ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರಮಜೀವಿಗಳಿಗೆ ‘ಇ–ಶ್ರಮ’ದ ಭರವಸೆ

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಕಚೇರಿಯಲ್ಲಿ ಉಚಿತ ನೋಂದಣಿ ಅಭಿಯಾನ
Published 24 ಜನವರಿ 2024, 6:39 IST
Last Updated 24 ಜನವರಿ 2024, 6:39 IST
ಅಕ್ಷರ ಗಾತ್ರ

ಮಂಗಳೂರು: ಪ್ರತಿನಿತ್ಯ ನಸುಕಿನಲ್ಲಿ ಎದ್ದು ಸೂರ್ಯ ಉದಯಿಸುವ ಹೊತ್ತಿಗೆ ಮನೆ–ಮನೆಗೆ ಪತ್ರಿಕೆ ತಲುಪಿಸುವವರಿಗೆ ಸರ್ಕಾರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆ ಕಲ್ಪಿಸಿದೆ. ಎಲ್ಲರೂ ಯೋಜನೆಯ ಗರಿಷ್ಠ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹಿರಿಯ ಕಾರ್ಮಿಕ ನಿರೀಕ್ಷಕಿ ಮೇರಿ ಪ್ಯಾಟ್ರಿಕ್ ಡಯಾಸ್ ಹೇಳಿದರು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ಪತ್ರಿಕೆಗಳು ಹಾಗೂ ಕಾರ್ಮಿಕ ಇಲಾಖೆ ಜಂಟಿಯಾಗಿ ‘ಪ್ರಜಾವಾಣಿ’ ಪತ್ರಿಕಾ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಉಚಿತ ನೋಂದಣಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

‘ಅಸಂಘಟಿತ ವಲಯಕ್ಕೆ ಸೇರುವ ಪತ್ರಿಕೆ ವಿತರಿಸುವವರು ನಮ್ಮ ಇಲಾಖೆಗೆ ಬಂದು ನಮಗಾಗಿ ಏನಾದ್ರೂ ಯೋಜನೆ ಇದೆಯಾ ಎಂದು ಕೇಳಿದಾಗ ಬೇಸರವಾಗುತ್ತಿತ್ತು. ಪ್ರಸ್ತುತ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮೂಲಕ ದಿನಪತ್ರಿಕೆ ವಿತರಿಸುವ ಕಾರ್ಮಿಕರಿಗೆ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಯನ್ನು ಜಾರಿಗೊಳಿಸಿದೆ. ಪತ್ರಿಕೆ ವಿತರಿಸುವ ಬಹುತೇಕರು ದ್ವಿಚಕ್ರ ವಾಹನ ಬಳಸುತ್ತಾರೆ. ಅವರು ಆಕಸ್ಮಿಕವಾಗಿ ಅಪಘಾತಕ್ಕೆ ಒಳಗಾದರೆ, ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಒದಗಿಸುವ ಮೂಲಕ ಅವರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ’ ಎಂದರು.

‘ಕೇಂದ್ರ ಸರ್ಕಾರದ ಇ–ಶ್ರಮ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡ ಕಾರ್ಮಿಕರು ಅಪಘಾತದಿಂದ ಮರಣ ಹೊಂದಿದಲ್ಲಿ ಕುಟುಂಬಕ್ಕೆ ₹2 ಲಕ್ಷ ಪರಿಹಾರ, ಅಪಘಾತದಿಂದ ಶಾಶ್ವತ ಅಂಗವೈಕಲ್ಯ ಉಂಟಾದಲ್ಲಿ ₹2 ಲಕ್ಷ ಪರಿಹಾರ, ಅಪಘಾತ, ಮಾರಣಾಂತಿಕ ಕಾಯಿಲೆ, ಗಂಭೀರ ಅನಾರೋಗ್ಯಕ್ಕೆ ತುತ್ತಾದಲ್ಲಿ ಆಸ್ಪತ್ರೆ ವೆಚ್ಚ ಮರುಪಾವತಿಗೆ ₹1 ಲಕ್ಷದವರೆಗೆ ಸರ್ಕಾರ ನೆರವು ನೀಡುತ್ತದೆ’ ಎಂದು ವಿವರಿಸಿದರು.

‘ಪತ್ರಿಕಾ ವಿತರಕರು ಇ–ಶ್ರಮ ಪೋರ್ಟಲ್ www.eshram.gov.in ಇಲ್ಲಿ ನೇರವಾಗಿ ಹೆಸರು ನೋಂದಾಯಿಸಬಹುದು ಅಥವಾ ಹತ್ತಿರದ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಹೆಸರು ನೋಂದಾಯಿಸಬಹುದು. ಮೊಬೈಲ್‌ ಸಂಖ್ಯೆ ಲಿಂಕ್‌ ಇರುವ ಆಧಾರ್‌ ಕಾರ್ಡ್ ಮತ್ತು ಬ್ಯಾಂಕ್ ಖಾತೆಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಮೇರಿ ತಿಳಿಸಿದರು.

ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ದಿನಪತ್ರಿಕೆ ವಿತರಿಸುವವರು ಸ್ಥಳದಲ್ಲೇ ಹೆಸರು ನೋಂದಾಯಿಸಿ, ಕಾರ್ಡ್ ಪಡೆದುಕೊಂಡರು.

ಕಾರ್ಮಿಕ ಕಲ್ಯಾಣ ಮಂಡಳಿಯ ಸಿಬ್ಬಂದಿ ಹರೀಶ್, ಭಾಗ್ಯಶ್ರೀ ನೋಂದಣಿ ಕಾರ್ಯಕ್ಕೆ ನೆರವಾದರು.  ಪತ್ರಿಕಾ ವಿತರಕರ ಪ್ರತಿನಿಧಿ ದಿನೇಶ್ ಶೆಟ್ಟಿ ಇದ್ದರು. 

ನೋಂದಣಿ ಪ್ರಕ್ರಿಯೆಯಲ್ಲಿ ನಿರತರಾಗಿದ್ದ ಕಾರ್ಮಿಕ ಇಲಾಖೆಯ ಸಿಬ್ಬಂದಿ
ನೋಂದಣಿ ಪ್ರಕ್ರಿಯೆಯಲ್ಲಿ ನಿರತರಾಗಿದ್ದ ಕಾರ್ಮಿಕ ಇಲಾಖೆಯ ಸಿಬ್ಬಂದಿ
ಪಿ. ಚಂದ್ರಶೇಖರ
ಪಿ. ಚಂದ್ರಶೇಖರ
ಸುಬ್ರಹ್ಮಣ್ಯ ಶೇಟ್
ಸುಬ್ರಹ್ಮಣ್ಯ ಶೇಟ್
ಶ್ರೀನಿವಾಸ್ ಶೆಟ್ಟಿ
ಶ್ರೀನಿವಾಸ್ ಶೆಟ್ಟಿ

ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಪತ್ರಿಕೆ ಏಜೆಂಟರನ್ನು ಯಾರೂ ಗುರುತಿಸುತ್ತಿರಲಿಲ್ಲ ಎನ್ನುವ ನೋವಿತ್ತು. ಸರ್ಕಾರದ ಯೋಜನೆಯು ನಿಜವಾಗಿ ಖುಷಿ ಕೊಟ್ಟಿದೆ. - ಪಿ. ಚಂದ್ರಶೇಖರ್ ಪೊಳಲಿ

'ಪ್ರಜಾವಾಣಿ‘ ‘ಡೆಕ್ಕನ್ ಹೆರಾಲ್ಡ್‌’ ಪತ್ರಿಕೆಗಳು ತಮ್ಮ ಕಚೇರಿಯಲ್ಲಿ ನೋಂದಣಿಗೆ ಅವಕಾಶ ಮಾಡಿಕೊಟ್ಟಿದ್ದರಿಂದ ನಮ್ಮ ಕೆಲಸ ಸುಲಭವಾಯಿತು. ಪತ್ರಿಕೆಯಿಂದಾಗಿ ಸರ್ಕಾರದ ಒಳ್ಳೆಯ ಯೋಜನೆ ಸೌಲಭ್ಯ ದೊರಕಿದೆ. - ಸುಬ್ರಹ್ಮಣ್ಯ ಶೇಟ್ ಮಲ್ಲಿಕಟ್ಟೆ

ಪತ್ರಿಕಾ ವಿತರಿಸುವವರಿಗೆ ನ್ಯಾಯಯುತವಾಗಿ ಸೌಲಭ್ಯ ಸಿಗಬೇಕು. ಎಂದೋ ಸಿಗಬೇಕಾಗಿದ್ದ ಸೌಲಭ್ಯ ಈಗಲಾದರೂ ಸಿಕ್ಕಿತೆಂಬ ಸಮಾಧಾನ ಸಿಕ್ಕಿದೆ. ಇದಕ್ಕೆ ಸಹಕರಿಸಿದ ‘ಪ್ರಜಾವಾಣಿ’ ‘ಡೆಕ್ಕನ್ ಹೆರಾಲ್ಡ್‌’ಗೆ ಅಭಿನಂದನೆಗಳು. - ಬಿ.ಶ್ರೀನಿವಾಸ ಶೆಟ್ಟಿ ಕಾಟಿಪಳ್ಳ , ಕೈಕಂಬ

ಯೋಜನೆಯ ಸೌಲಭ್ಯ ಪಡೆಯಲು ಮಾನದಂಡಗಳೇನು? * ರಾಜ್ಯದ ನಿವಾಸಿ ಆಗಿರಬೇಕು * 16ರಿಂದ 59 ವರ್ಷದೊಳಗಿನವರು ಮಾತ್ರ ಅರ್ಹರು * ಕೇಂದ್ರ ಸರ್ಕಾರದ ಇ–ಶ್ರಮ ಪೋರ್ಟಲ್‌ನಲ್ಲಿ ‘ನ್ಯೂಸ್ ಪೇಪರ್ ಬಾಯ್’ ವರ್ಗದಡಿ ನೋಂದಣಿ ಆಗಿರಬೇಕು * ಆದಾಯ ತೆರಿಗೆ ಪಾವತಿದಾರರು ಆಗಿರಬಾರದು * ಇಎಸ್‌ಐ ಮತ್ತು ಇಪಿಎಫ್ ಸೌಲಭ್ಯ ಹೊಂದಿರಬಾರದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT