ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ಹಣ ಪಡೆದರೆ ಮರಳಿಸಲು ಕ್ರಮ

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌–19 ಚಿಕಿತ್ಸೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ
Last Updated 10 ಜೂನ್ 2021, 6:08 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್ ಸೋಂಕಿತರಿಗೆ ಚಿಕಿತ್ಸೆಗೆ ಸರ್ಕಾರ ನಿಗದಿಪಡಿಸಿರುವ ಮೊತ್ತವನ್ನಷ್ಟೇ ಖಾಸಗಿ ಆಸ್ಪತ್ರೆಗಳು ಪಡೆಯಬೇಕು. ಹೆಚ್ಚುವರಿ ಶುಲ್ಕವನ್ನು ಪಡೆದಲ್ಲಿ ಅದನ್ನು ಹಿಂದಿರುಗಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಕೋವಿಡ್ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿ ಬಿಡುಗಡೆ ಮಾಡುವ ಸಂದರ್ಭದಲ್ಲಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದ ದರಕ್ಕಿಂತ ಹೆಚ್ಚಿನ ಚಿಕಿತ್ಸಾ ಶುಲ್ಕವನ್ನು ಪಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಸಾರ್ವಜನಿಕರಿಂದ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಶುಲ್ಕ ಪಡೆಯದಂತೆ ಖಾಸಗಿ ಆಸ್ಪತ್ರೆಗಳ ಉಸ್ತುವಾರಿ ನೋಡಲ್ ಅಧಿಕಾರಿಗಳು ಜವಾಬ್ದಾರಿಯಿಂದ ನೋಡಿಕೊಳ್ಳಬೇಕು ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಬಿಡುಗಡೆ ಆಗುವಾಗ ನೀಡುವ ಡಿಸ್ಜಾರ್ಚ್ ಸಮರಿ ಸೇರಿದಂತೆ ಚಿಕಿತ್ಸೆಗೆ ವಿಧಿಸುವ ಶುಲ್ಕಗಳ ವಿವರವನ್ನು ಪರಿಶೀಲಿಸಬೇಕು. ಅವುಗಳಿಗೆ ತಪ್ಪದೇ ದೃಢೀಕರಣ ಮಾಡಬೇಕು ಎಂದರು.

ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಹಾಗೂ ಮೂಲ ಸೌಕರ್ಯಗಳನ್ನು ಪೂರೈಸುವ ಸಲುವಾಗಿ ಪ್ರತಿ ಆಸ್ಪತ್ರೆಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸೋಂಕಿತರಿಗೆ ಯಾವುದೇ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಬೇಕು. ಕೆಲವು ಅಧಿಕಾರಿಗಳು ಈ ಬಗ್ಗೆ ಉದಾಸೀನತೆ ತೋರುತ್ತಿರುವುದು ಕಂಡುಬಂದಿದ್ದು, ಅವರಿಗೆ ಕಾರಣ ಕೇಳಿ ನೋಟಿಸ್ ನೀಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾತನಾಡಿ, ನೋಡಲ್ ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ತಪ್ಪದೇ ನಿರ್ವಹಿಸಬೇಕು. ತಮಗೆ ವಹಿಸಿರುವ ಕಾರ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಸಕ ಡಾ.ಭರತ್ ಶೆಟ್ಟಿ ವೈ. ಮಾತನಾಡಿ, ಕೋವಿಡ್ ಸೋಂಕಿತರಿಂದ ₹ 15-20 ಲಕ್ಷದವರೆಗೆ ಚಿಕಿತ್ಸಾ ಶುಲ್ಕ ಪಡೆಯುತ್ತಿರುವ ಬಗ್ಗೆ ಅನೇಕ ದೂರುಗಳು ಬರುತ್ತಿವೆ. ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಇದಕ್ಕೆ ಆಸ್ಪದ ನೀಡದೆ ಸರ್ಕಾರ ನಿಗದಿಪಡಿಸಿರುವ ಚಿಕಿತ್ಸಾ ಶುಲ್ಕವನ್ನು ಪಡೆಯುವಂತೆ ಜಿಲ್ಲಾಡಳಿತ ನೋಡಿಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪ್ರಜ್ಞಾ ಅಮ್ಮೆಂಬಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕಿಶೋರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ನೋಡಲ್‌ ತಂಡ, ಲೆಕ್ಕಪರಿಶೋಧನೆ

ಖಾಸಗಿ ಆಸ್ಪತ್ರೆಗಳ ಬಿಲ್‍ಗಳ ಪರಿಶೀಲನೆಗೆ ಜಿಲ್ಲಾಡಳಿತ ಆಡಿಟ್ ತಂಡವನ್ನು ರಚಿಸಲಾಗಿದ್ದು, ಖಾಸಗಿ ಆಸ್ಪತ್ರೆಗಳ ಶುಲ್ಕದ ಲೆಕ್ಕ ಪರಿಶೋಧನೆ ಮಾಡಿ ಜಿಲ್ಲಾಡಳಿತಕ್ಕೆ ವರದಿ ನೀಡಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.

ಈವರೆಗೆ 11 ಖಾಸಗಿ ಆಸ್ಪತ್ರೆಗಳ 896 ಕೋವಿಡ್ ರೋಗಿಗಳ ಚಿಕಿತ್ಸಾ ಬಿಲ್‍ಗಳನ್ನು ಪರಿಶೀಲಿಸಲಾಗಿದೆ. ಹೆಚ್ಚುವರಿ ಶುಲ್ಕವನ್ನು ಪಡೆಯದ ಹಾಗೆ ನೋಡಲ್ ಅಧಿಕಾರಿಗಳು ತಮ್ಮ ಹಂತದಲ್ಲಿಯೇ ಜವಾಬ್ದಾರಿ ವಹಿಸಬೇಕು. ಸಾರ್ವಜನಿಕರು ಕೋವಿಡ್ ಚಿಕಿತ್ಸೆ ಪಡೆದು ಶುಲ್ಕವನ್ನು ಭರಿಸುವಾಗ ಸರ್ಕಾರ ನಿಗದಿಪಡಿಸಿರುವ ದರವನ್ನು ನೀಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT