ಶನಿವಾರ, ಏಪ್ರಿಲ್ 1, 2023
26 °C
ಸರ್ವಧರ್ಮ ಸಮ್ಮೇಳನ ಉದ್ಘಾಟಿಸಿದ ರಾಜ್ಯಪಾಲ

‘ಇತರ ಧರ್ಮಗಳನ್ನೂ ಗೌರವಿಸಿದಾಗ ವಿಶ್ವಶಾಂತಿ’–ಥಾವರ್‌ಚಂದ್ ಗೆಹಲೋತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಜಿರೆ: ‘ತಮ್ಮ ಧರ್ಮದ ಮರ್ಮವನ್ನರಿತು, ಇತರ ಧರ್ಮಗಳನ್ನೂ ಗೌರವಿಸಿದಾಗ ಸಾಮಾಜಿಕ ಸಾಮರಸ್ಯದೊಂದಿಗೆ ವಿಶ್ವಶಾಂತಿ ಸಾಧ್ಯವಾಗುತ್ತದೆ’ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಹೇಳಿದರು.

ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಅಂಗವಾಗಿ ಗುರುವಾರ ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನದ 89ನೇ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮದ ತತ್ವ, ಸಿದ್ಧಾಂತ ಅರಿತು ಬದುಕಿನಲ್ಲಿ ಪಾಲನೆ ಮಾಡಿದರೆ ಎಲ್ಲರಲ್ಲೂ ಪರಸ್ಪರ ಪ್ರೀತಿ, ವಿಶ್ವಾಸ ಬೆಳೆದು ಸಾಮಾಜಿಕ ಸಾಮರಸ್ಯ ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಧರ್ಮಸ್ಥಳದ ಕ್ಷೇತ್ರದ ಸೇವೆ, ಸಾಧನೆ ಶ್ಲಾಘನೀಯ ಎಂದು ಹೆಗ್ಗಡೆಯವರನ್ನು ಅಭಿನಂದಿಸಿದರು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ‘88 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಸರ್ವಧರ್ಮ ಸಮ್ಮೇಳನದಲ್ಲಿ ಅನೇಕ ವಿದ್ವಾಂಸರು ಸರ್ವ ಧರ್ಮಗಳ ಸಾರವನ್ನು ಸಂದೇಶ ರೂಪದಲ್ಲಿ ನೀಡಿ, ಸಾರ್ಥಕ ಬದುಕಿಗೆ ಮಾರ್ಗದರ್ಶನ ನೀಡಿದ್ದಾರೆ. ಸಭ್ಯ, ಸುಸಂಸ್ಕೃತ ನಾಗರಿಕತೆಯು ಧರ್ಮದ ಮೂಲ ಜೀವದ್ರವ್ಯವಾಗಿದೆ’ ಎಂದರು.

ಧರ್ಮ ಮತ್ತು ಸೇವೆಗಳು ಜೊತೆಯಲ್ಲೆ ಸಾಗಬೇಕು. ಧರ್ಮದ ಮರ್ಮವಿರುವುದು ಆಚರಣೆಯಲ್ಲಿ. ಆಚಾರಕ್ಕೂ, ವಿಚಾರಕ್ಕೂ, ನಡೆಗೂ, ನುಡಿಗೂ ವ್ಯತ್ಯಾಸ ಇರಬಾರದು ಎಂದು ಅಭಿಪ್ರಾಯಪಟ್ಟರು.

ಬೆಂಗಳೂರಿನ ಎಸ್. ವ್ಯಾಸ ಯೋಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ರಾಮಚಂದ್ರ ಜಿ. ಭಟ್ಟರು ಅಧ್ಯಕ್ಷತೆ ವಹಿಸಿದ್ದರು. ಸಾಗರದ ಡಾ. ಸರ್ಫ್ರಾಜ್ ಚಂದ್ರಗುತ್ತಿ ಅವರು ‘ಭಾರತೀಯ ಧರ್ಮಗಳು’ ವಿಷಯದ ಕುರಿತು, ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಡಾ. ಎಂ.ಎಸ್. ಪದ್ಮಾ ಅವರು, ‘ಜೈನಧರ್ಮದ ಮೌಲಿಕತೆ ಮತ್ತು ಮಹತ್ವ’ದ ಬಗ್ಗೆ ಮತ್ತು ಶಿವಮೊಗ್ಗದ ವೀರೇಶ್ ವಿ. ಮೊರಾಸ್ ಅವರು ‘ಧರ್ಮ ಮತ್ತು ಸಾಮಾಜಿಕ ಸ್ವಾಸ್ಥ್ಯ’ದ ಬಗ್ಗೆ ಉಪನ್ಯಾಸ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು