ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕೆಯಲ್ಲಿ ಸಿಡಿಲು ಪ್ರತಿಬಂಧಕ ಅಳವಡಿಕೆ

ಸಿಡಿಲಿನ ಅಪಾಯ ತಪ್ಪಿಸಲು ಪ್ರಾಯೋಗಿಕ ಪ್ರಯತ್ನ: ಸಚಿವ ದಿನೇಶ್ ಗುಂಡೂರಾವ್
Published 10 ಜೂನ್ 2024, 14:09 IST
Last Updated 10 ಜೂನ್ 2024, 14:09 IST
ಅಕ್ಷರ ಗಾತ್ರ

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ಸುತ್ತಮುತ್ತ ಸಿಡಿಲಾಘಾತದಿಂದ ಅನೇಕ ಅವಘಡಗಳು ಸಂಭವಿಸುತ್ತಿದ್ದು, ಇದನ್ನು ವೈಜ್ಞಾನಿಕವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಪ್ರಯೋಗಿಕವಾಗಿ ಸಿಡಿಲು ಪ್ರತಿಬಂಧಕ (ಲೈಟನಿಂಗ್ ಅರೆಸ್ಟರ್) ಅಳವಡಿಸಲು ಯೋಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಸೋಮವಾರ ಇಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮಳೆಗಾಲದಲ್ಲಿ ಸಿಡಿಲಿನಿಂದ ಅವಘಡ ಸಂಭವಿಸಿರುವ ಸುಬ್ರಹ್ಮಣ್ಯ, ಸುಳ್ಯ, ಬೆಳ್ತಂಗಡಿ ಮತ್ತಿತರ ನಾಲ್ಕಾರು ಪ್ರದೇಶಗಳನ್ನು ಗುರುತಿಸಿ ಪ್ರಾಯೋಗಿಕವಾಗಿ ಸಿಡಿಲು ಪ್ರತಿಬಂಧಕ ಅಳವಡಿಸಲಾಗುತ್ತದೆ. ಫಲಿತಾಂಶ ಪರಿಶೀಲಿಸಿ, ಮುಂದೆ ಇದನ್ನು ವಿಸ್ತರಿಸುವ ಬಗ್ಗೆ ಯೋಚಿಸಲಾಗುವುದು ಎಂದರು.

ಒಂದು ದಶಕದಲ್ಲಿ ಸುಬ್ರಹ್ಮಣ್ಯ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸಿಡಿಲಿನಿಂದ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಎತ್ತರದ ಪ್ರದೇಶ ಆಗಿರುವ ಕಾರಣ ಅಪಾಯ ಹೆಚ್ಚು ಸಂಭವಿಸಿರುವ ಸಾಧ್ಯತೆ ಇದೆ. ಹೀಗಾಗಿ, ಪ್ರಯೋಗಿಕವಾಗಿ ಪ್ರತಿಬಂಧಕ ವ್ಯವಸ್ಥೆ ಅಳವಡಿಸಿ, ಅಧ್ಯಯನ ಮಾಡಲಾಗುವುದು ಎಂದು ಹೇಳಿದರು.

ಒಂದು ಕಡೆ ಅಳವಡಿಸಿದಲ್ಲಿ, ಅಲ್ಲಿಂದ 500 ಮೀಟರ್‌ನಿಂದ 1.5 ಕಿ.ಮೀ. ವ್ಯಾಪ್ತಿಯ ಮನೆಗಳು, ಉಳಿದ ಪ್ರದೇಶಗಳಿಗೆ ಸುರಕ್ಷತೆ ದೊರೆಯುತ್ತದೆ. ಈಗಾಗಲೇ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದವರು 3–4 ಕಡೆಗಳಲ್ಲಿ ಅಳವಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ಮುಂಗಾರಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಲ್ಲಿ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಎಲ್ಲ ವ್ಯವಸ್ಥೆ ಮಾಡಿಕೊಂಡಿದೆ. ಪ್ರತಿ ತಾಲ್ಲೂಕಿನಲ್ಲಿ ತಂಡ ಸನ್ನದ್ಧವಾಗಿದ್ದು, ಎಲ್ಲ ತಾಲ್ಲೂಕುಗಳಲ್ಲೂ ಅಣಕು ಕಾರ್ಯಾಚರಣೆ ನಡೆಸುವಂತೆ ಸೂಚಿಸಲಾಗಿದೆ. ಇದರಿಂದ ಅಲ್ಲಿರುವ ಸುರಕ್ಷಾ ಸಾಮಗ್ರಿಗಳ ಗುಣಮಟ್ಟ ಪರಿಶೀಲನೆ ಸಾಧ್ಯವಾಗುತ್ತದೆ ಎಂದು ಸಚಿವರು ಹೇಳಿದರು.

ಪ್ರಾಕೃತಿಕ ವಿಕೋಪ ನಿಧಿಯಲ್ಲಿ ಜಿಲ್ಲಾಡಳಿತದ ಬಳಿ ₹17 ಕೋಟಿ, ಪ್ರತಿ ತಾಲ್ಲೂಕಿನಲ್ಲಿ ₹4 ಕೋಟಿ ಮೊತ್ತ ಇದ್ದು, ಹಣಕಾಸಿನ ಕೊರತೆ ಇಲ್ಲ. ಕಡಲ್ಕೊರೆತ ತಡೆಗೆ ಶಾಶ್ವತ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಕರಾವಳಿ ನಿಯಂತ್ರಿತ ವಲಯ (ಸಿಆರ್‌ಝೆಡ್) ಮರಳಿಗೆ ಹೆಚ್ಚು ಬೇಡಿಕೆ ಇದ್ದು, ಸಿಆರ್‌ಝೆಡ್‌ಯೇತರ ವಲಯದ ಮರಳಿಗೆ ಅಷ್ಟಾಗಿ ಬೇಡಿಕೆ ಇಲ್ಲ. ಕಾನೂನು ಪ್ರಕಾರ ಮರಳು ತೆಗೆಯಲು ಅವಕಾಶ ಇದೆ. ಕಾನೂನು ಮೀರಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿರುವ ದೂರು ಬರುತ್ತಿದೆ. ಸಿಆರ್‌ಝೆಡ್‌ ರಕ್ಷಣೆ ನಿಟ್ಟಿನಲ್ಲಿ ಮೂರ್ನಾಲ್ಕು ತಿಂಗಳ ಹಿಂದೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದರೂ, ಮತ್ತೆ ದೂರು ಬರುತ್ತಿರುವುದು ವ್ಯವಸ್ಥೆಯ ವೈಫಲ್ಯ ತೋರಿಸುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ವಿಧಾನ ಪರಿಷತ್ ಸದಸ್ಯ ಹರೀಶ್‌ ಕುಮಾರ್, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಆನಂದ್, ಎಸ್‌ಪಿ ರಿಷ್ಯಂತ್ ಸಿ.ಬಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT