ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ರೈಲ್ವೆ ಅಂಡರ್‌ಪಾಸ್‌: ಸಾಗಲು ಪಡಿಪಾಟಲು

ಲೆವೆಲ್ ಕ್ರಾಸಿಂಗ್‌ಗಳಲ್ಲಿ ಕಾಯುವ ಪರಿಸ್ಥಿತಿ; ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರಕ್ಕೆ ಕಷ್ಟವಿಲ್ಲ
Published 1 ಜುಲೈ 2024, 7:16 IST
Last Updated 1 ಜುಲೈ 2024, 7:16 IST
ಅಕ್ಷರ ಗಾತ್ರ

ಮಂಗಳೂರಿನ ಜೆಪ್ಪು ಮಹಾಕಾಳಿಪಡ್ಪು ರೈಲ್ವೆ ಅಂಡರ್ ಪಾಸ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು ಎಂಬ ಸ್ಥಳೀಯರ ಬೇಡಿಕೆಗೆ ವರ್ಷಗಳು ಮೂರು ಆಗುತ್ತಿವೆ. ಈ ಕುರಿತ ಹೋರಾಟ ಮತ್ತೆ ಕಾವು ಪಡೆದುಕೊಂಡಿದೆ.

ನಗರ ವ್ಯಾಪ್ತಿಯಲ್ಲಿ ರೈಲ್ವೆಗೆ ಸಂಬಂಧಿಸಿದ ಸಮಸ್ಯೆ ಈ ಅಂಡರ್ ಪಾಸ್ ಒಂದಕ್ಕೆ ಸೀಮಿತವಲ್ಲ. ಕೆಲವು ಅಂಡರ್‌ಪಾಸ್‌ಗಳನ್ನು ದಾಟಲು ಮಳೆಗಾಲದಲ್ಲಿ ಹೆಣಗಾಡಬೇಕಾಗುತ್ತದೆ. ಲೆವೆಲ್ ಕ್ರಾಸಿಂಗ್‌ಗಳಲ್ಲೂ ನಿಮಿಷಗಟ್ಟಲೆ ವಾಹನಗಳು ಕಾದು ನಿಲ್ಲಬೇಕಾದ ಪರಿಸ್ಥಿತಿ ಇದೆ.

ಜೆಪ್ಪು ಮಹಾಕಾಳಿಪಡ್ಪು ಅಂಡರ್ ಪಾಸ್ ನಿರ್ಮಾಣ ಕಾರ್ಯ ಆರಂಭವಾಗಿ ಮೂರು ವರ್ಷ ಆಗಿದೆ. ಈ ಕಾಮಗಾರಿ ನಿಧಾನಗತಿಯಲ್ಲಿ ಸಾಗಿರುವುದರಿಂದ ಉಳ್ಳಾಲ, ತೊಕ್ಕೊಟ್ಟು, ಬಜಾಲ್, ಜಪ್ಪಿನಮೊಗರು ಮುಂತಾದ ಕಡೆಗಳ ಜನರು ತೊಂದರೆಗೆ ಒಳಗಾಗಿದ್ದಾರೆ.

ಈ ಭಾಗದಿಂದ ಮೂರು ದಾರಿಗಳು ತೊಕ್ಕೊಟ್ಟು ಕಡೆಗೆ ಹೋಗುವವರನ್ನು ರಾಷ್ಟ್ರೀಯ ಹೆದ್ದಾರಿ ಕಡೆಯಿಂದ ಜೋಡಿಸುತ್ತವೆ. ಈ ಪೈಕಿ ಕುಡ್ಪಾಡಿ ಮಾರ್ಗ ಅಗಲ ಕಿರಿದಾಗಿರುವುದರಿಂದ ವಾಹನಗಳು ಎದುರುಬದುರಾದರೆ ಮುಂದೆ ಸಾಗಲು ಕಷ್ಟವಾಗುತ್ತದೆ. ಇದರಿಂದಾಗಿಯೇ ಕೆಲವು ದಿನ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಮಾರ್ಗನ್ ಗೇಟ್‌ ಹಾದಿಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಯಾರೂ ಆ ಕಡೆಗೆ ಸಾಗುವುದಿಲ್ಲ. ಆದ್ದರಿಂದ ಮಹಾಕಾಳಿಪಡ್ಪು ರಸ್ತೆಗೆ ಭಾರಿ ಬೇಡಿಕೆ. ಕೇರಳದ ಕಡೆಗೆ ಸಾಗುವವರು, ಉಳ್ಳಾಲ, ತಲಪಾಡಿ, ತೊಕ್ಕೊಟ್ಟು, ಕೊಣಾಜೆ ಮತ್ತಿತರ ಕಡೆಗೆ ಉದ್ಯೋಗ, ಶಿಕ್ಷಣಕ್ಕೆ ಸಂಬಂಧಿಸಿ ನಿತ್ಯವೂ ಓಡಾಡುವವರು, ಆಸ್ಪತ್ರೆಗಳಿಗೆ ಹೋಗುವವರಿಗೆ ಇದು ಸುಲಭ ಹಾದಿ. ಮಂಗಳಾದೇವಿ ದೇವಸ್ಥಾನದ ರಸ್ತೆಯ ಮೂಲಕ ನಗರ ಪ್ರವೇಶಿಸುವವರಿಗೆ ಈ ಹಾದಿ ಸಮಯ ಮತ್ತು ಇಂಧನ ಉಳಿಸಿಕೊಡುತ್ತದೆ.

ಪರ್ಯಾಯ ರಸ್ತೆ ಇಲ್ಲ

ಸಿಟಿ ಬಸ್‌ಗಳು ಮತ್ತು ಸರಕು ಸಾಗಣೆಯ ಘನ ವಾಹನಗಳು ಸಾಗುತ್ತಿದ್ದ ಈ ದಾರಿಯನ್ನು ಅಂಡರ್‌ಪಾಸ್‌ಗಾಗಿ ಮುಚ್ಚಿದಾಗ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ ಎಂದು ಸ್ಥಳೀಯರು ದೂರುತ್ತಾರೆ. ಸಮೀಪದಲ್ಲಿ ಕಿರಿದಾದ ಹಾದಿಯೊಂದು ಇದೆ. ಅದರ ಮೂಲಕ ದ್ವಿಚಕ್ರ ವಾಹನಗಳು ಅ‍ಪಾಯವನ್ನು ಲೆಕ್ಕಿಸದೆ ಸಂಚರಿಸುತ್ತವೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಮಹಾನಗರ ಪಾಲಿಕೆಯೂ ಪ್ರಯತ್ನಿಸಲಿಲ್ಲ ಎಂದು ಅವರು ಹೇಳುತ್ತಾರೆ.

‘ಬಜಾಲ್–ಪಡೀಲ್ ಅಂಡರ್ ಪಾಸ್ ಕಾಮಗಾರಿಯನ್ನು ಬೇಗ ಮುಗಿಸಲಾಗಿದೆ. ಆದರೆ ಮಹಾಕಾಳಿಪಡ್ಪುವಿನಲ್ಲಿ ಕಾಮಗಾರಿ ವಿಳಂಬ ಮಾಡಲಾಗಿದೆ. ಈ ದಾರಿಯು ಬಂದರ್‌ನಿಂದ ಸಗಟು ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ತುಂಬ ಅನುಕೂಲಕರವಾಗಿತ್ತು. ಈಗ ಜನರು ಸಂಕಟಪಡುತ್ತಿದ್ದಾರೆ’ ಎಂದು ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಬಿ.ಕೆ. ಇಮ್ತಿಯಾಜ್ ಹೇಳಿದರು.

ಬಜಾಲ್ ಅಂಡರ್‌ಪಾಸ್ ಕಾಮಗಾರಿ ಮುಕ್ತಾಯವಾಗಿದ್ದರೂ ನೀರು ನಿಲ್ಲುವ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ಇದನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂಬ ದೂರುಗಳು ಇವೆ.

‘ಇಲ್ಲಿ ನಾವು ಮೇಲ್ಸೇತುವೆ ಬೇಡಿಕೆ ಇರಿಸಿದ್ದೆವು. ರೈಲ್ವೆಯವರು ಕೊನೆಗೂ ಮಾಡಿದ್ದು ಅಂಡರ್ ಪಾಸ್‌. ನಗರದ ನೀರು ನಿಲ್ಲುವ ಬಟ್ಟಲಿನಂಥ ಪ್ರದೇಶವಿದು. ಪಕ್ಕದಲ್ಲೇ ಒಂದು ಬಾವಿ ಇದ್ದು ಅದರಿಂದ ಪಂಪ್‌ ಮೂಲಕ ನೀರೆತ್ತಿದರೆ ಅಂಡರ್‌ಪಾಸ್‌ನಲ್ಲಿರುವ ನೀರು ಇಂಗುತ್ತದೆ. ಆದರೆ ವಿದ್ಯುತ್ ಕೈಕೊಟ್ಟರೆ ಬಾವಿ ತುಂಬುತ್ತದೆ, ರಸ್ತೆಯೂ ಜಲಾವೃತವಾಗುತ್ತದೆ’ ಎನ್ನುತ್ತಾರೆ ಸ್ಥಳೀಯರಾದ ನಾರಾಯಣ ಕರ್ಮಾರ್‌.

ಅಪಾಯಕಾರಿ ಲೆವೆಲ್ ಕ್ರಾಸಿಂಗ್‌

ದಕ್ಷಿಣ ರೈಲ್ವೆ, ನೈರುತ್ಯ ರೈಲ್ವೆ ಮತ್ತು ಕೊಂಕಣ ರೈಲ್ವೆ ಹಳಿಗಳು ಮಂಗಳೂರು ನಗರದ ಒಳಗೆ ಹಾಗೂ ಸುತ್ತ ಸಾಗುತ್ತಿವೆ. ಇವುಗಳಲ್ಲಿ ಅನೇಕ ಕಡೆ ಮಾನವ ರಹಿತ ಮತ್ತು ಮಾನವ ಸಹಿತ ಲೆವೆಲ್ ಕ್ರಾಸಿಂಗ್‌ಗಳು ಇವೆ. ಕೆಲವು ಕಡೆ ಮೇಲ್ಸೇತುವೆ ಅಥವಾ ಅಂಡರ್ ಪಾಸ್‌ ನಿರ್ಮಿಸಲು ಅವಕಾಶ ಇದೆಯಾದರೂ ಆ ಬಗ್ಗೆ ರೈಲ್ವೆ ತಲೆಕೆಡಿಸಿಕೊಂಡಿಲ್ಲ.

ಪಾಂಡೇಶ್ವರದ ಶ್ರೀನಿವಾಸ ಕಾಲೇಜು ಬಳಿ ಲೆವೆಲ್ ಕ್ರಾಸಿಂಗ್‌ ಇದೆ. ನಗರದ ಮಧ್ಯದಲ್ಲಿರುವ ಈ ಕ್ರಾಸಿಂಗ್‌ ಮೂಲಕ ಹೆಚ್ಚಾಗಿ ಸರಕು ಸಾಗಣೆ ಗಾಡಿಗಳು ಸಾಗುವುದರಿಂದ ನಿರ್ದಿಷ್ಟ ಸಮಯ ಇಲ್ಲ. ಇದರಿಂದಾಗಿ ಕೆಲವೊಮ್ಮೆ ವಾಹನಗಳು ನಿಮಿಷಗಟ್ಟಲೆ ಕಾಯಬೇಕಾಗುತ್ತವೆ. ಗೂಡ್ಸ್ ಶೆಡ್‌ನಿಂದ ಉಪ್ಪು ಮತ್ತು ಸಿಮೆಂಟ್‌ ಹೆಚ್ಚಾಗಿ ಈ ಮೂಲಕ ಸಾಗಿಸಲಾಗುತ್ತದೆ.

ವಳಚ್ಚಿಲ್‌ನಲ್ಲಿ ಶ್ರೀನಿವಾಸ ಕಾಲೇಜಿಗೆ ಹೋಗುವ ಹಾದಿಯಲ್ಲಿ ಮಾನವಸಹಿತ ಲೆವೆಲ್ ಕ್ರಾಸಿಂಗ್ ಇದೆ. ‘ಪ್ಯಾಸೆಂಜರ್ ಮತ್ತು ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರ ನಿತ್ಯವೂ ಇದೆ. ಗೂಡ್ಸ್ ಗಾಡಿಗಳು ಆಗಾಗ ಈ ಹಾದಿಯಲ್ಲಿ ಸಾಗುತ್ತವೆ. ಬಂಟ್ವಾಳದಿಂದ ಸ್ಟೇಷನ್‌ ಮಾಸ್ಟರ್ ಸಂದೇಶ ಕಳುಹಿಸಿದಾಗ ಗೇಟ್ ಹಾಕಬೇಕು’ ಎಂದು ಗಾರ್ಡ್‌ ಇಂದ್ರಜಿತ್ ಹೇಳಿದರು.

ಇದರ ಸಮೀಪದಲ್ಲೇ ಅಡ್ಯಾರ್‌ಕಟ್ಟೆಯಿಂದ ನೀರುಮಾರ್ಗ ಕಡೆಗೆ ಹೋಗುವ ಹಾದಿಯಲ್ಲಿರುವ ಲೆವೆಲ್ ಕ್ರಾಸಿಂಗ್‌ನಲ್ಲಿ ಸೇತುವೆ ಮಾಡಲು ಅವಕಾಶವಿದೆ. ಇಲ್ಲಿ ಮಹಿಳಾ ಗಾರ್ಡ್ ಒಬ್ಬರು ರೈಲು ಬರುವಾಗ ಮನೆಯಿಂದ ಬಂದು ಧ್ವಜ ಹಿಡಿದುಕೊಂಡು ನಿಲ್ಲುತ್ತಾರೆ.

'ಹಳಿಗಳನ್ನು ನಿರ್ಮಿಸಿ ರೈಲುಗಳನ್ನು ಓಡಿಸಿದರೆ ಸಾಲದು. ಲೆವೆಲ್ ಕ್ರಾಸಿಂಗ್‌ನಲ್ಲಿ ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ನಗರ ವ್ಯಾಪ್ತಿಯ ಅನೇಕ ಕಡೆಗಳ ರೈಲು ಹಳಿಗಳ ಸಮೀಪದಲ್ಲಿ ಸರ್ವಿಸ್ ರಸ್ತೆಗಳು ಇಲ್ಲ, ತಡೆಬೇಲಿಗಳು ಇಲ್ಲ, ಬೆಳಕಿನ ವ್ಯವಸ್ಥೆಯೂ ಇಲ್ಲ. ಇದರಿಂದ ತುಂಬ ತೊಂದರೆಯಾಗುತ್ತದೆ. ಹಸುಗಳು ಮತ್ತು ಇತರ ಪ್ರಾಣಿಗಳು ಬಲಿಯಾಗುತ್ತವೆ’ ಎನ್ನುತ್ತಾರೆ ಇಮ್ತಿಯಾಜ್‌.
 

ಜಿಲ್ಲೆಯಲ್ಲಿರುವ ರೈಲ್ವೆ ಕ್ರಾಸಿಂಗ್‌, ಸೇತುವೆಗಳು

ಅಂಡರ್ ಪಾಸ್‌

ಬಜಾಲ್‌, ಜೆಪ್ಪು ಕುಡ್ಪಾಡಿ,ಜೆಪ್ಪು ಮಾರ್ನಮಿಕಟ್ಟೆ, ಮರವೂರು, ಪಡುಶೆಡ್ಡೆ, ಕುಡುಪು, ಪಜೀರ್, ಫರಂಗಿಪೇಟೆ–ಬೆಂಜನಪದವು, ಮರವೂರು, ಕುಡುಪು ಪಜೀರ್, ಕೈಕಂಬ, ಕರಿಂಗಾನ, ಗೋಲ್ತಮಜಲು, ನೆಟ್ಲಮುದನೂರು, ಮುದನೂರು, ನರಿಮೊಗರು, ಸವಣೂರು, ನಾಕೂರು–ಪುತ್ತೂರು, ನೆಟ್ಟಣೆ.

ಮೇಲ್ಸೇತುವೆ

ಎಕ್ಕೂರು, ಉಳ್ಳಾಲ, ಸೋಮೇಶ್ವರ, ಕುಂಜತ್ತಕಲ್‌, ಬೆಂಜನಪದವು, ಕಳ್ಳಿಗೆ, ಮೂಲ್ಕಿ ಬದ್ರಿಯಾ ನಗರ, ಮೂಲ್ಕಿ ರೈಲು ನಿಲ್ದಾಣ ರಸ್ತೆ, ಮದ್ಯ, ಕೊಡಿಪಾಡಿ, ಮುಂಚೂರು ರಸ್ತೆ, ಕೃಷ್ಣಾಪುರ, ಎಂಆರ್‌ಪಿಎಲ್ ರಸ್ತೆ, ಕಾಟಿಪಳ್ಳ, ಕೋಡಿಕೆರೆ, ಪಚ್ಚನಾಡಿ, ಬಿ.ಸಿ.ರೋಡ್, ಪಾಣೆಮಂಗಳೂರು, ಬಾಯಿಲ, ನೇರಳಕಟ್ಟೆ, ಕಬಕ, ಕೆದುವಡ್ಕ, ಪುತ್ತೂರು–ಸುಬ್ರಹ್ಮಣ್ಯ ಹೆದ್ದಾರಿ, ಕಾಣಿಯೂರು, ಪಂಜ ಕಡಬ ರಸ್ತೆ, ಕೋಡಿಂಬಳ, ಬಂಡಡ್ಕ. 

ಲೆವೆಲ್ ಕ್ರಾಸಿಂಗ್

ಉಳ್ಳಾಲ ಒಳಪೇಟೆ, ಸೂಟರ್ ಪೇಟೆ, ಕುಂಪಲ, ಉಚ್ಚಿಲ, ಅಡ್ಯಾರ್ ಕಟ್ಟೆ, ವಳಚ್ಚಿಲ್‌, ಮೇರಮಜಲು, ಫರಂಗಿಪೇಟೆ, ಮೊಯಿಲೊಟ್ಟು ರಸ್ತೆ, ಪಂಜಿನಡ್ಕ, ಹಳೆಯಂಗಡಿ, ಹಳೆಯಂಗಡಿ–ಪಕ್ಷಿಕೆರೆ ರಸ್ತೆ, ಕೊಂಕಣ ರೈಲ್ವೆ ಗೇಟ್ ಹೊನ್ನೆಕಟ್ಟೆ, ಜೋಕಟ್ಟೆ, ಎಳವಂಗಲ, ಪಡ್ನೂರು, ಬನ್ನೂರು, ಪುತ್ತೂರು–ಉಪ್ಪಿನಂಗಡಿ ರಸ್ತೆ, ಪುತ್ತೂರು ಎಪಿಎಂಸಿ ರಸ್ತೆ, ಸಾಮಂತಡ್ಕ, ನರಿಮೊಗರು, ಪುರುಷಕಟ್ಟೆ, ಬೆಳ್ಳಾರೆ ರಸ್ತೆ, ಕುದ್ಮಾರು, ಯಡಮಂಗಲ, ನೆಕ್ಕಿಲಾಡಿ, ಮೂಜೂರು.

ಸೇತುವೆಗಳು

ನೇತ್ರಾವತಿ (ಉಳ್ಳಾಲ), ಶಾಂಭವಿ (ಮೂಲ್ಕಿ), ನಂದಿನಿ (ಚೇಳಾಯ್ರು), ಫಲ್ಗುಣಿ (ಗುರುಪುರ), ನೇತ್ರಾವತಿ (ಕೈಕುಂಜೆ), ಕುಮಾರಧಾರ (ನಾಕೂರು), ಕುಮಾರಧಾರ (ಬಜಕರೆ).

ಜೆಪ್ಪು ಮಹಾಕಾಳಿಪಡ್ಪು ರೈಲ್ವೆ ಅಂಡರ್‌ಪಾಸ್ ಕಾಮಗಾರಿಯ ಪರಿಸ್ಥಿತಿ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್
ಜೆಪ್ಪು ಮಹಾಕಾಳಿಪಡ್ಪು ರೈಲ್ವೆ ಅಂಡರ್‌ಪಾಸ್ ಕಾಮಗಾರಿಯ ಪರಿಸ್ಥಿತಿ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್
ಬಜಾಲ್‌ ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ತುಂಬಿರುವುದು
ಬಜಾಲ್‌ ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ತುಂಬಿರುವುದು
ಜೆಪ್ಪು ಮಾಹಕಾಳಿಪಡ್ಪು ಅಂಡರ್‌ ಪಾಸ್ ಕಾಮಗಾರಿ ಇನ್ನೇನು ಮುಗಿಯುವ ಹಂತದಲ್ಲಿದೆ. ಈಗಾಗಲೇ ಶೇಕಡ 70ರಷ್ಟು ಕೆಲಸ ಪೂರ್ಣಗೊಂಡಿದ್ದು ಉಳಿದ ಶೇಕಡ 30ರಷ್ಟು ಭಾಗದ ಕೆಲಸವನ್ನು ಆದ್ಯತೆ ಮೇರೆಗೆ ಆದಷ್ಟು ಬೇಗ ಮುಗಿಸಲಾಗುವುದು.
ಅರುಣ್ ಕುಮಾರ್ ಚತುರ್ವೇದಿ ದಕ್ಷಿಣ ರೈಲ್ವೆ ಪಾಲಕ್ಕಾಡ್ ವಿಭಾಗದ ವ್ಯವಸ್ಥಾಪಕ
ಮಲತಾಯಿ ಧೋರಣೆ ಇದ್ದದ್ದೇ
ದಕ್ಷಿಣ ರೈಲ್ವೆಯಿಂದ ಮಂಗಳೂರು ಭಾಗದಕ್ಕೆ ಮಲತಾಯಿ ಧೋರಣೆ ಹಿಂದಿನಿಂದಲೇ ನಡೆಯುತ್ತ ಬಂದಿದೆ ಎನ್ನುತ್ತಾರೆ ರೈಲ್ವೆ ಸಲಹಾ ಮಂಡಳಿ ಸದಸ್ಯ ಹನುಮಂತ ಕಾಮತ್‌. ಮಹಾಕಾಳಿಪ‍ಡ್ಪು ಅಂಡರ್‌ಪಾಸ್ ಕಾಮಗಾರಿ ಬಗ್ಗೆ ಸ್ವಲ್ಪ‍ ಕಾಳಜಿ ವಹಿಸಿದ್ದರೆ ಬೇಗ ಮುಗಿಯುತ್ತಿತ್ತು. ಪಡೀಲ್‌ನಲ್ಲಿ ಅಂಡರ್‌ಪಾಸ್ ನಿರ್ಮಿಸುವಾಗಲೂ ಏನೇನೋ ಸಬೂಬು ಹೇಳಿ ವಿಳಂಬ ಮಾಡಲು ಪ್ರಯತ್ನಿಸಿದ್ದರು. ಮಂಗಳೂರು ತುಂಬಾ ಮಳೆ ಬರುವ ಪ್ರದೇಶ. ಆದ್ದರಿಂದ ಕಾಮಗಾರಿ ನಿರೀಕ್ಷೆಯಂತೆ ಮಾಡಲು ಆಗುವುದಿಲ್ಲ ಎಂಬುದು ರೈಲ್ವೆ ಅಧಿಕಾರಿಗಳು ನೀಡುವ ಸಬೂಬು ಎಂದು ಅವರು ಹೇಳಿದರು. ಈ ಭಾಗದಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವುದು ಕಷ್ಟದ ಕಾರ್ಯ ಎಂದು ಹೇಳಿ ಟೆಂಡರ್ ಕರೆಯುವಾಗಲೇ ಹೆಚ್ಚುವರಿ ಅವಧಿಯನ್ನು ನೀಡಲಾಗುತ್ತದೆ. ಇದರ ದುರ್ಲಾಭ ಪಡೆಯಲು ಗುತ್ತಿಗೆದಾರರು ಪ್ರಯತ್ನಿಸುತ್ತಾರೆ. ಮುಂದಿನ ಸಭೆಯಲ್ಲಿ ಮಹಾಕಾಳಿಪಡ್ಪು ಅಂಡರ್ ಪಾಸ್ ಬಗ್ಗೆ ಮತ್ತೊಮ್ಮೆ ಪ್ರಸ್ತಾಪಿಸುವೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT