ಮಂಗಳೂರು: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಮರು ಸೋಮವಾರ ಈದ್ ಮಿಲಾದ್ ಹಬ್ಬವನ್ನು ಸಡಗರದಿಂದ ಆಚರಿಸಿದರು.
ಹಬ್ಬದ ಅಂಗವಾಗಿ ಅಲಲ್ಲಿ ಮಿಲಾದ್ ರ‍್ಯಾಲಿಗಳು ನಡೆದವು. ಹಾಡುಗಳನ್ನು ಹಾಡುತ್ತಾ ಮಿಲಾದುನ್ನಬಿ ರ‍್ಯಾಲಿಗಳಲ್ಲಿ ಪಾಲ್ಗೊಂಡ ಮಕ್ಕಳು, ಯುವಕರು, ಹಿರಿಯರು ದಫ್ ಕುಣಿತಗಳೊಂದಿಗೆ ಸಂಭ್ರಮಿಸಿದರು. ಕೆಲವೆಡೆ ವಾಹನಗಳ ಜಾಥಾ ಮೂಲಕ ಪ್ರವಾದಿಯವರ ಸಂದೇಶ ಸಾರಲಾಯಿತು. ಮದರಸ, ಮಸೀದಿಗಳಲ್ಲಿ ಸೋಮವಾರ ಮುಂಜಾನೆ ಧ್ವಜಾರೋಹಣ ಹಾಗೂ ವಿಶೇಷ ಮಜ್ಲಿಸ್‌ಗಳು ನಡೆದವು. ವಿಶೇಷ ಸಭಾ ಕಾರ್ಯಕ್ರಮಗಳ ಮೂಲಕ ಪ್ರವಾದಿ ಜೀವನದ ಸಂದೇಶವನ್ನು ಮೆಲುಕು ಹಾಕಲಾಯಿತು.
ರ‍್ಯಾಲಿಗಳಲ್ಲಿ ಪಾಲ್ಗೊಂಡ ಮದರಸ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ಹಂಚಿ, ಪಾನೀಯ ವಿತರಿಸಲಾಯಿತು. ಮುಸ್ಲಿಮೇತರರು ಸಿಹಿ ಹಂಚುವ ಮೂಲಕ ಸೌಹಾರ್ದ ಮೆರೆದರು. ಮಸೀದಿ ಮತ್ತು ಮದರಸಗಳಲ್ಲಿ ಬಿರಿಯಾನಿ, ತುಪ್ಪದೂಟ, ರೊಟ್ಟಿ ಹಾಗೂ ಮಾಂಸದ ಪದಾರ್ಥ ಹಂಚಲಾಯಿತು. ಕೆಲವರ ಮನೆಗಳಲ್ಲೂ ಹಬ್ಬದಡುಗೆ ಮಾಡಲಾಗಿತ್ತು.
ಇಸ್ಲಾಮಿಕ್ ಕ್ಯಾಲೆಂಡರ್‌ನ ರಬೀಉಲ್ ಅವ್ವಲ್ ತಿಂಗಳಲ್ಲಿ ಸುನ್ನಿ ಮುಸ್ಲಿಮರು ಮಸೀದಿ ಮತ್ತು ಮನೆಗಳಲ್ಲಿ ಪ್ರವಾದಿ ಗುಣಗಾನದ ವೌಲಿದ್ ಪಾರಾಯಣ ಮಾಡುತ್ತಾರೆ. ಮದ್ರಸಗಳ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ವಿಶೇಷವಾಗಿ ಪ್ರವಾದಿ ಪ್ರೇಮ ಬಿಂಬಿಸುವ ಹಾಡು, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಗುತ್ತಿದೆ. ತಿಂಗಳಿಡೀ ಈ ಕಾರ್ಯಕ್ರಮ ನಡೆಸಲಾಗುತ್ತಿದೆಯಾದರೂ ರಬೀಉಲ್ ಅವ್ವಲ್ ತಿಂಗಳ 12ರಂದು ವಿಶೇಷ ಕಾರ್ಯಕ್ರಮ ನಡೆಸಲಾಗುತ್ತಿದೆ.
ಫೋಟೋ ಕ್ಯಾಪ್ಸನ್ -ಭಟ್ ಪ್ರವಾದಿ ಮುಹಮ್ಮದ್ (ಸ
)ರ ಜನ್ಮ ದಿನಾಚರಣೆಯ ಅಂಗವಾಗಿ ಮಂಗಳೂರು ಬಂದರ್‌ನ ಅಲ್‌ಮದ್ರಸತುಲ್ ಅಝ್‌ಹರಿಯಾ ವತಿಯಿಂದ ಸೋಮವಾರ ಸಾರ್ವಜನಿಕ ಮಿಲಾದ್ ರ್ಯಾಲಿಯು ನಡೆಯಿತು. ರ್ಯಾಲಿಯಲ್ಲಿ ಮದ್ರಸ ವಿದ್ಯಾರ್ಥಿಗಳ ಆಕರ್ಷಕ ದಫ್ ಪ್ರದರ್ಶನವಿತ್ತು.
ಮಂಗಳೂರು ಸೋಷಿಯಲ್ ಸರ್ವಿಸ್ ಸೆಂಟರ್ ವತಿಯಿಂದ ನಗರದಲ್ಲಿ ಸೋಮವಾರ ಮಿಲಾದ್ ರ‍್ಯಾಲಿ ನಡೆಯಿತು.ಕುದ್ರೋಳಿಯ ನಡುಪಳ್ಳಿ ಜುಮಾ ಮಸೀದಿಯಿಂದ ಆರಂಭಗೊಂಡ ರ‍್ಯಾಲಿಯು ಕೇಂದ್ರ ಜುಮಾ ಮಸೀದಿ ರಸ್ತೆಯಾಗಿ ಬಾವುಟಗುಡ್ಡದ ಈದ್ಗಾ ಮಸೀದಿಯನ್ನು ತಲುಪಿತು. ಬಂದರು ಕುದ್ರೋಳಿ ಪರಿಸರದ ಮದರಸ ವಿದ್ಯಾರ್ಥಿಗಳ ಆಕರ್ಷಕ ದಫ್ ಪ್ರದರ್ಶನ ಗಮನ ಸೆಳೆಯಿತು. ಕೇಂದ್ರ ಜುಮಾ ಮಸೀದಿಯ ಬಳಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮೀಲಾದ್ ರ‍್ಯಾಲಿಗೆ ಶುಭ ಹಾರೈಸಿದರು. ಮಂಗಳೂರು ಸೋಷಿಯಲ್ ಸರ್ವಿಸ್ ಸೆಂಟರ್ ಅಧ್ಯಕ್ಷ ಕೆ.ಪಿ. ಅಬ್ದುಲ್ ರಶೀದ್ ಗೌರವಾಧ್ಯಕ್ಷ ಕೆ.ಅಶ್ರಫ್ ಉಪಾಧ್ಯಕ್ಷ ಸಂಶುದ್ದೀನ್ ಬಂದರ್ ಅಶ್ರಫ್ ಹಳೆಮನೆ ಖಜಾಂಚಿ ಸಫಾ ಸಲೀಂ ಪ್ರಧಾನ ಕಾರ್ಯದರ್ಶಿ ರಿಯಾಜ್ ಕಚ್‌ಮನ್ ಕಾರ್ಯದರ್ಶಿ ರಿಯಾಜುದ್ದೀನ್ ಮತ್ತಿತರರು ಭಾಗವಹಿಸಿದರು. ನೀರೆಶ್ವಾಲ್ಯ ಜಂಕ್ಷನ್‌ನಲ್ಲಿ ಯುವ ಶಕ್ತಿ ಫ್ರೆಂಡ್ಸ್ ಹಾಗೂ ನಿತ್ಯಾನಂದ ಆಶ್ರಮ ಸಮಿತಿಯ ವತಿಯಿಂದ ಸಿಹಿತಿಂಡಿ ಹಾಗೂ ತಂಪು ಪಾನೀಯವನ್ನು ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.