ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಬ್ಬರ್ ತೋಟದ ಮರದಲ್ಲಿ ಕರುವಿನ ಕಳೇಬರ ಪತ್ತೆ: ಚಿರತೆಯ ಕೃತ್ಯವೆಂಬ ಶಂಕೆ

Published 6 ಅಕ್ಟೋಬರ್ 2023, 14:32 IST
Last Updated 6 ಅಕ್ಟೋಬರ್ 2023, 14:32 IST
ಅಕ್ಷರ ಗಾತ್ರ

ಪುತ್ತೂರು: ತಾಲ್ಲೂಕಿನ ಕೆಯ್ಯೂರು ಗ್ರಾಮದ ಕಣಿಯಾರ್ಮಲೆ ರಕ್ಷಿತಾರಣ್ಯ ಸಮೀಪದ ಅತ್ರ್ಯಡ್ಕ ಎಂಬಲ್ಲಿರುವ ರಬ್ಬರ್ ಮರದ ಕೊಂಬೆಯ ನಡುವೆ ನೇತಾಡುತ್ತಿದ್ದ ಸ್ಥಿತಿಯಲ್ಲಿ ದನದ ಕರುವಿನ ಕಳೇಬರ ಪತ್ತೆಯಾಗಿದ್ದು, ಇದು ಚಿರತೆಯ ಕೃತ್ಯ ಇರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

ದನದ ಕರುವನ್ನು ರಬ್ಬರ್ ಮರಕ್ಕೆ ಹೊತ್ತೊಯ್ದ ಕೊಂಬೆಗಳ ನಡುವಿನ ಭಾಗದಲ್ಲಿಟ್ಟ ಕಾಡು ಪ್ರಾಣಿ ಕರುವಿನ ಕೆಲವು ಭಾಗಗಳ ಮಾಂಸವನ್ನು ತಿಂದಿದೆ.

ದನದ ಕರು ನೇತಾಡುತ್ತಿರುವುದನ್ನು ಗಮನಿಸಿದ ರಬ್ಬರ್ ಟ್ಯಾಪಿಂಗ್ ಕಾರ್ಮಿಕರು ರಬ್ಬರ್ ನಿಗಮದ ಕಾರ್ಯನಿರ್ವಹಣಾಧಿಕಾರಿಗೆ, ಅರಣ್ಯ ಇಲಾಖೆ ಮತ್ತು ಅರಣ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.

ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್, ನರಿಮೊಗರು ಉಪ ವಲಯ ಅರಣ್ಯಾಧಿಕಾರಿ ಕುಮಾರಸ್ವಾಮಿ, ಆನೆಗುಂಡಿ ಉಪವಲಯ ಅರಣ್ಯಾಧಿಕಾರಿ ಲೋಕೇಶ್, ಕೆಎಫ್‌ಡಿಸಿಯ ರೇಂಜರ್ ಪ್ರದೀಪ್ ರೈ, ಎಡಿಎಂ ಅರುಣ್, ಸಿಬ್ಬಂದಿ ದೀಪಕ್, ಚಿದಾನಂದ, ಶೀನಪ್ಪ ಪರಿಶೀಲನೆ ನಡೆಸಿ, ಕೊಳ್ತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್., ಗ್ರಾಮ ಪಂಚಾಯಿತಿ ಸದಸ್ಯರ ಉಪಸ್ಥಿತಿಯಲ್ಲಿ ಕಳೇಬರವನ್ನು ದಫನ ಮಾಡಿದ್ದಾರೆ.

ಈ ಘಟನೆಯಿಂದಾಗಿ ಪೆರ್ಲಂಪಾಡಿ, ಕೆಯ್ಯೂರಿನ ರಬ್ಬರ್ ಘಟಕದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಮತ್ತು ಆ ಭಾಗದ ಜನರು ಆತಂಕಗೊಂಡಿದ್ದಾರೆ. ಕಾರ್ಮಿಕರು ಎಚ್ಚರ ವಹಿಸುವಂತೆ ತಿಳಿಸಿದ ರಬ್ಬರ್ ನಿಗಮದ ಅಧಿಕಾರಿಗಳು, ರಬ್ಬರ್ ತೋಟದಲ್ಲಿ ಬೆಳೆದಿರುವ ಪೊದೆಯನ್ನು ವಾರದೊಳಗೆ ಕಡಿಯುವ ಭರವಸೆ ನೀಡಿದ್ದಾರೆ.

ಈ ಭಾಗದಲ್ಲಿ ಚಿರತೆ ಓಡಾಡುತ್ತಿರುವ ದೂರು ಜನರಿಂದ ಬಂದಿಲ್ಲ. ಮುಂದೆ ಇಂಥ ಘಟನೆ ನಡೆದರೆ ಚಿರತೆ ಹಿಡಿಯಲು ಬೋನು ಇರಿಸಲಾಗುವುದು. ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ನರಿಮೊಗರು ಉಪವಲಯ ಅರಣ್ಯಾಧಿಕಾರಿ ಕುಮಾರಸ್ವಾಮಿ ತಿಳಿಸಿದರು.

ಇಳಂತಾಜೆ ನಿವಾಸಿ, ಕೆಯ್ಯೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುರೇಂದ್ರ ರೈ ಅವರ ಮನೆಯ ಸಾಕು ನಾಯಿಯ ಮೇಲೆ ಕಳೆದ ವರ್ಷ ಚಿರತೆ ದಾಳಿ ಮಡಿತ್ತು. ಅತ್ರ್ಯಡ್ಕದ ಸುಬ್ಬಣ್ಣ ಭಟ್ ಎಂಬುವರ ಮನೆಯ ಅಂಗಳಲ್ಲೂ ಚಿರತೆ ಕಾಣಿಸಿಕೊಂಡಿತ್ತು ಎನ್ನುವ ಗ್ರಾಮಸ್ಥರು ಚಿರತೆಯೇ ದನದ ಕರುವನ್ನು ಹೊತ್ತೊಯ್ದಿರಬಹುದೆಂದು ಶಂಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT