ಶನಿವಾರ, ಜುಲೈ 24, 2021
28 °C

ಕೊರೊನಾ ಬಗ್ಗೆ ಆತಂಕ ಬೇಡ, ಮುಂಜಾಗ್ರತೆ ವಹಿಸಿ: ಸಚಿವ‌ ಡಾ.ಸುಧಾಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಜನರ ಜೀವ‌ ಉಳಿಸುವುದರ ಜತೆಗೆ ಜನಜೀವನ ಅಸ್ತವ್ಯಸ್ತ ಆಗದಂತೆ ನೋಡಿಕೊಳ್ಳುವ‌  ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದ್ದು, ಈ ದಿಸೆಯಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ ಹೇಳಿದರು.

ಆರಂಭದಿಂದಲೇ ರಾಜ್ಯದಲ್ಲಿ ಅಗತ್ಯ ಮುಂಜಾಗ್ರತೆ ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ ನಿಯಂತ್ರಣ ಸಾಧ್ಯವಾಗಿದೆ. ರಾಜ್ಯದಲ್ಲಿ 3.5 ಲಕ್ಷಕ್ಕೂ ಅಧಿಕ ಗಂಟಲು ದ್ರವ ತಪಾಸಣೆ ಮಾಡಲಾಗಿದೆ. ಇದರಲ್ಲಿ ಮುರೂವರೆ ಸಾವಿರದಷ್ಟು ಜನರಿಗೆ ಸೋಂಕು ತಗಲಿದೆ. ಶೇ.1.8 ರಿಂದ 2 ರಷ್ಟು ಜನ ಮೃತಪಟ್ಟಿದ್ದಾರೆ ಎಂದರು.

ಸಾರ್ಸ್ ನಲ್ಲಿ ಮರಣದ ಪ್ರಮಾಣ ಶೇ10 ರಷ್ಟಿತ್ತು. ಆದರೆ, ಕೊರೊನಾ ವೈರಸ್ ಹರಡುವಿಕೆ ಪ್ರಮಾಣ ಹೆಚ್ಚಾಗಿದೆ. ಇದರಿಂದ ಜನರು ಭಯಭೀತರಾಗಿದ್ದಾರೆ. ಹಿರಿಯರು, ಈಗಾಗಲೇ ಕಾಯಿಲೆಯಿಂದ ಬಳಲುವವರಿಗೆ ಹೆಚ್ಚಿನ ತೊಂದರೆ ಆಗುತ್ತದೆ. ಎಸ್ಎಆರ್ ಐ, ಐಎಲ್ಐ ಲಕ್ಷಣ ಇದ್ದವರನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಈಗ ಸೋಂಕು ತಗಲಿರುವವರಲ್ಲಿ ಶೇ 98 ರಷ್ಟು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಬೇರೆ ರಾಜ್ಯದವರನ್ನು ಕರೆಸಿಕೊಳ್ಳಲಾಗುತ್ತಿದೆ.‌ ಬರುವ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಅದಕ್ಕಾಗಿ ಹಳ್ಳಿಯಿಂದ ಪಟ್ಟಣದವರೆಗೆ ಕ್ವಾರಂಟೈನ್ ವ್ಯವಸ್ಥೆಗೆ ಹೊಸ ಮಾರ್ಗಸೂಚಿ ಸಿದ್ಧಪಡಿಸಲಾಗುತ್ತಿದೆ. ಹಳ್ಳಿಗಳಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ವೈರಾಣು ನಮ್ಮ ಮಧ್ಯದಲ್ಲಿಯೇ ಇರಲಿದೆ. ಇದಕ್ಕೆ ಔಷಧಿ ಕಂಡುಹಿಡಿಯುವವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದರು.
ಜನರು ಕಷ್ಟಕ್ಕೆ ಸಿಲುಕಿದ್ದು, ಅದಕ್ಕಾಗಿಯೇ ಪ್ರಧಾನಿ, ಮುಖ್ಯಮಂತ್ರಿಗಳು ದುರ್ಬಲ ವರ್ಗದವರಲ್ಲಿ ಶಕ್ತಿ ತುಂಬಲು ಪ್ರಯತ್ನಿಸಿದ್ದಾರೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯ ಜನರು ಪ್ರಬುದ್ಧರು. ಯಾರೂ ಆತಂಕ ಪಡಬೇಕಾಗಿಲ್ಲ. ಇದಕ್ಕಿಂತ ಮಾರಕ ಕಾಯಿಲೆ ವಿರುದ್ಧ ಹೋರಾಟ ಮಾಡಿ ಗೆದ್ದಿದ್ದೇವೆ. ಯಾವುದೇ‌ ವೈರಾಣು ಮನುಷ್ಯನನ್ನು ಗೆದ್ದಿಲ್ಲ. ಮನುಷ್ಯನೇ ವೈರಾಣುವಿನ ವಿರುದ್ಧ ಜಯ ಸಾಧಿಸಿದ್ದಾನೆ. ಅದಕ್ಕೆ ಸ್ವಲ್ಪ‌ ಸಮಯ ಬೇಕು ಎಂದು ಹೇಳಿದರು.

ಎಲ್ಲ ಆಸ್ಪತ್ರೆಗಳಲ್ಲಿ ಅಗತ್ಯ ಮೂಲಸೌಕರ್ಯಕ್ಕೆ ಆದ್ಯತೆ ಆದಷ್ಟು ಶೀಘ್ರದಲ್ಲಿ‌ ಕೋವಿಡ್ -19 ಗೆ ಸ್ಪಷ್ಟ ಚಿಕಿತ್ಸೆ‌ ಲಭ್ಯ

'ಮನೆ ಮಾತ್ರ ಸೀಲ್ ಡೌನ್'
ಸೋಂಕಿತರ ಮನೆ ಮಾತ್ರ ಸೀಲ್ ಡೌನ್ ಮಾಡಲಾಗುವುದು. ಮಹಾರಾಷ್ಟ್ರದಿಂದ ಬಂದವರಿಗೆ 14 ದಿನ ಕ್ವಾರಂಟೈನ್ ಮಾಡಬೇಕು. ಅಷ್ಟರಲ್ಲಿಯೇ ಅವರ ಗಂಟಲು ದ್ರವದ ಮಾದರಿ ಪರೀಕ್ಷೆ ಮಾಡಬೇಕು. ರೋಗಲಕ್ಷಣ ಇರುವವರಿಗೆ ಮಾತ್ರ ತಪಾಸಣೆ ಮಾಡಬೇಕು ಎಂದು ಡಾ. ಸುಧಾಕರ್ ಅಭಿಪ್ರಾಯಪಟ್ಟರು. ಖಾಸಗಿ ಆಸ್ಪತ್ರೆಗಳು ತಮ್ಮ ದೈನಂದಿನ‌ ಚಟುವಟಿಕೆ ಆರಂಭಿಸಬೇಕು. ಈ ನಿಟ್ಟಿನಲ್ಲಿ ಐಎಂಎ ಪದಾಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು‌ ಸೂಚಿಸಿದರಯ

ಕನಿಷ್ಠ ಮಹಾರಾಷ್ಟ್ರದಿಂದ ಬಂದವರಿಗೆ ಹೋಂ ಕ್ವಾರಂಟೈನ್ ನಲ್ಲಿ‌ ಗಂಟಲು ದ್ರವದ ಮಾದರಿ ತಪಾಸಣೆಗೆ ಅವಕಾಶ ಮಾಡಿಕೊಡಬೇಕು
-ಕೋಟ ಶ್ರೀನಿವಾಸ್ ಪೂಜಾರಿ, ಜಿಲ್ಲಾ ಉಸ್ತುವಾರಿ‌ ಸಚಿವ

***

ಕೊರೊನಾ ವೈಸರ್ ಜತೆ ಬದುಕುವುದು ಅನಿವಾರ್ಯ. ಈ ಬಗ್ಗೆ ಭಯ ಬೇಡ. ಎಲ್ಲರೂ ಇದನ್ನು ಅರ್ಥೈಸಿಕೊಳ್ಳಬೇಕು
-ಡಾ. ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು