ಭಾನುವಾರ, ನವೆಂಬರ್ 27, 2022
27 °C
ಕಾಶಿಕಟ್ಟೆಯಲ್ಲಿ ಮಯೂರವಾಹನನಿಗೆ ಗುರ್ಜಿ ಪೂಜೆ

ಕುಕ್ಕೆ ಸುಬ್ರಹ್ಮಣ್ಯ: ಪಂಚಶಿಖರಗಳ ರಥದಲ್ಲಿ ಉತ್ಸವ, ಬೆಳಗಿದ ಲಕ್ಷ ದೀಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಬ್ರಹ್ಮಣ್ಯ: ಸಾಲು ಸಾಲು ಹಣತೆಗಳ ನಡುವೆ ಕುಕ್ಕೆ ಸುಬ್ರಹ್ಮಣ್ಯ ಲಕ್ಷದೀಪೋತ್ಸವವು ಭಕ್ತಿ-ಸಡಗರದಿಂದ ಬುಧವಾರ ರಾತ್ರಿ ನೆರವೇರಿತು.

ಪಂಚ ಶಿಖರಗಳನ್ನೊಳಗೊಂಡ ಚಂದ್ರಮಂಡಲ ರಥದಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ನಡೆಯಿತು. ದೇವಳದ ಅರ್ಚಕರು ಉತ್ಸವದ ವಿದಿ ವಿಧಾನ ನೆರವೇರಿಸಿದರು. ರಥಬೀದಿಯಿಂದ ಕಾಶಿಕಟ್ಟೆ ತನಕ ಲಕ್ಷ ಹಣತೆ ದೀಪ ಬೆಳಗಲಾಯಿತು. ದೀಪಾಲಂಕಾರ, ಭಕ್ತರ ಘೋಷಗಳು ಮನ ಸೆಳೆಯಿತು.

ದೇವಳದ ಗೋಪುರದಿಂದ ಕಾಶಿಕಟ್ಟೆ ವರೆಗೆ, ಹನುಮಂತಗುಡಿ, ಸವಾರಿ ಮಂಟಪ, ಆದಿಸುಬ್ರಹ್ಮಣ್ಯ, ಬೈಪಾಸ್, ಕುಮಾರಧಾರ ಸೇರಿದಂತೆ ಕ್ಷೇತ್ರಾದ್ಯಂತ ಹಣತೆ ದೀಪ ಬೆಳಗಿತು.

ಈ ಮೊದಲು ಸಂಜೆ ಆದಿ ಸುಬ್ರಹ್ಮಣ್ಯದಲ್ಲಿ ದೀಪಾಂಕೃತ ರಂಗಪೂಜೆ ನಡೆಯಿತು. ಆ ಬಳಿಕ ಪ್ರಧಾನ ದೇವಾಲಯದಲ್ಲಿ 16 ಮಡಿಕೆಗಳಲ್ಲಿ ಮಣ್ಣು ಮತ್ತು ಮರಳನ್ನು ಮಿಶ್ರಮಾಡಿ ಅದರಲ್ಲಿ ನವಧಾನ್ಯಗಳನ್ನು ಬಿತ್ತುವ ಅಂಕುರಾರ್ಪಣೆ ನೆರವೇರಿತು. ಮಹಾಪೂಜೆಯ ಬಳಿಕ ದೇವರ ಹೊರಾಂಗಣ ಉತ್ಸವವು ಆರಂಭವಾಯಿತು. ಪ್ರಥಮವಾಗಿ ಕಾಚುಕುಜುಂಬ ದೈವವು ದೇವರನ್ನು ಭೇಟಿಯಾಗಿ ನುಡಿಗಟ್ಟು ನಡೆಯಿತು. ನಂತರ ಆಕರ್ಷಕ ಸಾಲುದೀಪಗಳ ನಡುವೆ ದೇವರ ಶೇಷವಾಹನಯುಕ್ತ ಬಂಡಿ ಉತ್ಸವ ಮತ್ತು ಪಾಲಕಿ ಉತ್ಸವ ನೆರವೇರಿತು.

ಬಳಿಕ ರಥಬೀದಿಗೆ ಬಂದ ದೇವರು ಪಂಚ ಶಿಖರಗಳನ್ನಳಗೊಂಡ ಚಂದ್ರಮಂಡಲ ರಥದಲ್ಲಿ ಆರೂಢರಾಗಿ ಪೂಜೆ ಸ್ವೀಕರಿಸಿದರು. ದೇವರು ಚಂದ್ರಮಂಡಲ ರಥದಲ್ಲಿ ಆಗಮಿಸುವುದು ಕೇವಲ ಲಕ್ಷ ದೀಪೋತ್ಸವದ ದಿನ ಮಾತ್ರ ಅನ್ನುವುದು ವಿಶೇಷ. ಸಹಸ್ರಾರು ಭಕ್ತರು ದರ್ಶನ ಪಡೆದರು. ಉತ್ಸವಕ್ಕೆ ಆನೆ ಯಶಸ್ವಿ, ಬಿರುದಾವಳಿಗಳು, ಬ್ಯಾಂಡ್, ನಾದಸ್ವರ, ತವಿಲ್ಗಳು ವಿಶೇಷ ಮೆರುಗನ್ನು ನೀಡಿತ್ತು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್, ಪ್ರಸನ್ನ ದರ್ಬೆ, ಪಿಜಿಎಸ್ಎನ್ ಪ್ರಸಾದ್, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಶೋಭಾ ಗಿರಿಧರ್, ಲೋಕೇಶ್ ಮುಂಡುಕಜೆ, ಎಇಒ ಪುಷ್ಪಲತಾ ರಾವ್ ಇದ್ದರು.

ಬೀದಿ ಮಡೆಸ್ನಾನ ಆರಂಭ: ಚಂದ್ರಮಂಡಲ ರಥೋತ್ಸವದ ಬಳಿಕ ಬೀದಿ ಉರುಳು ಸೇವೆಯನ್ನು ಭಕ್ತರು ಆರಂಭಿಸಿದರು. ಲಕ್ಷದೀಪೋತ್ಸವ ರಥೋತ್ಸವದ ಬಳಿಕ ಆರಂಭಗೊಳ್ಳುವ ಈ ಸೇವೆಯು ಚಂಪಾಷಷ್ಠಿ ಮಹಾರಥೋತ್ಸವದ ವರೆಗೆ ನಡೆಯುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು