ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೊಕ್ಕೊಟ್ಟು- ಒಳಪೇಟೆ ರೈಲ್ವೆ ಹಳಿ ದಾಟಲು ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹ

Published : 2 ಆಗಸ್ಟ್ 2024, 14:02 IST
Last Updated : 2 ಆಗಸ್ಟ್ 2024, 14:02 IST
ಫಾಲೋ ಮಾಡಿ
Comments

ಉಳ್ಳಾಲ: ತೊಕ್ಕೊಟ್ಟು ಒಳಪೇಟೆಯ ರೈಲ್ವೆ ಹಳಿ ದಾಟಲು ಮೇಲ್ಸೇತುವೆ ಅಥವಾ ಅಂಡರ್ ಪಾಸ್ ಅಗತ್ಯ ಇದ್ದು, ಈ ಬಗ್ಗೆ ಎಲ್ಲರೂ ಒಟ್ಟಾಗಿ ಸಂಸದರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಬೇಕಿದೆ ಎಂದು ಉಳ್ಳಾಲ ನಗರಸಭೆ ಸದಸ್ಯ ದಿನಕರ ಉಳ್ಳಾಲ್ ಹೇಳಿದರು.

ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೀಡಲಾಗುತ್ತಿರುವ ಬ್ಯಾಂಕ್ ಸಾಲ ನೀಡುವಲ್ಲಿ ವಿಳಂಬ ಮಾಡುತ್ತಿರುವ ಧೋರಣೆ ವಿರುದ್ಧ ಶುಕ್ರವಾರ ತೊಕ್ಕೊಟ್ಟಿನಲ್ಲಿ ಉಳ್ಳಾಲ ವಿದ್ಯಾರ್ಥಿ ಯೂನಿಯನ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ರೈಲ್ವೆ ಹಳಿಗಳನ್ನು ಸಾರ್ವಜನಿಕರು ದಾಟುವುದು ಕಾನೂನು ಬಾಹಿರ. ಹಿಂದೆ ಇಲ್ಲಿ ಒಂದು ಹಳಿ ಇತ್ತು. ಈಗ ಎರಡು ಹಳಿಗಳಲ್ಲಿ ರೈಲುಗಳು ಓಡಾಡುತ್ತಿದ್ದು, ಇಲ್ಲಿ ಪಾದಚಾರಿಗಳು ದಾಟುವುದು ಅಪಾಯಕಾರಿ. ಇಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕಾಗಿ ಕೇಂದ್ರ ರೈಲ್ವೆ ಸಚಿವರಾಗಿದ್ದ ಆಸ್ಕರ್ ಫರ್ನಾಂಡಿಸ್ ಜತೆ ಮಾತುಕತೆ ನಡೆಸಿದ್ದೆವು. ಆದರೆ, ಉಳ್ಳಾಲ ಪುರಸಭೆಯ ಅಸಡ್ಡೆಯಿಂದ ಅದು ಸಫಲವಾಗಿರಲಿಲ್ಲ. ಈಗ ವಿ.ಸೋಮಣ್ಣ ಅವರು ರೈಲ್ವೆ ಸಚಿವರಾಗಿದ್ದು, ಎಲ್ಲರೂ ಒಂದಾಗಿ ತೊಕ್ಕೊಟ್ಟಿನ ರೈಲ್ವೆ ಕ್ರಾಸಿಂಗ್ ಸಮಸ್ಯೆ ಬಗ್ಗೆ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರ ಗಮನಕ್ಕೆ ತಂದು ಪಾದಚಾರಿ ಸೇತುವೆ ಅಥವಾ ಅಂಡರ್ ಪಾಸ್ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂದರು.

ತೊಕ್ಕೊಟ್ಟು ಒಳಪೇಟೆಯ ಶಾಲೆ–ಕಾಲೇಜು, ಮಸೀದಿ, ಮಂದಿರ, ಚರ್ಚ್‌ಗಳಿಗೆ ತೆರಳಲು ಒಳಪೇಟೆಯ ರೈಲ್ವೆ ಹಳಿಯೇ ಕೊಂಡಿಯಾಗಿದೆ. ಆದಷ್ಟು ಬೇಗ ಈ ಪ್ರದೇಶದಲ್ಲಿ ಪಾದಚಾರಿಗಳು ಹಳಿ ದಾಟಲು ವ್ಯವಸ್ಥೆ ಮಾಡಿಕೊಡಬೇಕು ಎಂದು ವಿದ್ಯಾರ್ಥಿ ಮುಖಂಡರಾದ ರೀಷಲ್ ಡಿಸೋಜ ಆಗ್ರಹಿಸಿದರು.

ಉಳ್ಳಾಲ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ ಸಫ್ವಾನ್ ಕೆರೆಬೈಲ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ತೊಕ್ಕೊಟ್ಟು ಸೇಂಟ್‌ ಸಬಾಸ್ಟಿಯನ್‌ ಧರ್ಮ ಕೇಂದ್ರದ ಪ್ರಧಾನ ಧರ್ಮಗುರು ಫಾ.ಸಿಪ್ರಿಯನ್ ಪಿಂಟೊ, ಮಂಗಳೂರು ಕಥೋಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಡಿಸೋಜ, ಉಳ್ಳಾಲ ನಗರಸಭೆ ಸದಸ್ಯರಾದ ಬಾಝಿಲ್ ಡಿಸೋಜ, ವೀಣಾ ಶಾಂತಿ ಡಿಸೋಜ, ಪ್ರಮುಖರಾದ ಆಸೀಫ್ ಅಂಬಟಡಿ, ಶಾಹಿಲ್ ಮಂಚಿಲ, ದೀಪಕ್ ಪಿಲಾರ್, ಸಾಜಿದ್ ಉಳ್ಳಾಲ್, ನಾಸೀರ್ ಸಾಮಾನಿಗೆ ಭಾಗವಹಿಸಿದ್ದರು. ಡೆಮೆಟ್ರಿಯಸ್ ಡಿಸೋಜ ನಿರೂಪಿಸಿ ಸಿರಿಲ್ ರಾಬರ್ಟ್ ಡಿಸೋಜ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT