ಸೋಮವಾರ, ಜುಲೈ 4, 2022
22 °C
ಪದವಿ ಪ್ರಥಮ ವರ್ಷಕ್ಕೆ ಎರಡು ಮಾದರಿಯ ಉತ್ತರ ಪತ್ರಿಕೆಗಳ ಬಳಕೆ

ಪದವಿ ಪರೀಕ್ಷೆ: ಉತ್ತರ ಪತ್ರಿಕೆ ಗೊಂದಲ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಪದವಿ ಕಾಲೇಜುಗಳಲ್ಲಿ ಪದವಿ ಪರೀಕ್ಷೆಗಳು ನಡೆಯುತ್ತಿದ್ದು, ಹೊಸ ಹಾಗೂ ಹಳೆ ಸ್ಕೀಮ್ ಉತ್ತರ ಪತ್ರಿಕೆಗಳ ಗೊಂದಲದಿಂದಾಗಿ, ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ.

ಎನ್‌ಇಪಿ ಅಡಿಯಲ್ಲಿ ಪದವಿ ಪ್ರಥಮ ವರ್ಷದ ಪರೀಕ್ಷೆಗಳು ನಡೆಯುತ್ತಿವೆ. ವಿಶ್ವವಿದ್ಯಾಲಯದ ಸುತ್ತೋಲೆ ಪ್ರಕಾರ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಳೆ ಸ್ಕೀಮ್ ಉತ್ತರ ಪತ್ರಿಕೆಗಳನ್ನು, ದ್ವಿತೀಯ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹೊಸ ಸ್ಕೀಮ್ ಉತ್ತರ ಪತ್ರಿಕೆಗಳನ್ನು ಒದಗಿಸಬೇಕು. ಆದರೆ, ಪರೀಕ್ಷೆ ಪ್ರಾರಂಭವಾಗಿದ್ದರೂ, ಇನ್ನೂ ಪೂರ್ಣ ಪ್ರಮಾಣದಲ್ಲಿ ಉತ್ತರ ಪತ್ರಿಕೆಗಳ ಪೂರೈಕೆ ಆಗದ ಕಾರಣ, ಕೆಲವು ಕಾಲೇಜುಗಳಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ನೀಡುವ ಹೊಸ ಸ್ಕೀಮ್ ಉತ್ತರ ಪತ್ರಿಕೆಗಳನ್ನೇ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎನ್ನುತ್ತಾರೆ ಪ್ರಾಧ್ಯಾಪಕರೊಬ್ಬರು.

‘ಎನ್‌ಇಪಿ ಅಡಿಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ 12 ಅಂಕೆಗಳ ನೋಂದಣಿ ಸಂಖ್ಯೆ ನೀಡಲಾಗಿದೆ. ಹೊಸ ಸ್ಕೀಮ್ ಉತ್ತರ ಪತ್ರಿಕೆಗಳಲ್ಲಿ 9 ಅಂಕೆಗಳನ್ನು ಬರೆಯಲು ಮಾತ್ರ ಕಾಲಂಗಳಿದ್ದು, ಇನ್ನುಳಿದ ಮೂರು ಅಂಕೆಗಳನ್ನು ವಿದ್ಯಾರ್ಥಿಗಳೇ ಕಾಲಂ ಹಾಕಿ ಬರೆಯಬೇಕಾಗುತ್ತದೆ. ಕೆಲವು ವಿದ್ಯಾರ್ಥಿಗಳು ಇದನ್ನು ಬರೆಯುವಾಗ ಗೊಂದಲ ಮಾಡಿಕೊಳ್ಳುತ್ತಾರೆ, ಇನ್ನು ಕೆಲವರು ತಪ್ಪಾಗಿ ಬರೆಯುವ ಸಾಧ್ಯತೆ ಇರುತ್ತದೆ’ ಎಂದು ವಿವರಿಸಿದರು.

‘ಎರಡು ಮಾದರಿಯ ಉತ್ತರ ಪತ್ರಿಕೆಗಳಲ್ಲಿ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುವುದರಿಂದ ಮೌಲ್ಯಮಾಪನದ ವೇಳೆ ಕೂಡ ಇದನ್ನು ಪ್ರತ್ಯೇಕಿಸುವಾಗ ಗೊಂದಲ ಸೃಷ್ಟಿಯಾಗಬಹುದು. ಅಲ್ಲದೆ, ಏ.18ರಿಂದ ಪರೀಕ್ಷೆಗಳು ಆರಂಭವಾಗಿದ್ದರೂ ಇನ್ನೂ ಕೆಲವು ವಿದ್ಯಾರ್ಥಿಗಳಿಗೆ ಪ್ರವೇಶಪತ್ರ ದೊರೆತಿಲ್ಲ’ ಎಂದು ಇನ್ನೊಬ್ಬ ಪ್ರಾಧ್ಯಾಪಕರು ಆತಂಕ ವ್ಯಕ್ತಪಡಿಸಿದರು.

‘ಮೇ 9ಕ್ಕೆ ಎಲ್ಲ ಪರೀಕ್ಷೆಗಳು ಮುಗಿಯುತ್ತವೆ. ಮೇ 12ರಿಂದ ಮುಂದಿನ ಸೆಮಿಸ್ಟರ್ ತರಗತಿಗಳು ಪ್ರಾರಂಭವಾಗುತ್ತವೆ ಎಂದು ಪ್ರಾಚಾರ್ಯರು ತಿಳಿಸಿದ್ದಾರೆ. ಪರೀಕ್ಷೆ ಪೂರ್ಣಗೊಂಡ ಮೇಲೆ ಎಂದಿನಂತೆ ರಜೆ ಇರುತ್ತದೆ ಎಂದು ಭಾವಿಸಿ, ಊರಿಗೆ ಹೋಗಲು
ರೈಲ್ವೆ ಟಿಕೆಟ್ ಬುಕ್ ಮಾಡಿದ್ದೆವು. ಆದರೆ, ಈಗ ಅನಿವಾರ್ಯವಾಗಿ ಟಿಕೆಟ್ ರದ್ದುಗೊಳಿಸಬೇಕಾಗಿದೆ’ ಎಂದು ವಿದ್ಯಾರ್ಥಿನಿಯೊಬ್ಬರು ಬೇಸರಿಸಿದರು.

ಗೊಂದಲ ಇಲ್ಲ: ಕಾಲೇಜಿಗೆ ಸೂಚನೆ

ವಿಶ್ವವಿದ್ಯಾಲಯವು ಸಿಂಡಿಕೇಟ್ ಅನುಮತಿ ಪಡೆದೇ ಪರೀಕ್ಷೆ ನಡೆಸುತ್ತಿದೆ. ಪದವಿ ಪ್ರಥಮ ವರ್ಷದ ಉತ್ತರ ಪತ್ರಿಕೆಗಳಲ್ಲಿ ಯಾವುದೇ ಗೊಂದಲ ಇಲ್ಲ. ಈ ಹಿಂದಿನ ಎಂಯು ಲಿಂಕ್ಸ್ ಇರುವಾಗ ಇದ್ದ ಹಾಗೆ ಯಯುಸಿಎಂಎಸ್‌ನಲ್ಲಿ ಸ್ಕ್ಯಾನ್ ಮಾಡುವ ಪ್ರಮೇಯವಿಲ್ಲ. ಉತ್ತರ ಪತ್ರಿಕೆಯಲ್ಲಿ ಬಾಟಮ್ ಸ್ಲಿಪ್ ಹರಿಯುವುದೂ ಬೇಕಾಗುವುದಿಲ್ಲ. ಸರ್ಕಾರದ ನಿಯಮದಂತೆ ಪರೀಕ್ಷೆಗಳು ನಡೆಯುತ್ತಿವೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್. ಧರ್ಮ ಪ್ರತಿಕ್ರಿಯಿಸಿದರು. ಎರಡು ರೀತಿಯ ಉತ್ತರ ಪತ್ರಿಕೆಗಳನ್ನು ಕೂಡ ಬಳಸಿಕೊಳ್ಳಬೇಕಾಗಿದೆ. ಗೊಂದಲವಿಲ್ಲದಂತೆ ಉತ್ತರ ಪತ್ರಿಕೆಗಳಲ್ಲಿ ನೋಂದಣಿ ಸಂಖ್ಯೆ ಭರ್ತಿ ಮಾಡಲು ಸೂಕ್ತ ನಿರ್ದೇಶನ ನೀಡುವಂತೆ ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ತಿಳಿಸಲಾಗಿದೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಸರಿದೂಗಿಸಲು ಪ್ರಯತ್ನ

ಮೌಲ್ಯಮಾಪನ ಆರಂಭವಾದರೆ ಅದು ಮುಗಿಯುವ ತನಕ ತರಗತಿ ಪ್ರಾರಂಭಿಸಲು ಸಾಧ್ಯವಾಗುವುದಿಲ್ಲ. ತರಗತಿ ವಿಳಂಬ ಮಾಡಿದರೆ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ವ್ಯತ್ಯಾಸವಾಗುತ್ತದೆ. ಈಗಾಗಲೇ ಕೋವಿಡ್ ಕಾರಣಕ್ಕೆ ಕೊಂಚ
ವ್ಯತ್ಯಯವಾಗಿರುವ ವೇಳಾಪಟ್ಟಿ
ಯನ್ನು ಸರಿದೂಗಿಲು ಈ ಬಾರಿ ಪರೀಕ್ಷೆ ಪೂರ್ಣಗೊಳ್ಳುತ್ತಿದ್ದಂತೆ, ಮೇ 12ರಿಂದ ಕಾಲೇಜುಗಳನ್ನು ಆರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳ ಪರೀಕ್ಷೆ, ಅಸೈನ್‌ಮೆಂಟ್ ನೀಡಿ, ಕಾಲೇಜು ನಡೆಯುವ ನಡುವೆಯೇ ಹೊಂದಾಣಿಕೆ ಮಾಡಿಕೊಂಡು ಮೌಲ್ಯಮಾಪನ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು