ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಗೆ ನೀರಿನ ಕೊರತೆ ತಡೆಗೆ ಮುನ್ನೆಚ್ಚರಿಕಾ ಕ್ರಮ: ಡಿ.ಸಿ

ಜಲಾಶಯಗಳ ನೀರು–ನಿರ್ವಹಣೆಗೆ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಸಮಿತಿ
Published 23 ನವೆಂಬರ್ 2023, 15:43 IST
Last Updated 23 ನವೆಂಬರ್ 2023, 15:43 IST
ಅಕ್ಷರ ಗಾತ್ರ

ಮಂಗಳೂರು: ‘ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುವುದನ್ನು ತಡೆಯಲು ಜಿಲ್ಲಾಡಳಿತವು ಜಿಲ್ಲೆಯ ವಿವಿಧ ಜಲಮೂಲಗಳ ನಿರ್ವಹಣೆಗೆ ಆಯಾ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿದೆ. ವಿವಿಧ ಜಲಾಶಯಗಳ ನೀರನ್ನು ಜತನವಾಗಿ ಬಳಸುವುದಕ್ಕೆ ಈ ಸಮಿತಿ  ಕ್ರಮಕೈಗೊಳ್ಳಲಿದೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಇಲ್ಲಿ ಗುರುವಾರ ಮಾತನಾಡಿದ ಅವರು, ‘ಮುಂಗಾರು ಮಳೆ ಕೊರತೆ ಆಗಿರುವುದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ಕ್ಲಿಷ್ಟಕರ ಪರಿಸ್ಥಿತಿ ಎದುರಾಗುವುದನ್ನು ತಪ್ಪಿಸಲು ಈಗಿನಿಂದಲೇ ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ತುಂಬೆ ಜಲಾಶಯ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ನೀರಿನ ಮೂಲಗಳು, ಹಾಗೂ ಇತರ ಕೆಲವು ಜಲಾಶಯಗಳಲ್ಲಿ ಹೆಚ್ಚುವರಿಯಾಗಿ ನೀರು ಸಂಗ್ರಹಿಸಲು ಸೂಚನೆ ನೀಡಿದ್ದೇನೆ’ ಎಂದರು.

‘ಅಡ್ಯಾರ್‌–ಹರೇಕಳ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡಿಲ್ಲ. ಅದರಲ್ಲಿ ನೀರನ್ನು ಪೂರ್ಣ ಪ್ರಮಾಣದಲ್ಲಿ  ಸಂಗ್ರಹಿಸಲು ಸಾಧ್ಯವಾದರೆ, ನಗರದ ಕುಡಿಯುವ ನೀರಿನ ಕೊರತೆ ನೀಗಿಸಲು ಸಾಧ್ಯವಾಗುತ್ತದೆ. ಇದರ ನೀರನ್ನು ತುಂಬೆ ಜಲಾಶಯಕ್ಕೆ ಪಂಪ್‌ ಮಾಡಿ ನಗರಕ್ಕೆ ಪೂರೈಸಬಹುದು’ ಎಂದರು.

‘ಅಡ್ಯಾರ್‌–ಹರೇಕಳ ಜಲಾಶಯದಲ್ಲಿ ಪೂರ್ಣಪ್ರಮಾಣದಲ್ಲಿ ನೀರು ಸಂಗ್ರಹಿಸಿದರೆ ಆಸುಪಾಸಿನ ಗ್ರಾಮಗಳ ಕೆಲವು ಜಾಗ ಮುಳುಗಡೆಯಾಗುತ್ತದೆ. ಅಂತಹ ಜಾಗಗಳನ್ನು ಸ್ವಾಧೀನಪಡಿಸಿಕೊಂಡರೆ ಈ ಜಲಾಶಯಲ್ಲಿ ತುಂಬೆ ಅಣೆಕಟ್ಟಿಗಿಂತಲೂ ಹೆಚ್ಚು ನೀರನ್ನು ಸಂಗ್ರಹಿಸಹುದು. ಸ್ವಾಧೀನಪಡಿಸಕೊಳ್ಳುವ ಜಾಗದ ಪ್ರಮಾಣ 100 ಎಕರೆಗಿಂತ ಕಡಿಮೆ ಇದೆ. ಹಾಗಾಗಿ ಈ ಜಾಗದ ನೇರ ಖರೀದಿಗೂ ಅವಕಾಶ ಇದೆ. ಈ ಬಗ್ಗೆ ಸಮಗ್ರ ಪ್ರಸ್ತಾವ ಸಲ್ಲಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

‘ತುಂಬೆ ಅಣೆಕಟ್ಟೆಯ ನೀರನ್ನು ಮಂಗಳೂರು ಮಹಾನಗರ ಪಾಲಿಕೆ, ಉಳ್ಳಾಲ ನಗರಸಭೆ, ಮೂಲ್ಕಿ ಪಟ್ಟಣ ಪಂಚಾಯಿತಿ, ಹಳೆಯಂಗಡಿ ಸೇರಿದಂತೆ ಕೆಲವು ಗ್ರಾಮ ಪಂಚಾಯಿತಿಗಳಿಗೂ ಹಂಚಿಕೊಳ್ಳಬೇಕಿದೆ. ಈ ಕುರಿತು ಸಮನ್ವಯ ಸಾಧಿಸುವುದಕ್ಕೂ ಉಪವಿಭಾಗಾಧಿಕಾರಿ ನೇತೃತ್ವದ ಸಮಿತಿ ನೆರವಾಗಲಿದೆ’ ಎಂದರು.

‘ತುಂಬೆ ಜಲಾಶಯದಲ್ಲಿ 2018–19ರಲ್ಲಿ ಒಮ್ಮೆ ಹೂಳೆತ್ತಲಾಗಿತ್ತು. ಆ ಬಳಿಕ ಹೂಳೆತ್ತಿಲ್ಲ. ಇಲ್ಲಿ ಹೂಳೆತ್ತಿದರೆ ಎಷ್ಟು ಹೆಚ್ಚುವರಿ ನೀರು ಸಂಗ್ರಹ ಸಾಧ್ಯ ಎಂಬ ಬಗ್ಗೆಯೂ ಸಮಗ್ರ ವರದಿ ಸಿದ್ಧಪಡಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

‘ಅಕ್ಕಪಕ್ಕದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ, ನಮ್ಮ ಜಿಲ್ಲೆಯಲ್ಲಿ ಹಿಂಗಾರು ಮಳೆ ಚೆನ್ನಾಗಿ ಆಗಿದ್ದು, ಜಲಾಶಯಗಳಿಗೆ ಸಾಕಷ್ಟು ನೀರು ಹರಿದುಬಂದಿದೆ.  ಜಿಲ್ಲೆಯಲ್ಲಿರುವುದು ಸಣ್ಣ ಜಲಾಶಯಗಳು ಮಾತ್ರ. ಅವುಗಳಲ್ಲಿ ಪೂರ್ತಿ ನೀರು ಸಂಗ್ರಹಿಸಿದರು ಅದನ್ನು 50 ದಿನಗಳವರೆಗೆ ಮಾತ್ರ ಬಳಸಬಹುದು. ಮುಂಗಾರು ಪೂರ್ವ ಮಳೆಯಾದರೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿಕ್ಕಿಲ್ಲ. ಮಳೆ ವಿಳಂಬ ಆದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹಾಗಾಗಿ ಎಲ್ಲರೂ ನೀರನ್ನು ಜತನವಾಗಿ ಬಳಸಬೇಕು’ ಎಂದರು.

‘ತುಂಬೆ ಜಲಾಶಯದಿಂದ ಎಂಆರ್‌ಪಿಎಲ್‌ಗೂ ನೀರು ಸರಬರಾಜು ಆಗುತ್ತಿದೆ. ಎಂಆರ್‌ಪಿಎಲ್‌ ಸಂಸ್ಥೆ ಬೇಸಿಗೆಯಲ್ಲಿ ಸಮುದ್ರದ ಉಪ್ಪುನೀರನ್ನು ಶುದ್ಧೀಕರಿಸಿ ಬಳಸುತ್ತದೆ. ಹಾಗಾಗಿ ತುಂಬೆ ಜಲಾಶಯದ ಮೇಲಿನ ಒತ್ತಡ ಬೇಸಿಗೆಯಲ್ಲಿ ತುಸು ಕಡಿಮೆ ಆಗಲಿದೆ’ ಎಂದರು. 

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಆನಂದ್, ಹೆಚ್ಚುವರಿ ಜಿಲ್ಲಾಧಿಕಾರಿ ಸಂತೋಷ್‌ ಕುಮಾರ್‌ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT