ಸೋಮವಾರ, ಆಗಸ್ಟ್ 2, 2021
20 °C
ಕೆಡಿಪಿ ಸಭೆಯಲ್ಲಿ ವ್ಯಾಪಕ ಚರ್ಚೆ– ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್‌ ಪ್ರಸ್ತಾಪ

ಮಂಗಳೂರು: ಬಗೆಹರಿಯದ ಡೀಮ್ಡ್ ಫಾರೆಸ್ಟ್ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಹಕ್ಕುಪತ್ರ ವಿತರಣೆಗೆ ಸಂಬಂಧಿಸಿದಂತೆ ಡೀಮ್ಡ್ ಫಾರೆಸ್ಟ್ ಸಮಸ್ಯೆ ಇರುವ ಬಗ್ಗೆ ಕೆಡಿಪಿ ಸಭೆಯಲ್ಲಿ ಚರ್ಚೆ ನಡೆಯಿತು.

ವಿಷಯ ಪ್ರಸ್ತಾಪಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್‌, ಎರಡು ವರ್ಷ ಕ್ಷೇತ್ರ ವ್ಯಾಪ್ತಿಯಲ್ಲಿ ಹಕ್ಕುಪತ್ರ ಕ್ಕಾಗಿ ಅಲೆದಾಡಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿರಲಿಲ್ಲ. ಮಾರ್ಚ್‌ನಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭ ದಲ್ಲಿ 9 ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದರು. ಆದರೆ ಅರಣ್ಯ ಇಲಾಖೆ ಯಿಂದ ಇನ್ನೂ ಅನುಮತಿ ದೊರಕದೆ ಮೂರು ತಿಂಗಳು ಕಳೆದರೂ ಹಕ್ಕುಪತ್ರ ದೊರಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅರಣ್ಯಾಧಿಕಾರಿ ಡಾ.ಕರಿಕಾಳನ್‌ ಮಾತನಾಡಿ, ಈ ಬಗ್ಗೆ ನಿರಾಕ್ಷೇಪಣಾ ಪತ್ರವನ್ನು ಕೂಡಲೇ ನೀಡುವುದಾಗಿ ಭರವಸೆ ನೀಡಿದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಶಕ್ತಿನಗರದಲ್ಲಿ ಡೀಮ್ಡ್ ಫಾರೆಸ್ಟ್ ಭೂಮಿಯಲ್ಲಿ ಜಿ+3 ವಸತಿ ಸಂಕೀರ್ಣ ನಿರ್ಮಿಸುವುದಾಗಿ ಹೇಳಿ ಹಕ್ಕುಪತ್ರ ವಿತರಿಸಲಾಗಿದ್ದು, ಫಲಾನುಭವಿಗಳಿಗೆ ಉತ್ತರಿಸುವುದೇ ಕಷ್ಟವಾಗಿದೆ. ಅಲ್ಲಿ 930 ಮಂದಿಗೆ ನಿವೇಶನಕ್ಕಾಗಿ ಭೂಮಿಯನ್ನು ಕಾಯ್ದಿರಿಸ ಬೇಕಾಗಿದೆ. ಇದಕ್ಕಾಗಿ ಪಾಲಿಕೆಯಿಂದ 10 ಎಕರೆ ಜಾಗಕ್ಕೆ ಪ್ರತಿಯಾಗಿ ಬೇರೆಡೆ 20 ಎಕರೆ ಜಾಗವನ್ನು ಮೀಸಲಿರಿಸಿದೆ. ಅರಣ್ಯ ಇಲಾಖೆಯಿಂದ ಅದಕ್ಕೆ ಒಪ್ಪಿಗೆ ದೊರಕಿದ ನಂತರ ಅದನ್ನು ಸರ್ಕಾರಕ್ಕೆ ಸಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

‘ಸಮಸ್ಯೆ ಏನಿದೆ? 20 ಎಕರೆ ಜಾಗ ಗುರುತಿಸಿದಾಗ, ಅದು ಯಾರಿಗೆ ಸೇರಿದ್ದು ಎಂಬುದನ್ನು ನೋಡದೇ ಹಸ್ತಾಂತರ ಮಾಡಿದ್ದು ಏಕೆ? ಈಗ ಹೊಸ ಜಾಗದಲ್ಲಿ ಅದೇ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಗುವುದೇ? ಇದು ಅಧಿಕಾರಿಗಳ ತಪ್ಪೋ, ಜನಪ್ರತಿನಿಧಿಗಳ ತಪ್ಪೋ ಎಂಬುದನ್ನು ತಿಳಿಯಬೇಕು’ ಎಂದು ಸಂಸದ ನಳಿನ್‌ಕುಮಾರ್ ಒತ್ತಾಯಿಸಿದರು.

ಗೋಶಾಲೆ– ವಾರದಲ್ಲಿ ವರದಿ ನೀಡಿ: ಜಿಲ್ಲೆಗೊಂದು ಗೋಶಾಲೆ, ತಾಲ್ಲೂಕಿಗೆ ಎರಡು ಗೋಶಾಲೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇವಲ ಎರಡು ತಾಲ್ಲೂಕಿನಲ್ಲಿ ಗೋಶಾಲೆಗೆ ಜಾಗ ಗುರುತಿಸಲಾಗಿದೆ. ಜಿಲ್ಲೆಗೊಂದು ಗೋಶಾಲೆಗೆ ಸಂಬಂಧಿಸಿದಂತೆ ಕಡಬ ತಾಲ್ಲೂಕಿನ ಕೊಯಿಲದಲ್ಲಿ 103 ಎಕರೆ ಜಮೀನು ಗುರುತಿಸಲಾಗಿದೆ. ಉಳಿದ ತಾಲ್ಲೂಕುಗಳಲ್ಲಿ ಗೋಶಾಲೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಾರದಲ್ಲಿ ವರದಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೊಯಿಲದ 103 ಎಕರೆಯಲ್ಲಿ ಎಷ್ಟು ಜಾಗ ಒತ್ತುವರಿಯಾಗಿದೆ ಎಂಬುದನ್ನು ಸ್ಥಳಕ್ಕೆ ಹೋಗಿ ನೋಡಬೇಕು. ಗೋಶಾಲೆ ನಿರ್ಮಿಸಲು ಜಾಗ ಇದೆಯೇ ಎಂಬುದನ್ನು ಖಚಿತಪಡಿಸಬೇಕು ಎಂದು ಮೀನುಗಾರಿಕೆ, ಬಂದರು ಖಾತೆ ಸಚಿವ ಎಸ್‌. ಅಂಗಾರ ಸೂಚಿಸಿದರು.

ಪಡುಮಲೆ ಅಭಿವೃದ್ಧಿಗೆ ಕ್ರಮ: ಪಡುಮಲೆಯಲ್ಲಿ ಕೋಟಿ ಚೆನ್ನಯ್ಯರ ಜನ್ಮ ಸ್ಥಳ ಅಭಿವೃದ್ಧಿಗೆ ಐದು ವರ್ಷಗಳ ಹಿಂದೆ ₹2 ಕೋಟಿ ಅನುದಾನ ಬಿಡುಗಡೆ ಆಗಿದ್ದು, ಈವರೆಗೂ ಖರ್ಚು ಮಾಡಿಲ್ಲ ಎಂದು ಶಾಸಕ ಸಂಜೀವ ಮಠಂದೂರು ಅಸಮಾಧಾನ ವ್ಯಕ್ತಪಡಿಸಿದರು.

₹8 ಕೋಟಿ ವೆಚ್ಚದಲ್ಲಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ಅನುದಾನ ಮಂಜೂ ರಾಗಿದ್ದರೂ ಕ್ರಮ ಆಗಿಲ್ಲ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

ಡಾ. ರಾಜೇಂದ್ರ ಕೆ.ವಿ. ಮಾತನಾಡಿ, ಪಡುಮಲೆಯಲ್ಲಿ ಕೋಟಿ ಚೆನ್ನಯರ ಜನ್ಮಸ್ಥಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರದ ಅನುಮೋದನೆ ಪಡೆದು, ಕಾಮಗಾರಿ ಆರಂಭಕ್ಕೆ ಜಿಲ್ಲಾಧಿಕಾರಿ ಹಂತದಲ್ಲಿ ಅವಕಾಶವಿದೆ. ಆ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ: 179 ಪರೀಕ್ಷಾ ಕೇಂದ್ರ

ಎಸ್ಸೆಸ್ಸೆಲ್ಸಿ ಪರೀಕ್ಷೆಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. 179 ಪರೀಕ್ಷಾ ಕೇಂದ್ರಗಳು ಸಿದ್ಧಗೊಂಡಿವೆ. ವಿದ್ಯಾರ್ಥಿಗಳ ಪೋಷಕರೊಂದಿಗೆ ಈಗಾಗಲೇ ದೂರವಾಣಿ ಕರೆ ಮಾಡಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಬಗ್ಗೆ ಖಾತರಿ ಮಾಡಿಕೊಳ್ಳಲಾಗಿದೆ ಎಂದು ಡಿಡಿಪಿಐ ಮಲ್ಲೇಸ್ವಾಮಿ ಹೇಳಿದರು.

ಶನಿವಾರದೊಳಗೆ ಎಲ್ಲ ವಿದ್ಯಾರ್ಥಿಗಳು ತಪಾಸಣೆ ಮಾಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಕೋವಿಡ್–19 ದೃಢಪಟ್ಟಲ್ಲಿ, ಅವರನ್ನು ಕೋವಿಡ್ ಕೇರ್ ಸೆಂಟರ್ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ. ಕೇರಳದಿಂದ ಬರುವ 441 ವಿದ್ಯಾರ್ಥಿಗಳ ಪೈಕಿ 121 ವಿದ್ಯಾರ್ಥಿಗಳು ತಲಪಾಡಿಗೆ ಬರಲಿದ್ದಾರೆ, ಅಲ್ಲಿಂದ ಅವರಿಗೆ ಖಾಸಗಿ ಶಾಲೆಗಳ ಬಸ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸ್ಕೌಟ್ಸ್ ಆಂಡ್ ಗೈಡ್ಸ್‌ನವರು 33 ಸಾವಿರ ಮಾಸ್ಕ್‌ಗಳನ್ನು ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಲು ಅಣಕು ಪ್ರಶ್ನೆಪತ್ರಿಕೆಗಳನ್ನು ನೀಡಿ, ಆ ಮೂಲಕ ಅವರಿಗೆ ಪರೀಕ್ಷೆಗೆ ತಾಲೀಮು ನೀಡುವಂತೆ ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು