ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಗಳತ್ತ ರೋಗಿಗಳು; ಚೇತರಿಕೆ ಹಾದಿಯಲ್ಲಿ ದಂತ ಕಾಲೇಜುಗಳು

ವಿದ್ಯಾರ್ಥಿಗಳ ಪ್ರಾಯೋಗಿಕ ಪಾಠಕ್ಕೂ ಅನುಕೂಲ
Last Updated 9 ಜನವರಿ 2021, 3:49 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್–19 ನಿಂದಾಗಿ ರೋಗಿಗಳ ಕೊರತೆ ಎದುರಿಸುತ್ತಿದ್ದ ಜಿಲ್ಲೆಯ ದಂತ ವೈದ್ಯಕೀಯ ಕಾಲೇಜುಗಳು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿವೆ. ಕೋವಿಡ್ ಸೋಂಕಿನ ಆತಂಕದಿಂದ ಹಲ್ಲಿನ ಸಮಸ್ಯೆಗಳಿದ್ದರೂ ಆಸ್ಪತ್ರೆಗಳಿಂದ ದೂರವಿದ್ದ ಜನರು ಇದೀಗ ಆಸ್ಪತ್ರೆಗಳಿಗೆ ಧಾವಿಸುತ್ತಿದ್ದಾರೆ.

ದಂತ ವೈದ್ಯಕೀಯ ಕಾಲೇಜುಗಳು ಇದೀಗ ಪೂರ್ಣ ಪ್ರಮಾಣದಲ್ಲಿ ಚಿಕಿತ್ಸೆ ನೀಡಲು ಸಿದ್ಧವಾಗಿದ್ದು, ರೋಗಿಗಳ ಸಂಖ್ಯೆಯೂ ನಿಧಾನವಾಗಿ ಹೆಚ್ಚುತ್ತಿದೆ. ಇದರಿಂದ ದಂತ ವೈದ್ಯಕೀಯ ವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪಾಠಕ್ಕೂ ಅನುಕೂಲವಾಗಿದೆ.

ಮಾರ್ಚ್‌ನಿಂದಲೇ ಲಾಕ್‌ಡೌನ್‌ ಜಾರಿಯಾಗಿದ್ದು, ಅದಾದ ನಂತರ ಕೋವಿಡ್–19 ಸೋಂಕು ವ್ಯಾಪಕವಾಗಿದ್ದರಿಂದ ದಂತ ವೈದ್ಯಕೀಯ ಚಿಕಿತ್ಸೆಗಾಗಿ ಜನರು ಆಸ್ಪತ್ರೆಗಳಿಗೆ ಬರಲು ಹಿಂದೇಟು ಹಾಕಿದ್ದರು. ಜೊತೆಗೆ ದಂತ ವೈದ್ಯರೂ ಸೋಂಕಿನ ಆತಂಕದಿಂದ ಕ್ಲಿನಿಕ್‌ಗಳನ್ನು ಬಂದ್‌ ಮಾಡಿದ್ದರು.

ಲಾಕ್‌ಡೌನ್‌ ಸಡಿಲಿಕೆಯ ನಂತರ ಹಲವಾರು ಕ್ಷೇತ್ರಗಳು ನಿಧಾನವಾಗಿ ಚಟುವಟಿಕೆ ಆರಂಭಿಸುತ್ತಿವೆ. ಅದೇ ರೀತಿ ದಂತ ವೈದ್ಯಕೀಯ ವಿಭಾಗದಲ್ಲೂ ರೋಗಿಗಳ ಚಿಕಿತ್ಸೆಯನ್ನು ಆರಂಭಿಸಲಾಗಿದೆ. ಈ ಮೂಲಕ ದಂತ ವೈದ್ಯಕೀಯ ವಿಜ್ಞಾನದ ಸ್ನಾತಕ ಮತ್ತು ಸ್ನಾತಕೋತ್ತರ ಪದವೀಧರರಿಗೆ ಮತ್ತು ಇಂಟರ್ನಿಗಳಿಗೆ ಅನುಕೂಲವಾಗಿದೆ ಎಂದು ದಂತ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರು ಹೇಳುತ್ತಿದ್ದಾರೆ.

‘ವೈದ್ಯಕೀಯ ವಿದ್ಯಾರ್ಥಿಗಳು ವೀಕ್ಷಣೆಯ ಮೂಲಕ ಕಲಿಯುತ್ತಿದ್ದರೆ, ದಂತ ವೈದ್ಯಕೀಯ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಲಿಯುವುದು ಹೆಚ್ಚು. ನಾವು ಕಾಲೇಜು ಆರಂಭಿಸಿದಾಗ ರೋಗಿಗಳ ಸಂಖ್ಯೆ ಕಡಿಮೆ ಇತ್ತು. ಸದ್ಯದ ಪರಿಸ್ಥಿತಿಯಲ್ಲಿ ನಿಯಮಿತವಾಗಿ ದಂತ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದು, ವೈದ್ಯಕೀಯ ಚಿಕಿತ್ಸೆಯನ್ನು ನೀಡುವುದಕ್ಕೆ ವಿದ್ಯಾರ್ಥಿಗಳಿಗೂ ಅನುಕೂಲವಾಗಿದೆ’ ಎಂದು ಎನ್ನುತ್ತಾರೆ ಮಣಿಪಾಲ ಕಸ್ತೂರಬಾ ದಂತ ವೈದ್ಯಕೀಯ ಕಾಲೇಜಿನ ಡಾ.ಕಾರ್ತಿಕ್‌ ಶೆಟ್ಟಿ ಹೇಳುತ್ತಾರೆ.

‘ಕೆಲವು ಕಾಲೇಜುಗಳಲ್ಲಿ ಸಿಮ್ಯುಲೇಶನ್‌ ಕೇಂದ್ರಗಳ ಮೂಲಕವೂ ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ. ಹಲವು ಕಾಲೇಜುಗಳು ಇದೇ ಪದ್ಧತಿಯನ್ನು ಅನುಸರಿಸುತ್ತಿವೆ. ಜೊತೆಗೆ ಒಬ್ಬ ರೋಗಿಗೆ ಮೂರ‍್ನಾಲ್ಕು ವಿದ್ಯಾರ್ಥಿಗಳಿಗೆ ವಹಿಸಲಾಗುತ್ತಿದೆ. ಒಬ್ಬ ದಂತ ರೋಗಿಯ ಚಿಕಿತ್ಸಾ ಕ್ರಮವನ್ನು ಮೂವರು ವಿದ್ಯಾರ್ಥಿಗಳು ಸಿದ್ಧಪಡಿಸುತ್ತಾರೆ’ ಎಂದು ಯೇನೆಪೋಯ ದಂತ ವೈದ್ಯಕೀಯ ಕಾಲೇಜಿನ ಡೀನ್‌ ಡಾ.ಅಖ್ತರ್‌ ಹುಸೇನ್‌ ಹೇಳಿದ್ದಾರೆ.

‘ದಂತ ರೋಗಿಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ರೋಗಿಗಳ ಸಂಪೂರ್ಣ ತಪಾಸಣೆ ಮಾಡಿದ ನಂತರವೇ, ಕೋವಿಡ್–19 ಮಾರ್ಗಸೂಚಿಗೆ ಅನುಗುಣವಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳ ಬಳಿಗೆ ಕಳುಹಿಸಲಾಗುತ್ತಿದೆ. ಜೊತೆಗೆ ಒಂದು ಕೋಣೆಯ ಬದಲಾಗಿ ದೃಶ್ಯ, ಶ್ರವಣ ಮಾಧ್ಯಮದ ಸಹಯೋಗದೊಂದಿಗೆ ಮೂರು ಕೋಣೆಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಬೋಧಿಸಲಾಗುತ್ತಿದೆ’ ಎಂದು ಅವರು ಹೇಳುತ್ತಾರೆ.

‘ಶೇ 80 ರಷ್ಟು ರೋಗಿಗಳು ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಸದ್ಯಕ್ಕೆ ನಮ್ಮಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾತ್ರ ಚಿಕಿತ್ಸೆಗೆ ಅವಕಾಶ ನೀಡಲಾಗುತ್ತಿದೆ. ಸ್ನಾತಕ ವಿದ್ಯಾರ್ಥಿಗಳಿಗೆ ಕೆಲವೇ ಕೆಲವು ಪ್ರಕರಣಗಳನ್ನು ವಹಿಸಲಾಗುತ್ತಿದೆ’ ಎಂದು ಎ.ಜೆ. ದಂತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲ ಡಾ.ನಿಲ್ಲನ್‌ ಕೆ. ಶೆಟ್ಟಿ ತಿಳಿಸಿದ್ದಾರೆ.

ಗಲ್ಫ್‌ ರಾಷ್ಟ್ರಗಳಲ್ಲೂ ಬೇಡಿಕೆ

ದಂತ ವೈದ್ಯಕೀಯ ಚಿಕಿತ್ಸೆಗಾಗಿ ಗಲ್ಫ್‌ ರಾಷ್ಟ್ರಗಳಲ್ಲೂ ದಂತ ವೈದ್ಯರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಕರಾವಳಿಯ ವೈದ್ಯರು ಇದೀಗ ದುಬೈ ಸೇರಿದಂತೆ ವಿವಿಧ ನಗರಗಳಿಗೆ ಭೇಟಿ ನೀಡಿ, ಅಲ್ಲಿನ ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಏರ್ ಬಬಲ್‌ ಯೋಜನೆಯಡಿ ಗಲ್ಫ್‌ ರಾಷ್ಟ್ರಗಳಿವೆ ವಿಮಾನ ಸಂಚಾರವೂ ಆರಂಭವಾಗಿದ್ದು, ವಾರದಲ್ಲಿ 2–3 ದಿನ ಇಲ್ಲಿನ ವೈದ್ಯರು ಗಲ್ಫ್‌ ರಾಷ್ಟ್ರಗಳಿಗೆ ತೆರಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT