯ ಅಧೀನದ ಆ ಜಮೀನನ್ನು ಮೂರು ದಿನಗಳ ಒಳಗೆ ಮೀನುಗಾರಿಕಾ ಇಲಾಖೆಗೆ ಹಸ್ತಾಂತರಿಸಿ ನಾಡದೋಣಿಗಳ ಅಧಿಕೃತ ತಂಗುದಾಣವಾಗಿ ಆದೇಶ ಹೊರಡಿಸುವಂತೆ ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ಗೆ, ಜಿಲ್ಲಾಧಿಕಾರಿ ಸೂಚಿಸಿದರು.

ಮನೆಗಳನ್ನು ಕಳೆದುಕೊಳ್ಳಲಿರುವ ಎಂಟು ಕುಟುಂಬಗಳಿಗೆ ಗ್ರಾಮ ವ್ಯಾಪ್ತಿಯಲ್ಲಿಯೇ ಪುನರ್ವಸತಿ ಒದಗಿಸಲು ಬಂದರು ಹಾಗೂ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಯೋಜನೆಯ ಒಳ ಸೇರಲಿರುವ ಮೀನು ಒಣಗಿಸುವ ಜಾಗದಲ್ಲಿ ವೃತ್ತಿ ನಿರತರಾಗಿದ್ದವರ ಸಮಸ್ಯೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಬೇಕು. ಕೋಸ್ಟಲ್ ಬರ್ತ್‌ನಲ್ಲಿ ಸೃಷ್ಟಿಯಾಗುವ ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡಲು ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕುಡಿಯುವ ನೀರು, ಹಕ್ಕು ಪತ್ರ, ಒಳಚರಂಡಿ ಯೋಜನೆ ಅನುಷ್ಠಾನಕ್ಕೆ ಕ್ರಮಗಳನ್ನು ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಉಪ ವಿಭಾಗಾಧಿಕಾರಿ ಮದನ್ ಕುಮಾರ್, ತಹಶೀಲ್ದಾರ್ ಗುರುಪ್ರಸಾದ್, ಬಂದರು ಇಲಾಖೆಯ ಉಪ ನಿರ್ದೇಶಕ ಮೂರ್ತಿ, ಕಾರ್ಯ ನಿರ್ವಾಹಕ ಅಧಿಕಾರಿ ಸುಜನ್ ಕುಮಾರ್, ಪಣಂಬೂರು ಎಸಿಪಿ ಮಹೇಶ್ ಕುಮಾರ್, ಇನ್‌ಸ್ಪೆಕ್ಟರ್ ಅಜ್ಮತ್ ಅಲಿ, ಮೀನುಗಾರಿಕೆ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಇದ್ದರು.

ಗ್ರಾಮಸ್ಥರ ಪರವಾಗಿ ಫಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘದ ಗೌರವಾಧ್ಯಕ್ಷ ಮುನೀರ್ ಕಾಟಿಪಳ್ಳ, ಅಧ್ಯಕ್ಷ ಅಬ್ದುಲ್ ತಯ್ಯೂಬ್ ಬೆಂಗ್ರೆ, ಪ್ರಮುಖರಾದ ಸಾದಿಕ್, ರಿಯಾಝ್, ಹಿದಾಯತ್, ಖಲೀಲ್ ಬೆಂಗ್ರೆ, ಜಮಾಅತ್ ಉಪಾಧ್ಯಕ್ಷ ಸುಲೈಮಾನ್ ಹಾಜಿ, ಮನಪಾ ಸದಸ್ಯ ಮುನೀಬ್ ಬೆಂಗ್ರೆ, ಡಿವೈಎಫ್‌ಐ ಮುಖಂಡರಾದ ನೌಷದ್ ಬೆಂಗ್ರೆ, ರಿಝ್ವಾನ್ ಬೆಂಗ್ರೆ, ತೌಸೀಫ್, ನಾಸಿರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT